ಮನುಷ್ಯ ವಿದ್ಯಾವಂತನಾದಷ್ಟು ಆತನ ಬುದ್ಧಿ ವಿಶಾಲವಾಗುತ್ತೆ ಅನ್ನೋದು ಸುಳ್ಳು. ವಿದ್ಯೆಯಿಂದ ಮನುಷ್ಯ ಗುಣವಂತನಾಗುತ್ತಾನೆ ಅನ್ನೋದು ಸಹ ಸತ್ಯವಲ್ಲ. ವಿವೇಕ ಮತ್ತು ವಿವೇಚನಾಶಕ್ತಿಯಿಂದ ಮಾತ್ರ ಮನುಷ್ಯನ ಬುದ್ಧಿ ವಿಶಾಲ ತಳಹದಿಯಲ್ಲಿ ಅರಳುತ್ತೆ. ವಿದ್ಯೆಗೆ ನೈತಿಕ ಪ್ರಜ್ಞೆ ಇಲ್ಲದಿದ್ದರೆ ಎಂಥ ಅನಾಹುತಗಳಾಗುತ್ತೆ ಅನ್ನುವುದಕ್ಕೆ ಇತ್ತೀಚಿನ ವಿದ್ಯಾವಂತರಲ್ಲಿ ಕಂಡು ಬರುತ್ತಿರುವ ದುರ್ನಡತೆಗಳೆ ಸಾಕ್ಷಿ. ವಿದ್ಯೆಗೆ ವಿವೇಕದ ಅಂಕುಶ ಇಲ್ಲದ ಕಾರಣ ಮನುಷ್ಯನ ಮೂಲಪ್ರವೃತ್ತಿಗಳಾದ ಅಸೂಯೆ, ದ್ವೇಷಗಳು ನಿವಾರಣೆಯಾಗುತ್ತಿಲ್ಲ. ಮನುಷ್ಯನ ಆರು ಶತ್ರುಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ ಮತ್ತು ಮಾತ್ಸರ್ಯಗಳು ವಿದ್ಯಾವಂತರಲ್ಲಿ ನಿವಾರಣೆಯಾಗಿಲ್ಲ ಎಂದರೆ, ನಮ್ಮ ಶಿಕ್ಷಣವ್ಯವಸ್ಥೆಯಲ್ಲೇ ಲೋಪವಿದೆ ಎಂದು ಅರ್ಥ.
ನಮಗೆ ವೈಜ್ಞಾನಿಕ ಶಿಕ್ಷಣದಷ್ಟೆ ನೈತಿಕ ಶಿಕ್ಷಣವೂ ಅಗತ್ಯ. ನೈತಿಕತೆ ಇಲ್ಲದೆ ಯಾವ ದೇಶವೂ ಉದ್ಧಾರವಾದ ನಿದರ್ಶನವಿಲ್ಲ. ನೈತಿಕತೆಯ ತಳಹದಿಯ ಮೇಲೆಯೇ ಎಲ್ಲಾ ನಾಗರಿಕತೆ ಬೆಳೆದಿದೆ. ನೈತಿಕತೆ ಕಳೆದುಕೊಂಡಾಗ ಎಲ್ಲಾ ಸಾಮ್ರಾಜ್ಯಗಳೂ ಉರುಳಿವೆ. ಹೀಗಿರುವಾಗ ನಮ್ಮ ಮಕ್ಕಳು ಭವಿಷ್ಯದ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ನೈತಿಕ ಶಿಕ್ಷಣ ಕಲಿಸದಿದ್ದರೆ, ನಮ್ಮ ಸಮಾಜ ಸುಧಾರಣಾಹಾದಿಯಿಂದ ಹಿಮ್ಮುಖವಾಗುತ್ತದೆ. ನಮ್ಮ ಮಕ್ಕಳಿಗೆ ವಿಜ್ಞಾನ-ತಂತ್ರಜ್ಞಾನದಷ್ಟೆ ಮುಖ್ಯ ನೈತಿಕವಾಗಿ ಬದುಕುವ ತಂತ್ರಗಾರಿಕೆ. ನಮ್ಮ ಬದುಕಿಗೆ ಅತ್ಯಗತ್ಯವಾದ ನ್ಯಾಯ-ನೀತಿ-ಧರ್ಮದಲ್ಲಿ ಬದುಕುವುದನ್ನು ಕಲಿಸದಿದ್ದರೆ ಒಟ್ಟಾರೆ ಶಿಕ್ಷಣವ್ಯವಸ್ಥೆಯ ಮೂಲ ಉದ್ದೇಶವೇ ನಿರರ್ಥಕವಾಗುತ್ತದೆ.
ನನ್ನ ದೃಷ್ಟಿಯಲ್ಲಿ ಸ್ವಾತಂತ್ರ್ಯಾನಂತರದ ಮೊದಲ 25 ವರ್ಷಗಳು ಭಾರತೀಯ ಸಂಸ್ಕೃತಿಯ ಬೇರು ಎನಿಸಿದ ನೈತಿಕತೆಯ ಹಂದರದಲ್ಲಿ ನಮ್ಮ ಶಿಕ್ಷಣವ್ಯವಸ್ಥೆ ಸದೃಢವಾಗಿ ಬೆಳೆಯಿತು. ಆ 25 ವರ್ಷಗಳ ಪೀಳಿಗೆಯವರು ಕಷ್ಟಪಟ್ಟು ದೇಶ ಕಟ್ಟಿದ್ದರಿಂದ ನಿರ್ಗತಿಕವಾಗಿದ್ದ ಭಾರತ ಸರ್ವಶಕ್ತವಾಗಿ ಬೆಳೆಯಿತು. ಹಸಿವಿನಿಂದ ಅಸುನೀಗುವಂಥ ದುಃಸ್ಥಿತಿಯಿಂದ ಪಾರಾಗಿ, ಆಹಾರ ಸ್ವಾವಲಂಬಿಗಳಾದೆವು. ಮತ್ತೊಂದು ಹಸಿದ ರಾಷ್ಟ್ರಕ್ಕೆ ಆಹಾರ ಒದಗಿಸುವಷ್ಟು ಸಮೃದ್ಧರಾದೆವು. ದೇಶದ ಶ್ರಮಜೀವಿಗಳ ರೆಟ್ಟೆಗೆ ಕಸುಬು ಒದಗಿಸುವ ಉದ್ಯೋಗಗಳು ಸೃಷ್ಟಿಯಾದವು. ವೈದ್ಯಕೀಯದಲ್ಲಿ ಕ್ರಾಂತಿಯಾಗಿ ಕುಷ್ಟ, ಸಿಡುಬು, ಕ್ಷಯ, ಮಲೇರಿಯಾದಂಥ ಭಯಾನಕ ರೋಗಗಳನ್ನು ತೊಡೆದು, ಮರಣಪ್ರಮಾಣ ಕಡಿಮೆಯಾಯಿತು. ವಿದ್ಯಾವಂತರ ಸಂಖ್ಯೆ ಹತ್ತುಪಟ್ಟು ಹೆಚ್ಚಾಯಿತು. ಇನ್ನೇನೂ ಭಾರತ ಅಭಿವೃದ್ದಿಶೀಲ ರಾಷ್ಟ್ರದ ಪಟ್ಟಿಯಿಂದ, ಅಭಿವೃದ್ದಿ ಹೊಂದಿದ ದೇಶಗಳ ಯಾದಿಯಲ್ಲಿ ನಿಲ್ಲುತ್ತದೆ ಎಂದು ಕೊಳ್ಳುವಷ್ಟರಲ್ಲಿ 90ರ ದಶಕದಲ್ಲಿ ಶಿಕ್ಷಣಕ್ಷೇತ್ರದಲ್ಲಿ ಕಾಣಿಸಿಕೊಂಡ ವ್ಯಾಪಾರೀಕರಣ ನಮ್ಮೆಲ್ಲಾ ಆಶಯಗಳನ್ನು ತಲೆಕೆಳಗು ಮಾಡಿತು.
ಶಿಕ್ಷಣವೇ ಒಂದು ದೇಶದ ಪ್ರಗತಿಯ ಸಂಕೇತ ಅಂತ ನಂಬಿ ಸರ್ವರಿಗೂ ಶಿಕ್ಷಣ ಒದಗಿಸುವ ನ್ಯಾಯಬದ್ಧ ಪದ್ಧತಿಯಿಂದ ಭಾರತದಲ್ಲಿ ಶಿಕ್ಷಣಕ್ರಾಂತಿಯಾಯಿತು. ಆದರೆ ಖಾಸಗಿ ಶಾಲೆಯಲ್ಲಿ ಹುಟ್ಟಿಕೊಂಡ ಇಂಗ್ಲಿಷ್ ಮಾಧ್ಯಮ ಬೃಹತ್ ವಾಣಿಜ್ಯ ರೂಪ ತಾಳಿದಾಗ ನಮ್ಮ ಶಿಕ್ಷಣ ವಿಭ್ರಾಂತಿಯಾಯಿತು. ಅಲ್ಲಿ ಹಣವೇ ಮುಖ್ಯವಾಗಿ ಗುಣ–ಮೌಲ್ಯಗಳು ಕುಸಿಯುತ್ತಾ ಹೋದವು. ಹಣದ ದಾಹ ಹೆಚ್ಚಾದಂತೆ ಶಿಕ್ಷಣ ವ್ಯಾಪಾರದ ಸರಕಾಯಿತು; ನ್ಯಾಯ-ನೀತಿ-ಧರ್ಮಕ್ಕೆ ಅವಕಾಶವೇ ಇಲ್ಲದಂತಾಯಿತು. ಅದರ ದುಷ್ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ನಮ್ಮಲ್ಲಿ ಹಣದ ಮಟ್ಟ ಹೆಚ್ಚಾಯಿತೇ ಹೊರತು, ಗುಣಮಟ್ಟ ಇಳಿಕೆಯಾಯಿತು. ಕಾಂಚಾಣದ ಹಿಂದೆ ಕುರುಡರಂತೆ ಜನ ಓಡಿದ ಪರಿಣಾಮವಾಗಿ ಭಾರತ ಭ್ರಷ್ಟರ ಕೂಪವಾಯಿತು. ಈಗಲಾದರೂ ಆದ ತಪ್ಪನ್ನು ತಿದ್ದಿಕೊಂಡು, ನೈತಿಕ ಬೇರಿನಿಂದ ಅರಳಿದ ನಮ್ಮ ಸಂಸ್ಕೃತಿಯ ತಳಹದಿಯ ಮೇಲೆ ಶಿಕ್ಷಣವ್ಯವಸ್ಥೆ ಬೆಳೆದರೆ ನಮ್ಮ ದೇಶ ಮತ್ತೆ ಉಚ್ಛ್ರಾಯ ಸ್ಥಿತಿಗೆ ಮರಳುತ್ತದೆ, ಸಮಾಜದಲ್ಲಿ ‘ಸಚ್ಚಿದಾನಂದ’ದ ಬದುಕು ಅರಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.