ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ‘ಅಸ್ತ್ರ’ ಎನಿಸಿಕೊಂಡಿರುವ ರಂಜಾನ್ ಉಪವಾಸ ಮತ್ತೆ ಬಂದಿದೆ. ಕೊರೊನಾ ಸೋಂಕು ಮೂಡಿಸಿರುವ ಆತಂಕದ ನಡುವೆಯೇ ಜಗತ್ತಿನ ವಿವಿಧೆಡೆ ನೆಲೆಸಿರುವ ಮುಸ್ಲಿಮರು ರಂಜಾನ್ ತಿಂಗಳ ಸ್ವಾಗತಕ್ಕೆ ತಯಾರಿ ನಡೆಸಿದ್ದಾರೆ.
ಇಸ್ಲಾಮೀ ಕ್ಯಾಲೆಂಡರಿನ 9ನೇ ತಿಂಗಳು ರಂಜಾನ್ ಆಗಿದ್ದು, ಈ ಬಾರಿ ಏಪ್ರಿಲ್ 24 ಅಥವಾ 25ರಿಂದ ಆರಂಭವಾಗಲಿದೆ. ಚಂದ್ರದರ್ಶನದೊಂದಿಗೆ ಉಪವಾಸ ವ್ರತಕ್ಕೆ ಚಾಲನೆ ದೊರೆಯಲಿದೆ. ಬಳಿಕದ ಒಂದು ತಿಂಗಳು ಉಪವಾಸ ಆಚರಣೆ ನಡೆಯುತ್ತದೆ.
ಸೂರ್ಯೋದಯಕ್ಕೆ ಮುನ್ನ ಆಹಾರಸೇವನೆ (ಸಹ್ರಿ) ಮಾಡಿ ಸೂರ್ಯಾಸ್ತದವರೆಗೆ ಅನ್ನ, ನೀರು ಹಾಗೂ ಎಲ್ಲ ರೀತಿಯ ಸುಖಗಳನ್ನು ತ್ಯಜಿಸುವುದು ಇಸ್ಲಾಮಿನ ಉಪವಾಸದ ವಿಧಾನ. ಇಫ್ತಾರ್‌ನೊಂದಿಗೆ ಉಪವಾಸ ಕೊನೆಗೊಳ್ಳುತ್ತದೆ.
ಇಸ್ಲಾಮಿನಲ್ಲಿ ಉಪವಾಸ ವ್ರತ ಎಂದರೆ, ಅಲ್ಲಾಹನ ಪ್ರೀತಿಯನ್ನು ಗಳಿಸುವ ಬಯಕೆಯೊಂದಿಗೆ ಆಹಾರ, ಪಾನೀಯ ಸೇವನೆ ತ್ಯಜಿಸುವುದು ಮತ್ತು ಎಲ್ಲ ರೀತಿಯ ಮನೋರಂಜನೆ, ಕಾಮಾಸಕ್ತಿಯಿಂದ ದೂರವಿರುವುದು ಎಂದು ಅರ್ಥ.
ದೇಹದ ಬಯಕೆಗಳು ಮತ್ತು ಮಾನಸಿಕ ಪ್ರಲೋಭನೆಗಳನ್ನು ಉಪವಾಸ ತಡೆದು ನಿಲ್ಲಿಸುತ್ತದೆ. ಉಪವಾಸ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. ನಿತ್ಯ ಮೂರು ಹೊತ್ತು ತಿಂದರೆ ಹಸಿವಿನ ಅನುಭವ ಆಗದು. ಉಪವಾಸ ಆಚರಿಸಿದರೆ ಹಸಿದವನ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಉಪವಾಸದಿಂದ ಆರೋಗ್ಯಕ್ಕೂ ಹಲವು ಲಾಭಗಳಿವೆ.
ಗಂಭೀರ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿರುವವರು, ದೂರದ ಊರಿಗೆ ಪ್ರಯಾಣಿಸುವವರು, ಗರ್ಭಿಣಿಯರು, ಬಾಣಂತಿಯರಿಗೆ ಉಪವಾಸದಿಂದ ವಿನಾಯಿತಿ ಇದೆ. ಚಿಕ್ಕಮಕ್ಕಳು, ವಯೋವೃದ್ಧರು ಉಪವಾಸ ಆಚರಿಸಬೇಕಿಲ್ಲ.
ರಂಜಾನ್ ಉಪವಾಸ ವರ್ಷದ ಎಲ್ಲ ಋತುಗಳಲ್ಲೂ ಬರುತ್ತದೆ. ಚಾಂದ್ರಮಾನ ತಿಂಗಳ ಲೆಕ್ಕಚಾರ ಹಾಕುವುದರಿಂದ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದಲ್ಲೂ ರಂಜಾನ್ ತಿಂಗಳು ಹಾದುಹೋಗುತ್ತದೆ.
ರಂಜಾನ್ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್ ನಿರ್ವಹಿಸಲಾಗುತ್ತದೆ. ಅದಕ್ಕೆ ‘ತರಾವೀಹ್’ ಎನ್ನುವರು. ಈ ತಿಂಗಳಲ್ಲಿ ದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತು ಇದ್ದರೆ ಬಡವರು, ನಿರ್ಗತಿಕರಿಗೆ ದಾನ ಮಾಡಬೇಕು ಎಂದು ಇಸ್ಲಾಂ ತಿಳಿಸುತ್ತದೆ. ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್ (ದಾನ) ರೂಪದಲ್ಲಿ ನೀಡಬೇಕು.
ವೈಷಮ್ಯ, ಹಗೆತನ ತೊಡೆದು ಹಾಕಿ ಪ್ರೀತಿಯಿಂದ ಒಂದಾಗುವುದು ರಂಜಾನ್ ಮಾಸಾಚರಣೆ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುವುದು ರಂಜಾನ್ ಆಚರಣೆಯ ಮುಖ್ಯ ನಿಯಮ.
ಕೊರೊನಾ ಕರಿನೆರಳು
ಕೊರೊನಾ ಸೋಂಕು ಇಡೀ ಜಗತ್ತನ್ನು ಆವರಿಸಿರುವುದರಿಂದ ಮುಸ್ಲಿಮರು ಈ ಬಾರಿಯ ರಂಜಾನ್‌ನಲ್ಲಿ ಅನಿವಾರ್ಯವಾಗಿ ಕೆಲವು ಬದಲಾವಣೆಗಳಿಗೆ ಮುಂದಾಗಬೇಕಿದೆ.
ರಂಜಾನ್ ಅವಧಿಯಲ್ಲಿ ಸಾಮೂಹಿಕ ನಮಾಜ್, ತರಾವೀಹ್ (ರಾತ್ರಿಯ ವಿಶೇಷ ನಮಾಜ್), ಸಾಮೂಹಿಕ ಇಫ್ತಾರ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಕೊರೊನಾ ಹರಡುವುದನ್ನು ತಡೆಯಲು ‘ಅಂತರ ಕಾಯ್ದುಕೊಳ್ಳಬೇಕಿರುವುದರಿಂದ’ ಈ ಬಾರಿ ಸಾಮೂಹಿಕವಾಗಿ ಏನನ್ನೂ ನಡೆಸುವಂತಿಲ್ಲ.
ರಂಜಾನ್ ಉಪವಾಸವನ್ನು ಎಂದಿನ ಚೈತನ್ಯದೊಂದಿಗೆ ಆಚರಿಸುವ ಜತೆಗೆ ಕೊರೊನಾ ಹರಡದಂತೆ ಎಚ್ಚರ ವಹಿಸುವ ಸವಾಲು ಕೂಡ ಸಮುದಾಯದ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.