ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸರ್ವರಿಗೂ ಸರ್ವೇಶನ ಅನುಗ್ರಹ

ಭಾಗ 281

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 21 ನವೆಂಬರ್ 2022, 19:30 IST
Last Updated 21 ನವೆಂಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಶಂಕರ ಅತ್ಯಂತ ಪ್ರಸನ್ನನಾಗಿ ಹೇಳಿದ, ‘ಮನ್ಮಥ, ನಿನಗಿಷ್ಟವಾದ ವರವನ್ನು ಕೇಳು’ ಎಂದ.

ಮನ್ಮಥ ಮಹದಾನಂದದಿಂದ ಹೇಳಿದ, ‘ದೇವದೇವ, ನೀನು ಪ್ರಸನ್ನನಾದುದು ನನಗೆ ಆನಂದವನ್ನು ಉಂಟುಮಾಡಿದೆ. ನಾನು ಮಾಡಿದ ಅಪರಾಧವನ್ನು ಕ್ಷಮಿಸು. ನಿನ್ನ ಭಕ್ತಜನಗಳಿಗೆ ನಿನ್ನ ಪಾದಾರವಿಂದಗಳಲ್ಲಿ ಭಕ್ತಿಯುಂಟಾಗುವಂತೆ ಮಾಡು’ ಎಂದು ಪ್ರಾರ್ಥಿಸಿದ.

ಪರಮೇಶ್ವರ ಸಂತುಷ್ಟನಾಗಿ ಮುಗುಳ್ನಗೆಯಿಂದ 'ನಿನ್ನ ಇಷ್ಟದಂತೆಯೇ ಆಗಲಿ. ಈಗ ನೀನು ವಿಷ್ಣುವಿನ ಸಮೀಪಕ್ಕೆ ಹೊರಡು. ಅನಂತರ ಹೊರಗಡೆ ಎಲ್ಲಿ ಬೇಕಾದರೂ ನಿರ್ಭಯನಾಗಿ ಸಂಚರಿಸು’ ಎಂದ.

ADVERTISEMENT

ದೇವತೆಗಳೆಲ್ಲರೂ ಮನ್ಮಥನಿಗೆ ಶುಭಾಶೀರ್ವಾದಗಳನ್ನು ಮಾಡಿ ಹೇಳಿದರು, ‘ಮನ್ಮಥ, ನೀನೇ ಧನ್ಯನು. ಯಾರು ನಿನ್ನನ್ನು ಸುಟ್ಟು ಭಸ್ಮಮಾಡಿದ್ದರೋ, ಆ ಶಿವನೇ ನಿನ್ನನ್ನು ಬದುಕಿಸಿರುವನು. ಅವನ ಅನುಗ್ರಹಕ್ಕೆ ನೀನು ಪಾತ್ರನಾಗಿರುವೆ. ಲೋಕದಲ್ಲಿ ಮನುಷ್ಯರು ಸುಖದುಃಖಗಳನ್ನು ಅನುಭವಿಸಲು ಅವರು ಮಾಡಿದ ಪುಣ್ಯಪಾಪಗಳೇ ಕಾರಣವೇ ಹೊರತು, ಬೇರೆ ಏನೂ ಅಲ್ಲ. ರಕ್ಷಣೆ, ವಿವಾಹ, ನಿಷೇಕ ಮುಂತಾದವುಗಳೂ ಪುಣ್ಯವಶದಿಂದ ಪ್ರಾಪ್ತವಾಗುವುವು. ಅದನ್ನು ಯಾರು ತಪ್ಪಿಸಲಾರರು’ ಎಂದರು. ದೇವತೆಗಳ ಆಶೀರ್ವಾದ ಪಡೆದ ಮನ್ಮಥ ಪತ್ನಿ ರತಿಯೊಂದಿಗೆ ನಿರ್ಗಮಿಸಿದ.

ಪರಮೇಶ್ವರ ಸಂತೋಷದಿಂದ ಪಾರ್ವತಿಯನ್ನು ತನ್ನ ಎಡಭಾಗದಲ್ಲಿ ಕುಳ್ಳಿರಿಸಿಕೊಂಡು ಮೃಷ್ಟಾನ್ನ ಭೋಜನ ಮಾಡಿದ. ಜನರೆಲ್ಲರೂ ಆನಂದದಿಂದ ಉತ್ಸವವನ್ನು ಆಚರಿಸಿದರು. ಮುನಿಗಳೆಲ್ಲರೂ ವೇದಘೋಷವನ್ನು ಮಾಡಿದರು. ಚತುರ್ವಿಧವಾದ ನೃತ್ಯ, ಗೀತ, ವಾದ್ಯಾದಿಗಳು ಸಹ ಮೊಳಗಿದವು.

ದೇವತೆಗಳೆಲ್ಲರೂ ಶಿವನಿಗೆ ವಂದಿಸಿದರು. ನಂತರ ಪರಶಿವನನ್ನು ವಿಷ್ಣು, ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು, ಸಿದ್ಧರು, ಋಷಿಗಳು, ನಾಗರುಗಳು ಸ್ತುತಿಸಿದರು. ಈ ಸಂದರ್ಭದಲ್ಲಿ ದೇವತೆಗಳು ಹೇಳಿದರು, ‘ಜಗದಾಧಾರಭೂತನಾದ ಪರಶಿವನೇ, ನಿನಗೆ ಜಯವಾಗಲಿ. ನೀನು ಮಹಾದೇವನು, ವಿಶ್ವಂಭರನು, ಕಾಳೀಪತಿಯಾದ ನಿನಗೆ ಜಯವಾಗಲಿ. ಆನಂದದಾಯಕನೇ, ತ್ರ್ಯಂಬಕ, ಸರ್ವೇಶ್ವರ, ಸರ್ವವ್ಯಾಪಕನೂ ಮಾಯಾಪತಿಯೂ ಆಗಿರುವ ನಿನಗೆ ಜಯವಾಗಲಿ. ನೀನು ನಿರ್ಗುಣ, ನಿರ್ವಿಕಾರ, ನಿಷ್ಕಾಮನಾದವನು. ನೀನು ನಿರೂಪನಾದರೂ ಜಗತ್ತಿನ ರಕ್ಷಣೆಗಾಗಿ ರೂಪವನ್ನು ಧರಿಸಿರುವ ಅಖಿಲಾಧಾರನಾದ ಜಗದೀಶ. ಕರುಣಾಕರನಾದ ನೀನು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಆನಂದರೂಪ. ನೀನು ಮಾಯಾಗುಣಾಕೃತಿ. ದೀನಬಂಧುವೂ ದಯಾನಿಧಿಯೂ ಆದ ನಿನಗೆ ಜಯವಾಗಲಿ. ನೀನು ಅವಿಕಾರ. ವಾಙ್ಮನಸ್ಸುಗಳಿಗೆ ಅಗೋಚರನಾಗಿರುವ ಮಾಯಕಾರ. ನಿರ್ಗುಣ ಸಂಪನ್ನನಾದ ನಿನಗೆ ವಿಕಾರಭಾವಗಳು ಮೂಡುವುದಿಲ್ಲ. ಸದಾ ಸದ್ವಿಚಾರಗಳನ್ನು ಭಕ್ತರಿಗೆ ನೀಡಿ ಅನುಗ್ರಹಿಸುವ ಜಗದ್ರಕ್ಷಕನಾದ ನಿನಗೆ ನಮಸ್ಕಾರಗಳು’ ಎಂದು ಶಿವನನ್ನು ವಿಧವಿಧವಾಗಿ ಸ್ತುತಿಸಿದರು.

ದೇವತೆಗಳೆಲ್ಲರೂ ಗಿರಿಜಾಪತಿಯಾದ ಶಂಕರನನ್ನು ಅತ್ಯಂತ ಭಕ್ತಿಯಿಂದ ಸ್ತೋತ್ರಮಾಡಿದ ನಂತರ, ಲೀಲಾಮಾನುಷವಿಗ್ರಹನಾದ ಶಿವನು ದೇವತೆಗಳಿಗೆಲ್ಲರಿಗೂ ಬೇಕಾದ ವರಗಳನ್ನು ಕರುಣಿಸಿದ. ವಿಷ್ಣು, ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು, ಪರಮೇಶ್ವರನ ಅನುಜ್ಞೆಯನ್ನು ಪಡೆದು ಅತ್ಯಾನಂದಭರಿತರಾಗಿ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯ ಸಂಹಿತೆಯಾದರುದ್ರಸಂಹಿತೆಯಲ್ಲಿ ಬರುವ ಮೂರನೇ ಖಂಡವಾದ ಪಾರ್ವತೀಖಂಡದ ಐವತ್ತೊಂದನೆಯ ಅಧ್ಯಾಯ ಮುಗಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.