ADVERTISEMENT

ಶ್ರೀರಾಮ: ಆದರ್ಶ ರಾಜ

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಮಾರ್ಚ್ 2023, 6:20 IST
Last Updated 30 ಮಾರ್ಚ್ 2023, 6:20 IST
   

ಕರ್ನಾಟಕದಲ್ಲಿ ಇದೀಗ ಚುನಾವಣೆ ಘೋಷಣೆಯಾಗಿದೆ. ಇದರ ಸಂಗಡವೇ ಶ್ರೀರಾಮನವಮಿಯ ಆಚರಣೆಯೂ ಬಂದಿದೆ. ಚುನಾವಣೆಗೂ ರಾಮಾಯಣಕ್ಕೂ ಏನು ಸಂಬಂಧ? ನೇರವಾದ ಸಂಬಂಧವೇ ಇದೆಯೆನ್ನಿ!

ಚುನಾವಣೆಯ ಉದ್ದೇಶ ಏನು? ನಮ್ಮ ನಾಯಕನನ್ನು ಆರಿಸಿಕೊಳ್ಳುವುದು; ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವುದು; ಸರಳವಾಗಿ ಹೇಳುವುದಾದರೆ, ನಮ್ಮ ‘ರಾಜ’ನನ್ನು ನಾವೇ ಗೆಲ್ಲಿಸಿಕೊಳ್ಳುವುದು. ಶ್ರೀರಾಮನೂ ಕೂಡ ‘ರಾಜ’ನೇ ಹೌದು. ರಾಮನ ಕಥೆಯಾದ ರಾಮಾಯಣದ ಉದ್ದಕ್ಕೂ ನಾವು ಕಾಣುವುದು ಒಬ್ಬ ಆದರ್ಶ ರಾಜ ಹೇಗಿರಬೇಕು – ಎಂದೇ ಹೌದು.

ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಅದ್ಭುತ ಪರಿಕಲ್ಪನೆ; ಪ್ರಜೆಗಳ ಆಯ್ಕೆಗೇ ಇಲ್ಲಿ ಮನ್ನಣೆ. ಆದರೆ, ರಾಮಾಯಣ ಕಾಲದ ಪ್ರಭುತ್ವ ಎಂದರೆ ಅದು ರಾಜಪ್ರಭುತ್ವ; ಅಲ್ಲಿ ಪ್ರಜೆಗಳ ಆಯ್ಕೆಗಿಂತಲೂ ವಂಶ, ಹಕ್ಕು – ಇಂಥವು ಮುಖ್ಯವಾಗುತ್ತವೆ. ಹೀಗಿದ್ದರೂ ರಾಮನ ಒಟ್ಟು ಆಡಳಿತವು ಜನಾಭಿಪ್ರಾಯದಿಂದಲೇ ರೂಪಿತವಾಗುತ್ತಿತ್ತು ಎನ್ನುವುದು ಗಮನಾರ್ಹ. ಒಬ್ಬ ಆದರ್ಶ ರಾಜ ಮತ್ತು ಆದರ್ಶ ಪ್ರಜೆ ಹೇಗಿರಬೇಕು ಎಂಬುದಕ್ಕೆ ಸುಂದರ ನಿದರ್ಶನವೇ ರಾಮನ ವ್ಯಕ್ತಿತ್ವ.

ADVERTISEMENT

ರಾಜನಾದವನು ಹೇಗಿರಬೇಕು – ಎಂಬುದನ್ನೇ ನಾವು ರಾಮನ ನಡೆ–ನುಡಿಗಳಲ್ಲಿ ಕಾಣುವುದು. ರಾಜನಾದವನು ತನ್ನ ವೈಯಕ್ತಿಕ ಬಾಂಧವ್ಯಗಳನ್ನೂ ಬಾಧ್ಯತೆಗಳನ್ನೂ ನಿರ್ವಹಿಸುವಾಗ ಒದಗುವ ಧಾರ್ಮಿಕ ತಿಕ್ಕಾಟವನ್ನು ರಾಮಾಯಣವು ಅಪೂರ್ವವಾಗಿ ಕಾಣಿಸಿದೆ. ಇಂದಿಗೂ ನಾವು ರಾಮನನ್ನು ವಿಮರ್ಶಿಸುವುದು ಅವನ ಜೀವನದಲ್ಲಿ ಒದಗಿದ ಇಂಥ ತಿಕ್ಕಾಟ ಸಂದರ್ಭಗಳಲ್ಲಿನ ಅವನ ನಿಲುವುಗಳನ್ನೇ ಹೌದಲ್ಲವೆ?

‘ಪಿತಾ ಹಿ ಸರ್ವಭೂತಾನಾಂ ರಾಜಾ ಭವತಿ ಧರ್ಮತಃ’. ಎಂದರೆ, ಧರ್ಮದ ದೃಷ್ಟಿಯಲ್ಲಿ ರಾಜನು ಪ್ರಜೆಗಳಿಗೆಲ್ಲ ತಂದೆಯಾಗುತ್ತಾನೆ. ಇದು ರಾಮಾಯಣದಲ್ಲಿ ಬರುವ ಒಂದು ಮಾತು. ರಾಜ ಮತ್ತು ಪ್ರಜೆಗಳ ಸಂಬಂಧ ತಂದೆ–ಮಕ್ಕಳ ನಂಟಿನಂತೆ ಇರಬೇಕು ಎಂಬುದು ಇದರ ತಾತ್ಪರ್ಯ. ಆದರೆ, ಇದು ಕರ್ತವ್ಯಬದ್ಧ ನಂಟೇ ಹೊರತು ಸ್ವಾರ್ಥಪ್ರೇರಿತ ಅಂಟಲ್ಲ. ‘ರಾಜನ ನಡತೆ ಹೇಗಿರುತ್ತದೆಯೋ ಹಾಗೆಯೇ ಪ್ರಜೆಗಳೂ ನಡೆದುಕೊಳ್ಳುತ್ತಾರೆ’ ಎಂಬ ಸೂತ್ರದ ಎಚ್ಚರಿಕೆಯನ್ನು ಪಾಲಿಸಿದವನು ಶ್ರೀರಾಮ. ವಾಲ್ಮೀಕಿಗಳು ಅವನನ್ನು ಧರ್ಮದ ಮೂರ್ತರೂಪ ಎಂದು ಕಂಡರಿಸಿದ್ದಾರೆ. ಅವನು ಎಂದಿಗೂ ಧರ್ಮವನ್ನು ಮೀರಿ ನಡೆದವನಲ್ಲ; ರಾಜನಾಗಿಯೂ ಪ್ರಜೆಯಾಗಿಯೂ ಮಗನಾಗಿಯೂ ಸ್ನೇಹಿತನಾಗಿಯೂ ಸ್ವಾಮಿಯಾಗಿಯೂ ಪತಿಯಾಗಿಯೂ ಅವನು ಧರ್ಮಮಾರ್ಗದಲ್ಲೇ ನಡೆದವನು ಎಂದು ವಾಲ್ಮೀಕಿಗಳು ಕಾಣಿಸಿದ್ದಾರೆ. ರಾಮನು ರಾಜನಾಗಲಿ ಎಂದು ಇಡೀ ರಾಜ್ಯವೇ ಬಯಸುತ್ತಿದ್ದಿತಂತೆ. ಏಕೆಂದರೆ ಅವನು ಧರ್ಮಾತ್ಮ; ಎಲ್ಲರಿಗೂ ಪ್ರಿಯನಾದವನು; ಎಲ್ಲರ ಒಳಿತನ್ನೂ ಕಾಪಾಡುವವನು ಎಂದು. ಇದಕ್ಕೆ ಉದಾಹರಣೆಯಾಗಿ ವಾಲ್ಮೀಕಿಗಳು ಹೇಳುವ ಮಾತೊಂದು ತುಂಬ ಮಾರ್ಮಿಕವಾಗಿದೆ: ‘ರಾಮನಿಗೆ ಒಳಿತಾಗಲಿ ಎಂದು ರಾಜ್ಯದಲ್ಲಿಯ ತರುಣಿಯರು, ಮುದುಕಿಯರು ಸೇರಿದಂತೆ ಎಲ್ಲ ಸ್ತ್ರೀಯರೂ ಪ್ರಾತಃಕಾಲ ಮತ್ತು ಸಾಯಂಕಾಲ ಭಕ್ತಿಯಿಂದ ದೇವತೆಗಳನ್ನು ಪ್ರಾರ್ಥಿಸಿಕೊಳ್ಳುತ್ತಿದ್ದರಂತೆ’. ಇನ್ನೂ ಒಂದು ಮಾತನ್ನು ವಾಲ್ಮೀಕಿಗಳು ಹೇಳುತ್ತಾರೆ: ಶ್ರೀರಾಮನನ್ನು ಪ್ರಜೆಗಳು ತಮ್ಮ ಉಸಿರು ಎಂಬುದಾಗಿಯೇ ಪ್ರೀತಿಸುತ್ತಿದ್ದರಂತೆ. ಎಂದರೆ, ರಾಮನು ರಾಜನಾಗಬೇಕೆಂದು ದಶರಥನು ನಿರ್ಧರಿಸಿದ್ದರೂ ಅದು ಪ್ರಜೆಗಳಿಗೆ ಇಷ್ಟವಾದ ಆಯ್ಕೆಯೇ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿಯೇ ರಾಮನು ಪ್ರಜೆಗಳ ಸುಖಕ್ಕೆ ಹೆಚ್ಚಿನ ಗಮನವನ್ನೂ ಅವರ ಮಾತುಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನೂ ಕೊಟ್ಟದ್ದು.

ರಾಮಾಯಣದ ಉದ್ದಕ್ಕೂ ಶ್ರೀರಾಮನನ್ನು ವಾಲ್ಮೀಕಿಗಳು ಹಲವು ವಿಶೇಷಣಗಳಿಂದ ಕೊಂಡಾಡುತ್ತಾರೆ; ಅವುಗಳಲ್ಲಿ ಒಂದು: ‘ಸತ್ಯಪರಾಕ್ರಮಃ’. ರಾಮ ಅಪ್ರತಿಮ ವೀರ; ಈ ಮಹಾವೀರನ ಆಯುಧವಾದರೂ ಏನು? ಸತ್ಯವೇ ಅವನ ಆಯುಧ!

ಇದು ಚುನಾವಣೆಯ ಸಮಯ. ರಾಜಕಾರಣಿಗಳೂ ಮತದಾರರೂ ಶ್ರೀರಾಮನು ಎತ್ತಿಹಿಡಿದ ಆ ಸತ್ಯವನ್ನು ತಾವೂ ಕಂಡುಕೊಳ್ಳುತ್ತಾರೆ ಎಂದು ನಾವು ಆಶಿಸಬಹುದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.