ತಳಸಮುದಾಯದವರು ಜನಿವಾರ ಧಾರಣೆ ಮಾಡುವುದು ತುಮಕೂರು ಜಿಲ್ಲೆ ಉಜ್ಜನಿ ಚೌಡೇಶ್ವರಿ ದೇವಿ ಜಾತ್ರೆಯ ವೈಶಿಷ್ಟ್ಯ. ಜಾತ್ರೆ ಮುಗಿಯುತ್ತಿದ್ದಂತೆ ಅವರೆಲ್ಲಾ ಜನಿವಾರ ತೆಗೆದುಹಾಕಿ ಮತ್ತೆ ತಮ್ಮ ಹಟ್ಟಿಯ ಮನೆಗಳಿಗೇ ಹೋಗುತ್ತಾರೆ. ಹೀಗೆ ಸಂಪ್ರದಾಯದ ಆಚರಣೆ ಮಾಡಿ ಮಂತ್ರ ಹೇಳುವುದನ್ನೇ ‘ಸೌಹಾರ್ದ’ ಎನ್ನುವುದು ಸರಿಯೇ ಎಂಬ ಪ್ರಶ್ನೆಯೂ ಸದಾ ಕೇಳಿಬರುತ್ತದೆ. ಇಂತಹ ವಾದ–ವಿವಾದಗಳು ಈ ಜಾತ್ರೆಯ ಸಾಮಾಜಿಕ ಆಯಾಮದ ಚರ್ಚೆಗೆ ಇಂಬು ನೀಡಿದರೆ, ಇಲ್ಲಿ ನಡೆಯುವ ದೇವರು ತಬ್ಬುವ ಆಚರಣೆ ಸಾಂಸ್ಕೃತಿಕ ಸಿರಿವಂತಿಕೆಯನ್ನು ಢಾಳಾಗಿ ಎತ್ತಿ ತೋರುತ್ತದೆ.
**
ಅರೆರೆ... ಅದೋ ಅಲ್ಲಿ ನಿಗಿನಿಗಿ ಕೆಂಡಗಳ ನಡುವೆ ಪಟಪಟ ಹೆಜ್ಜೆ ಹಾಕುತ್ತಾ ಕೆಲವರು ಹಾದುಹೋದರು... ಏಳು ಜನ ಗುಡ್ಡರ ಓಟವದು. ಈ ಗುಡ್ಡರೆನಿಸಿಕೊಂಡ ತಳಸಮುದಾಯದ ಮಂದಿಗೂ ಜನಿವಾರ ಬಿತ್ತು. ಹೆಬ್ಬಾರೆಗಳು ಪರಸ್ಪರ ತಬ್ಬಿಕೊಂಡರು. ಇಲ್ಲಿ ದೇವರುಗಳೂ ಜಾತಿ ಗೋಡೆಯ ಮರೆತು ತಬ್ಬಿ ಆನಂದಿಸಿದರು. ಸಾವಿರಾರು ಜನ ಕಣ್ತುಂಬಿಕೊಂಡರು.
ಸೂಕ್ಷ್ಮವಾಗಿ ಹಾಗೇ ಉಳಿದಿರುವ ಜಾತಿಯ ಗೆರೆಗಳ ನಡುವೆಯೂ ಈ ಜಾತ್ರೆಯ ಹೊತ್ತಿನಲ್ಲಿ ಅವು ಸ್ವಲ್ಪ ಮಾಸುತ್ತವೆ. ಅಷ್ಟರಮಟ್ಟಿಗೆ ಸವರ್ಣೀಯರು– ತಳಸಮುದಾಯದವರು ಒಂದಾಗಿಯೇ ಇರುತ್ತಾರೆ.
ಇದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾಮದಲ್ಲಿ ನೆಲೆಸಿರುವ ದೇವತೆ ಉಜ್ಜನಿ ಚೌಡಮ್ಮನ ಜಾತ್ರೆಯ ಝಲಕ್. ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ಊರಿನ ಪೂರ್ವಕ್ಕೆ ರಾಮಗಿರಿ ಬೆಟ್ಟವೂ ಪಶ್ಚಿಮಕ್ಕೆ ಹೇಮಗಿರಿ ಬೆಟ್ಟವೂ ಇದ್ದು, ಮಧ್ಯದಲ್ಲಿ ವಿಸ್ತಾರವಾದ ಕಾನನದ ನಡುವೆ ಕೇಕೆಹಾಕಿ ನಗುವ ಪಕ್ಷಿ ಸಂಕುಲದ ನಡುವೆ, ಸಿದ್ಧರು ಓಡಾಡಿದ ಈ ಭೂಮಿಯಲ್ಲಿ ಚೌಡಮ್ಮ ನೆಲೆ ನಿಂತಿದ್ದಾಳೆ.
ದಲಿತರು ಬ್ರಾಹ್ಮಣರಾದರು: ಈ ಜಾತ್ರೆಯ ಹಿನ್ನೆಲೆ ಮಾರಿ ಪುರಾಣದ ಕತೆಯಂತೆಯೇ ಇದೆ. ಅದಕ್ಕೆ ಮತ್ತೆ ಬರೋಣ. ಈ ಜಾತ್ರೆಯ ಆಚರಣೆಗಳನ್ನು ಹೇಳುವುದಾದರೆ, ಪ್ರತಿ ವರ್ಷ ಈ ಊರಿನ 5ರಿಂದ 7 ಜನ ತಳಸಮುದಾಯದರು (ದೇವರ ಗುಡ್ಡರು) ಜನಿವಾರ ಧಾರಣೆಗೆ ಸಜ್ಜಾಗುತ್ತಾರೆ. ಜಾತ್ರೆಯ ಕಂಬ ನೆಡುವ ದಿನ ಜೋಯಿಸರು ಹೋಮ ಹವನ ಮಾಡುತ್ತಾರೆ. ಹೆಬ್ಬಾರಮ್ಮನ (ದೇವತೆ) ಗುಡ್ಡರಾದ (ಮಕ್ಕಳು) ಆರು ಜನ ದಲಿತರು ಬಹು ಮಡಿಯಿಂದ ಬಾಯಿಗೆ ಬಟ್ಟೆ, ತಲೆಗೆ ಪೇಟವನ್ನು ಸುತ್ತಿಕೊಂಡು ಚೌಡಮ್ಮನ ಗುಡಿ ಬಳಿ ಬಂದು ಅಲ್ಲಿನ ಪೂಜಾರಿಯಿಂದ ಜನಿವಾರ ಧಾರಣೆ ಮಾಡಿಸಿಕೊಳ್ಳುತ್ತಾರೆ. ಆ ಕ್ಷಣದಿಂದ ದಲಿತ ಗುಡ್ಡರು ಬ್ರಾಹ್ಮಣರಾದರು ಎಂದರ್ಥ. ಬಹುಶಃ ಆರ್ಯರ ಆಗಮನದ ನಂತರ ದ್ರಾವಿಡ ಮಾತೃದೇವತೆಗೆ ಯಜ್ಞದ ವಿಧಿ ವಿಧಾನಗಳು ಸೇರಿಕೊಂಡಿರಬಹುದು ಎನಿಸುತ್ತದೆ. ಇಲ್ಲಿನ ದಲಿತರು ಜನಿವಾರ ಧರಿಸಿಕೊಂಡರೂ ಆಚರಣೆಗೆ ಮಾತ್ರ ಸೀಮಿತ.
ಇಂದಿನಿಂದ ಆರಂಭವಾಗಿ ಮುಂದಿನ ಭಾನುವಾರದವರೆಗೆ ಚೌಡಮ್ಮನ ಆಚರಣೆಗಳು ನಡೆಯುತ್ತಿರುತ್ತವೆ. ಭಾನುವಾರ ಬಾಬಯ್ಯನ ಜಲ್ದಿ ಸೋಮವಾರ ಆರತಿ, ಮಂಗಳವಾರ ಕೊಂಡದ ಸೌದೆ, ಮಡೆ ಒಯ್ಯುವುದು, ಬುಧವಾರ ಮುಂಜಾನೆ ಅಗ್ನಿಕೊಂಡ, ದೇವರ ಮೆರೆದಾಟ, ದೇವರ ತಬ್ಬಾಟ, ರಥೋತ್ಸವ, ಪಲ್ಲಕ್ಕಿ ಹೀಗೆ ಹಲವು ಆಚರಣೆಗಳಿಂದ ಚೌಡಮ್ಮನ ಹಬ್ಬ ಕಳೆಗಟ್ಟುತ್ತದೆ. ಹಬ್ಬದ ದಿನಾಂಕ ಘೋಷಣೆಯಾದ ಮೇಲೆ ಇಡೀ ಊರಲ್ಲಿ ಕಂಟು ಮುಂಟು ನಡೆಯುವುದಿಲ್ಲ. ತಳಸಮುದಾಯದವರ ದೇವತೆ ಹೆಬ್ಬಾರೆ ಕಣ್ಣು ಬಿಚ್ಚುವವರೆಗೆ ಹದಿಮೂರು ದಿನಗಳ ಕಾಲ ವಿಶೇಷ ಭಕ್ತಿಯಿಂದ ಚೌಡಮ್ಮನ ಆಚರಣೆಗಳು ಬಹು ವಿಶಿಷ್ಟ ರೀತಿಯಲ್ಲಿ ನಡೆಯುತ್ತವೆ.
ಬುಧವಾರ ಮುಂಜಾನೆ ನಡೆಯುವ ಕೊಂಡ ಉರಿಸುವ ವಿಧಿ ಬಹು ಆಕರ್ಷಣೆಯ ಮತ್ತು ದೇವತೆಯ ಶಕ್ತಿಯ ಪ್ರತೀಕ. ಬೆಳ್ಳಿಕರಗದ ನಂತರ ಉಜ್ಜನಿ ಚೌಡಮ್ಮನ ಉತ್ಸವಮೂರ್ತಿ ಹೊತ್ತ ಗುಡ್ಡ, ನಂತರ ಹೆಬ್ಬಾರೆ ಹೊತ್ತಗುಡ್ಡರು ಮತ್ತು ನಾಲ್ಕು ಜನ ಬರೀ ಕೈಲಿ ಓಡುತ್ತಾರೆ. ಈ ದೃಶ್ಯವನ್ನು ನೋಡಲು ಕಾತರದಿಂದ ಲಕ್ಷಾಂತರ ಭಕ್ತರು ಕಾಯುತ್ತಿರುತ್ತಾರೆ. ಗುಡ್ಡರು ಆವೇಶದಿಂದ ಬಂದು ಮೈದುಂಬಿ ದೇವಸ್ಥಾನ ಒಳ ಹೋಗಲು ಪ್ರಯತ್ನಿಸುತ್ತಾರೆ. ಜನಿವಾರ ಧರಿಸಿದ್ದಾಗ್ಯೂ ಒಳಗೆ ಪ್ರವೇಶಿಸಲು ಬಿಡುವುದಿಲ್ಲ. ಇದು ತಳಸಮುದಾಯದವರು ಬ್ರಾಹ್ಮಣರಂತೆ ಆಚರಣೆ ಮಾಡಲು ಮಾತ್ರ ಬಳಕೆ ಆಗುತ್ತಿರುವುದರ ಪ್ರತೀಕದಂತೆ ಕಾಣುತ್ತದೆ. ಆದರೆ ಅಲ್ಲಿಯ ಮಹಾ ಭಕ್ತಿವಂತ ಸಮುದಾಯ ಇದನ್ನು ಒಂದು ಆಚರಣೆಯಾಗಿ ಪಾಲಿಸಬೇಕಾದ ಕರ್ತವ್ಯವೆಂದು ತಿಳಿಯುತ್ತಾ ಭಕ್ತಿಯ ಪರವಶತೆಯಲ್ಲಿ ಮಿಂದೇಳುತ್ತದೆ.
ದೇವರ ತಬ್ಬಾಟ: ಹಿರಿಯಳಾದ ನಿಡಸಾಲೆ ಚೌಡಮ್ಮನಿಗೆ ಮುಂಗೊಂಡ, ಮುಂದಲ ಆರತಿ, ಎರಡನೇ ಸ್ಥಾನ ಉಜ್ಜನಿ ಚೌಡಮ್ಮನಿಗೆ. ಕೊಂಡ ಮುಗಿದ ನಂತರ ಮೆರವಣಿಗೆ ಮುಗಿಸಿ ನಿಡಸಾಲೆ ಚೌಡಮ್ಮ ಹೊರಡುವಾಗ (ಬುಧವಾರ) ಇಬ್ಬರೂ ಚೌಡಮ್ಮನ ಪೂಜೆಗಳು ಮತ್ತು ಹೆಬ್ಬಾರೆಗಳು ತಬ್ಬಾಡುವುದನ್ನು ನೋಡುವುದೇ ಒಂದು ಚಂದ. ಜಾತಿ ಗೋಡೆಗಳ ಬಿಟ್ಟು ಒಟ್ಟಾಗಿ ಬಾಳುವ ಈ ಆಟ ‘ದೇವರ ತಬ್ಬಾಟ’ ಅಂತಲೇ ಪ್ರಸಿದ್ಧಿ.
ಉಜ್ಜನಿಯಲ್ಲಿ ಸವರ್ಣೀಯರು ತಳಸಮುದಾಯದವರು ಕೂಡಿ ಮಾಡುವ ಹಬ್ಬವಿದು. ಮಾರಿ ಪುರಾಣ ಹೋಲುವ ಹೆಬ್ಬಾರಮ್ಮನ ಕತೆ ಪ್ರಚಲಿತದಲ್ಲಿದೆ. ಬ್ರಾಹ್ಮಣ ಕನ್ಯೆ ಹೆಬ್ಬಾರಮ್ಮ ಒಡ್ಡುವ ಸವಾಲನ್ನು ಒಬ್ಬ ದಲಿತ ಹುಡುಗ ಸ್ವೀಕರಿಸಿ ಗೆಲ್ಲುತ್ತಾನೆ. ಮದುವೆಯೂ ಆಗುತ್ತದೆ. ಕಾಲಾನಂತರದಲ್ಲಿ ಹೆಬ್ಬಾರಮ್ಮನಿಗೆ ತಾನು ತಳಸಮುದಾಯದ ಹುಡುಗನನ್ನು ಮದುವೆಯಾಗಿ ಮೋಸ ಹೋದೆ ಎಂದು ತಿಳಿದು ಸಾಯಲು ನಿಶ್ಚಯಿಸುತ್ತಾಳೆ. ಚೌಡಮ್ಮನ ಧ್ಯಾನದಿಂದ ಇರುವಾಗ ಮಾಡಿದ ತನ್ನ ತಪ್ಪಿಗೆ ಗಂಡ ಕ್ಷಮೆ ಕೋರುತ್ತಾನೆ. ಇದಕ್ಕೆ ಪ್ರಾಯಶ್ಚಿತ್ತ ಏನು ಎಂದು ಕೇಳಿದಾಗ ಪ್ರತಿವರ್ಷ ನಡೆಯುವ ಚೌಡಮ್ಮನ ಹಬ್ಬದಲ್ಲಿ ತನ್ನ ಐದು ಜನ ಮಕ್ಕಳಿಗೂ ಹಬ್ಬಕ್ಕೆ ಹದಿನೈದು ದಿನ ಮುಂಚೆಯೇ ಜನಿವಾರ ಧಾರಣೆ ಮಾಡಬೇಕು. ಕೊಂಡದ ದಿವಸ ತನ್ನನ್ನು ಸಂಕೇತಿಸುವ ಹೆಬ್ಬಾರೆಯನ್ನು ಹೊತ್ತುಕೊಂಡು ಓಡಬೇಕು ಎಂದು ಹೇಳಿ ಉರಿಯುತ್ತಿದ್ದ ಕೊಂಡದಲ್ಲಿ ಹೆಬ್ಬಾರಮ್ಮ ಬಿದ್ದು ಸಾಯುತ್ತಾಳೆ... ಹೀಗೆ ಸಾಗುತ್ತದೆ ಈ ಕಥೆ.
ಈ ಕಥನದಿಂದ ಈ ಹಬ್ಬಕ್ಕೆ, ಜಾತ್ರೆಗೆ ಒಂದು ಚಾರಿತ್ರಿಕ ಕಾರಣ, ಪುರಾಣಗಳು ಹೆಣೆದುಕೊಂಡಿದ್ದು ಹೆಬ್ಬಾರಮ್ಮ ಕೊಟ್ಟ ಶಾಪದಿಂದ ಎಂಬ ನಂಬಿಕೆಯಿದೆ. ಈ ಕಥೆಯು ವರ್ಣ ಸಂಕರದ ಅಪಾಯವನ್ನು ಸೂಚಿಸುವಂತಿದೆ. ತಳವರ್ಗದ ಯುವಕನೊಬ್ಬ ತನ್ನ ಬುದ್ಧಿಶಕ್ತಿಯ ಪ್ರತಿಭೆಯಿಂದ ಸವಾಲನ್ನು ಗೆದ್ದಾಗಲೂ ಜಾತಿ ಅಡ್ಡಬಂದು ಮೇಲುವರ್ಗದ ಹೆಣ್ಣು ಮಗಳನ್ನು ಮದುವೆಯಾದರೆ ಆಗಬಹುದಾದ ಪರಿಣಾಮದ ಪ್ರತೀಕವಾಗಿಯೂ ನೋಡಬಹುದು. ಬಹುಶಃ ಹತ್ತು ಹನ್ನೊಂದನೇ ಶತಮಾನದ ನಂತರ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ವರ್ಣಸಂಕರದ ಜಾಗೃತಿ ಆರಂಭಗೊಂಡಿತು. 1429ರ ಕಾಲದ ಶಾಸನವೊಂದು ಉಜ್ಜನಿಯ ಊರ ಮಧ್ಯಭಾಗದಲ್ಲಿದ್ದು ಶಾಸನದ ಸಾಲುಗಳು ಕೆಲವು ವಿವರಣೆಗಳನ್ನು ನೀಡಲಾಗಿದೆ. ವಿಜಯನಗರದ ಅರಸ ವೀರ ಪ್ರತಾಪ ಮಹಾರಾಜ, ವಿಜಯ ಬುಕ್ಕರಾಯ ಒಡೆಯರ ಕುಮಾರರ ಆಳ್ವಿಕೆಗೆ ಉಜ್ಜನಿಯು ಸೇರಿತ್ತು ಎಂಬ ಉಲ್ಲೇಖವಿದೆ.
ಚೌಡಮ್ಮನ ಮೂಲದ ಕತೆ: ಉಜ್ಜನಿಯ ರಾಜನಾದ ವಿಕ್ರಮಾದಿತ್ಯನು ತನ್ನ ಆಪ್ತ ಮಂತ್ರಿ ಭಟ್ಟಿಯ ಜೊತೆಯಲ್ಲಿ ಬೇಟೆಗಾಗಿ ಮತ್ತು ತನ್ನ ಪ್ರಜೆಗಳ ಕ್ಷೇಮ ವಿಚಾರಕ್ಕಾಗಿ ದಕ್ಷಿಣಾಭಿಮುಖವಾಗಿ ಬರುತ್ತಿದ್ದ. ಒಂದು ದಟ್ಟವಾದ ಕಾಡಿನಲ್ಲಿ ಬೇಟೆಯಾಡುತ್ತಾ ಬಂದ. ಒಂದು ಜಾಗದಲ್ಲಿ ರಾಜನ ನಾಯಿಗಳು ಮೊಲವನ್ನು ಕಂಡು ಗಾಬರಿಗೊಂಡು ಹಿಮ್ಮುಖವಾದವು. ಆಶ್ಚರ್ಯಗೊಂಡ ಪರಿವಾರ ಓಡಿ ನೋಡಲಾಗಿ ಮೊಲಗಳೇ ನಾಯಿಯನ್ನು ಬೆನ್ನಟ್ಟಿ ಹೋಗುತ್ತಿರುವುದು ಕಾಣಿಸಿತು. ಇದರಿಂದ ರಾಜನಿಗೆ ಕುತೂಹಲ ಮೂಡಿತು. ರಾಜ ತನ್ನ ವಶವಾಗಿದ್ದ ಬೇತಾಳವನ್ನು ಕೇಳಿದ. ಅದು ತ್ರಿಪುರಾಪುರಿಯ ರಾಜನ ಮಗಳು ಶ್ರೀಕೃಷ್ಣನ ಮಡದಿ, ಮಹಿಷಾಸುರನನ್ನು ಮರ್ದಿಸಿದ ಚಾಮುಂಡಿಯೂ ಆದ ಚೌಡಮ್ಮ ಇಲ್ಲಿ ನೆಲೆಗೊಂಡಿದ್ದಾಳೆ. ಅವಳ ಪ್ರಭಾವದಿಂದ ಈ ರೀತಿ ಆಗುತ್ತಿದೆ ಎಂದು ಚೌಡಮ್ಮನ ಕಥನವನ್ನು ವಿವರಿಸುತ್ತದೆ.
‘ತ್ರಿಪುರಾಪುರಿ’ ಪಟ್ಟಣವು ಆಕಾಶದೆತ್ತರದಲ್ಲಿ ಇತ್ತಂತೆ. ಅಲ್ಲಿಗೊಬ್ಬ ರಾಜ. ರಾಜನಿಗೆ ಏಳು ಜನ ಹೆಣ್ಣುಮಕ್ಕಳು. ಅವರು ಎಂದೂ ಗಂಡಸರನ್ನು ನೋಡಿರಲಿಲ್ಲ. ಆಗ ಕೃಷ್ಣ ಇವರಿಗೆ ಗಂಡಸರ ದರ್ಶನ ಮಾಡಿಸಬೇಕು ಎಂದು ಉಪಾಯ ಮಾಡಿದ. ಒಂದುದಿನ ಕೃಷ್ಣ, ಬುಡುಬುಡಿಕೆ ಮಂತ್ರಗಾರನಂತೆ ‘ತ್ರಿಪುರಾಪುರಿ ಪಟ್ಟಣ ನಾಶವಾಗಿಬಿಡುತ್ತೆ’ ಎಂದು ಸಾರುತ್ತಾ, ಇದರಿಂದ ಪಾರಾಗಬೇಕಾದರೆ ಏಳು ಜನ ಹೆಣ್ಣು ಮಕ್ಕಳಾದ ನೀವು ಕಲ್ಲು ನೀರು ಕರಗುವ ಸಮಯದಲ್ಲಿ ಮೂಡಲ ದಿಕ್ಕಿನಲ್ಲಿರುವ ಕೆರೆಯಲ್ಲಿ ಸ್ನಾನಮಾಡಿ ಬಂದು ನಿಂತರೆ ನಿಮ್ಮ ಮುಂದೆ ಅರಳಿ ಸಸಿ ಬೆಳೆದು ನಿಂತಿರುತ್ತದೆ. ಅದಕ್ಕೆ ನೀವು ಪೂಜೆ ಮಾಡಿ ನಿರ್ವಾಣದಲ್ಲಿ ಮರವನ್ನು ತಬ್ಬಿಕೊಳ್ಳಬೇಕು ಹೀಗೆ ಮಾಡಿದರೆ ಬರುವ ಕಷ್ಟದಿಂದ ಪಾರಾಗಬಹುದು. ತಪ್ಪಿದರೆ ಪಟ್ಟಣ ನಾಶವಾಗುತ್ತದೆ ಎಂದು ಹೇಳಿದ.
ಆ ಹೆಣ್ಣು ಮಕ್ಕಳು ಪಟ್ಟಣ ನಾಶವಾದರೆ ತನ್ನ ತಂದೆ ರಾಜನಿಗೆ ಉಳಿಗಾಲವಿಲ್ಲವೆಂದು ತಿಳಿದು ಕೃಷ್ಣ ಹೇಳಿದ ಮಾತನ್ನು ಪಾಲಿಸಲು ಮನಸ್ಸನ್ನು ಮಾಡಿದರು. ಕೃಷ್ಣ ಹೇಳಿದಂತೆಯೇ ಬೆತ್ತಲೆಯಾಗಿ ಅರಳಿ ಸಸಿಗೆ ಪೂಜೆ ಸಲ್ಲಿಸುತ್ತಾ ಇರಬೇಕಾದರೆ ಸಸಿಯು ಮರವಾಯಿತು. ಆದರೂ ಆಜ್ಞೆಯಂತೆ ಮರವನ್ನು ತಬ್ಬುತ್ತಿದ್ದಂತೆ ಆ ಮರವೇ ಕೃಷ್ಣನ ರೂಪಾಂತರವಾಯಿತು. ಕೃಷ್ಣನನ್ನು ನೋಡಿದ ಅವರು ಒಮ್ಮೆಲೆ ಅವಮಾನಿತರಾಗಿ ಎಲ್ಲರೂ ತಮ್ಮ ಪಟ್ಟಣವಾದ ತ್ರಿಪುರಾಪುರಿಗೆ ಹೋಗಲು ಆಗದೆ ಭೂಮಿಯಲ್ಲಿ ನೆಲೆಸಿದರು ಅವರಲ್ಲಿ ಮೊದಲನೆಯವಳು ನಿಡಸಾಲೆಯಲ್ಲಿಯೂ, ಎರಡನೆಯವಳು ಉಜ್ಜನಿಯಲ್ಲೂ ನೆಲೆ ನಿಂತಳು ಎನ್ನುವುದು ಜನಪದ ಕಥೆ. ಕಥೆಗಳು ಏನೇ ಹೇಳಲಿ, ಇಲ್ಲಿನ ಆಚರಣೆಗಳು ಮಾತ್ರ ಜನಾಕರ್ಷಣೆಗೆ, ಚರ್ಚೆಗೆ ವಸ್ತುವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.