ADVERTISEMENT

ಸೌಹಾರ್ದ ಯುಗಾದಿ: ಪ್ಲವ ಸಂವತ್ಸರದ ಯುಗಾದಿ

ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟ
Published 12 ಏಪ್ರಿಲ್ 2021, 20:19 IST
Last Updated 12 ಏಪ್ರಿಲ್ 2021, 20:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನುಷ್ಯರ ನಡುವೆ ಅಪನಂಬಿಕೆ ಹೆಚ್ಚುತ್ತಿರುವ ವಿಷಮ ಕಾಲಘಟ್ಟದಲ್ಲಿ ಮನಸ್ಸಿಗೆ ಮುದ ನೀಡುವ ಯುಗಾದಿ ಬಂದಿದೆ. ಹೊಸ ವರ್ಷದ ಹರ್ಷದ ಜತೆಗೆ ಈ ಯುಗಾದಿಯು ಮನಸ್ಸುಗಳನ್ನು ಬೆಸೆಯುವ ಸಂದರ್ಭವೂ ಹೌದು. ರಾಜ್ಯದ ಕೆಲವೆಡೆಗಳಲ್ಲಿರುವ ಮಾದರಿ ಎನ್ನಬಹುದಾದ ಸಾಮರಸ್ಯದ ನಿದರ್ಶನಗಳನ್ನು ಹೆಕ್ಕಿ ತಂದು ನಿಮ್ಮ ಮುಂದಿರಿಸಿದ್ದೇವೆ

ಶಾರ್ವರಿ ಸಂವತ್ಸರ ಕಳೆದು ಪ್ಲವ ಸಂವತ್ಸರ ಆರಂಭವಾಗಲಿದೆ. ಕಳೆದ ಶಾರ್ವರಿಯು ಕತ್ತಲೆಯನ್ನು ತೋರಿಸಿದೆ ಎಂದರೆ ತಪ್ಪಾಗಲಾರದು. ಕೊರೊನಾದ ಕರಿನೆರಳು ಇನ್ನೇನು ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮರಳಿ ಬಂದಿದೆ. ಆದರೆ ಪ್ಲವ ಸಂವತ್ಸರ ಅದನ್ನು ಪರದೆಯ ಹಿಂದೆ ಸರಿಸಲಿ ಹಾಗೂ ಜಗತ್ತನ್ನು ಜಾಗೃತಿಯ ಕಡಲಲ್ಲಿ ಮುನ್ನಡೆಸಲಿ.

ಮಂಗಳವಾರ ಮತ್ತು ಬುಧವಾರ (2021ರ ಏಪ್ರಿಲ್‌ 13 ಮತ್ತು 14) ಕ್ರಮವಾಗಿ ಚಾಂದ್ರ ಮತ್ತು ಸೌರ ಯುಗಾದಿ. ಚಾಂದ್ರ ಸಂವತ್ಸರವು ಎಲ್ಲರಿಗೂ ಮಂಗಳದ ಮುಂಬೆಳಗಾಗಲಿ ಹಾಗೂ ಸೌರ ಸಂವತ್ಸರವು ಸೌಖ್ಯಕ್ಕಾಗಿ ಎಲ್ಲರ ಬುದ್ಧಿಯನ್ನು ಪ್ರಚೋದಿಸಲಿ. ಅಂದು ದೇವರನ್ನು ಸ್ಮರಿಸುತ್ತಾ ಬೆಳಗಿನಲ್ಲಿಯೇ ಎದ್ದು ಎಣ್ಣೆ ಹಚ್ಚಿ ಸ್ನಾನ ಮಾಡಿ ಹೊಸ ಬಟ್ಟೆಯನ್ನುಟ್ಟು ಹೊಸ ವರ್ಷದ ಪಂಚಾಂಗವನ್ನು ದೇವರ ಸಮ್ಮುಖದಲ್ಲಿಟ್ಟು ಪೂಜಿಸಿ ಬೇವು-ಬೆಲ್ಲ ಸೇವಿಸೋಣ.

ADVERTISEMENT

ಕಹಿಯಾದ ಬೇವು ದುಃಖವನ್ನು ಸೂಚಿಸಿದರೆ ಸಿಹಿಯಾದ ಬೆಲ್ಲ ಸುಖವನ್ನು ಸೂಚಿಸುತ್ತದೆ. ಬಾಳು ಸಿಹಿ–ಕಹಿಗಳ ಮಿಶ್ರಣವೆಂದೂ ಅದನ್ನು ಹಾಗೆಯೇ ಸ್ವೀಕರಿಸುವುದು ಎಲ್ಲರಿಗೂ ಅನಿವಾರ್ಯವೆಂದೂ ಬೇವು–ಬೆಲ್ಲವನ್ನು ಸಾಂಕೇತಿಕವಾಗಿ ಪ್ರಸಾದವೆಂದು ಸ್ವೀಕರಿಸುವಾಗ ಹೇಳುವ ಶ್ಲೋಕದ ಅರ್ಥ ಹೀಗಿದೆ: ಬೇವಿನ ಚಿಗುರನ್ನು ಸವಿಯುವುದರಿಂದ ಆಯುಷ್ಯ ನೂರಾಗುತ್ತದೆ, ಶರೀರವು ವಜ್ರದಂತೆ ಬಲಗೊಳ್ಳುತ್ತದೆ, ಸಮಸ್ತ ಸಂಪತ್ತೂ ಲಭ್ಯವಾಗುತ್ತದೆ, ಎಲ್ಲಾ ಅನಿಷ್ಟಗಳೂ ನಿವಾರಣೆಯಾಗುತ್ತವೆ.

ಪಂಚಾಂಗ ಶ್ರವಣ: ಶ್ರೀ ಶಾಲಿವಾಹನ ಗತ ಶಕ 1943 ಪ್ಲವ ಸಂವತ್ಸರ, ಚೈತ್ರ ಮಾಸ, ಶುಕ್ಲ ಪಕ್ಷ, ವಸಂತ ಋತು, ಉತ್ತರಾಯಣ, ಪ್ರತಿಪತ್ ತಿಥಿ, ಮಂಗಳವಾರ, ಅಶ್ವಿನಿ ನಕ್ಷತ್ರ, ವಿಷ್ಕಂಭ ಯೋಗ ಮತ್ತು ಬವ ಕರಣ. ಹೀಗೆ ಚಾಂದ್ರ ಯುಗಾದಿಯ ಪಂಚಾಂಗ ಸಾರಾಂಶ. ಸೌರ ಯುಗಾದಿಯು ಬಿದಿಗೆ ಬುಧವಾರ, ಭರಣಿ ನಕ್ಷತ್ರ, ಪ್ರೀತಿ ಯೋಗ, ಕೌಲವ ಕರಣದಲ್ಲಿ ಬಂದಿದೆ.

ಫಲಶ್ರುತಿ: ಪ್ಲವ ಸಂವತ್ಸರದ ಫಲವು ಒಟ್ಟಿನಲ್ಲಿ ಒಳ್ಳೆಯದಲ್ಲ. ರಾಜನೂ ಮಂತ್ರಿಯೂ ಅರ್ಘಾಧಿಪನೂ ಮೇಘಾಧಿಪನೂ ಅಶುಭನಾದ ಕುಜನೇ ಆಗಿದ್ದಾನೆ. ಚಂದ್ರನು ಸೇನಾಧಿಪತಿಯೂ ಶುಕ್ರನು ಸಸ್ಯ ಮತ್ತು ನೀರಸಗಳ ಅಧಿಪತಿಯೂ ಬುಧನು ಧಾನ್ಯಾಧಿಪತಿಯೂ ಆಗಿರುವುದು ಶುಭವನ್ನು ಸೂಚಿಸುತ್ತದೆ. ಆದರೆ ರವಿಯು ರಸೇಶನಾಗಿರುವುದು ಒಳ್ಳೆಯದಲ್ಲ. ನವ ನಾಯಕರ ಫಲ. ಉಪನಾಯಕ ಫಲವೂ ತ್ರಯೋದಶ ನಾಯಕರ ಫಲವೂ ಹೀಗೆಯೇ ಮಿಶ್ರವಾಗಿದೆ.

ಸಂಕ್ರಾಂತಿ ಫಲ: ಈ ವರ್ಷ ಮಹೋದರೀ ಎಂಬ ಹೆಸರಿನ ಕಾಲ ಪುರುಷನು ಚೈತ್ರ ಶುಕ್ಲ ಪಾಡ್ಯ, ಮಂಗಳವಾರ, ರಾತ್ರಿ 2.40ಕ್ಕೆ ಮೇಷರಾಶಿಯನ್ನು ಪ್ರವೇಶಿಸುವನು. ಅವನು ಗೇರಿನ ಎಣ್ಣೆಯನ್ನು ಮೈಗೆ ಪೂಸಿಕೊಂಡು ಗಂಗಾ ನದಿಯಲ್ಲಿ ಸ್ನಾನ ಮಾಡಿ ಚಿತ್ರ ವಿಚಿತ್ರವಾದ ಬಟ್ಟೆಯನ್ನೂ ಬೆಳ್ಳಿಯ ಒಡವೆಯನ್ನೂ ಧರಿಸಿ, ರಕ್ತ ಚಂದನವನ್ನು ಲೇಪಿಸಿಕೊಂಡು, ರಂಜಲು ಹೂವಿನ ಮಾಲೆಯನ್ನು ಹಾಕಿಕೊಂಡು, ಸಣ್ಣಕ್ಕಿಯನ್ನು ಹಣೆಗೆ ಇಟ್ಟುಕೊಂಡು, ತಾಮ್ರ ಪಾತ್ರದಲ್ಲಿ ತಿನ್ನುತ್ತಾ, ಮಾವಿನ ಹಣ್ಣನ್ನು ಕೈಯಲ್ಲಿ ಹಿಡಿದು ಕೊಂಡು ಹಂದಿಯ ಮೇಲೆ ಕುಳಿತು, ಕಬ್ಬಿಣದ ಆಯುಧದೊಂದಿಗೆ ಹಳೆಯ ಕೊಡೆಯನ್ನು ಹಿಡಿದುಕೊಂಡು, ಮೃದಂಗ ವಾದ್ಯಗಳನ್ನು ಬಾರಿಸುವಾಗ, ವರ್ತಕರೊಂದಿಗೆ ನಾಚಿಕೆಯನ್ನು ಹೊಂದಿ, ಉತ್ತರ ದಿಕ್ಕಿನಿಂದ ಬಂದು ವಾಯವ್ಯ ದಿಕ್ಕನ್ನು ನೋಡುತ್ತಾ ಪಶ್ಚಿಮ ದಿಕ್ಕಿಗೆ ಪ್ರಯಾಣಿಸುತ್ತಾನೆ.

ಸಂಕ್ರಾಂತಿ ಪುರುಷನು ಉಪಯೋಗಿಸಿದ ವಸ್ತುಗಳು ತುಟ್ಟಿಯಾಗುವವು. ಅವನು ಹೋಗಿರುವ ಪಶ್ಚಿಮ ಹಾಗೂ ನೋಡಿರುವ ವಾಯವ್ಯದಿಕ್ಕಿಗೆ ಹಾನಿಯಾಗುತ್ತದೆ. ಅವನು ಬಂದಿರುವ ಉತ್ತರ ದಿಕ್ಕಿಗೆ ಶುಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.