ಈದ್ ಪ್ರಾರ್ಥನೆಗಾಗಿ ಪ್ರವಾದಿ ಮುಹಮ್ಮದರು ಹಾಗೂ ಅವರ ಅನುಯಾಯಿಗಳು ಮದೀನಾದ ಮಸೀದಿಯಲ್ಲಿ ಸೇರಿದ್ದರು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಈದ್ ನಮಾಜ್‌ಗೆ ಸಿದ್ದರಾಗುತ್ತಿದ್ದ ವೇಳೆ, ಮಸೀದಿಯ ಮೂಲೆಯೊಂದರಲ್ಲಿ ಕುಳಿತು ಅಳುತ್ತಿದ್ದ ಬಾಲಕ ಹಝ್ರತ್ ಮುಹಮ್ಮದರ ಕಣ್ಣಿಗೆ ಬಿದ್ದ. ವಿಚಾರಿಸಿದಾಗ, ಆತ ಅನಾಥನೆಂದೂ, ಧರಿಸಲು ಹೊಸ ಬಟ್ಟೆ ಇರಲಿಲ್ಲವೆಂದೂ, ಹಬ್ಬದ ಸಂಭ್ರಮ ತನಗಿಲ್ಲವೆಂದೂ ಅಳುತ್ತಿದ್ದ ಎನ್ನುವ ವಿಚಾರ ತಿಳಿಯಿತು.
ಪೈಗಂಬರರು ಬಾಲಕನನ್ನು ಆಲಿಂಗಿಸಿ, ಹಣೆಗೆ ಮುತ್ತಿಟ್ಟು, ತಮ್ಮ ಮನೆಗೆ ಕರೆದೊಯ್ದು, ಸ್ನಾನ ಮಾಡಿಸಿ, ಹೊಸ ವಸ್ತ್ರವನ್ನು ಕೊಟ್ಟು, ಇತರ ಮಕ್ಕಳೊಂದಿಗೆ ಊಟಕ್ಕೆ ಕೂರಿಸಿದರು. ಅನಾಥನಾಗಿದ್ದ ಆ ಬಾಲಕ ಎಲ್ಲರೊಂದಿಗೆ ಸೇರಿ ಸಂತೋಷದಿಂದ ಈದ್ ಆಚರಿಸಿದನು. ಇಂತಹ ಶುದ್ಧ ಮಾನವೀಯ ಹಾಗೂ ಸಾಮಾಜಿಕ ಕಾಳಜಿಗಳೇ ಈದ್–ಉಲ್–ಫಿತ್ರ್ (ರಂಜಾನ್) ಆಶಯ.
ಒಂದು ತಿಂಗಳ ಉಪವಾಸದ ಬಳಿಕ ಮುಸಲ್ಮಾನರು ಆಚರಿಸುವ ಈದ್–ಉಲ್–ಫಿತ್ರ್ ಹಬ್ಬದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದೆ. ಹಬ್ಬಾಚರಣೆಯಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಳಕಳಿಯೂ ಇದೆ. ಕಠಿಣ ಉಪವಾಸದ ಮೂಲಕ ದೇಹವನ್ನು ದಂಡಿಸಿ, ಸ್ವಾರ್ಥ, ಸ್ವೇಚ್ಛೆ ರಹಿತವಾಗಿ, ಸರಳವಾಗಿ ಬದುಕಿ, ಕಡ್ಡಾಯ ದಾನ ನೀಡುವ ಮೂಲಕ ದಮನಿತರ ಕಷ್ಟಕ್ಕೆ, ಬಡವರ ನೋವಿಗೆ ಸ್ಪಂದಿಸುವ ಸಾಮಾಜಿಕ ಸಮಾನತೆಯ ಸಂದೇಶವಿದೆ.
ಈದ್‌ನ ದಿನ ಧಾನ್ಯಗಳನ್ನು ದಾನ ಮಾಡುವುದು ಕಡ್ಡಾಯ. ಆ ಊರಿನಲ್ಲಿ ಬಳಕೆಯಲ್ಲಿರುವ ಧಾನ್ಯಗಳನ್ನು ಮನೆಯ ಪ್ರತಿ ಸದಸ್ಯನ ಹೆಸರಿನಲ್ಲಿ, ತಲಾ 2600 ಗ್ರಾಂನಷ್ಟು ಬಡವರಿಗೆ ದಾನ ನೀಡಬೇಕು. ಹಾಗಿದ್ದರೆ ಮಾತ್ರ ಉಪವಾಸ ದೇವನ ಬಳಿ ಸ್ವೀಕಾರವಾಗುತ್ತದೆ ಎನ್ನುವುದು ನಂಬಿಕೆ. ಆ ದಿನ ಬಟ್ಟೆ, ಹಣವನ್ನು ದಾನವಾಗಿ ನೀಡುತ್ತಾರೆ. ಹಬ್ಬದ ದಿನದಂದು ಉಪವಾಸ ಹಿಡಿಯುವುದನ್ನು ನಿರ್ಬಂಧಿಸಲಾಗಿದೆ. ಮನೆಯಲ್ಲಿ ತಯಾರಿಸಿದ ಭಕ್ಷ್ಯಗಳನ್ನು ನೆರೆಹೊರೆಯವರೊಂದಿಗೆ, ಬಡವರೊಂದಿಗೆ, ವೃದ್ಧರೊಂದಿಗೆ, ನಿರ್ಗತಿಕರೊಂದಿಗೆ, ವಿಧವೆಯರೊಂದಿಗೆ, ಅನಾಥರೊಂದಿಗೆ ಹಂಚಿ ತಿಂದು ಅವರನ್ನೂ ಖುಷಿಪಡಿಸಬೇಕು. ಈದ್‌ನ ದಿನದ ಖರ್ಚಿಗೆ ಬೇಕಾದ ಸ್ವತ್ತು ಉಪಯೋಗಿಸಿ ಬೇರೆಯೇನಾದರೂ ಉಳಿದರೆ ದಾನ ನೀಡುವುದು ಕಡ್ಡಾಯವಾಗುತ್ತದೆ. ಆ ದಿನ ಯಾರೂ ಉಪವಾಸ ಇರಕೂಡದು ಎನ್ನುವುದು ಉದ್ದೇಶ. ‘ನೆರೆಹೊರೆಯವ ಹಸಿದಿರುವಾಗ ಹೊಟ್ಟೆತುಂಬಾ ಉಣ್ಣುವವನು ನಮ್ಮವನಲ್ಲ’ ಎನ್ನುವುದು ಪ್ರವಾದಿ ನುಡಿ.
ಇಸ್ಲಾಮ್‌ನ ಐದು ಕಡ್ಡಾಯ ಕಾರ್ಯಗಳಲ್ಲಿ ‘ಝಕಾತ್’ (ಕಡ್ಡಾಯ) ಕೂಡ ಒಂದು. ಶ್ರೀಮಂತರು ತಮ್ಮ ಒಟ್ಟು ಆಸ್ತಿಯ ಶೇ 2.5ರಷ್ಟು ದಾನ ನೀಡಬೇಕು. ಈದ್–ಉಲ್–ಫಿತ್ರ್ ದಿನದಂದೇ ಹೆಚ್ಚಿನ ಮಂದಿ ತಮ್ಮ ಸ್ವತ್ತಿನ ನಿಗದಿತ ದಾನ ನೀಡುತ್ತಾರೆ. ಈ ವೇಳೆ ಅನಾಥರು, ನಿರ್ಗತಿಕರು, ಬಡವರನ್ನು ವಿಶೇಷವಾಗಿ ಪರಿಗಣಿಸುತ್ತಾರೆ. ಆ ದಿನ ನೆರೆಹೊರೆಯವರೊಂದಿಗೆ, ಮನೆಯವರೊಂದಿಗೆ ಧಾರಾಳತನ ತೋರಬೇಕು ಎನ್ನುವುದು ಪ್ರವಾದಿ ಮುಹಮ್ಮದರ ಸಂದೇಶ.
ಹಬ್ಬದ ದಿನ ‘ಈದಿ’ (ಉಡುಗೊರೆ) ಕೊಡುವ ಪದ್ಧತಿಯೂ ಕೂಡ ಇದೆ. ಉಳ್ಳವರು ಇಲ್ಲದವರಿಗೆ ಹಣದ ರೂಪದಲ್ಲಿ ಕೊಡುವ ದಾನವೇ ಈದಿ. ಇದರಲ್ಲಿ ಕುಟುಂಬದೊಳಗಿನ ಅನಾಥಮಕ್ಕಳಿಗೆ, ವಿಧವೆಯರಿಗೆ, ವೃದ್ಧರಿಗೆ ಹೆಚ್ಚಿನ ಪ್ರಾಶಸ್ತ್ಯ. ಮಸೀದಿ ಹಾಗೂ ಈದ್ಗಾಗಳಲ್ಲಿ ಆರ್ಥಿಕ, ಸಾಮಾಜಿಕ, ವರ್ಣಗಳ ಭೇದ ಇಲ್ಲದೆ ಭುಜಕ್ಕೆ ಭುಜ ತಾಗಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಎಲ್ಲರೂ ಪರಸ್ಪರ ಕೈ–ಮೈ ಜೋಡಿಸಿ ಪ್ರೀತಿ, ಸ್ನೇಹವನ್ನು ಹಂಚಿಕೊಳ್ಳುತ್ತಾರೆ. ದ್ವೇಷ, ಹಗೆ, ಅಸೂಯೆ, ಮತ್ಸರ ನಂಜು ಮರೆತು, ಎಲ್ಲವನ್ನೂ ಮಾಫಿ ಮಾಡಿ ಖುಷಿಯಿಂದ ಎಲ್ಲರೊಂದಿಗೆ ಬೆರೆಯುತ್ತಾರೆ. ಹಬ್ಬದ ದಿನ ಎಲ್ಲರೂ ಒಂದೆಡೆ ಸೇರಿ ಗುಂಪಾಗಿ ಪ್ರಾರ್ಥಿಸಬೇಕು ಎನ್ನುವ ಪ್ರವಾದಿ ಸಂದೇಶದಲ್ಲಿ ಒಗ್ಗಟ್ಟಿನ ಪಾಠವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.