ಹದಿನಾಲ್ಕು ವರ್ಷಗಳ ಹಿಂದೆ ಊರು ತೊರೆದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯ ಸೇರಿದ್ದ ಊರಮ್ಮ, ಮರಳಿ ತನ್ನ ಗೂಡು ಸೇರಿದೆ. ಮ್ಯೂಸಿಯಂನಿಂದ ಊರು ಸೇರಿದ ಊರಮ್ಮನ ಕಥೆ ಇಲ್ಲಿದೆ.
ಅಂದು ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಎಲ್ಲಿಲ್ಲದ ಸಂಭ್ರಮ. ಮನೆ ಮನೆಗಳಲ್ಲಿ ಹಬ್ಬದ ತಯಾರಿ. ಹುಡುಗರು ಕೋಲಾಟಕ್ಕೆ ಸಜ್ಜಾಗುತ್ತಿದ್ದರೆ, ಹುಡುಗಿಯರು ಹೂದಂಡೆಯ ಜಡೆ ಹೆಣೆದುಕೊಂಡು ಆರತಿ ಹಿಡಿದು ಊರಮ್ಮನನ್ನು ಕರೆತರಲು ತಯಾರಿ ನಡೆಸಿದ್ದರು. ಹೆಂಗಳೆಯರು ಹಬ್ಬದ ಅಡುಗೆಯ ಸಿದ್ಧತೆಯಲ್ಲಿದ್ದರೆ, ಊರ ದೈವದವರು ಪುರುಸೊತ್ತಿಲ್ಲದೆ ದೇವಿಯ ಮೆರವಣಿಗೆಗೆ ಅಣಿಗೊಳಿಸುತ್ತಿದ್ದರು. ಬರೋಬ್ಬರಿ 14 ವರ್ಷದ ಹಿಂದೆ ಊರು ತೊರೆದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯ ಸೇರಿದ್ದ ಊರಮ್ಮ ಮರಳಿ ತನ್ನದೇ ಗೂಡು ಸೇರುವ ಚಾರಿತ್ರಿಕ ಘಟನೆಗೆ ಇವರೆಲ್ಲಾ ಸಾಕ್ಷಿಯಾಗುತ್ತಿದ್ದರು.
ಅರೆ, ಕಮಲಾಪುರದ ಗ್ರಾಮದೇವತೆ ಕನ್ನಡ ವಿಶ್ವವಿದ್ಯಾಲಯದ ಮ್ಯೂಸಿಯಂ ಸೇರಿದ್ದು ಯಾಕೆ? 14 ವರ್ಷದ ‘ಮ್ಯೂಸಿಯಂ ವಾಸದ’ ನಂತರ ಮರಳಿ ಬಂದದ್ದು ಯಾಕೆ? ಈ ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ, 80 ವರ್ಷದ ನಾಟಿವೈದ್ಯ ಬಳಿಗಾರ ಜಂಬಣ್ಣ ಮತ್ತು ಊರಿನ ಹಿರಿಯರನ್ನು ಮಾತನಾಡಿಸಿದರೆ, ಊರಮ್ಮನ ಕತೆಯನ್ನು ಸುರುಳಿಯಾಗಿ ಬಿಚ್ಚಿಟ್ಟರು.
ಕಮಲಾಪುರದ ನಡುಮಧ್ಯೆ ಇರುವ ‘ಊರಮ್ಮ’ ಗ್ರಾಮದೇವತೆಯನ್ನು ಇಡೀ ಊರಿಗೆ ಊರೇ ಆರಾಧಿಸುತ್ತದೆ. ಹೀಗಿರುವಾಗ ಮೂರ್ನಾಲ್ಕು ದಶಕಗಳ ಹಿಂದೆ ಊರಮ್ಮನ ಟ್ರಸ್ಟ್ ಒಂದು ರಚನೆಯಾಯಿತು. ಈ ಟ್ರಸ್ಟ್‌ನಲ್ಲಿ ಸೀತಾರಾಮ ಸಿಂಗ್ ಅಧ್ಯಕ್ಷರಾಗಿದ್ದು, ಪಂಪಣ್ಣ, ಮೇಟಿ ಭೀಮನಗೌಡ್ರು, ಅಚ್ಚನಗೌಡ್ರು, ರಂಗೇರಿ ಪಾಂಡಪ್ಪ, ಕೃಷ್ಣಪ್ಪ, ದೇಸಾಯಿ ಗೋವಿಂದರಾವ್, ಹನುಮಂತಪ್ಪ ಬಳಿಗಾರ ಮತ್ತಿತರರು ಸದಸ್ಯರಾಗಿದ್ದರು. ಸತತ 24 ವರ್ಷಗಳ ಕಾಲ ಕಮಲಾಪುರದ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರೂ ಆಗಿದ್ದಂತಹ ಸೀತಾರಾಮ ಸಿಂಗ್ ಮತ್ತು ಟ್ರಸ್ಟ್‌ನ ಸದಸ್ಯರು 2004 ರಲ್ಲಿ ಊರಮ್ಮನ ಕಟ್ಟಿಗೆ ಮೂರ್ತಿಗೆ ಬದಲಾಗಿ ಕಲ್ಲಿನ ಮೂರ್ತಿ ಮಾಡಿಸುವ ನಿರ್ಧಾರ ಮಾಡಿದರು. ಅನೇಕರಿಗೆ ಕಟ್ಟಿಗೆ ಮೂರ್ತಿ ಬದಲಾಯಿಸುವ ಮನಸ್ಸಿಲ್ಲದಿದ್ದರೂ, ಊರ ಯಜಮಾನರಾದ ಟ್ರಸ್ಟಿಗಳಿಗೆ ಎದುರಾಡುವಂತಿರಲಿಲ್ಲ.
ಬಡಿಗೇರ ಮೌನೇಶ್ ಈ ಸಂಬಂಧ ಟ್ರಸ್ಟ್‌ನವರನ್ನು ಪ್ರಶ್ನಿಸಿದ್ದರು. ವಿಜಯನಗರ ಕಾಲದಿಂದಲೂ ಊರಮ್ಮ ಇದ್ದಂತವಳು, ಅವಳಿಗೆ ಕಲ್ಲಿನ ಮೂರ್ತಿ ಸಲ್ಲುವುದಾದರೆ ನೂರಾರು ಶಿಲ್ಪಗಳನ್ನು ಕೆತ್ತಿಸಿದ ಅರಸರಿಗೆ ಊರಮ್ಮನ ಮೂರ್ತಿ ಕೆತ್ತಿಸುವುದು ದೊಡ್ಡದಾಗಿತ್ತೇ? ಊರಮ್ಮ ಸ್ಥಿರವಲ್ಲ ಚರ. ಆಕೆ ಜನರ ಹೆಗಲ ಮೇಲೆ ಊರು ಸುತ್ತಿ ಗ್ರಾಮಕ್ಕೆ ಕೇಡುಗಳು ಬರದಂತೆ ಕಾಯುವವಳು, ಅವಳನ್ನು ಸ್ಥಿರಗೊಳಿಸುವುದು ಸರಿಯಲ್ಲ. ಊರಮ್ಮನ ಪಾದಗಳಿಗೆ ಜಲಾಭಿಷೇಕ ಸಲ್ಲುತ್ತದೆಯೇ ಹೊರತು ಮೂರ್ತಿ ಶಿಲ್ಪಕ್ಕೆ ಸಲ್ಲುವ ಪಂಚಾಭಿಷೇಕವಲ್ಲ ಎಂದಿದ್ದರು. ಆದರೆ ಮೌನೇಶರ ತಕರಾರಿಗೆ ಟ್ರಸ್ಟ್ ಒಪ್ಪಲಿಲ್ಲ. ಈ ಮಾತಿಗೆ ಗ್ರಾಮಸ್ಥರೂ ಧ್ವನಿಗೂಡಿಸಲಿಲ್ಲ. ಹೀಗಾಗಿ ಟ್ರಸ್ಟ್‌ನ ತೀರ್ಮಾನದಂತೆ ಕಲ್ಲಿನ ಮೂರ್ತಿ ಸಿದ್ಧಗೊಂಡಿತು.
ಹಾಗಾದರೆ ಕಟ್ಟಿಗೆ ಮೂರ್ತಿ ಏನು ಮಾಡುವುದು? ಪ್ರಶ್ನೆ ಎದುರಾಯಿತು. ಕೆಲವರು ಹಂಪಿ ಹೊಳೆಗೆ ಬಿಟ್ಟರಾಯಿತು ಎಂದರು. ಗುಂಪಿನಲ್ಲೊಬ್ಬರು ಕನ್ನಡ ವಿಶ್ವವಿದ್ಯಾಲಯದ ಮ್ಯೂಸಿಯಂಗೆ ಕೊಡಬಹುದೆಂದರು. ಇದೇ ಸರಿಯಾದದ್ದೆಂದು ಊರಮ್ಮನನ್ನು ಕನ್ನಡ ವಿಶ್ವವಿದ್ಯಾಲಯದ ಮ್ಯೂಸಿಯಂಗೆ ವರ್ಗಾಯಿಸಿದರು.
ಮ್ಯೂಸಿಯಂಗೆ ಕೊಡುವಾಗಲೂ ಆಗಿನ ವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಕೆ.ಎಂ.ಸುರೇಶ್ ಅವರ ಬಳಿ ‘ಸರ್ ಊರಿಗೆ ಮಳೆ ಆಗದೆ ಇದ್ರೆ, ಬರಗಾಲ ಬಂದ್ರೆ ಮತ್ತೆ ಊರಮ್ಮನ ವಾಪಸ್ ಒಯ್ತೀವಿ’ ಎಂದಿದ್ದರಂತೆ. ಹಾಗಾಗಿಯೇ ಊರಮ್ಮನ ಮೂರ್ತಿಯನ್ನು ಮ್ಯೂಸಿಯಂನಲ್ಲಿಟ್ಟಿದ್ದರೂ ದಾಖಲಿಸಿಕೊಂಡಿರಲಿಲ್ಲ. ಊರಮ್ಮ ಮ್ಯೂಸಿಯಂ ಸೇರಿದರೂ, ಕಟ್ಟಿಗೆ ಮೂರ್ತಿ ಜತೆ ಭಾವನಾತ್ಮಕ ನಂಟು ಬೆಸೆದುಕೊಂಡ ಕೆಲವು ಭಕ್ತರು ವಾರಕ್ಕೊಮ್ಮೆ ಮ್ಯೂಸಿಯಂನಲ್ಲಿದ್ದ ದೇವಿಯನ್ನು ಪೂಜೆ ಮಾಡತೊಡಗಿದರು.
ವಿಶ್ವವಿದ್ಯಾಲಯಕ್ಕೆ ಇದೊಂದು ಇಕ್ಕಟ್ಟು. ಹೀಗೆ ಪೂಜೆ ಮಾಡುವುದು ಮ್ಯೂಸಿಯಂ ನಿಯಮಕ್ಕೆ ವಿರುದ್ಧವಾಗಿತ್ತು. ಈ ಕಾರಣಕ್ಕೆ ಮ್ಯೂಸಿಯಂ ಡೈರೆಕ್ಟರ್ ಒಳಗೊಂಡಂತೆ ಕಾವಲುಗಾರರು ಇಲ್ಲಿ ಪೂಜೆ ಮಾಡಬಾರದೆಂದು ಎಷ್ಟೇ ಹೇಳಿದರೂ.. ಅದನ್ನು ತಪ್ಪಿಸಲಾಗಲಿಲ್ಲ. ಮಂಗಳವಾರ, ಶುಕ್ರವಾರ ಕೆಲವರು ಸದ್ದಿಲ್ಲದೆ ಅಮ್ಮನ ಪೂಜೆ ಮಾಡಿಕೊಂಡು ಹೋಗುತ್ತಿದ್ದರು. ಆಗಾಗ ದೇವಿಗೆ ಸೀರೆ ಬದಲಾಯಿಸುವುದು, ಹೊಸ ಸೀರೆ ಉಡಿಸುವುದು, ಹೂವಿನ ಹಾರ ಹಾಕಿ ಊದುಬತ್ತಿ ಹಚ್ಚುವುದು ನಡೆದೇ ಇತ್ತು. ಹೀಗಾಗಿ ಊರಮ್ಮ ಗ್ರಾಮ ತೊರೆದರೂ ಕಮಲಾಪುರದ ಭಕ್ತರು ಊರಮ್ಮನನ್ನು ತೊರೆಯಲಿಲ್ಲ.
ಈ ಮಧ್ಯೆ ಒಂದೆರಡು ತಿಂಗಳ ಹಿಂದೆ ಬಡಿಗೇರ ಮೌನೇಶ್ ಪೂಜೆಗೆಂದು ಹೋದಾಗ ಮ್ಯೂಸಿಯಂ ಕಾವಲುಗಾರರೊಬ್ಬರು ‘ಊರಮ್ಮನ್ನ ಒಯ್ಯೋದಾದ್ರೆ ಕೊಡ್ತೀವಿ ಒಯ್ದಬಿಡ್ರಿ, ಇಲ್ಲಿಗ್ಯಾಕ ಬರ್ತೀರಿ’ ಎಂದರಂತೆ. ಮೌನೇಶ್ ಈ ಸಂಗತಿಯನ್ನು ಹೊಸದಾಗಿ ರಚನೆಯಾದ ಟ್ರಸ್ಟ್‌ನ ಗಮನಕ್ಕೆ ತಂದರು. ನಾಗರಾಜ ಗೌಡ ಅಧ್ಯಕ್ಷರಾಗಿದ್ದು, ಜಂಬಯ್ಯ, ಕೊಟಿಗಿ ನಾರಾಯಣಪ್ಪ, ಬಳಿಗಾರ ಜಂಬಣ್ಣ, ಬಡಿಗೇರ ಮಲ್ಲಿಕಾರ್ಜುನ, ಕಾಳೇಶಾಚಾರಿ, ನರೇಗಲ್ ಸೀನಪ್ಪ, ಮೌನೇಶ್, ಗುಡ್ಡದ ಜೋಗಯ್ಯ, ಸಮೀವುಲ್ಲ, ಮುಕ್ತಿಯಾರ್, ಹುಲುಗಪ್ಪ, ದುರುಗಪ್ಪ ಒಟ್ಟಾರೆ ಊರಿನ ಎಲ್ಲಾ ಜಾತಿ–ಧರ್ಮದವರ ಪ್ರಾತಿನಿಧ್ಯದಿಂದ ರಚನೆಯಾದ ಹೊಸ ಟ್ರಸ್ಟ್ ವಿಶ್ವವಿದ್ಯಾಲಯದಿಂದ ಊರಮ್ಮನ ಮೂರ್ತಿಯನ್ನು ತರುವುದೆಂದು ತೀರ್ಮಾನಿಸಿತು. ‘ಊರಮ್ಮ ಹೋದಂದಿನಿಂದ ಮಳೆಯಿಲ್ಲ, ಊರಿಗೆ ಒಳ್ಳೇದಾಗಿಲ್ಲ’ ಎನ್ನುವ ಜನರ ನಂಬಿಕೆಯೂ ಇದಕ್ಕೆ ಬಲ ನೀಡಿತು. ಹೀಗಾಗಿ ಟ್ರಸ್ಟ್‌ನವರು ಕನ್ನಡ ವಿವಿಯ ಈಗಿನ ಕುಲಪತಿಗಳಾದ ಪ್ರೊ.ಸ.ಚಿ.ರಮೇಶ್ ಅವರಲ್ಲಿ ಪತ್ರ ಬರೆದು ಅನುಮತಿ ಪಡೆದರು. ಗಿಣಿಗೇರಿಯ ನಾಗಲಿಂಗ ಸ್ವಾಮಿಗಳಿಂದ ಮೂರ್ತಿಯನ್ನು ಪರಿಶೀಲಿಸಿದರು. ಕಿನ್ನಾಳದ ಕಲಾವಿದ ಆಂಜನೇಯ ಹನುಮಂತಪ್ಪ ಚಿತ್ರಗಾರ್ ತಂಡದವರು ದೇವಿಗೆ ಬಣ್ಣ ಬಳಿದು ಶೃಂಗಾರ ಮಾಡಿದರು.
ಇದೇ ನವೆಂಬರ್ 14 ರಂದು ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಊರಮ್ಮನನ್ನು ಗುಡಿಗೆ ಕರೆತರಲಾಯಿತು. ಮರುದಿನ ಚಂಡಿ ಹೋಮ ಮಾಡಿಸಿ, ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ವಿಶ್ವಕರ್ಮ ಸ್ವಾಮೀಜಿಗಳಾದ ನಾಗಲಿಂಗ ಸ್ವಾಮಿಗಳಮುಂದಾಳತ್ವದಲ್ಲಿ ಉಡಿತುಂಬಿ ಊರಮ್ಮನನ್ನು ಮನೆ ಮಗಳನ್ನಾಗಿಸಿಕೊಂಡರು. ಇದೀಗ ಐದು ವರ್ಷಕ್ಕೊಮ್ಮೆ ಊರಮ್ಮನ ಜಾತ್ರೆ ಮಾಡುವುದಾಗಿ ಟ್ರಸ್ಟ್ ನಿರ್ಧರಿಸಿದೆ. ಅಂತೂ ಊರಮ್ಮ ವಿಶ್ವವಿದ್ಯಾಲಯ ತೊರೆದು ತನ್ನೂರಿಗೆ ಬಂದಳು.
‘ಊರಿನ ಸುತ್ತಲೂ ಐದು ಶಕ್ತಿದೇವತೆಯರಿದ್ದಾರೆ. ಅವರಿಗೆಲ್ಲಾ ಊರಮ್ಮನೇ ತಾಯಿ, ಆಕೆಯ ಗುಡಿಯೇ ತವರು ಮನೆ. ಹಂಗಾಗಿ ತವರಿನ ತಾಯಿ ಮರಳಿ ಬಂದಂತಾಗಿದೆ. ಹೆಸರು ಹೇಳದ ಮುಸ್ಲಿಂ ಶಿಕ್ಷಕರೊಬ್ಬರು ದೇವಿಗೆ ಬಣ್ಣ ಬಳಿಸುವ ಖರ್ಚು ಕೊಟ್ಟಿದ್ದಾರೆ. ಊರಿನ ಅನೇಕರು ಉದಾರ ದೇಣಿಗೆ ನೀಡಿದ್ದಾರೆ. ಸರ್ವನ್ನೊಂದು ಜಾತಿ ಮಂದಿ ಸೇರಿ ಊರಮ್ಮನನ್ನು ಬರಮಾಡಿಕೊಂಡಿದ್ದೇವೆ’ ಎಂದು ಬಳಿಗಾರ ಜಂಬಣ್ಣ ಹೇಳುತ್ತಾರೆ.
‘ನಿಮಗೆ ಬೇಕೆಂದಾಗ ಮತ್ತೆ ಒಯ್ಯುವುದಾದರೆ ಮ್ಯೂಸಿಯಂನಲ್ಲಿ ಇಡಬೇಡಿ ಎಂದಿದ್ದರೂ, ಗ್ರಾಮಸ್ತರು ಊರಮ್ಮನನ್ನು ಇಟ್ಟು ಹೋಗಿದ್ದರು. ಜನರ ನಂಬಿಕೆ ಬದಲಾಗಿ ಯಾವಾಗ ಬೇಕಾದರೂ ಮರಳಿ ಒಯ್ದರೆ ಒಯ್ಯಲೆಂದು ದಾಖಲಿಸಿಕೊಂಡಿರಲಿಲ್ಲ’ ಎಂದು ನಿವೃತ್ತರಾಗಿರುವ ಆಗಿನ ವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಕೆ.ಎಂ.ಸುರೇಶ್ ಹೇಳುತ್ತಾರೆ.
ಚಿತ್ರಗಳು: ರಾಘವೇಂದ್ರ ಬಾವಿಕಟ್ಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.