ADVERTISEMENT

ಸರಳತೆಯೆಂಬ ಸರ್ವಾಲಂಕಾರ

ರಘು ವಿ
Published 15 ನವೆಂಬರ್ 2019, 19:30 IST
Last Updated 15 ನವೆಂಬರ್ 2019, 19:30 IST
   

ದೇವರಿಗೆ ಅಲಂಕಾರ ಮಾಡುವುದು ಅವನನ್ನು ಚಂದಗಾಣಿಸಲು. ಮನುಷ್ಯ ತನ್ನನ್ನೂ ಅಲಂಕರಿಸಿಕೊಳ್ಳುತ್ತಾನೆ, ಇತರರಿಗೆ ತಾನು ಚಂದ ಕಾಣಿಸಬೇಕು ಎಂದು. ಆದರೆ ನಿರಾಭರಣ ಸೌಂದರ್ಯವೇ ಸಹಜ ಸೌಂದರ್ಯ. ಸರಳತೆಯೇ ಸರ್ವಾಲಂಕಾರ. ಆದರೆ ಸರಳತೆ ಸಹಜವಲ್ಲ ಮತ್ತು ಅದು ಸುಮ್ಮನೆ ಬರುವುದಿಲ್ಲ. ಸತತಾಭ್ಯಾಸದಿಂದ, ಸಂಸ್ಕಾರದ ಬಲದಿಂದ ಮಾತ್ರ ಅದನ್ನು ಸಾಧಿಸಲು ಸಾಧ್ಯ. ಸೂಟು ಬೂಟು ಧರಿಸಿದ ಬ್ಯಾರಿಸ್ಟರ್ ಗಾಂಧಿ ಅರೆಬೆತ್ತಲ ಫಕೀರನಾಗಲು ಸಾಕಷ್ಟು ಅಭ್ಯಾಸ ಮಾಡಬೇಕಾಯಿತು.

‘ಸರಳ ಜೀವನ ಉನ್ನತ ಚಿಂತನ’ ಎಂಬ ಸೂತ್ರವನ್ನು ಗಿಳಿಪಾಠದಂತೆ ಒಪ್ಪಿಸುತ್ತ ಬದುಕಿನಲ್ಲಿ ಅದನ್ನು ಅಳವಡಿಸಿಕೊಳ್ಳದಿದ್ದರೆ ಏನು ಪ್ರಯೋಜನ? ಸರಳತೆ ಬಹಳ ಕಠಿಣ ವ್ರತ. ಆದರೆ ಸರಳತೆಯೇ ಆಡಂಬರವಾಗುವ ಅಪಾಯವೂ ಇದೆ. ಬಿಡಿಸಿಕೊಳ್ಳುತ್ತಿದ್ದೇವೆಂಬ ಭ್ರಮೆಯಲ್ಲೇ ನಾವು ಅಂಟಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳುವ ಸಾಧ್ಯತೆಗಳಿವೆ. ಅಂಟಿಕೊಳ್ಳುವ ಪ್ರವೃತ್ತಿ ಮನುಷ್ಯ ಸಹಜ. ಇದರಿಂದ ಬಿಡಿಸಿಕೊಳ್ಳುವುದು, ಇದನ್ನು ಮೀರಿ ನಿಲ್ಲುವುದು ಬಹಳ ಕಷ್ಟ. ಯುವಮಿತ್ರರೊಬ್ಬರು ಸಂನ್ಯಾಸ ಸ್ವೀಕರಿಸಲು ಹಿಮಾಲಯಕ್ಕೆ ತೆರಳಿದರು. ಹಲವು ತಿಂಗಳ ಬಳಿಕ ಸಂನ್ಯಾಸ ಸ್ವೀಕರಿಸಿ ಹಿಂದಿರುಗಿದರು. ಬರುವಾಗ ತಮ್ಮ ಕೈಚೀಲದಲ್ಲಿ ಅಲ್ಲಿಂದ ಒಂದು ಹಲಸಿನ ಸಸಿ ತಂದು ತಮ್ಮ ಪೂರ್ವಾಶ್ರಮದ ತಂದೆಗಿತ್ತು ನುಡಿದರು, ‘ಇದನ್ನು ನಮ್ಮ ಜಮೀನಿನಲ್ಲಿ ನೆಡಿ. ಒಳ್ಳೆ ಫಲ ನೀಡುವಂತಹ ತಳಿ ಇದು!’ ಮೈಮೇಲೆ ಧರಿಸಿದ ಬಟ್ಟೆ ಬಿಟ್ಟರೆ ಜೋಳಿಗೆಯಲ್ಲಿ ಇನ್ನೊಂದು ಜೊತೆ ಬಟ್ಟೆಯಿದ್ದರೆ ಅದೇ ಯಥೇಷ್ಟ ಎಂಬ ತತ್ವದ ಸಂನ್ಯಾಸಿ ಹಲಸಿನ ಬೆಳೆ ಸಲುವಾಗಿ ಬೆಳೆಯಲಿ, ಅದೂ ತನ್ನ ಪೂರ್ವಾಶ್ರಮದ ಆಸ್ತಿಯಲ್ಲಿ ಎಂದು ಬಯಸುವುದು ಎಂತಹ ವಿಚಿತ್ರ! ಹೀಗಾಗಿಯೇ ಸರಳತೆ ಸರಳವಲ್ಲ ಎನ್ನುವುದು.

ನಮ್ಮ ವೇಷಭೂಷಣ, ಬಳಸುವ ವಸ್ತುಗಳು, ನಮ್ಮ ವ್ಯವಹಾರ, ವ್ಯಾಪಾರ - ಒಟ್ಟೂ ಜೀವನದ ಅವಿಭಾಜ್ಯ ಅಂಗವಾಗಿ ಸರಳತೆಯನ್ನು ರೂಢಿಸಿಕೊಳ್ಳಬೇಕು. ಭೋಗಗಳಿಂದ ಇಂದ್ರಿಯತೃಪ್ತಿ ಸಾಧ್ಯವಿಲ್ಲ ಎಂಬ ಉದಾಹರಣೆ ಪದೇ ಪದೇ ಕಣ್ಮುಂದೆ ಬಂದರೂ, ಅದು ಶತಃಸಿದ್ಧವಾದರೂ ಮನುಷ್ಯ ವಸ್ತುಗಳ ಸಂಗ್ರಹದತ್ತ, ಭೋಗಜೀವನದತ್ತ ಮುಖಮಾಡಿಯೇ ಬದುಕುತ್ತಿದ್ದಾನೆ. ಜನಕ ಮಹಾರಾಜನಾಗಿದ್ದರೂ ಜ್ಞಾನಿಯಾಗಿದ್ದ, ಆತ್ಮಜ್ಞಾನದ ಅಧಿಕಾರಿಯಾಗಿದ್ದ, ದುರ್ಯೋಧನ ಚಕ್ರವರ್ತಿಯಾಗಿದ್ದರೂ ಪಾಂಡವರಿಗೆ ಇದು ಹಳ್ಳಿಗಳನ್ನು ಕೊಡಲಾರದ ಲೋಭಿಯಾಗಿದ್ದ. ಭೋಗದ ನಡುವೆಯೂ ತ್ಯಾಗಿಯಾಗಿರಬಹುದು ಶಿಬಿ ಚಕ್ರವರ್ತಿಯಂತೆ. ತ್ಯಾಗದ ನಡುವೆಯೂ, ತ್ಯಾಗದ ಹೆಸರಿನಲ್ಲೂ ಭೋಗಿಯಾಗಬಹುದು ಇಂದಿನ ಅನೇಕ ‘ಗುರೂಜಿ’ಗಳಂತೆ. ಸರಳತೆಯ ಸಾಮಾನ್ಯ ಸೂತ್ರ ನಮ್ಮನ್ನು ಅನವಶ್ಯಕ ಹೊರೆಯಿಂದ ಕಾಪಾಡಬಲ್ಲದು. ವಸ್ತುಗಳನ್ನು ಕೊಳ್ಳುವ, ಸಂಗ್ರಹಿಸುವ ಮುಂಚೆ ನಮಗೆ ನಾವೇ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು; ‘ಇದು ಆವಶ್ಯಕವೇ?’ ‘ಇದು ಬೇಕೆ?’ ‘ಇದಿಲ್ಲದೆ ಇರಲು ಸಾಧ್ಯವಿಲ್ಲವೆ?’ ಎಂದು. ಆಮೇಲೆಯೂ ಅದನ್ನು ಕೊಳ್ಳುವುದನ್ನು ಆದಷ್ಟೂ ಮುಂದೂಡಬೇಕು. ಅನಿವಾರ್ಯವೆಂದಾದಾಗ ಮಾತ್ರ ಕೊಂಡು ತರಬೇಕು. ಇದು ಗೃಹಸ್ಥರಿಗೆ ಅನ್ವಯಿಸುವ ಮಾತು.

ADVERTISEMENT

ಇನ್ನು ಸಂನ್ಯಾಸಿಗಳಿಗಂತೂ ಏನೂ ಹೇಳಬೇಕಿಲ್ಲ. ತ್ಯಾಗ ವೈರಾಗ್ಯಗಳ ಮೂರ್ತಿಯಾಗೇ ಇರಬೇಕಾದವರು ಅವರು. ಆದರೆ ಇಂದಿನ ಕಾಲದಲ್ಲಿ ಮಠ ಕಟ್ಟಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಾಗ ಆಸ್ತಿ ನಿರ್ವಹಣೆ, ಹಣದ ನಿರ್ವಹಣೆ ಅವರಿಗೂ ಅನಿವಾರ್ಯ. ಅಂದ ಮಾತ್ರಕ್ಕೆ ಅವರು ಗೃಹಸ್ಥರಿಗಿಂತ ಹೆಚ್ಚಾಗಿ ಅವುಗಳಲ್ಲಿ ತೊಡಗುವುದು ಅಪಾಯ. ಆದರೆ ಹಾಗೆ ‘ಪದ್ಮಪತ್ರದ ಜಲಬಿಂದುವಿನಂತೆ’ ವ್ಯವಹಾರ ನಡೆಸುವ ಸ್ವಾಮಿಗಳೂ ಇದ್ದಾರೆ. ನೋಡಿದರೆ, ಎಲ್ಲವನ್ನೂ ಅವರೇ ತಲೆಯ ಮೇಲೆ ಹೊತ್ತಂತೆ ನಿರ್ವಹಿಸುತ್ತಿರುತ್ತಾರೆ. ಆದರೆ ಮಠದ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಹೊರಟಾಗ ಉಟ್ಟ ಬಟ್ಟೆಯಲ್ಲೇ ಹೊರಟು ನಿಲ್ಲುತ್ತಾರೆ. ಸರಳತೆಯೆಂದರೆ ಇದು, ಯಾವುದಕ್ಕೂ ಅಂಟಿಕೊಳ್ಳದಿರುವುದು.

ಶ್ರೀರಾಮಕೃಷ್ಣರಿಗೆ ಭಕ್ತರೊಬ್ಬರು ಬಹಳ ಬೆಲೆ ಬಾಳುವ ಉಣ್ಣೆಯ ಶಾಲು ನೀಡುತ್ತಾರೆ. ಅವರದನ್ನು ಸ್ವಲ್ಪ ಹೊತ್ತು ಆನಂದದಿಂದ ಧರಿಸಿದ ಬಳಿಕ ತಮ್ಮ ಮನಸ್ಸನ್ನು ಅದರಿಂದ ಸಂಪೂರ್ಣ ಹಿಂತೆಗೆದುಕೊಂಡಿದ್ದಷ್ಟೇ ಅಲ್ಲದೆ, ಅದರತ್ತ ವಿಕರ್ಷಿತರಾಗಿ ಮುದುರಿ ಮೂಲೆಗೆಸೆದು ಅದಕ್ಕೆ ಬೆಂಕಿ ಹಚ್ಚಲೂ ಮುಂದಾಗಿಬಿಡುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಠಾಕುಠೀಕಾಗಿ ಓಡಾಡುತ್ತಿದ್ದ ವಿವೇಕಾನಂದರು ಬೇಲೂರು ಮಠದಲ್ಲಿದ್ದಾಗ ಕೇವಲ ಕೌಪೀನಧಾರಿಯಾಗಿ ಶಿಷ್ಯರಿಗೆ ವೇದಾಂತ ಪಾಠ ಮಾಡುತ್ತ, ಗುರುಭಾಯಿಗಳೊಂದಿಗೆ ಹರಟುತ್ತ ಆನಂದದಿಂದಿರುತ್ತಿದ್ದರು. ಶಾರದಾ ದೇವಿಯವರ ಸರಳತೆಯಂತೂ ಅತ್ಯದ್ಭುತ. ಲಕ್ಷ್ಮೀನಾರಾಯಣ ಎಂಬ ಶ್ರೀಮಂತ ವ್ಯಾಪಾರಿ ಶ್ರೀರಾಮಕೃಷ್ಣರ ಪೋಷಣೆಗೆ ಒಂದು ಇಡುಗಂಟು ನೀಡಲು ಮುಂದೆ ಬಂದ. ಶ್ರೀರಾಮಕೃಷ್ಣರು ಅದನ್ನು ನಿರಾಕರಿಸಿದರು. ಗೃಹಸ್ಥರಾದ್ದರಿಂದ, ನಿಮ್ಮ ಕುಟುಂಬದವರ ಪೋಷಣೆಗಾದರೂ ಇಟ್ಟುಕೊಳ್ಳಿರೆಂದ ಅವನು. ಪತ್ನಿಯನ್ನು ಕೇಳಿ ನೋಡು ಎಂದು ಅವನನ್ನು ಶಾರದಾದೇವಿಯವರ ಬಳಿ ಕೇಳಿಸಿದರು. ಅವನು ಹೋಗಿ ಅವರಲ್ಲಿ ಆ ಹಣ ಸ್ವೀಕರಿಸಬೇಕೆಂದು ಕೇಳಿಕೊಂಡ. ಅವರು ಒಂದೇ ಕ್ಷಣದಲ್ಲಿ ಉತ್ತರಿಸಿದರು, ‘ಅವರು ಬೇಡವೆಂದದ್ದು ನನಗೂ ಬೇಡ!’ ಶ್ರೀರಾಮಕೃಷ್ಣರ ನಿರ್ಯಾಣಾನಂತರ ಇವರು ಬಹಳ ಕಷ್ಟದಲ್ಲೇ ಕೆಲವು ವರ್ಷಗಳನ್ನು ತಳ್ಳಿದರೂ ಎಂದೆಂದೂ ಆ ಶ್ರೀಮಂತನ ಇಡುಗಂಟನ್ನು ನೆನೆಯಲಿಲ್ಲ. ಬದಲಿಗೆ ‘ಚಂದ್ರನಲ್ಲಿಯೂ ಮಚ್ಚೆ ಕಾಣುತ್ತಿದೆ, ದೋಷ ತೋರುತ್ತಿದೆ. ಹೇ ಭಗವಂತ, ನನ್ನ ಮನಸ್ಸನ್ನು ಅದಕ್ಕಿಂತಲೂ ಶುದ್ಧಶೀತಲವಾಗಿರಿಸು’ ಎಂದು ಪ್ರಾರ್ಥಿಸುತ್ತಿದ್ದರು. ಸರಳತೆ ಸುಮ್ಮನೆ ಬರುವುದಿಲ್ಲ. ಸಂಸ್ಕಾರ ಬೇಕು, ಸತತ ಅಭ್ಯಾಸ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.