ಮನುಷ್ಯ ಎಷ್ಟೇ ಆಧುನಿಕವಾಗಿ ಮುಂದುವರೆದಿದ್ದರೂ ಅವನೊಳಗಿನ ಕೆಟ್ಟ ಅಂಶಗಳು ನಾಶವಾಗುತ್ತಿಲ್ಲ. ಸಾಂಕ್ರಾಮಿಕ ಕ್ರಿಮಿಕಗಳ ಮಾದರಿಯಲ್ಲಿ ಕಾಲದಿಂದ ಕಾಲಕ್ಕೆ ಮನುಷ್ಯನ ಕೆಟ್ಟ ಗುಣಗಳು ನಾನಾ ರೂಪಗಳನ್ನು ತಾಳುತ್ತಲೇ ಇವೆ. ಇದಕ್ಕೆ ಕಾರಣ ಮಾನವರಿಗೆ ಅರಿವಿದ್ದೋ ಇಲ್ಲದೆಯೋ ರೂಢಿಸಿಕೊಂಡ ಕೆಟ್ಟ ಪದ್ಧತಿಗಳು ಅವನೊಳಗೆ ಕೆಟ್ಟ ಗುಣಗಳನ್ನು ಪ್ರಚೋದಿಸುತ್ತಿವೆ. ಕೆಟ್ಟ ವಿಚಾರಗಳು ಯಾವ ಕಾಲಕ್ಕೂ ಒಳ್ಳೆಯ ವಿಚಾರವಾಗುವುದಿಲ್ಲ. ನಾವು ಸದ್ವಿಚಾರ ಅಂತ ನಂಬಿಕೊಂಡು ಬಂದ ಪದ್ಧತಿಗಳು ಕೆಟ್ಟದ್ದು ಅಂತ ಗೋಚರವಾದಾಗಲೂ ಮುಂದುವರೆಸುವುದು ಅಪಾಯಕಾರಿ. ಕೆಟ್ಟದ್ದು ಯಾವತ್ತೂ ಒಳ್ಳೆಯ ಸಂಸ್ಕೃತಿ ಆಗುವುದಿಲ್ಲ; ನಾವು ಮಾಡಿಕೊಂಡ ಕಟ್ಟುಪಾಡುಗಳಿಂದ ಮೂಡಿದ ಮೌಢ್ಯಗಳು ಪರಂಪರೆ ಆಗುವುದಿಲ್ಲ.
ಮನುಷ್ಯ ತನ್ನ ಅಗತ್ಯಕ್ಕೆ ತಕ್ಕಂತೆ ಗುಣಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾನೆ. ಅದು ಅವನ ಅನುಕೂಲಸಿಂಧು ಸಿದ್ಧಾಂತ. ಒಬ್ಬ ಊಳಿಗಮಾನದ ಪಾಳೇಗಾರ ತನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಡಿಕೊಂಡ ನಿಯಮಗಳನ್ನು ವಂಶಪಾರಂಪರ್ಯವಾಗಿ ಮುಂದುವರೆಸುವುದು ಎಷ್ಟು ತಪ್ಪೋ, ಸಾಮುದಾಯಿಕವಾಗಿ ಮಾಡಿಕೊಂಡ ಕೆಟ್ಟ ವಿಚಾರಗಳು ಸಮಾಜದಲ್ಲಿ ಪರಂಪರೆಯಾಗಿ ಮುಂದುವರೆಯುವುದು ಅಷ್ಟೇ ತಪ್ಪು. ಉದಾಹರಣೆಗೆ ನಮ್ಮ ಸಮಾಜದಲ್ಲಿರುವ ಜಾತಿಪದ್ಧತಿ. ಮೇಲು-ಕೀಳು ಎಂಬ ಭಾವದಲ್ಲಿ ಮನುಷ್ಯರನ್ನು ಅಳೆಯುವುದು ರಾಕ್ಷಸೀತನ. ಇಂಥ ಮನುಷ್ಯ-ಮನುಷ್ಯರ ನಡುವೆ ಕಂದಕ ನಿರ್ಮಿಸುವ ಮೌಢ್ಯ ನಮಗೆಂದೂ ಪರಂಪರೆಯಾಗುವುದಿಲ್ಲ. ಪರಂಪರೆಗೆ ತನ್ನದೇ ಆದ ಒಳ್ಳೆಯತನದ ತಳಹದಿ ಇದೆ. ಆದರೊಳಗೆ ಮಾನವತೆಯ ಅಂತಃಕರಣವಿದೆ. ಮಾನವರು ತಮಗೆ ಅರಿವಿಲ್ಲದ ಕಾಲದಲ್ಲಿ ಮಾಡಿಕೊಂಡ ಪದ್ಧತಿಗಳು ಪರಂಪರೆಯಾಗುವುದಿಲ್ಲ.
ಹಿಂದೆ ಕೋಟೆ ಕಟ್ಟಡ, ಕೆರೆಕಟ್ಟೆ ಕಟ್ಟಿದರೆ ನರಬಲಿ-ಪ್ರಾಣಿಬಲಿ ಕೊಡುತ್ತಿದ್ದರು. ಈ ಮೌಢ್ಯಕ್ಕೆ ಬಲಿಯಾದ ಮುಗ್ಧಜೀವಗಳೆಷ್ಟೋ? ಕೆರೆಗೆ ಹಾರವಾದ ಭಾಗೀರಥಿಯರೆಷ್ಟೋ? ಆದರೆ ಇಂಥ ಅಮಾನವೀಯ ಕುಕೃತ್ಯಗಳು ನಮ್ಮ ಪರಂಪರೆಯಾಗಿ ಉಳಿಯಲಿಲ್ಲ. ಏಕೆಂದರೆ, ಹಿಂಸೆ ಯಾವತ್ತೂ ಮಾನವರ ಪರಂಪರೆಯಾಗುವುದಿಲ್ಲ. ‘ಧರ್ಮಗಳಲ್ಲೆ ಅಹಿಂಸಾಧರ್ಮ ದೊಡ್ಡದು’ ಎಂದು ನಂಬಿಕೊಂಡ ಪರಂಪರೆ ನಮ್ಮದು. ಹೀಗಾಗಿ ಕೆಟ್ಟ ಸಂಪ್ರದಾಯಗಳು ಹುಟ್ಟಿದ ಕಾಲದಲ್ಲೆ ನಶಿಸುತ್ತಾ ಹೋದವು. ‘ಬಲಿಕೊಡದಿದ್ದರೆ, ಕೋಟೆ ಬಿದ್ದು ಹೋಗುತ್ತದೆ, ಕೆರೆ ಕಟ್ಟೆ ಒಡೆದು ಹೋಗುತ್ತದೆ’ ಅನ್ನೋ ಕೆಟ್ಟ ನಂಬಿಕೆಗಳು ಅಳಿದವು. ಈಗ ಅದೆಂಥ ದೊಡ್ಡ ಕಟ್ಟಡ, ದೊಡ್ಡ ಅಣೆಕಟ್ಟೆ ಕಟ್ಟಿದರೂ ಯಾವ ಬಲಿಯನ್ನು ಅಪೇಕ್ಷಿಸದೆ, ಅವೆಲ್ಲಾ ಗಟ್ಟಿಯಾಗಿ ನಿಂತಿವೆ. ಇವೆಲ್ಲಾ ಯಾರ ಪ್ರಾಣಬಲಿಯ ಮೇಲೆ ನಂಬಿಕೆಯಿಟ್ಟು ಕಟ್ಟಿದವುಗಳಲ್ಲ. ಗಟ್ಟಿಯಾಗಿ ಉಳಿಯುತ್ತವೆ ಎಂಬ ಒಳ್ಳೆಯ ನಂಬಿಕೆಯಿಂದ ಕಟ್ಟಿದ ಕಟ್ಟಡಗಳು. ನಮ್ಮ ನಂಬಿಕೆ ಮತ್ತು ಪರಂಪರೆ ಮಾನವತೆಯ ಗಟ್ಟಿ ನೆಲೆಯಲ್ಲಿ ರೂಪುಗೊಳ್ಳಬೇಕೇ ಹೊರತು, ಅಮಾನವೀಯ ಪೊಳ್ಳು ನೆಲೆಯಲ್ಲಿ ಅಲ್ಲ.
ಮನುಷ್ಯನ ಗುಣ-ಸ್ವಭಾವಗಳು ರಕ್ತದ ವಂಶವಾಹಿನಿಯಿಂದಲೇ ಮೂಡುತ್ತವೆ. ಹಾಗೇ, ನಮ್ಮ ಸಮಾಜದ ಕಟ್ಟುಪಾಡುಗಳು ಸಹ ತಲೆಮಾರಿನಿಂದ ತಲೆಮಾರಿಗೆ ಮಾನವರ ತಲೆಯೊಳಗೆ ಕೂರುತ್ತಾ ಹೋಗುತ್ತವೆ. ನಮ್ಮ ತಲೆ ಮೇಲೆ ಕೂತ ಸಾಮಾಜಿಕ ಪದ್ಧತಿಗಳು ಎಷ್ಟು ಉತ್ತಮವಾಗಿವೆ, ನಮ್ಮ ಸಮಕಾಲೀನ ಬದುಕಿಗೆ ಯಾವ ರೀತಿ ಪೂರಕವಾಗಿದೆ ಅಂತ ವಿವೇಚಿಸಬೇಕು. ಆ ರೀತಿ ಯೋಚಿಸದೆಯೇ ಮುಂದುವರೆದರೆ ನಮ್ಮ ತಲೆಗೆ ಮೂಢತನ ಆವರಿಸುತ್ತದೆ. ವಿಚಾರ-ವಿಮರ್ಶೆಗಳಿಗೆ ಅವಕಾಶ ಕೊಡದ ಆಚಾರಗಳು ವಿಕಾರರೂಪವನ್ನು ತಾಳುತ್ತವೆ. ಇವು ತಲೆಮಾರಿನಿಂದ ತಲೆಮಾರಿಗೆ ಮೌಢ್ಯ ಹರಡುತ್ತಾ ಸಮಾಜವನ್ನು ಹಾಳುಗೆಡವುತ್ತದೆ. ಹಿಂಸೆಗೆ ಪ್ರಚೋದಿಸುವ, ಅಮಾನವತೆಗೆ ಪ್ರೇರಣೆಯಾಗುವ, ಮನುಷ್ಯರನ್ನು ಮೂರ್ಖರನ್ನಾಗಿಸುವ ಮೌಢ್ಯಗಳು ನಮ್ಮ ಪರಂಪರೆಯಾಗಬಾರದು. ಮೌಢ್ಯಗಳು ಎಂದಿಗೂ ಪರಂಪರೆ ಆಗುವುದೂ ಇಲ್ಲ. ಸದ್ವಿಚಾರ-ಸದಾಚಾರಗಳಷ್ಟೆ ‘ಸಚ್ಚಿದಾನಂದ’ದ ಪರಂಪರೆಯಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.