ಈ ವರ್ಷ, ಯುಗಾದಿ ಮತ್ತು ಈದ್ ಉಲ್ ಫಿತ್ರ್ ಒಟ್ಟೊಟ್ಟಿಗೆ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳದ್ದೇ ಸಾಮ್ರಾಜ್ಯ ಸ್ಥಾಪಿಸಿದಂತಿದೆ.
ದೂರದೂರಿನ ಖರ್ಜೂರದಿಂದ ಆರಂಭಿಸಿ, ನಮ್ಮ ಲಾಲ್‌ಬಾಗಿನ ಸಿಂಧೂರ ಮಾವಿನವರೆಗೂ, ಒಬ್ಬಟ್ಟಿನಿಂದ ಶೀರ್ ಕೂರ್ಮಾದವರೆಗೂ ವೈವಿಧ್ಯಮಯ ಆಹಾರ ಈ ಹಬ್ಬಗಳ ವಿಶೇಷವಾಗಿದೆ.
ತ್ಯಾಗ, ಪ್ರೇಮ ಮತ್ತು ಸಹಬಾಳ್ವೆಯನ್ನು ಹೇಳಿಕೊಡುವ ಪವಿತ್ರ ಮಾಸ ರಂಜಾನ್ ಬಂದರೆನೆ ಮಾರುಕಟ್ಟೆಗೆ ಹೊಸತೊಂದು ಕಳೆ ಬಂದಿರುತ್ತದೆ. ಸೀರೆಗೆ ಬಳಸುವ ಪಿನ್‌ನಿಂದ ಆರಂಭಿಸಿ ಬಟ್ಟೆಯವರೆಗೂ ಟ್ರೆಂಡ್ ಬದಲಾಗುವ ಮಾಸ ಇದು.
ಮದರಂಗಿಯಲ್ಲಿಯೂ ಈ ಸಲ ಸಾವಯವ ಮೆಹೆಂದಿಗೆ ಹೆಚ್ಚು ಬೇಡಿಕೆ ಕಂಡು ಬಂದಿದೆಯಂತೆ. ಮಾರುಕಟ್ಟೆಯಲ್ಲಿ ಉಣ್ಣುವ, ಉಡುವ ಸಂಭ್ರಮದೊಳಗಿರುವ ಜನರ ಖರೀದಿಯ ಭರಾಟೆ ನೋಡುವುದೇ ಸೊಗಸು.
ಯುಗಾದಿಗೆ ಹೊಸ ಪಂಚಾಂಗದೊಂದಿಗೆ ಹೊಸ ಬಟ್ಟೆಗಳನ್ನು ತೊಡುವುದು ಸಂಪ್ರದಾಯ. ಬೇಸಿಗೆಯಲ್ಲಿ ಹೊಸ ಬಟ್ಟೆ ಎಂದರೆ ಅಪ್ಪಟ ಕಾಟನ್ ಮತ್ತು ಖಾದಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಆರಾಮದಾಯಕ ಫ್ಯಾಷನ್‌ಗೆ ಹೆಚ್ಚಿನ ಆದ್ಯತೆ ಇರುತ್ತದೆ. ಈ ಬೇಸಿಗೆಯ ಋತುಮಾನದಲ್ಲಿ ಕಾಟನ್ ಮತ್ತು ಕಾಟನ್ ಸಿಲ್ಕ್ ಸೀರೆಗಳ ಮಾರುಕಟ್ಟೆ ವಿಸ್ತೃತವಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಭರ್ಜರಿ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ, ಆರಾಮದಾಯಕವಾಗಿರಲಿ ಎಂಬುದು, ಈ ಬೇಡಿಕೆಯನ್ನು ಹಿಂದಿಕ್ಕುತ್ತದೆ. ಕೊಯಮತ್ತೂರು, ಕಂಚಿ ಕಾಟನ್ ಸೀರೆಗಳ ಜೊತೆಗೆ ಗದ್ವಾಲ್, ಮಂಗಳಗಿರಿ, ವೆಂಟಕಗಿರಿ, ಮಾಹೇಶ್ವರಿ ಕಾಟನ್ ಸೀರೆಗಳೂ ಪೈಪೋಟಿಗೆ ಇಳಿಯುತ್ತವೆ. ಜರಿಯ ಬದಲು ನೋಲಿನ ಅಂಚು ಮತ್ತು ಸೆರಗು ಇರುವ ಈ ಸೀರೆಗಳು ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾಗಿರುತ್ತವೆ.
ಈದ್ ಸಂಭ್ರಮಕ್ಕೆ ಮೆರುಗು ನೀಡುವಂಥ ಆಕರ್ಷಕ ಸೀರೆ ಮತ್ತು ಸಲ್ವಾರ್, ಶರಾರಾ ಹಾಗೂ ಘಾಗ್ರಾ ಚೋಲಿಗಳೊಂದಿಗೆ ಗೌನುಗಳೂ ಪೈಪೋಟಿ ನೀಡುತ್ತವೆ. ಹರಳಿನ ಅಲಂಕಾರ ಇರುವ ಹಿಜಾಬ್, ಮುತ್ತಿನಲಂಕಾರದ ಬುರ್ಖಾಗಳೂ ಗಮನಸೆಳೆಯುತ್ತಿವೆ. ಹೆಂಗಳೆಯರ ವಸ್ತ್ರವೈಭವದಲ್ಲಿ ರೇಷ್ಮೆ ಮತ್ತು ಕಾಟನ್ ಅಗ್ರಸ್ಥಾನದಲ್ಲಿದ್ದರೆ, ಪುರುಷರ ಫ್ಯಾಷನ್‌ನಲ್ಲಿ ಲೆನಿನ್ ಹಾಗೂ ಲಖನವಿ ಕುರ್ತಾಗಳು, ಪೇಶಾವರಿ ಪೈಜಾಮಾಗಳು ಹೆಚ್ಚು ಮಾನ್ಯತೆ ಪಡೆದಿವೆ. ಹೊಸ ನಿರೀಕ್ಷೆಯನ್ನು ಹೊತ್ತು ತರುವ ಹೊಸವರ್ಷದ ಹಬ್ಬ ಯುಗಾದಿಯಲ್ಲಿ ಮಾವಿನ ಚಿಗುರೆಲೆ, ಬೇವಿನ ಹೂವಿನೆಸಳು ಮೂಡಿವೆ.
ವಸಂತ ಎಲ್ಲ ಮರಗಳಲ್ಲೂ ಹೂವರಳಿಸಿಕೊಂಡು ಶುಭಾಶಯ ಕೋರುತ್ತಿದ್ದಾನೆ. ಪ್ರಕೃತಿಯೊಂದಿಗೆ ಒಂದಾಗಿ ಬದುಕುವ ಹಬ್ಬದೊಂದಿಗೆ ಈದ್ ಸಹಬಾಳ್ವೆಯ ಸಂದೇಶ ನೀಡುತ್ತಿದೆ. ಬದುಕು ಸುಗಮವಾಗಲಿ ಎಂಬಂತೆ ಹೂಹಾಸಿನ ದಾರಿಯಲ್ಲಿ ಸೌಹಾರ್ದವು ಹೆಜ್ಜೆಹಾಕಿದರೆ ಎರಡೂ ಹಬ್ಬಗಳ ಆಶಯ ಈಡೇರುತ್ತದೆ. ಕೈಗೇರುವ ಉಂಗುರ, ಮತ್ತಿತರ ಆಭರಣಗಳು ಉಡುವ ವಸ್ತ್ರ, ಉಣ್ಣುವ ಖಾದ್ಯಗಳು ಜೀವನವನ್ನು ಸಿರಿವಂತಿಕೆಗೆ ಕರೆದೊಯ್ಯುತ್ತವೆ. ಆದರೆ ಬದುಕು ಬಂಗಾರ ಆಗುವುದು, ಪರಸ್ಪರ ಪ್ರೀತಿ ಹಂಚಿಕೊಂಡಾಗ. ಹಳತನ್ನು, ಕೆಡುಕನ್ನು ಮರಗಿಡಗಳೆಲ್ಲ ಎಲೆ ಉದುರಿಸಿಕೊಂಡಂತೆ, ಕಳೆದುಕೊಂಡು, ಹೊಸತನ್ನು ಚಿಗುರಿಸುವ ಈ ಕಾಲದೊಂದಿಗೆ ನಾವೂ ಸಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.