ಸನಾತನ ದರ್ಶನ ಪರಂಪರೆಗಳಲ್ಲಿ ಪ್ರಾಚೀನವಾದದ್ದು ಸಾಂಖ್ಯದರ್ಶನ. ಈ ದರ್ಶನದ ಪ್ರಕಾರ ಪ್ರಪಂಚದ ಸೃಷ್ಟಿಯಾಗುವುದು ಎರಡು ತತ್ತ್ವಗಳ ಮಿಲನದಿಂದಾಗಿ. ಒಂದು ಪ್ರಕೃತಿ; ಇನ್ನೊಂದು ಪುರುಷ. ಇವುಗಳಲ್ಲಿ ಪ್ರಕೃತಿಯು ಸೃಷ್ಟಿಗೆ ಬೇಕಾದ ಸಕಲ ಸಾಮಗ್ರಿಗಳನ್ನೂ ಒಳಗೊಂಡಿರುತ್ತದೆ. ಆದರೆ ಅದು ಜಡ; ತಾನಾಗಿಯೇ ಪರಿವರ್ತನೆಯನ್ನು ಹೊಂದಿ ಏನನ್ನೂ ಸೃಷ್ಟಿಸಲಾರದು; ಅದಕ್ಕೆ ಪುರುಷನ ಸಹಾಯ ಬೇಕು. ಪುರುಷತತ್ತ್ವವಾದರೋ ಚೈತನ್ಯಯುಕ್ತವಾದದ್ದು. ಆದರೆ ಅದರೊಳಗೆ ಸೃಷ್ಟಿಸಾಮಗ್ರಿಗಳಿಲ್ಲ. ಇಬ್ಬರಲ್ಲಿಯೂ ಒಂದೊಂದುನ್ಯೂನತೆಗಳುಂಟಲ್ಲ! ಏನು ಮಾಡಬೇಕು – ಎಂದು ಕೇಳಿದರೆ, ‘ಕುಂಟನನ್ನು ಕುರುಡ ಹೊತ್ತಂತೆ’, ಪ್ರಕೃತಿಯು ಪುರುಷನೊಂದಿಗೆ ಸೇರಬೇಕು. ಆಗಲೇ ಸೃಷ್ಟಿಯಾಗುವುದು.
ಇದೇ ಬೃಹತ್ತಾದ, ಮಹತ್ತಾದ ತತ್ತ್ವವನ್ನು ಪುರಾಣಗಳು ಶಿವ ಮತ್ತು ಪಾರ್ವತಿಯರ ಸಂಯೋಗದ ಮುಖಾಂತರ ಚಿತ್ರಿಸಿಕೊಡುತ್ತವೆ. ಶಿವನು ಪುರುಷ; ಪಾರ್ವತಿಯು ಪ್ರಕೃತಿ, ಶಕ್ತಿ. ಜಗತ್ತಿನ ಸೃಷ್ಟಿಗೆ ಕಾರಣಳಾದ ಅಂಥ ಪಾರ್ವತಿಯನ್ನು ಪರಂಪರೆ ‘ಆದಿಶಕ್ತಿ’ ಎನ್ನುವುದಾಗಿ ಕರೆದು ಗೌರವಿಸಿದೆ. ಪಾರ್ವತಿಗೆ ಅಥವಾ ಶಕ್ತಿಗೆ ಇರುವ ಮಹತ್ತ್ವ ಎಷ್ಟೆಂದರೆ ‘ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ ’ (ಶಿವನು ಶಕ್ತಿಯೊಂದಿಗೆ ಸೇರಿದರೆ ಮಾತ್ರ ಜಗತ್ಕಾರಣನಾಗಲು ಶಕ್ತನಾಗುತ್ತಾನೆ; ಇಲ್ಲವಾದರೆ ಮಿಸುಕಾಡಲೂ ಆರ) ಎನ್ನುವಷ್ಟು! ಇನ್ನು ಶಾಕ್ತಪರಂಪರೆಗಂತೂ ಆಕೆಯೇ ಪರದೈವ. ಹೀಗಿರುವುದರಿಂದ ಆಕೆಯನ್ನು ಆ ಪರಂಪರೆಯು ಉಗ್ರ, ಯೋಗ ಮತ್ತು ಭೋಗಾದಿ ರೂಪಗಳಲ್ಲಿ ಆರಾಧಿಸುತ್ತದೆ. ಆದರೆ ದೇವಿ ಮಾತ್ರ ಯಾವ ಪರಂಪರೆಗೂ, ಕಲ್ಟಿಗೂ ತನ್ನನ್ನು ತಾನು ಸೀಮಿತವಾಗಿರಿಸಿಕೊಳ್ಳದೆ ವರ್ಷಕ್ಕೊಮ್ಮೆ ಎಲ್ಲರ ಮನೆಗೂ ಬರುತ್ತಿರುತ್ತಾಳೆ. ಅಂಥ ಒಂದು ದಿನವೇ ‘ಗೌರೀತದಿಗೆ’ ಎನ್ನುವುದಾಗಿ ಆಚರಿಸಲ್ಪಡುವ ಭಾದ್ರಪದ ಶುದ್ಧ ತೃತೀಯಾ.
ಒಂದು ತುಂಡು ಎಲೆಯನ್ನೂ ತಿನ್ನದೆ, ವರ್ಷಾನುಗಟ್ಟಲೆ ಶಿವನಿಗಾಗಿ ತಪಿಸಿ ‘ಅಪರ್ಣಾ’ ಎಂದೇ ಹೆಸರಾದ ಆದರ್ಶ ಕನ್ಯೆಯೂ, ವಿವಾಹವಾದ ನಂತರವೂ ಗಂಡನ ಏಕಾಂತ ತಪಕ್ಕೆ ಕೊಂಚವೂ ಭಂಗ ಬಾರದಂತೆ ಜಗತ್ತಿನ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿರುವ ಮಹಾಸಾಧ್ವಿಯೂ ಆದ ಪಾರ್ವತಿಯ ಈ ಹಬ್ಬ ವಿವಾಹವಾಗಿರುವ ಸ್ತ್ರೀಯರಿಗೂ, ವಿವಾಹಾಕಾಂಕ್ಷಿಗಳಾದ ಕನ್ಯೆಯರಿಗೂ ಬಹಳ ಮೆಚ್ಚಿನ ಹಬ್ಬ. ಉತ್ತರ ಭಾರತದ ಉತ್ತರ ಪ್ರದೇಶ, ಜಾರ್ಖಂಡ್ ಇತ್ಯಾದಿ ಕಡೆಗಳಲ್ಲೆಲ್ಲ ಈ ದಿನ ಗೌರಿಯ ಮೂರ್ತಿಯನ್ನು ಸ್ಥಾಪಿಸಿ, ಪೂಜಿಸಿ ಇನ್ನೂ ವಿವಾಹವಾಗದಿರುವ ಕನ್ಯೆಯರಿಗೆ ‘ಯೋಗ್ಯನಾದ ಗಂಡ ಸಿಗಲಿ’ ಎನ್ನುವುದಾಗಿಯೂ, ಈಗಾಗಲೇ ವಿವಾಹವಾಗಿರುವವರಿಗೆ ಅವರ ‘ಸೌಮಾಂಗಲ್ಯ ಭದ್ರವಾಗಿರಲಿ’ ಎಂದೂ ಈ ಹೊತ್ತಿನಲ್ಲಿ ಬಾಗಿನ ನೀಡಿ ಹಾರೈಸುವ ಸಂಪ್ರದಾಯವಿದೆ.
ಕೃಷಿಪ್ರಧಾನ ಕುಟುಂಬಗಳಿರುವ ಹವ್ಯಕರಲ್ಲಿ ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಪ್ರದಾಯವಿಲ್ಲ; ಆ ಹೊತ್ತು ತಾವು ಬೆಳೆದ ತರಕಾರಿಗಳ ಮತ್ತು ಹಣ್ಣುಗಳ (ಬಳ್ಳಿಗಳ) ‘ಫಲವಾಳಿಗೆ’ಯನ್ನು ಕಟ್ಟುವ, ಅದನ್ನೇ ಗೌರಿಯೆಂದು ಆರಾಧಿಸುವ ಪದ್ಧತಿಯಿದೆ. ಸಂಪ್ರದಾಯಗಳ, ಆಚರಣೆಗಳಲ್ಲಿನ ಮತ್ತು ಅವುಗಳ ಹಿಂದಿರುವ ಕಲ್ಪನೆ ಗಳಲ್ಲಿ ಎಷ್ಟು ಸರಳವಾದ ಸೌಂದರ್ಯವಿರುತ್ತದೆ ಎನ್ನುವುದಕ್ಕೂ ಗೌರೀತದಿಗೆ ಒಂದು ನಿದರ್ಶನವೇ ಸರಿ. ಏಕೆಂದರೆ ಆಕೆ ವರ್ಷಕ್ಕೊಮ್ಮೆ ತನ್ನ ತವರಿಗೆ ಬಂದಂತೆ ತದಿಗೆಯಂದು ನಮ್ಮೆಲ್ಲರ ಮನೆಗೆ ಬರುತ್ತಾಳಷ್ಟೇ? ಅಂಥ ಪಾರ್ವತಿಯನ್ನು ಮರುದಿನ ಚತುರ್ಥಿಯಂದು, ಮಗನಾದ ಗಣಪತಿಯು ಬಂದು ಮರಳಿ ಕರೆದೊಯ್ಯುತ್ತಾನೆ ಎನ್ನುವುದು ಸಂಪ್ರದಾಯ ರೂಪಿಸಿಕೊಂಡಿರುವ ಒಂದು ಚಂದದ ಕಥೆ! ⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.