ಸೃಷ್ಟಿಖಂಡದ ಅಂತಿಮವಾದ ಕೈಲಾಸೋಪಾಖ್ಯಾನದಲ್ಲಿ ‘ಶಿವಕೈಲಾಸ ಆಗಮನ’ ಎಂಬ ಅಧ್ಯಾಯದಲ್ಲಿ, ಕೈಲಾಸಕ್ಕೆ ಶಿವ ಬಂದ ಕಥೆಯನ್ನು ನಾರದನಿಗೆ ಬ್ರಹ್ಮ ಹೇಳುತ್ತಾನೆ.
ಕುಬೇರನಿಗೆ ನಿಧಿಪತಿಯಾಗೆಂದು ವರವನ್ನು ಕೊಟ್ಟು, ಶ್ರೇಷ್ಠವಾದ ತನ್ನ ಸ್ವಸ್ಥಾನಕ್ಕೆ ತೆರಳಿದಮೇಲೆ ಜಗದೀಶ್ವರನಾದ ಶಿವನ ಮನಸ್ಸಿನಲ್ಲಿ ಒಂದು ಆಲೋಚನೆ ಮೂಡುತ್ತದೆ. ‘ಬ್ರಹ್ಮನ ಶರೀರದಿಂದ ಆವಿರ್ಭವಿಸಿದ, ಪ್ರಳಯ ಕಾರ್ಯಕಾರಿಯಾದ ಹರನು ನನ್ನ ಪೂರ್ಣಾಂಶವಾಗಿದ್ದಾನೆ. ಆ ಹರನ ರೂಪದಿಂದಲೇ ಗುಹ್ಯಕರ ನಿವಾಸವಾದ ಕೈಲಾಸಕ್ಕೆ ಹೋಗುವೆ. ನನ್ನ ಹೃದಯದಿಂದ ಹುಟ್ಟಿದ ರುದ್ರನು ಸಂಪೂರ್ಣವಾದ, ಏಕೈಕ ವಸ್ತುವಾದ, ಪರಬ್ರಹ್ಮವೂ ಆದ ನಾನೇ ಅಲ್ಲವೇ? ವಿಷ್ಣು ಬ್ರಹ್ಮ ಮೊದಲಾದವರಿಂದ ಸೇವಿತನೂ ನಿರ್ಲೇಪನೂ ಆದ ಆತನು ನಾನೇ ಅಲ್ಲದೆ ಬೇರೆಯಲ್ಲ. ಆ ಹರನ ರೂಪದಿಂದಲೇ ಕುಬೇರನಿಗೆ ಮಿತ್ರನಾಗಿ ಈ ಕೈಲಾಸ ಪರ್ವತದಲ್ಲಿಯೇ ನೆಲಸುವೆ. ಅಲ್ಲದೆ ಮಹತ್ತಾದ ತಪಸ್ಸನ್ನೂ ಆಚರಿಸುವೆ’ ಎಂದು ಮನಸ್ಸಿನಲ್ಲಿ ತೀರ್ಮಾನಿಸಿದ.
ಶಿವನ ಇಚ್ಛೆಯನ್ನರಿತ ರುದ್ರನು ಕೈಲಾಸಕ್ಕೆ ಹೊರಡಬೇಕೆಂದು ಉತ್ಸುಕತೆಯಿಂದ ನಾದಸ್ವರೂಪಿಣಿಯಾದ ಒಳ್ಳೆಯ ಗತಿಯುಳ್ಳ ತನ್ನ ಢಕ್ಕೆಯನ್ನು ಬಾರಿಸಿದ. ಉತ್ಸಾಹವನ್ನು ಹುಟ್ಟಿಸುತ್ತಿದ್ದ ಮತ್ತು ಎಲ್ಲರನ್ನೂ ‘ಬನ್ನಿ ಬನ್ನಿ’ ಎಂದು ಕರೆವಂತೆ ಇದ್ದ, ವಿಚಿತ್ರವಾಗಿದ್ದ, ಸ್ವಚ್ಛವಾಗಿರುವ ಶಬ್ದಪರಂಪರೆ ಇರುವ ಆ ಡಮರುಗ ಧ್ವನಿಯು ಮೂರು ಲೋಕಗಳನ್ನೂ ವ್ಯಾಪಿಸಿಬಿಟ್ಟಿತು. ಆ ಧ್ವನಿಯನ್ನು ಕೇಳಿದೊಡನೆಯೇ ವಿಷ್ಣು, ಬ್ರಹ್ಮ ಮೊದಲಾದ ದೇವತೆಗಳು, ಋಷಿಗಳು, ಸ್ವರೂಪವನ್ನು ಧರಿಸಿಬಂದ ಆಗಮಗಳು, ವೇದಗಳು, ಸಿದ್ಧರಾಗಿ ಹರನಿದ್ದಲ್ಲಿಗೆ ಬಂದರು.
ಎಲ್ಲಾ ದೇವತೆಗಳು, ರಾಕ್ಷಸರು, ಮೂಲೆಮೂಲೆಯಲ್ಲೂ ಇದ್ದ ಪ್ರಮಥರು, ಬಹು ಸಡಗರದಿಂದ ಕೈಲಾಸದತ್ತ ಹೊರಟರು. ಜೊತೆಗೆ, ಎಲ್ಲರಿಗೂ ನಮಸ್ಕಾರಾರ್ಹವಾದ ಶಿವಗಣಗಳೂ ಹೊರಟರು. ಅವರ ಲೆಕ್ಕವನ್ನು ಹೇಳುವೆನು, ಗಮನಿಸಿ ಕೇಳು ಎಂದ ಬ್ರಹ್ಮ ಅದರ ಅಂಕಿ–ಸಂಖ್ಯೆಯನ್ನು ನಾರದನಿಗೆ ಹೇಳತೊಡಗಿದ.
ಶಂಕುಕರ್ಣನೆಂಬ ಗಣಾಧೀಶ್ವರನು ಒಂದು ಕೋಟಿ ಗಣಗಳೊಡನೆ, ಕೇಕರಾಕ್ಷಸನೆಂಬುವನು ಹತ್ತು ಕೋಟಿ ಗಣಗಳೊಡನೆ, ವಿಕೃತನೆಂಬುವನು ಎಂಟು ಕೋಟಿ ಗಣಗಳೊಡನೆ ಬಂದರು. ವಿಶಾಖ ಅರವತ್ತನಾಲ್ಕು ಕೋಟಿ, ಪಾರಿಯಾತ್ರಿಕನು ಒಂಬತ್ತು ಕೋಟಿ, ಸರ್ವಾಂತಗನು ಆರು ಕೋಟಿ, ದುಂದುಮನು ಎಂಟು ಕೋಟಿ ಗಣಗಳೊಡನೆ ಬಂದರು. ಗಣಶ್ರೇಷ್ಠನಾದ ಜಾಲಂಕನು ಹನ್ನೆರಡು ಕೋಟಿ ಗಣಗಳೊಂದಿಗೆ, ಸಮದನು ಏಳು ಕೋಟಿ ಗಣಗಳೊಡನೆ, ವಿಕೃತಾನನ ಏಳು ಕೋಟಿ ಗಣಗಳೊಡನೆ ಬಂದರು. ಐದು ಕೋಟಿ ಗಣಗಳೊಡನೆ ಕಪಾಲಿ, ಆರು ಕೋಟಿ ಗಣಗಳೊಡನೆ ಸಂದಾರಕರ, ಕೋಟಿಸಂಖ್ಯಾತವಾದ ಕೋಟಿ ಗಣಗಳೊಡನೆ ಕಂಡುಕ, ಅವನಂತೆಯೇ ಕೋಟಿ ಕೋಟಿ ಗಣಗಳೊಡನೆ ಕುಂಡಕನೂ ಬಂದರು. ವಿಷ್ಟಂಭನೆಂಬುವನು ಎಂಟು ಕೋಟಿ ಗಣಗಳೊಡನೆ, ಚಂದ್ರತಾಪನ ಎಂಟು ಕೋಟಿ ಗಣಗಳೊಡನೆ, ಮಹಾಕೇಶನೆಂಬ ಗಣಾಧಿಪತಿಯು ಸಾವಿರಕೋಟಿ ಗಣಗಳೊಡನೆ ಬಂದರೆ, ಕುಂಡೀ ಮತ್ತು ಪರ್ವತಕನೆಂಬುವರು ಒಬ್ಬೊಬ್ಬರೂ ಹನ್ನೆರಡು ಕೋಟಿ ಗಣಗಳೊಡನೆ ಬಂದರು. ಹಾಗೆಯೇ, ಕಾಲ-ಕಾಲಕ-ಮಹಾಕಾಲ ಎಂಬ ಮೂವರೂ ಪ್ರತ್ಯೇಕವಾಗಿ ನೂರು ಕೋಟಿ ಗಣಗಳೊಡನೆ ಆಗಮಿಸಿದರು.
ನೂರು ಕೋಟಿ ಗಣಗಳೊಡನೆ ಅಗ್ನಿಕನೂ, ಕೋಟಿ ಗಣಗಳೊಡನೆ ಅಭಿಮುಖನೂ, ಆದಿತ್ಯಮೂರ್ಧ ಮತ್ತು ಧನಾವಹ ಎಂಬುವವರು ತಲಾ ಒಂದೊಂದು ಕೋಟಿಗಣಗಳೊಡನೆ ಬಂದರು. ಸನ್ನಾಹ ಮತ್ತು ಕುಮುದನೆಂಬುವರು ತಲಾ ನೂರುಕೋಟಿ ಗಣಗಳೊಂದಿಗೂ, ಅವರಂತೆಯೇ ಅಮೋಘನೂ ಕೋಕಿಲನೂ ಪ್ರತ್ಯೇಕವಾಗಿ ನೂರು ಕೋಟಿ ಗಣಗಳೊಡನೆ, ಸುಮಂತ್ರಕನು ಕೋಟಿ ಕೋಟಿ ಗಣಗಳೊಡನೆ ಆಗಮಿಸಿದರು.
ಕಾಕಪಾದ ಮತ್ತು ಸಂತಾನಕ ತಲಾ ಅರವತ್ತು ಕೋಟಿ ಗಣಗಳೊಡನೆ, ಮಹಾಬಲ-ಮಧುಪಿಂಗ-ಪಿಂಗಲ ಪ್ರತ್ಯೇಕವಾಗಿ ಒಂಬತ್ತುಕೋಟಿ ಗಣಗಳೊಡನೆ ಬಂದರು. ಪ್ರತ್ಯೇಕವಾಗಿ ತೊಂಬತ್ತುಕೋಟಿ ಗಣಗಳೊಡನೆ ನೀಲ ಮತ್ತು ಪೂರ್ಣಭದ್ರ ಬಂದರೆ, ಏಳು ಕೋಟಿ ಗಣಗಳೊಡನೆ ಮಹಾಬಲಿಷ್ಠನಾದ ಚತುರ್ವಕ್ತ್ರ ಹಾಗೂ ಸರ್ವೇಶ್ವರ ಕೋಟಿಯಷ್ಟು ಸಂಖ್ಯೆಯುಳ್ಳ ಗಣಗಳೊಡನೆ ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.