ADVERTISEMENT

ಇಂದು ಕೃಷ್ಣ ಜನ್ಮಾಷ್ಟಮಿ | ಕೃಷ್ಣನ ಕೊಳಲಿನ ಕರೆ...

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಆಗಸ್ಟ್ 2024, 0:46 IST
Last Updated 26 ಆಗಸ್ಟ್ 2024, 0:46 IST
   

ಶ್ರೀಕೃಷ್ಣ ಎಂದ ಕೂಡಲೇ ನಮಗೆ ನೆನಪಾಗುವ ಸಂಗತಿಗಳಲ್ಲಿ ಒಂದು: ಕೊಳಲು. ‘ಕೃಷ್ಣನ ಕೊಳಲಿನ ಕರೆ’ – ಇದು ನಿರಂತರವಾದುದು; ಅಂದೂ ಇಂದೂ ಮುಂದೂ ನುಡಿಯುತ್ತಿರುವ ಕರೆ. ಆದರೆ ನಮಗೆ ಇದು ಕೇಳುತ್ತಿಲ್ಲವಲ್ಲ?! ಇದು ದೊಡ್ಡ ಸಮಸ್ಯೆ. ಕೊಳಲಿನ ಕರೆ – ಎಂದರೆ ಅದು ಪ್ರಕೃತಿಯ ಕರೆ; ಸೃಷ್ಟಿಯ ಕರೆ. ಕೊಳಲು ಪ್ರಕೃತಿಗೆ ಸಂಕೇತ. ನಮಗೆ ಇಂದು ಪ್ರಕೃತಿಯ ಕರೆ ಕೇಳುತ್ತಿಲ್ಲ ಎನ್ನುವುದು ದಿಟ ತಾನೆ?

ಕೃಷ್ಣನಷ್ಟು ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿ ಜೀವಿಸಿದವರು ಮತ್ತೊಬ್ಬರಿಲ್ಲ; ಅದು ನಿಸರ್ಗದ, ಎಂದರೆ ಹೊರಗಿನ ಪ್ರಕೃತಿಯಾಗಿರಬಹುದು; ಅಂತರಂಗದ, ಎಂದರೆ ಮನುಷ್ಯನ ಒಳಗಿನ ಪ್ರಕೃತಿಯಾಗಿರಬಹುದು – ಈ ಎರಡನ್ನೂ ಅವನಷ್ಟು ಚೆನ್ನಾಗಿ ಬಲ್ಲವರು ಇನ್ನೊಬ್ಬರಿಲ್ಲ. ಕೃಷ್ಣನನ್ನು ನಮ್ಮ ಪರಂಪರೆ ‘ಪೂರ್ಣಾವತಾರಿ’ ಎಂದು ಎತ್ತಿಹಿಡಿದಿದೆ. ಇದಕ್ಕೆ ಕಾರಣವೇ ಅವನು ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡವನು, ಪ್ರಕೃತಿಯ ಎಲ್ಲ ಆಯಾಮಗಳಿಗೂ ಸ್ಪಂದಿಸಿದವನು ಎಂದು. ಅವನು ಕಾಳಿಂಗನನ್ನು ನಿಗ್ರಹಿಸಿದ್ದು, ಗಿರಿಯನ್ನು ಎತ್ತಿಹಿಡಿದದ್ದು – ಇವೆಲ್ಲವೂ ಪ್ರಕೃತಿಯನ್ನು ಕಾಪಾಡುವುದಕ್ಕಾಗಿಯೇ ಅಲ್ಲವೆ? ಹೀಗೆಯೇ ಅವನು ಗೆಳೆಯ, ಸಹೋದರ, ಮಗು, ಗುರು, ರಾಜ, ಸಾರಥಿ, ಪ್ರಿಯಕರ, ಸಂಗಾತಿ, ಯೋಧ, ರಾಜಕಾರಣಿ – ಹೀಗೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾದದ್ದು ಕೂಡ ಸೃಷ್ಟಿಯಲ್ಲಿ ಪ್ರಕಟವಾಗಿರುವ ಬೇರೆ ಬೇರೆ ಪ್ರಕೃತಿಗಳ, ಎಂದರೆ ಸ್ವಭಾವಗಳ ಉದ್ಧಾರಕ್ಕಾಗಿಯೇ ಅಲ್ಲವೆ?

ಕೃಷ್ಣನು ಹುಟ್ಟಿನಿಂದ ಕೊನೆಯ ತನಕವೂ ಕಷ್ಟಗಳನ್ನೇ ಕಂಡವನು. ಆದರೆ ಅವನು ಜಗತ್ತಿನ ಒಳಿತಿಗಾಗಿ ಸದಾ ಕ್ರಿಯಾಮಥನವನ್ನು ಮಾಡಿದವನು. ಸೆರೆಮನೆಯಲ್ಲಿ ಹುಟ್ಟಿದ; ಅರಮನೆಯನ್ನು ತ್ಯಜಿಸಿದ; ರಾಜನಾದವನು ಸೇವಕನಾದ; ಸ್ನೇಹಕ್ಕೆ ಮಣಿದ; ಪ್ರೀತಿಗೆ ಒಲಿದ; ವಿಷಾದಕ್ಕೆ ಉತ್ಸಾಹ ತುಂಬಿದ; ಅಜ್ಞಾನಕ್ಕೆ ಅರಿವನ್ನು ಉಣಿಸಿದ; ಅಹಂಕಾರವನ್ನು ಶಿಕ್ಷಿಸಿದ; ಕಷ್ಟಕ್ಕೆ ಮರುಗಿದ; ಆಪತ್ತಿನಲ್ಲಿ ಕೈ ಹಿಡಿದ; ಭಕ್ತಿಗೆ ಕುಣಿದಾಡಿದ; ವಾತ್ಸಲ್ಯಕ್ಕೆ ಕರಗಿದ; ಮೋಸಕ್ಕೆ ತಂತ್ರವನ್ನು ಹೆಣೆದ; ಕೊನೆಗೆ ಧರ್ಮಕ್ಕೆ ಫಲವಾದ.

ADVERTISEMENT

ಕೃಷ್ಣನ ಕೊಳಲಿನ ಕರೆ – ಎಂದರೆ ಅದು ಧರ್ಮದ ಕರೆ. ಎಲ್ಲ ರೀತಿಯ ಸಂಬಂಧಗಳ ನಡುವೆ, ಎಲ್ಲ ವಿಧದ ಭಾವಗಳ ನಡುವೆ, ಎಲ್ಲ ವಿಧದ ಕಷ್ಟಗಳ ನಡುವೆ ನಮ್ಮತನವನ್ನು ಉಳಿಸಿಕೊಳ್ಳುವುದು, ನಮ್ಮತನದ ನೆಮ್ಮದಿಯನ್ನು ಕಳೆದುಕೊಳ್ಳದಿರುವುದು ಶ್ರೀಕೃಷ್ಣತತ್ತ್ವದ ಸಂದೇಶ. ನಮ್ಮನ್ನು ನಾವು ನಮ್ಮಿಂದ ಜಾರಗೊಡದಂತೆ ನಿಲ್ಲಿಸಬಲ್ಲದ್ದೇ ಧರ್ಮ; ಅದೇ ಕೃಷ್ಣನ ಧರ್ಮದ ಕರೆ. ಕೃಷ್ಣನ ಕೊಳಲಿನ ಕರೆಗೆ ದನಗಳು ಪರವಶವಾಗಿ ಅವನತ್ತ ಓಡಿಬರುತ್ತಿದ್ದವಂತೆ, ಸಾಧಕನೊಬ್ಬನು ಅಂತರಂಗದ ಕರೆಗೆ ಓಗೊಟ್ಟು ಹೆಜ್ಜೆ ಹಾಕುವಂತೆ. ನಮ್ಮ ಪರಂಪರೆಯು ವೃಷಭವನ್ನು ಧರ್ಮಕ್ಕೆ ಸಂಕೇತವಾಗಿಯೂ ಕಂಡಿದೆಯಷ್ಟೆ. ಧರ್ಮದ ಗುರಿ ಕೃಷ್ಣನಲ್ಲಿದೆ – ಎಂಬ ಧ್ವನಿ ಅವನ ಕೊಳಲಿನ ಕರೆಯಲ್ಲಿದೆ. ಕೊಳಲು ಎಂಬ ವಾದ್ಯದ ನಿರ್ಮಾಣಕ್ಕೆ ಹೊರಗಿನ ಇನ್ನೊಂದು ವಸ್ತುವಿನ ಆವಶ್ಯಕತೆ ಇಲ್ಲ. ಧರ್ಮದ ನಡೆಯಲ್ಲೂ ಅಷ್ಟೆ; ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳುವುದೇ ದಿಟವಾದ ಸಿದ್ಧತೆಯೇ ಹೊರತು ಬಾಹ್ಯವಿವರಗಳಲ್ಲ.

ಶ್ರೀಕೃಷ್ಣತತ್ತ್ವದ ಅನುಸಂಧಾನ ಎಂದರೆ ಅದು ಪುರುಷಾರ್ಥಗಳ ಅನುಸಂಧಾನವೇ ಹೌದು. ಎಂದರೆ ಅವನಲ್ಲಿ ನಮ್ಮ ಜೀವನದ ಸತ್ಯ, ಶಿವ, ಸುಂದರಗಳ ರಾಗಸಂಚಾರದ ಗುಟ್ಟು ಅಡಗಿದೆ; ಅವನು ನಿತ್ಯವೂ ಕೊಳಲಿನಲ್ಲಿ ನುಡಿಸುತ್ತಿರುವ ಹಾಡು ಇದೇ ಹೌದು. ಅವನ ಕರೆಗೆ ನಾವು ಕಿವಿಗೊಡಬೇಕಷ್ಟೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.