ADVERTISEMENT

ಸಂಸ್ಕೃತಿ ಸಂಭ್ರಮ | ಅದ್ವೈತಗುರು ಶಂಕರಾಚಾರ್ಯ

ಎಸ್.ಸೂರ್ಯಪ್ರಕಾಶ ಪಂಡಿತ್
Published 22 ಏಪ್ರಿಲ್ 2020, 19:45 IST
Last Updated 22 ಏಪ್ರಿಲ್ 2020, 19:45 IST
   

ಇಡಿಯ ಜಗತ್ತು ಇಂದು ತಲ್ಲಣದಲ್ಲಿದೆ. ಕೊರೊನಾ ವೈರಸ್‌ನ ಭೀತಿಯಿಂದ ನಮ್ಮ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ. ಸದ್ಯದ ಪರಿಸ್ಥಿತಿಯಿಂದ ಮನುಷ್ಯ ಬಿಡುಗಡೆಯನ್ನು ಪಡೆಯಬೇಕಾದರೆ ನಾವೆಲ್ಲರೂ ಒಂದಾಗಿ ವೈರಸ್‌ನ ವಿರುದ್ಧ ಹೋರಾಡಬೇಕಾಗಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣಗಳು ಹತ್ತಾರು; ಅದರಲ್ಲೂ ಕೆಲವು ಕಾರಣಗಳು ಕ್ಷುದ್ರವಾದವು!

ದೇಶ ದೇಶಗಳ ನಡುವಿನ ವೈರ, ಮನುಷ್ಯ ಮನುಷ್ಯನ ನಡುವಿನ ದ್ವೇಷ ಈ ಸಂದರ್ಭದಲ್ಲೂ ಎದ್ದುಕಾಣುತ್ತಿರುವುದು ಸುಳ್ಳಲ್ಲ. ಲಾಕ್‌ಡೌನ್‌ನ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ವ್ಯಾಪಾರದಲ್ಲಿ ಹೆಚ್ಚೆಚ್ಚು ಲಾಭ ಮಾಡಿಕೊಳ್ಳುವ ಹವಣು ಒಂದು ಕಡೆ; ವೈರಸ್‌ನ ಅವಾಂತರವನ್ನು ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಹೊಂದಿಸುವ ಮತಾಂಧತೆ ಇನ್ನೊಂದು ಕಡೆ. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಇರಬೇಕಾದ ಸಮಯದಲ್ಲೂ ಮನುಷ್ಯರು ಪರಸ್ಪರ ಕಿತ್ತಾಡುತ್ತಿದ್ದಾರೆ; ಅಳಿವು ಉಳಿವಿನ ಸಂಕಷ್ಟದಲ್ಲೂ ವಿವೇಕದಿಂದ ನಡೆದುಕೊಳ್ಳುತ್ತಿಲ್ಲ. ಈ ವಿಚಿತ್ರವೂ ವಿಷಮವೂ ಆದ ಮಾನಸಿಕತೆಗೆ ಕಾರಣವನ್ನು ಒಂದೇ ಪದದಲ್ಲಿ ನಿರೂಪಿಸಬಹುದು. ಅದೇ ’ಅವಿದ್ಯೆ‘.

ಅವಿದ್ಯೆ ಎಂದರೇನು? ಇದರ ಬಗ್ಗೆ ವಿವರವಾಗಿ ತಿಳಿಸಿಕೊಟ್ಟವರು ಆಚಾರ್ಯ ಶಂಕರ.

ADVERTISEMENT

ಒಬ್ಬರು ಇನ್ನೊಬ್ಬರ ಬಗ್ಗೆ ದ್ವೇಷ–ಅಸೂಯೆಗಳನ್ನು ಏಕಾದರೂ ಪ್ರಕಟಿಸುತ್ತಾರೆ? ’ಅವನು ನಾನಲ್ಲ‘, ’ಅವನು ಬೇರೆ, ನಾನು ಬೇರೆ‘ – ಇದೇ ಬುದ್ಧಿಯೆ ಅಲ್ಲವೆ?

ಆಚಾರ್ಯ ಶಂಕರರು ಈ ಭೇದಬುದ್ಧಿಯನ್ನೇ ಅವಿದ್ಯೆ ಎಂದರು. ಎಲ್ಲರಲ್ಲೂ ಒಂದೇ ಚೈತನ್ಯ ಇರುವಾಗ ’ಅವನು ಬೇರೆ, ನಾನು ಬೇರೆ‘ ಎಂಬ ತಿಳಿವಳಿಕೆಯೇ ತಪ್ಪು ಎಂದರು. ಈ ಚೈತನ್ಯವನ್ನೇ ಅವರು ’ಬ್ರಹ್ಮ‘ ಎಂದು ಕರೆದರು. ಬ್ರಹ್ಮ ಎಂದರೆ ಬೃಹತ್ತಾದುದು; ಎಷ್ಟು ಬೃಹತ್ತಾದುದು ಎಂದರೆ ಅದು ಸಮಸ್ತ ಸೃಷ್ಟಿಯನ್ನೂ ಒಳಗೊಂಡು, ಅದನ್ನೂ ಮೀರಿ ನಿಂತ ಚೈತನ್ಯವಸ್ತು.

ಒಂದೇ ಮಣ್ಣು ಮಡಕೆಯಾಗಿ, ತಟ್ಟೆಯಾಗಿ, ಮನೆಯಾಗಿ ಬೇರೆ ಬೇರೆಯಾಗಿ ತೋರಿಕೊಳ್ಳುತ್ತದೆ. ಆದರೆ ಮೂಲದಲ್ಲಿ ‘ಮಣ್ಣು‘ ಒಂದೇ. ಅಂತೆಯೇ ಅವನು ಕರಿಯ, ಇವನು ಬಿಳಿಯ, ಅವನು ಎತ್ತರ, ಇವನು ಕುಳ್ಳ – ಹೀಗೆ ನಮ್ಮಲ್ಲಿ ಮೇಲ್ನೋಟಕ್ಕೆ ಪರಸ್ಪರ ಭೇದವಾಗಿ ಕಾಣಿಸಿದರೂ ಎಲ್ಲರಲ್ಲೂ ಸಮಾನವಾಗಿರುವುದು ಬ್ರಹ್ಮವಸ್ತು. ಹೀಗಾಗಿ ಇಲ್ಲಿ ಕಾಣುವ ಯಾವ ಭೇದವೂ ಆತ್ಯಂತಿಕವಲ್ಲ ಎಂದು ಸಾರಿದವರು ಶಂಕರರು.

ನಾವು ಯಾವುದೋ ಒಂದು ಗ್ರಂಥವನ್ನೋ ವಾಕ್ಯವನ್ನೋ ಹಿಡಿದುಕೊಂಡು, ನಮ್ಮ ಸಿದ್ಧಾಂತವೇ ಶ್ರೇಷ್ಠ ಎಂದು ಹೋರಾಟಕ್ಕೆ ಇಳಿಯುತ್ತೇವೆ. ಆದರೆ ಶಂಕರರು ತಮ್ಮ ಸಿದ್ಧಾಂತದ ಅಂತಿಮ ಪ್ರಮಾಣ ಎಂದರೆ ನಮ್ಮ ಅನುಭವವೇ ಎಂದು ಘೋಷಿಸಿದರು. ’ಅವನು ಬೇರೆ, ನಾನು ಬೇರೆ ಎನ್ನುವುದನ್ನು ಕಲಿಸಲು ಯಾವ ಶಾಸ್ತ್ರವೂ ಬೇಡವಷ್ಟೆ. ಏಕೆಂದರೆ ಈ ಭೇದಬುದ್ಧಿ ಎಲ್ಲರಿಗೂ ಹುಟ್ಟಿನಿಂದಲೇ ಬಂದಿರುತ್ತದೆ. ಎಲ್ಲರೂ ಒಂದು ಹೇಗೆ – ಎಂಬ ವಿವೇಕವನ್ನು ಕೊಡುವುದೇ ದಿಟವಾದ ಶಾಸ್ತ್ರ‘ ಎನ್ನುವುದನ್ನೂ ಅವರು ಸಾರಿದರು. ಹೀಗಾಗಿಯೇ ಅವರು ಪ್ರತಿಪಾದಿಸಿದ ಸಿದ್ಧಾಂತ ‘ಅದ್ವೈತದರ್ಶನ‘ ಎಂದು ಹೆಸರನ್ನು ಪಡೆಯಿತು. ಅದ್ವೈತ ಎಂದರೆ ಎರಡನೆಯದು ಇಲ್ಲದ್ದು ಎಂದರ್ಥ.

ಶಂಕರಾಚರ್ಯರ ಜಯಂತಿಯನ್ನು ತತ್ತ್ವಶಾಸ್ತ್ರಜ್ಞರ ದಿನವನ್ನಾಗಿ ಆಚರಿಸುವುದುಂಟು. ನಮ್ಮ ದೇಶದಲ್ಲಿ ತತ್ತ್ವಶಾಸ್ತ್ರಕ್ಕೊಂದು ಬಲವಾದ ಅಡಿಪಾಯವನ್ನು ಒದಗಿಸಿದ ಪ್ರಮುಖರಲ್ಲಿ ಶಂಕರರದ್ದು ದೊಡ್ಡ ಹೆಸರು.

ತತ್ತ್ವಶಾಸ್ತ್ರ ಎಂದರೆ ಏನು? ಯಾವುದೇ ಒಂದು ವಸ್ತುವಿನ ಅಥವಾ ವಿಷಯದ ಮೂಲವನ್ನು, ಎಂದರೆ ’ಅದರತನ‘ವನ್ನು ತಿಳಿಸಿಕೊಡುವ ಶಾಸ್ತ್ರವೇ ತತ್ತ್ವಶಾಸ್ತ್ರ ಎಂದೆನಿಸಿಕೊಳ್ಳುತ್ತದೆ. ಯಾವುದೇ ಅರಿವಿನ ಸಮಗ್ರತೆಯೇ ಇದರ ನಿಲುವು. ಸದ್ಯದ ಸಂದರ್ಭಕ್ಕೆ ಅನ್ವಯಿಸಿ ನೋಡುವುದಾದರೆ, ಕೊರೊನಾ ವೈರಸ್‌ನ ಹುಟ್ಟು–ಸ್ವಭಾವಗಳನ್ನು, ಅದರ ಹರಡುವಿಕೆಯ ಕಾರಣಗಳನ್ನು ತಿಳಿದುಕೊಳ್ಳುವುದು, ಅದು ಹಬ್ಬಿಸುವ ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು‘ – ಇಷ್ಟೂ ತತ್ತ್ವಶಾಸ್ತ್ರ ಎಂದೆನಿಸಿಕೊಳ್ಳುತ್ತದೆ; ಇದೇ ನಿರ್ದಿಷ್ಟವಾಗಿ ’ಫಿಲಾಸಫಿ ಆಫ್‌ ಸೈನ್ಸ್‌‘ ಎಂದಾಗುತ್ತದೆಯೆನ್ನಿ.

ಅಂತೆಯೇ ನಮ್ಮ ಹುಟ್ಟಿನ ಮೂಲ ಏನು? ಅದರ ಗೊತ್ತು–ಗುರಿಗಳೇನು? ನಮ್ಮ ದಿಟವಾದ ಸಂತೋಷ ಎಲ್ಲಿದೆ? – ಇಂಥ ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಶಂಕರರಲ್ಲಿ ನೋಡಬಹುದು. ನಮ್ಮತನದ ಅರಿವಿಗೆ ಆಚಾರ್ಯ ಶಂಕರರ ಕೊಡುಗೆ ಅನನ್ಯ; ಅದು ಅಂದಿಗೂ ಇಂದಿಗೂ ಎಲ್ಲ ಸಂದರ್ಭಗಳಿಗೂ ಒದಗುವ ತತ್ತ್ವಜ್ಞಾನವೇ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.