ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ?
ಅನ್ಯರ ಕೂಡೆ ಬಣ್ಣಬಚ್ಚಣೆಯ ಮಾತಾಡುವ
ಅಣ್ಣ ಅಪ್ಪ ಎಂಬ ಕುನ್ನಿಗಳ
ಮೆಚ್ಚುವನೆ ಅಮುಗೇಶ್ವರಲಿಂಗವು?
-ಅಮುಗೆ ರಾಯಮ್ಮ
ಮನುಷ್ಯನ ಎಲ್ಲ ಸಾಕ್ಷಿಗಳಲ್ಲಿ ಮಿಗಿಲಾದದ್ದು ಆತ್ಮಸಾಕ್ಷಿ. ಆತ್ಮ ಇದ್ದವರಿಗೆ ಆತ್ಮಸಾಕ್ಷಿ ಸದಾ ಜೀವಂತ ಇರುವುದಾದರೂ, ಜೀವಂತವೇ ಇರುವ ಬಹಳಷ್ಟು ಜನರು ಅದನ್ನು ಕೊಂದು, ಮರೆಮಾಚಿ ಅಥವಾ ಮಾರಿಕೊಂಡು ಬದುಕುತ್ತಿರುತ್ತಾರೆ. ‘ಆತ್ಮಸಾಕ್ಷಿಗನುಗುಣವಾಗಿ ಸತ್ಯವನ್ನೇ ಹೇಳುತ್ತೇನೆ’ ಎಂದು ನ್ಯಾಯಾಲಯದಲ್ಲಿ ಪ್ರಮಾಣ ಮಾಡುವ ಹೆಚ್ಚಿನ ಸಾಕ್ಷಿ ಮತ್ತು ಅಪರಾಧಿಗಳು ಅದಕ್ಕೆ ವ್ಯತಿರಿಕ್ತವಾಗಿಯೇ ನಡೆದುಕೊಳ್ಳುವುದು ಸುಳ್ಳಲ್ಲ. ಹೀಗೆ ಆತ್ಮಸಾಕ್ಷಿಗನುಗುಣವಾದ ಸತ್ಯವನ್ನು ಹೇಳಲಾರದ ಮನುಷ್ಯ, ತನ್ನ ಕುರೂಪ ಮುಚ್ಚಿಕೊಳ್ಳಲು ಮತ್ತೆ ಸುಳ್ಳು ಹಾಗೂ ವೇಷಧಾರಿಕೆಯ ನಾಟಕವಾಡುತ್ತಾನೆ. ವ್ಯಕ್ತಿ ಮತ್ತು ಸಮಾಜದ ಪ್ರಗತಿಗೆ ಮನುಷ್ಯನ ಆತ್ಮಸಾಕ್ಷಿಯುಕ್ತ ವರ್ತನೆಯೇ ಆಧಾರವೆಂದು ಅರಿತಿದ್ದ ಶರಣರು, ಅವನ ಈ ಎಡಬಿಡಂಗಿತನವನ್ನು ತಮ್ಮ ಅನೇಕ ವಚನಗಳಲ್ಲಿ ಬಯಲಿಗೆಳೆದು ತೋರಿಸಿದರು. ಅಮುಗೆ ರಾಯಮ್ಮನ ಪ್ರಸ್ತುತ ವಚನ ಆ ಕೆಲಸವನ್ನೇ ಮಾಡುತ್ತದೆ.
ಮನುಷ್ಯ ಸದಾ ಸುಳ್ಳು ಹೇಳುವುದರ ಸಾಮಾನ್ಯೀಕೃತ ಧೋರಣೆಯ ಒಂದು ನೈಜ ಚಿತ್ರಣವನ್ನು ರಾಯಮ್ಮ ಈ ವಚನದ ಆರಂಭದಲ್ಲೇ ಕೊಡುತ್ತಾಳೆ. ಕನ್ನ ಕೊರೆದು ಕಳ್ಳತನ ಮಾಡುವ ಒಬ್ಬ ವ್ಯಕ್ತಿಯನ್ನು ಹಿಡಿದು ತಂದು ವಿಚಾರಣೆಗೆ ಒಳಪಡಿಸಿದರೆ, ಆತ ಖಂಡಿತವಾಗಿ ತಾನು ಕನ್ನಗಳ್ಳ ಎಂದು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ನಾನು ಕಳ್ಳನಲ್ಲ ಎಂದೇ ಸಾಧಿಸಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಅನೇಕ ಸುಳ್ಳು ಮತ್ತು ಸಬೂಬುಗಳನ್ನೂ ಸೃಷ್ಟಿಸುತ್ತಾನೆ. ಕನ್ನ ಕೊರೆಯುವ ಕೆಟ್ಟ ಕೆಲಸ ಮಾಡಿಯೂ, ಅದನ್ನು ಒಪ್ಪಿಕೊಳ್ಳಲಾರದ ಭಂಡರು ಯಾವ ಕಾಲದಲ್ಲೂ ಇರುವವರೆ. ಭ್ರಷ್ಟಾಚಾರದಲ್ಲಿ ತೊಡಗಿ, ಜೇಲು ಸೇರಿ, ಮುಖಭಂಗವಾದರೂ, ನಾನು ಭ್ರಷ್ಟನಲ್ಲ, ಕಳ್ಳನಲ್ಲ, ನಾನು ಸಾಚಾ ಎಂದೇ ಸಾಧಿಸುವವರ ಸಂಖ್ಯೆ ಈಗಲೂ ಸಾಕಷ್ಟಿಲ್ಲವೆ?
ಇನ್ನು ಕೆಲವು ಜನರು, ಬೇರೆಯವರ ಜೊತೆಗೆ ಮಾತಾಡುವಾಗ ತಮ್ಮ ಇಂಥ ಕುರೂಪ ಮುಚ್ಚಿಕೊಳ್ಳಲು ಮುಖವಾಡ ಹಾಕಿಕೊಂಡು, ಬರೀ ಬಣ್ಣದ ಮಾತುಗಳನ್ನೇ ಹೇಳುತ್ತಾರೆ. ಜೊತೆಗೆ, ಅಣ್ಣಾ, ಅಪ್ಪಾ ಎಂದು ಮೃದುವಾದ ಮತ್ತು ಸೋಗಲಾಡಿ ಭಾಷೆ ಬಳಸಿ ಎದುರಿಗೆ ಇರುವವರನ್ನು ಮೋಸಗೊಳಿಸುತ್ತಾರೆ. ಇಂಥ ವೇಷಧಾರಿಗಳನ್ನು ನಾಯಿಕುನ್ನಿಗಳು ಎನ್ನುತ್ತಾಳೆ ಅಮುಗೆ ರಾಯಮ್ಮ. ತಮ್ಮ ಕೆಲಸ ಆಗಬೇಕೆಂದರೆ ಬೇಕಾದ ವರ್ತನೆ, ವೇಷ ಮತ್ತು ಭಾಷೆಯನ್ನು ಬಳಸುವ ಇಂಥವರ ವ್ಯಕ್ತಿತ್ವ ಕೊಳಕಿನಿಂದಲೇ ತುಂಬಿರುತ್ತದೆ. ರಾಯಮ್ಮ ಇಲ್ಲಿ ಬಳಸಿರುವ ಬಣ್ಣ ಎಂಬ ಶಬ್ದಕ್ಕೆ ಸೀರೆ ಎಂಬ, ಹಾಗೂ ಬಚ್ಚಣೆ ಎಂಬ ಶಬ್ದಕ್ಕೆ ಕಪಟಪ್ರೇಮ, ಮುಖವಾಡ ಎಂಬ ಅರ್ಥಗಳೂ ಇವೆ. ಈ ಅರ್ಥಗಳ ಹಿನ್ನೆಲೆಯಲ್ಲಿ ನೋಡಿದರೂ ನಾಯಿಗಳಂಥ ಕೆಲವು ಮನುಷ್ಯರು ಸಮಯಕ್ಕನುಗುಣವಾಗಿ ಬಾಲ ಅಲ್ಲಾಡಿಸಿ ಸ್ವಾರ್ಥ ಸಾಧಿಸುವವರೇ ಎಂಬುದು ಸ್ಪಷ್ಟ ಗೋಚರವಾಗುತ್ತದೆ.
ಅಂತಸಾಕ್ಷಿಯನ್ನು ಮರೆಮಾಚಿ, ಸುಳ್ಳನ್ನೇ ತಮ್ಮ ನಿತ್ಯದ ನಡೆಯನ್ನಾಗಿಸಿಕೊಂಡು ಬದುಕುವ ಕಳ್ಳರಿಗೆ ಸಮಾಜ, ಸರಕಾರ, ಜನ, ಮನ ಯಾವುದರ ಭಯವೂ ಇರಲಾರದು. ಅಂಥವರ ನಡೆಯನ್ನು ದೇವರೂ ಮೆಚ್ಚಾಲಾರ ಎನ್ನುತ್ತಾಳೆ ಅಮುಗೆ ರಾಯಮ್ಮ. ಈ ರೀತಿ ಕಳ್ಳರ, ಸುಳ್ಳರ, ವೇಷಧಾರಿಗಳ ಮತ್ತು ನಯವಂಚಕರ ನೈಜ ವ್ಯಕ್ತಿತ್ವಗಳನ್ನು ಯಥಾವತ್ತಾಗಿ ಚಿತ್ರಿಸುವಾಗ ರಾಯಮ್ಮನ ಮನಸ್ಸಿನಲ್ಲಿರುವುದು, ಇಂಥ ದುಷ್ಟರ ವ್ಯಕ್ತಿತ್ವಗಳಲ್ಲಿ ಬದಲಾವಣೆ ಬರಲಿ ಎಂಬ ಆಶಯವೆ. ಸಮಾಜದ ಮುಖ್ಯ ಘಟಕವಾದ ವ್ಯಕ್ತಿಯಲ್ಲಿಯೇ ಈ ಇಬದಲಾವಣೆ ಬಂದರೆ, ಅದು ಇಡೀ ಸಮುದಾಯದ ಬದಲಾವಣೆ ಮತ್ತು ಪ್ರಗತಿಗೆ ದಾರಿಯಾಗಬಲ್ಲುದು. ಸುಳ್ಳ-ಕಳ್ಳರನ್ನು ಅಮುಗೇಶ್ವರಲಿಂಗ ಮೆಚ್ಚಲಾರ ಎನ್ನುತ್ತ, ರಾಯಮ್ಮ ಇದಕ್ಕೆ ದೇವತ್ವದ ಸಂಬಂಧ ಕಲ್ಪಿಸಿರುವುದರ ಹಿಂದೆ, ಆ ಕಾರಣಕ್ಕಾದರೂ ಅವರು ಬದಲಾಗಲಿ ಎಂಬ ಗಾಢ ಅಪೇಕ್ಷೆಯೇ. ಕಳ್ಳರಿಗಿದು ಅರ್ಥವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.