ADVERTISEMENT

ಸಂಸ್ಕೃತಿ ಸಂಭ್ರಮ | ತಿರುಕ್ಕುರಳ್ ಜೀವನದೃಷ್ಟಿ

ಈಶ್ವರ ಭಟ್ಟ‌ ಕೆ.
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
   

ಬರೀ ಏಳು ಪದಗಳಿಂದ ಮಹತ್ತಾದ ವಿಚಾರವನ್ನು ಹೇಳುವುದು ತಿರುಕ್ಕುರಳ್ ಕೊಡುವಂತಹ ಭಾಗ್ಯ. ಇಲ್ಲಿ ಪದಗಳ ದುಂದು ಇಲ್ಲ. ಎಷ್ಟೋ ಮೌಲ್ಯಗಳನ್ನು ಬರೀ ನಾಲ್ಕೈದು ಮಾತುಗಳಿಂದ, ಒಂದೆರಡು ರೂಪಕಗಳಿಂದ / ಉಪಮೆಗಳಿಂದ ಕೊಡುತ್ತಾರೆ ವಳ್ಳುವರ್.

ವೆಳ್ಳತ್ತ್ ಅಣೈಯ ಮಲರ್ನೀಟ್ಟಮ್ ಮಾಂದರ್ಕಮ್ಉ
ಳ್ಳತ್ತ್ ತನೈಯಾದು ಉಯರ್ವು!

ಒಂದು ತಾವರೆ ಹೂವನ್ನು ನೋಡಿದರೆ ಆ ಹೂವಿನ ಬಣ್ಣ, ಗಂಧಗಳು, ವಿನ್ಯಾಸ ಎಲ್ಲ ಅರಿಯುತ್ತೇವೆ. ಆದರೆ ಆ ತಾವರೆಯ ನಾಳವು ನೀರಿನಲ್ಲಿ ಎಷ್ಟು ಆಳವಿದೆಯೆಂದು ಸುಲಭದಲ್ಲಿ ಗಮನಿಸಲಾಗುವುದಿಲ್ಲ. ನೀರಿನ ಆಳವನ್ನು ಹೊಂದಿಕೊಂಡು ತಾವರೆಯ ನಾಳವು ಬೆಳೆಯುತ್ತದೆ. ಇದೊಂದು ಬಹಳ ಅರ್ಥಗರ್ಭಿತವಾದ ಸುಲಭವಾದ ಕುರಳ್. ವ್ಯಕ್ತಿಯ ಎತ್ತರವನ್ನು ಆತನ ಒಳಗಿನ ಗುಣಗಳಿಂದ ಕಾಣಬೇಕು ಎನ್ನುವುದು ತಾತ್ಪರ್ಯ.

ADVERTISEMENT

ಹೀಗೆಯೇ ಇನ್ನೊಂದು ಕುರಳ್ ‘ದೊಡ್ಡವರು ಎನಿಸಿಕೊಂಡವರೂ ಕೂಡ, ತಲೆಯಿಂದ ಕೂದಲು ಉದುರಿದಂತೆ ಬಿದ್ದು ಹೋಗುತ್ತಾರೆ’ ಎಂದು ಬದುಕಿನ ಬಗ್ಗೆ / ಜೀವದ ಬಗ್ಗೆ ಹೇಳುತ್ತದೆ. ಕಾಮದ ಬಗೆಗೆ ಹೇಳುವಾಗ ಹೂವು ಅರಳುವ ಉಪಮೆಯನ್ನು ಕೊಡುತ್ತಾರೆ. ಒಂದು ಒಳ್ಳೆಯ ಕಾಲದಲ್ಲಿ, ಹೊರಗಿನವರಿಗೆ ಗೊತ್ತಾಗದಂತೆ ಅರಳುವ ಹೂವಿನಂತೆ ಕೋಮಲವಾಗಿ, ಹಾರ್ದವಾಗಿ ಇರಬೇಕು ಎನ್ನುವುದು ತಾತ್ಪರ್ಯ.

ಅಕಳವರೈತ್ ತಾಂಗುಂ ನಿಲಂ ಪೋಲೆ ತಮ್ಮೈ
ಇಕಳವರ್ ಪೊರುತ್ತಾಲ್ ತಲೈ

ಭೂಮಿಯನ್ನು ಆಳವಾಗಿ ಕೊರೆದರೂ, ಕೊರೆದವರನ್ನು ಭೂಮಿ ನುಂಗುವುದಿಲ್ಲ. ಅದು ಅವರನ್ನು ಪೋಷಿಸುತ್ತದೆ. ಹಾಗೆಯೇ ನಮ್ಮ ಮೇಲೆ ಯಾರಾದರೂ ಕೆಡುಕನ್ನು ಉಂಟು ಮಾಡಿದಲ್ಲಿ ಅದನ್ನು ಸಹಿಸಿಕೊಳ್ಳುವುದು ದೊಡ್ಡದು. ಭೂಮಿಯ ಹೋಲಿಕೆಯಿಂದ ಸಹನೆಯನ್ನು ಹೇಳುವ ಈ ಕುರಳ್ ಕೂಡ ಸಾಮಾಜಿಕ ಧರ್ಮವನ್ನು ಹೇಳುತ್ತದೆ.

ಸೇಂದಿಯನ್ನು ಕುಡಿದರೆ ಮಾತ್ರ ಅಮಲಾಗುತ್ತದೆ, ಪ್ರೇಯಸಿಯನ್ನು ನೋಡಿದರೂ ಸಾಕು ಅಮಲಾಗುತ್ತದೆ ಎನ್ನುವ ಬಲು ಸಹಜವಾದ ಉಕ್ತಿಗಳೂ ಕುರಳ್ಗಳಲ್ಲಿ ಇದೆ. ಕೆಲವೊಂದು ಸಲ ಅತಿ ಚರ್ಚೆಗೆ ಒಳಗಾಗಿ ಸುಲಭವಾದ, ಸಹಜವಾದ ಸಣ್ಣ ಸಾಲು ದೊಡ್ಡದಾಗುವುದುಂಟು. ಈ ಸಾಲುಗಳಲ್ಲಿ ಯಾವ ಮರದ ಸೇಂದಿ ಎಂದು ವಿಮರ್ಶೆ ಮಾಡಿದವರೂ ಇದ್ದಾರೆ.

ವಳ್ಳುವರ್ ಹೇಳುವ ಇನ್ನೊಂದು ಕುರಳ್ ವಿಶೇಷವಾಗಿದೆ. ಯಾವುದು ಅತ್ಯಂತ ದೊಡ್ಡ ಸಂಪತ್ತು ಯಾವುದು ಎಂದು ಕೇಳಿದರೆ ‘ಕಿವಿ’ ಎನ್ನುತ್ತಾರೆ ವಳ್ಳುವರ್. ಆ ಬಗೆಗಾದ ಕುರಳ್ ಇದು:

ಸೆಲ್ವತ್ ಸೆಲ್ವಂ ಚೆವಿಸೆಲ್ವಂ ಅಚೆಲ್ವಂ
ಸೆಲ್ವತ್ತಿಲೆಲ್ಲಾಂ ತಲೈ

ಸಂಪತ್ತುಗಳಲ್ಲಿ ಸಂಪತ್ತು ಕಿವಿಯಿಂದ ಕೇಳಲ್ಪಟ್ಟದ್ದು. ಅದು ಎಲ್ಲ ಸಂಪತ್ತುಗಳಿಂದಲೂ ಹಿರಿದು.

ಒಟ್ಟಿನಲ್ಲಿ ಕುರಳ್ ಮುಖ್ಯವಾಗಿ ಧರ್ಮ, ಅರ್ಥ ಮತ್ತು ಕಾಮಗಳನ್ನು ಕೆಲವೊಂದು ಅನುಭವ, ಪ್ರಾಕೃತಿಕವಾದ ಉಪಮೆ ರೂಪಕಗಳು, ಜ್ಞಾನದ ವಿಷಯಗಳಿಂದ ಹೇಳಿದೆ. ಕೆಲವೊಂದು ನಾವು ಪದೇ ಪದೇ ಕೇಳಿರುವಂತಹ ವಿಷಯಗಳ ಪುನರಾವರ್ತನೆ ಅಂತಲೂ ಅನ್ನಿಸಬಹುದು. ಬರೀ ಎರಡಿಂಚು ಉದ್ದದ ಪೆನ್ ಡ್ರೈವ್ ಮೂಲಕವಾಗಿ ನೂರಾರು ಘಂಟೆಗಳ ಹಾಡುಗಳು ತುಂಬುವಂತೆ ಏಳು ಪದಗಳಿರುವ ಒಂದೂವರೆ ಸಾಲುಗಳಲ್ಲಿ ಅತ್ಯಂತ ಸೋಪಜ್ಞವಾದ ವಿಚಾರಗಳನ್ನು ಕುರಳ್ ಹೇಳುತ್ತದೆ. ಒಟ್ಟೂ ‘133 ಅಧಿಕಾರಗಳು’ ಎಂದು ಕರೆಯಲ್ಪಡುವ ಪಠ್ಯಗಳಲ್ಲಿ ತಲಾ ಹತ್ತರಂತೆ ಕುರಳ್ಗಳಿವೆ. ಮೂಲದಲ್ಲಿಯೇ ಇಷ್ಟು ವಿಭಾಗಿಸಿ, ಪ್ರತಿಯೊಂದಕ್ಕೂ ಇಷ್ಟೇ ಎನ್ನುವಂತೆ ಹೇಳಿದ ಕುರಳ್ ನಿಜಕ್ಕೂ ಅಚ್ಚರಿ. ಅದಕ್ಕೇ ಇದು ತಮಿಳರ ಅಥವಾ ತಮಿಳು ಓದುವವರನ್ನು ಮೊದಲು ಆಕರ್ಷಿಸುವ ಗ್ರಂಥ.

ನೇರವಾಗಿ ತಿರುಕ್ಕುರಳ್ ಓದಿ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದಕ್ಕೆ ವ್ಯಾಖ್ಯಾನಗಳನ್ನು ಓದದಿದ್ದರೆ ಅದರ ಎಷ್ಟೋ ಶಬ್ಧಗಳು ಅರ್ಥವಾಗುವುದಿಲ್ಲ. ತಮಿಳಿನಲ್ಲಿ ಕುರಳ್ ಬಗೆಗೆ ಲಕ್ಷಾಂತರ ವ್ಯಾಖ್ಯಾನಗಳಿರಬಹುದು. ಕರುಣಾನಿಧಿ, ಸಾಲೋಮನ್ ಪಾಪಯ್ಯ ಮೊದಲಾದವರ ವ್ಯಾಖ್ಯಾನಗಳು ಅಂತರ್ಜಾಲ ಗಳಲ್ಲಿಯೂ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.