ಹೆಣ್ಣುಮಕ್ಕಳಿಗೂ, ಶ್ರಾವಣಕ್ಕೂ, ತವರಿಗೂ ಅವಿನಾಭಾವ ಸಂಬಂಧ. ಮದುವೆಯಾದ ಹೊಸದರಾಗಂತೂ ಹೆಣ್ಣುಮಕ್ಕಳಿಗೆ ತವರಿನದೇ ಹಂಬಲ. ಉತ್ತರ ಕರ್ನಾಟಕದ ಹೆಣ್ಣುಮಕ್ಕಳು ಪಂಚಮಿ ಹಬ್ಬ ಯಾವಾಗ ಬರ್ತದೋ ಅಂತ ಹಣಿಗೈಯಿಕ್ಕಿ ಕಾಯತಿರ್ತಾರ. ಆಷಾಢದಾಗ ಅವರ ಕಣ್ಣು ತಲಬಾಗಿಲ ಕಡಿಗೇ ನೋಡತಿರ್ತದ. ಹಬ್ಬಕ್ಕೆ ಕರೀಲಿಕ್ಕಿ ಅಪ್ಪ, ಚಿಗಪ್ಪ, ಇಲ್ಲಾ... ಅಣ್ಣ ಬರ್ತಾನೋ ಅಂತ ಒಂದೇ ಸಮ ಕಾತರ. ಆಗೆಲ್ಲ ಫೋನು, ಮೊಬೈಲುಗಳ ಕಾಲಲ್ಲಾ. ಅಪ್ಪನ ಪತ್ರ ಬಂದಾಗ ಅತ್ತಿ ಮನೆಯವರು ಎಷ್ಟು ದಿನ ಅನುಮತಿ ಕೊಡ್ತಾರೋ ಅನ್ನೋ ಆತಂಕ ಬ್ಯಾರೆ.
ಹೆಣ್ಣುಮಗಳು ಬರ್ತಾಳಂದ್ರ ಆ ವರ್ಷ ತವರೊಳಗೂ ಹಬ್ಬ ಜೋರು. ದರಾ ವರ್ಷಕ್ಕಿಂತ ಜ್ವಾಳದಳ್ಳು, ಚಿಗಳಿ, ತಂಬಿಟ್ಟಿನುಂಡಿಯ ಡಬ್ಬಿ ದೊಡ್ಡದಾಗಿರುತ್ತವ.
ತಾಯಿ ಜೀವಕ್ಕ ಮಗಳಿಗೆ ಪಂಚಮಿ ಬಳಿ ಇಡಿಸೋ ಸಂಭ್ರಮನೇ ಸಂಭ್ರಮ.ಬಳಗಾರಗ ಕರೆಸಿ ಚುಕ್ಕಿಬಳಿ, ಕಾಫಿಬಳಿ, ಕಟಿಂಗ್ ಬಳಿ ಹಿಂಗ ನಾನಾ ನಮೂನೆ ಬಳಿ ಇಡಿಸಿದಾಗ ಮಗಳ ಹಿಗ್ಗು ತಾಯಿಗೆ ಸುಗ್ಗಿ.
ಕೂಡು ಕುಟುಂಬದ ತವರಿದ್ರಂತೂ ಸಡಗರ ದುಪಟ್ಟಾಗಿರುತ್ತದ.ಅಜ್ಜಿ, ತಾತಾ,
ಕಾಕಾ, ಕಾಕಿ, ಅಣ್ಣ, ತಮ್ಮ, ತಂಗಿ, ವೈನಿಯಂದ್ರು ತುಂಬಿದ ಮನ್ಯಾಗಂತೂ ದಿನಾಲು ಹಬ್ಬನ. ಹಬ್ಬ ಬಂದ್ರ ಕೇಳ್ಬೇಕ? ಅದ್ರಾಗ ಮಗಳು ತವರಿಗಿ ಬಂದರ ಮನಿ ಸಂತಸದ ಬನ ಆಗಿರತದ.
ನಾಗರಚೌತಿ ದಿನ ಅವ್ವ ಹೆಣೆದ ಕ್ರೋಷಾ ವಸ್ತ್ರ ಮುಚ್ಚಿದ ಪೂಜಾ ತಟ್ಟಿ ಹಿಡಿದು ಮನಿ ಮಗಳು ನಾಗರಕಟ್ಟಿಗೆ ಹೋಗುವಾಗ ಓಣಿಮಂದೆಲ್ಲ 'ಯಾವಾಗ ಬಂದೀಯವ್ವ? ಹಬ್ಬ ಆದ್ಮೇಲೆ ನಾಕ್ದಿನ ಇರ್ತಿದೇನು' ಅಂತ ಕೇಳೋರಿಗೆ ಉಲ್ಲಾಸದಿಂದ ಉತ್ತರ ಕೊಡೊದರಾಗೇ ಏನೋ ಹಿತ,ಹಿಗ್ಗು.
ನಾಗಪ್ಪನ ಕಟ್ಯಾಗ ನೆರೆದ ಮಂದಿಗೆಲ್ಲ ಕಣ್ಣಾಗೆಣ್ಣಿ ಹಾಕೊಂಡು ನಿದ್ದಿಗೆಟ್ಟು ಕೈಗಿ ಹಚ್ಚಿದ ಮೆಹೆಂದಿ, ಸೀರಿ, ಬಳಿ, ಜಡೆಗೆ ಮುಡಿದ ಮಲ್ಲಿಗೆಯನ್ನು ಮಾತಿನ ಸಹಾಯವಿಲ್ಲದ ವೈಯಾರದಿಂದ ತೋರ್ಸೋದ ಸಡಗರಾಗಿರ್ತದ. ನಾಗಪ್ಪನ ಪೂಜಾಮಾಡಿ ಅಪ್ಪ, ಅವ್ವ, ಅಣ್ಣ, ಕಾಕಾ,ಕಾಕಿ, ತಮ್ಮ, ತಂಗಿ ಎಲ್ಲರ ಹೆಸರು ಕರದು 'ನಾಗಪ್ಪ .... ನಮ್ಮಪ್ಪ...ತಂದೀ... ಹಿಂದೇಳು ಬಳಗಕ್ಕ ಮುಂದೇಳು ಬಳಗಕ್ಕ ಸುರಕ್ಷಿತವಾಗಿಡಪ್ಪ' ಅಂತ ಬೆಲ್ಲದಾಲು ಹಾಕುತ್ತಾ ಮುಗ್ಧವಾಗಿ ಬೇಡಿಕೊಳ್ಳುವ ಮಗಳು. ಈ ಭಾವವೇ ತವರಿಗೆ ಒಂದು ಸುರಕ್ಷಾ ಕವಚ ಹೊದಿಸಿದಷ್ಟು ನೆಮ್ಮದಿ ಆಕಿಗಿ.
ಚೌತಿ ಉಪವಾಸಕ್ಕ ಚಕ್ಕಲಿ, ಉಂಡಿ, ಸೇವು, ಶಂಕರಪಾಳಿ, ಕಡ್ಲಿ ಗುಗ್ಗರಿ, ಅವಲಕ್ಕಿ ಚೂಡಾ, ಕರ್ಜಿಕಾಯಿ ಇನ್ನೂ ಏನೆಲ್ಲಾ. ಆಗ್ರಹದಿಂದ ಅವ್ವ ಚಿಕ್ಕವ್ವ ಬಡಿಸಿದ್ದು ಸಾಕೆನುತ್ತಲೆ ಎಲ್ಲಾ ಖಾಲಿ ಮಾಡುತ್ತಲೆ, ಗೆಳತಿಯರ ದಂಡಿನ ಘೇರಾವು. ಅಂಗಳದಾಗ ಬೇವಿನ ಗಿಡಕ್ಕ ಅಣ್ಣ ಕಟ್ಟಿದ ಜೋಡು ಹಗ್ಗದಜೋಕಾಲಿ ಕಾಯತಿರ್ತದ.
ಹಗ್ಗದ ಜೋಕಾಲಿ ಆಡೋದೊಂದು ಕಲೆ. ಅದರಾಗೂ ನಾನಾ ನಮೂನೆಗಳು. ಜೋಡು ಹಗ್ಗದ ಎಳೆಗಳನ್ನು ಇಭ್ಭಾಗಿಸಿ ಗೆಳತಿಯರಿಬ್ಬರೂ ಎದುರ ಬದರಾಗಿ ಕೂತು ಒಬ್ಬರು ಎದುರಿನವರ ಹಗ್ಗಕ್ಕೆ ಕಾಲು ಹಚ್ಚಿ ತೂಗಬೇಕು. ಜೋಕಾಲಿ ವೇಗ ತಗೊಂಡಾಗ ಕಾಲು ಹಚ್ಚಿದವರು ತಮ್ಮ ಕಾಲಿನಿಂದ ದೂರ ತಳ್ಳಬೇಕು. ಆಗ ಇವರು ತಳ್ಳಿದವರ ಹಗ್ಗಕ್ಕ ತಮ್ಮ ಕಾಲು ಹಚ್ಚಬೇಕು. ಹಿಂಗ ಆಡುವಾಗ ಒಮ್ಮೊಮ್ಮೆ ಲೆಕ್ಕ ತಪ್ಪಿ ಡಿಕ್ಕಿ ಹೊಡೆದಾಗ ಎಲ್ಲರೊಳಗೂ ಹರುಷ ಉಕ್ಕತ್ತದ.
ಇನ್ನೊಂದು ಜೋಡಿ ಜೋಕಾಲಿಯೊಳಗೊಬ್ಬರು ಕೂತಿದ್ದರೆ ಇನ್ನೊಬ್ಬರು ಬೆನ್ನಿಂದ ನಿಂತು ತೂಗಿಕೊಳ್ಳೋದು. ವೇಗ ಹೆಚ್ಚಿಸಲಿಕ್ಕಿ ಬಾಗಿ ಜೀಕುವಾಗ ಜಡೆಗಳೂ ಜೀಕತಾವ. ಮುಡಿದ ಮುಳುಜಾಜಿ ಕಣ್ಣು ಪಿಳುಕಿಸ್ತವ. ಮನಸುಗಳೂ ಗರಿಗೆದರತಾವ.
ಊರಿಂದ ಬಂದ ಅಕ್ಕನ ಹಿಂದಿಂದ ಸುತ್ತುವ ತಮ್ಮ, ತಂಗಿಯರಿಗೆ ಮಾಡಿಕೊಟ್ಟ ಕೊಬ್ಬರಿ ಬುಗುರಿ ಗಿರ್ರಂತ ತಿರುಗಿಸಿದಾಗ ಜ್ವಾಳದ ಅಳ್ಳು ತುಂಬಿದ ಕೊಬ್ಬರಿ ಬೆಳ್ಳಿ ಬಟ್ಲದಂಗ ಕಾಣಸ್ತದ. ಆಗಂತೂ ಮಕ್ಕಳ ಮಾರಿ ಥೇಟ್ ಚಂದ್ರನಂಗ ಅರಳಿರುತ್ತದ.
ಮರುದಿನ ಪಂಚಮಿಗೆ ಮಣ್ಣಿನ ನಾಗಪ್ಪಗ ಬಿಳಿ ಹಾಲು ಹಾಕಿದ್ಮೇಲೆ ಮನಿ ಮಗಳು ಹೊಸ್ತಿಲಾ ತೊಳಿಬೇಕು. ಆಗೇನೋ ಮಂತ್ರಿಗಿರಿ ಸಿಕ್ಕಂತ ಖುಷಿ. ಚಿಳ್ಳಿ ಪಿಳ್ಳಿಗಳನ್ನು ' ಫಾಲೋ ಮೀ..' ಅಂತ ಕರ್ಕೊಂಡು ತಲಬಾಗಿಲಿನ ಹೊಸ್ತಿಲದ ಪೂಜೆ ಮಾಡಿದಮ್ಯಾಲ ಕುಬಸದ ಖಣ, ಕೊಬ್ರಿ ಬಟ್ಟಲಾ, ಚಿಗಳಿ ತಂಬಿಟ್ಟು ಜ್ವಾಳದಳ್ಳಿನಿಂದ ವೈನಿಯಂದ್ರು ಒಬ್ಬೊಬ್ಬರಾಗಿ ಉಡಿ ತುಂಬಿದಾಗ ಕಣ್ಣು ತುಂಬತಾವ. ಎದಿ ಭಾವನೆಗಳ ರಾಶಿ. ಎಲ್ಲರನ್ನ ಬಿಟ್ಟು ಅತ್ತಿಮನೆಗೆ ಹೋಗಬೇಕೆನ್ನುವ ಸಂಕಟಾನೂ ಸೇರಿ ಕಣ್ಣು ತುಂಬಿದ್ದು ಖುಷಿಗೋ–ನೋವಿಗೋ ತಿಳಿಯಂಗಿಲ್ಲ.
ಮರುದಿನ ಅತ್ತಿ ಮನೆಯವರಿಗೆಲ್ಲ ಕೊಬ್ಬರಿ ಕುಬಸಾ ತಗೊಂಡು ಹೋಗಾಗ ತವರಮನಿ ಬಗ್ಗೆ ಹೆಮ್ಮೆ ತುಳುಕುತದ. ಗೆಳತ್ಯಾರೊಂದಿಗಿ ಸೋಮವಾರಕ್ಕೊಮ್ಮೆ ಹೊಳಿ ಜಾತ್ರಿ, ರಾಚಟ್ಟೀರಣ್ಣನ ಜಾತ್ರಿ,ಗುಡ್ಡದ ಜಾತ್ರ್ಯಾಗ ಸುತ್ತಿದ್ದು, ರೇಣುಕಾ ಮಹಾತ್ಮೆ ನಾಟಕ ನೋಡಿದ್ದು, ಅಲ್ಲಾಕಾರ್ ಭಾವ್ಯಾಗ ಬಂದ ಹೊಸ ನೀರಾಗ ಈಜಾಡಿದ್ದು ಹೀಂಗ.. ss ತವರೂರಿನ ದಾರಿಯಾಗಿನ ಘಮ ಎದಿತುಂಬಿ ಮೂಡಿದ್ದು ಮಧುರ ಭಾವ, ಬಿಟ್ಟು ಹೊಂಟದ್ದಕ್ಕ ಮಣಭಾರ.
ರಾಖಿಹುಣ್ಣವಿ ಸಮೀಪ ಬರುತ್ತಲೇ ಬಜಾರಕ್ಕ ದೌಡು. ರಾಖಿ ಖರೀದಿಸುವ ಸಂಭ್ರಮ. ದೊಡ್ಡಣ್ಣಗ ರೇಷ್ಮಿ ದಾರದ್ದು, ಸಣ್ಣಣ್ಣಗ ನವಿಲುಗರಿದು, ಇದು ಬ್ಯಾಡ.. ಅದು ಬ್ಯಾಡ... ಅಂತ ಆರಿಸೋದ... ss ಆರಿಸೋದು. ಅಣ್ಣಗ ಪ್ರೀತಿಯಂತ ಬೇಸನುಂಡಿ ಮಾಡಿಟ್ಟಾಗ 'ನಮಗೂ ಅದರಾಗ ಪಾಲಾದಿಲ್ಲೋ' ಅಂತ ಕಾಡುವ ಗಂಡ, ಮೈದುನರು.
ಹುಣ್ಣಿವಿ ದಿನ ಕಾಲು ಕಣ್ಣು ಹೆಬ್ಬಾಗಿಲತ್ತಲೇ ಹಾಯುತ್ತಿರ್ತದ. ಯಾಕೋ ಅಣ್ಣ ಬರಲಿಲ್ಲ.... ಬರ್ತಾನಿಲ್ಲೊ... ಮನ್ಯಾಗ ಎಲ್ಲಾರೂ ಆರಾಮಿದ್ದಾರಿಲ್ಲೋ... ಅನ್ನು ಆತಂಕ. ಕೊನೆಗೂ ಅಣ್ಣನ ಉದ್ದಾನುದ್ದ ನೆರಳು ಅಂಗಳಕ್ಕ ಬಿದ್ದಾಗ ಎದ್ಯಾಗ ನವಿಲ ಕುಣಿತ. ತಿಲಕಿಟ್ಟು,ರಾಖಿ ಕಟ್ಟಿ, ಬೆಳಗಿದ ಆರತಿ ತಟ್ಟಿಗಿ ಆತ ಹಾಕಿದ ರೂಪಾಯಿ ಸಾವಿರ ವರಹಕ್ಕ ಸಮ. ಹಂಗ ಅಣ್ಣನ ಮಾರಿ ನೋಡ್ಕೋತ... ತವರು ಸುದ್ದಿ ಕೇಳಿಕೋತ.. ಗೊತ್ತಿಲ್ಲದಂಗ ಆವರಿಸಿದ ಮೈಮರೆತ.
ಬೇಂದ್ರೆಯಜ್ಜ ' ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ' ಅಂದಂಗೆ 'ಶ್ರಾವಣ ಬಂತು ತವರಿಗೆ, ಬಂತು ಮನಿ ಮಗಳಿಗೆ ' ಅಂದ್ರು ತಪ್ಪಿಲ್ಲ.
ಹೌದು, ಕಾಲ ಬದಲಾಗ್ಯದ ಖರೆ. ಪುರುಸೊತ್ತಿಲ್ಲದ ಜೀವನ, ಮನಿ ಮಗಳು ದೂರ ದೇಶದಾಗ. ಹಬ್ಬಕ್ಕ ಬರುಹಂಗಿಲ್ಲ . ಆದ್ರೂ ಭಾವ ಬದಲಾಗಿಲ್ಲ. ಎಲ್ಲಿದ್ದರೂ ಹೆಂಗಸರಿಗಿ ಮನದಾಗೇ ಶ್ರಾವಣ ಸಂಭ್ರಮದ ತೋರಣ ಕಟ್ಟತ್ತದ. ತವರಿನ ನೆನಪು ಎದಿಯಾಗ ಗಿಲಿಕಿಯಾಗಿರ್ತದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.