ADVERTISEMENT

ಇಂದು ಶಿವರಾತ್ರಿ: ಶಿವ ಒಳಿತಿನ ಒಡೆಯ

ಇಂದು ಶಿವರಾತ್ರಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 1 ಮಾರ್ಚ್ 2022, 3:05 IST
Last Updated 1 ಮಾರ್ಚ್ 2022, 3:05 IST
shiva
shiva   

ಶಿವನ ಕಲ್ಪನೆ ತುಂಬ ಪ್ರಾಚೀನವಾದುದು; ವೇದಗಳಲ್ಲಿಯೇ ಕಾಣುತ್ತೇವೆ. ಅವನು ಶಿವನೂ ಹೌದು, ಶಂಕರನೂ ಹೌದು. ‘ಶಂಕರ’ ಎಂದರೆ ಮಂಗಳಕರ – ಒಳಿತನ್ನು ಮಾಡುವವನು – ಎಂದರ್ಥ. ‘ಒಳಿತು ನನಗೆ ಬೇಡ’ – ಎನ್ನುವವರು ಯಾರಾದರೂ ಇದ್ದಾರೆಯೆ? ‘ಶಿವ’ ಎಂದರೆ ‘ವಿಶ್ರಾಂತಸ್ಥಾನ’ ಎಂದೂ ಹೇಳುವುದಿದೆ. ಪ್ರತಿಕ್ಷಣವೂ ಜೀವನಯಾನದಲ್ಲಿ ಓಡುತ್ತಲೇ ಇರುವ ನಮಗೆ ವಿಶ್ರಾಂತಿ ಕೂಡ ಅಗತ್ಯವೇ ಹೌದಲ್ಲವೆ? ಶಿವನ ಪ್ರಸಿದ್ಧ ಹೆಸರುಗಳಲ್ಲಿ ‘ರುದ್ರ’ ಎಂಬುದೂ ಒಂದು. ರುದ್ರ ಎಂದರೆ ರೋದನವನ್ನು ಉಂಟುಮಾಡಬಲ್ಲವನಂತೆ. ರೋದನ, ಎಂದರೆ ಅಳು; ಅದು ಯಾರಿಗೂ ಬೇಡವಾದದ್ದು. ಆದರೆ ಯಾರ ಜೀವನದಲ್ಲಿ ತಾನೆ ರೋದನವಿಲ್ಲದಿದ್ದೀತು? ಆದಕಾರಣ, ಅಳುವಿನಿಂದ ಬಿಡುಗಡೆ ಬೇಕು ಎಂದರೆ, ಅದರ ಮೂಲದ ಬಗ್ಗೆ ಅರಿವು ಒದಗಬೇಕು; ಆಗ ರುದ್ರನನ್ನೇ ಆಶ್ರಯಿಸಬೇಕು. ತಾತ್ಪರ್ಯ ಏನೆಂದರೆ, ಶಿವನ ಕಲ್ಪನೆಯಲ್ಲೇ ನಮ್ಮ ಜೀವನದ ಕಲ್ಪನೆಯೂ ಬೆಸೆದುಕೊಂಡಿದೆ.

ತ್ರಿಮೂರ್ತಿಗಳಲ್ಲಿ ಶಿವನೂ ಒಬ್ಬ. ಸೃಷ್ಟಿಕರ್ತನು ಬ್ರಹ್ಮನಾದರೆ, ಸ್ಥಿತಿಗೆ ಕಾರಣನು ವಿಷ್ಣು; ಪ್ರಳಯಕಾರಕನೇ ಶಿವ ಎಂಬುದು ನಮ್ಮ ಸಂಸ್ಕೃತಿಯ ಎಣಿಕೆ. ಹುಟ್ಟ ಬೇಕು; ಹುಟ್ಟಿದ್ದು ಬೆಳೆಯಬೇಕು; ಬೆಳೆದದ್ದು ಮರೆಯಾಗಲೇಬೇಕು. ಇದು ಸೃಷ್ಟಿನಿಯಮ; ಸೃಷ್ಟಿ, ಸ್ಥಿತಿ ಮತ್ತು ಲಯತತ್ತ್ವಗಳ ಸಾರ. ತ್ರಿಮೂರ್ತಿಗಳಲ್ಲಿ ಶಿವನ ಕೆಲಸ ಸಂಹಾರಕನ ಪಾತ್ರ; ಎಲ್ಲವನ್ನೂ ಲಯ ಮಾಡುವವನು, ಮರೆಯಾಗಿಸುವವನು. ಸಂಹಾರ ಎಂಬುದು ಮೇಲ್ನೋಟಕ್ಕೆ ತುಂಬ ಭಯಂಕರವಾಗಿಯೂ ಕ್ರೌರ್ಯ ವಾಗಿಯೂ ಕಾಣಿಸುವುದು ದಿಟವೆನ್ನಿ! ಆದರೆ ಸಂಹಾರ ನಡೆಯದೆಯೇ ಉಗಮಕ್ಕೆ ತಾಣವೇ ಒದಗದು ಎಂಬ ತಥ್ಯವನ್ನು ಅದು ಸಂಕೇತಿಸುತ್ತಿದೆ; ‘ತೊಟ್ಟಿಲುಗಳೆಷ್ಟೊ ಮಸಣಗಳಷ್ಟು’ ಎಂಬ ಕವಿವಾಣಿಯನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು. ಮಾತ್ರವಲ್ಲ, ‘ಲಯ’ ಎಂಬುದು ವಿಶ್ರಾಂತಿಗೂ ಸಂಕೇತ; ದಣಿದಿರುವ ಜೀವಕ್ಕೆ ವಿಶ್ರಾಂತಿಯೂ ಬೇಕಲ್ಲವೆ? ಹೀಗಾಗಿ ಶಿವನು ನಡೆಸುವ ಸಂಹಾರ ಎಂದರೆ ಸೃಷ್ಟಿಚಕ್ರದ ನಿರಂತರತೆಯನ್ನು ಕಾಪಾಡುವುದು; ಬದುಕಿನಲ್ಲಿ ಎದುರಾಗುವ ರೋದನಕ್ಕೆ ಉಪಶಮನವನ್ನು ಒದಗಿಸುವುದು. ರುದ್ರ ನಮ್ಮನ್ನು ಅಳುವಂತೆ ಮಾಡುವವನಲ್ಲ; ಅಳುವಿನಿಂದ ನಮ್ಮನ್ನು ಪಾರುಮಾಡುವವನು ಅವನು.

ಶಿವ ಎಂದರೆ ಇಡಿಯ ಸೃಷ್ಟಿ – ಎಂಬ ಕಲ್ಪನೆಯನ್ನು ಕಾಳಿದಾಸ ತುಂಬ ಸೊಗಸಾಗಿ ಎತ್ತಿಹಿಡಿದಿದ್ದಾನೆ. ‘ಸೃಷ್ಟಿಕರ್ತನ ಪ್ರಥಮ ಸೃಷ್ಟಿಯಾದ ನೀರು, ಹವಿಸ್ಸನ್ನು ದೇವತೆಗಳಿಗೆ ಮುಟ್ಟಿಸುವ ಅಗ್ನಿ, ಯಜಮಾನ, ಕಾಲ ವಿಭಜನೆಗೆ ಕಾರಣರಾದ ಸೂರ್ಯಚಂದ್ರರು, ಎಲ್ಲ ಕಡೆಗೂ ವ್ಯಾಪಿಸಿರುವ ಆಕಾಶ, ಎಲ್ಲ ವಿಧದ ಬೀಜಶಕ್ತಿಗೂ ಆಧಾರವಾಗಿರುವ ಭೂಮಿ, ಎಲ್ಲ ಪ್ರಾಣಿಗಳಿಗೂ ಪ್ರಾಣವನ್ನು ಒದಗಿಸುವ ವಾಯು – ಈ ಎಂಟು ವಿವರಗಳು ಶಿವನ ಪ್ರತ್ಯಕ್ಷ ಶರೀರಗಳು’ ಎಂದು ಅವನು ಒಕ್ಕಣಿಸಿದ್ದಾನೆ. ವಿಶ್ವದ ಒಂದೊಂದು ಕಣದ ಚಲನೆಯೂ, ಅದು ದಿಟದಲ್ಲಿ ಶಿವನ ಕುಣಿತ ಎಂಬುದು ಇಲ್ಲಿಯ ಭಾವ. ತ್ರಿಮೂರ್ತಿಗಳು ಮೂವರು ದೇವತೆ ಗಳಲ್ಲ, ಒಂದೇ ತತ್ತ್ವದ ಮೂರು ಆಯಾಮಗಳ ಸಂಕೇತಗಳಷ್ಟೆ.

ADVERTISEMENT

ಶಿವನ ಕಲ್ಪನೆಯ ವ್ಯಾಪ್ತಿ ತುಂಬ ವಿಶಾಲವಾದುದು. ಯೋಗಿಯಾಗಿಯೂ ಭೋಗಿಯಾಗಿಯೂ ನಮಗೆ ಅವನು ಕಾಣಿಸುತ್ತಾನೆ; ತ್ಯಾಗ–ಭೋಗಗಳ ಸಮನ್ವಯವನ್ನು ಎತ್ತಿಹಿಡಿದಿದ್ದಾನೆ. ತಪಸ್ವಿಗಳಿಗೂ ಅವನೇ ಆದರ್ಶ; ಗೃಹಸ್ಥರಿಗೂ ಅವನೇ ಆದರ್ಶ. ಸ್ಮಶಾನದಲ್ಲಿಯೇ ವಾಸಿಸುವಷ್ಟು ವೈರಾಗ್ಯಸಂಪನ್ನ; ಹೆಂಡತಿಗೆ ಅರ್ಧ ದೇಹವನ್ನೇ ನೀಡುವಷ್ಟು ಪ್ರೇಮಪೂರ್ಣನೂ ಹೌದು. ಅವನು ತಾಂಡವಕ್ಕೂ ಸಿದ್ಧ; ಲಾಸ್ಯಕ್ಕೂ ಬದ್ಧ. ಅನಂತಗುಣಗಳ ಪ್ರತಿನಿಧಿಯಾದ ಶಿವನ ಆರಾಧನೆಯೂ ಸುಲಭ; ಬಿಲ್ವಪತ್ರೆಗೂ ತುಂಬೆಹೂವಿಗೂ ಒಲಿ ಯುವಷ್ಟು ಉದಾರಿ ಅವನು; ಅವನಿಗೆ ಆಭರಣಗಳ ಹೊಳಪಿನ ಅಲಂಕಾರಕ್ಕಿಂತಲೂ ಜಲಾಭಿಷೇಕದ ಆರ್ದ್ರತೆಯೇ ಪ್ರಿಯ. ಇಂಥ ಸರ್ವಶಕ್ತನೂ ಲೋಕನಾಥನೂ ಸತ್ಯ–ಶಿವ–ಸುಂದರಗಳ ಸಾಕಾರಮೂರ್ತಿಯೂ ಎನಿಸಿರುವ ಶಿವನ ಪೂಜೆಗೆ ಮೀಸಲಾದ ದಿನವೇ ‘ಮಹಾಶಿವರಾತ್ರಿ.’

ಶಿವರಾತ್ರಿ; ಹೆಸರೇ ಸೂಚಿಸುವಂತೆ ಶಿವನ ಆರಾಧನೆಗೆ ಮೀಸಲಾದ ಸಮಯ ‘ರಾತ್ರಿ’. ಇಡಿಯ ರಾತ್ರಿ ನಾವು ಜಾಗರಣೆಯಲ್ಲಿದ್ದು ಶಿವನನ್ನು ಪೂಜಿಸಬೇಕು. ರಾತ್ರಿ ಎಂದರೆ ನಿದ್ರೆ; ತಮಸ್ಸು; ಕತ್ತಲು. ಇವೆಲ್ಲವೂ ನಮ್ಮ ಎಚ್ಚರವನ್ನು ತಪ್ಪಿಸುವಂಥವು; ಪ್ರಮಾದಕ್ಕೆ ಕಾರಣವಾಗಬಲ್ಲಂಥವು. ಇಂಥ ಸಮಯ ದಲ್ಲಿ ಬೆಳಕಾಗಿ ಒದಗುವವನು ಶಿವ. ಇದರ ಸಂಕೇತವೇ ರಾತ್ರಿಯಲ್ಲಿ ನಡೆಯುವ ಅವನ ಪೂಜೆ. ಶಿವತತ್ತ್ವದ ಆಯಾಮಗಳು ಇನ್ನೂ ಹತ್ತು ಹಲವು. ಅವುಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಪರ್ವವೇ ದಿಟವಾದ ‘ಶಿವರಾತ್ರಿ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.