ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮನ್ಮಥನನ್ನು ಬದುಕಿಸಿದ ಶಿವ

ಭಾಗ 280

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 20 ನವೆಂಬರ್ 2022, 19:30 IST
Last Updated 20 ನವೆಂಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ರತಿದೇವಿ ತನ್ನ ಅಭೀಷ್ಟ ನೆರವೇರಲು ಇದೇ ಸರಿಯಾದ ಸಮಯವೆಂದು ತಿಳಿಯುತ್ತಾಳೆ. ಇದಕ್ಕಾಗಿ ಶಿವನ ಬಳಿ ಬಂದ ರತಿ ಕೈಮುಗಿದು ಕೇಳುತ್ತಾಳೆ: ‘ಸ್ವಾಮಿಯೇ, ನೀನೇನೋ ಪಾರ್ವತಿಯನ್ನು ಮದುವೆಯಾದೆ. ಆದರೆ ನಿಮ್ಮ ಮದುವೆಗಾಗಿ ಪ್ರಯತ್ನಿಸಿದ ನನ್ನ ಪ್ರಾಣನಾಥನಾದ ಮನ್ಮಥನನ್ನು ನಿಷ್ಕಾರಣವಾಗಿ ಸುಟ್ಟುಹಾಕಿದೆ.

ಈಗಲಾದರೂ ನಿಮಗಾಗಿ ಪ್ರಾಣತೆತ್ತ ನನ್ನ ಪತಿಯನ್ನು ಬದುಕಿಸಿ, ನನ್ನೊಡನೆ ಬಾಳುವಂತೆ ಅನುಗ್ರಹಿಸು. ನನಗೆ ಪತಿಯ ದರ್ಶನವನ್ನು ಅನುಗ್ರಹಿಸಿ, ಹಿಂದೆ ನೀನಾಡಿದ ಮಾತನ್ನು ಉಳಿಸಿಕೋ. ಪರಪ್ರಭುವಾದ ನಿನ್ನನ್ನು ಬಿಟ್ಟರೆ ಚರಾಚರಾತ್ಮಕವಾದ ಮೂರು ಲೋಕದಲ್ಲಿ ನನ್ನ ದುಃಖವನ್ನು ನಾಶ ಮಾಡುವವರು ಯಾರು ಇಲ್ಲ. ಆದುದರಿಂದ ದೀನನಾಥನಾದ ನಿನ್ನಲ್ಲಿ ನಾನು ಶರಣುಹೊಂದಿರುವೆ. ದಯೆ ಇಟ್ಟು ನನ್ನ ದುಃಖವನ್ನು ನಿವಾರಿಸು. ಸರ್ವರಿಗೂ ಆನಂದದಾಯಕವಾಗಿರುವ ನಿನ್ನ ವಿವಾಹಸಮಯದಲ್ಲಿ ಎಲ್ಲೆಲ್ಲಿಯೂ ಪೂರ್ಣಾನಂದ ತುಂಬಿತುಳುಕಾಡುತ್ತಿದೆ. ಇಂಥ ಸುಸಮಯದಲ್ಲಿ ನನ್ನ ಪತಿಯನ್ನು ಬದುಕಿಸಿ. ನಾನೂ ಸಂತೋಷಪಡುವಂತೆ ಮಾಡು.

‘ನನ್ನ ಪತಿ ಬದುಕಿ ಬಂದರೆ ನನಗೆ ಬಹಳ ಆನಂದವಾಗುವುದು. ನೀನೂ ಪಾರ್ವತಿಯೊಡನೆ ಸ್ವಚ್ಛಂದವಾಗಿ ವಿಹರಿಸಬಹುದು. ನನ್ನ ಅಭಿಲಾಷೆಯು ಪೂರ್ಣವಾಗುವುದು. ನಿನ್ನ ವಿಹಾರವೂ ತಡೆಯಿಲ್ಲದೆ ನೆರವೇರುವುದು. ನೀನು ಲೋಕೇಶ್ವರ, ಏನನ್ನು ಬೇಕಾದರೂ ಮಾಡಲು ಸಮರ್ಥನಾಗಿರುವೆ. ದಯಮಾಡಿ ನನ್ನ ಪತಿಯನ್ನು ಬದುಕಿಸಿಕೊಡು’ ಎಂದು ಪ್ರಾರ್ಥಿಸಿದಳು.

ADVERTISEMENT

ಹೀಗೆ ಹೇಳಿದ ರತಿದೇವಿ ತನ್ನ ಸೆರಗಿನಲ್ಲಿ ಗಂಟುಹಾಕಿಕೊಂಡಿದ್ದ ಪತಿಯ ಬೂದಿಯನ್ನು ತೆಗೆದುಕೊಂಡು, ‘ನಾಥನೇ, ನಿನಗೆಂಥ ದುರ್ಗತಿ ಬಂತು. ಶಿವ-ಪಾರ್ವತಿಯರ ಮದುವೆ ಮಾಡಲು ಹೋಗಿ ಭಸ್ಮವಾದೆಯಲ್ಲ. ನಿನಗೆ ಬಂದಂಥ ಸಾವು ಯಾರಿಗೂ ಬರಬಾರದು’ ಎಂದು ಈಶ್ವರನ ಎದುರಿಗೆ ಗಟ್ಟಿಯಾಗಿ ಅಳಲಾರಂಭಿಸಿದಳು. ರತಿಯ ದುಃಖವನ್ನು ನೋಡಿ ಅಲ್ಲಿದ್ದ ಎಲ್ಲಾ ಸ್ತ್ರೀಯರ ಮನಸ್ಸಿಗೂ ನೋವಾಗಿ, ಅವರು ಸಹ ಅಳಲು ಪ್ರಾರಂಭಿಸಿದರು.

ಆಗ ಪಾರ್ವತಿ ಪರಮೇಶ್ವರನಿಗೆ ಹೇಳಿದಳು, ‘ಸ್ವಾಮಿಯೇ, ನೀನು ಭಕ್ತವತ್ಸಲನೆಂದು ಹೆಸರಾದವನು. ದಯಾನಿಧಿ ಎಂದು ಪ್ರಸಿದ್ಧಗೊಂಡಿರುವೆ. ಈಗ ಮನ್ಮಥನನ್ನು ಬದುಕಿಸಿ ದುಃಖಿತಳಾದ ರತಿಯನ್ನು ಸಂತೋಷಗೊಳಿಸು’ ಎಂದಳು. ಇದಕ್ಕೆ ಲಕ್ಷ್ಮೀ, ಸರಸ್ವತಿ ಸಹಿತ ಎಲ್ಲಾ ಸ್ತ್ರೀಯರು ಒಕ್ಕೊರಳಿನಿಂದ ಅನುಮೋದಿಸಿ ಮನ್ಮಥನನ್ನು ಬದುಕಿಸುವಂತೆ ಶಿವನಲ್ಲಿ ಮನವಿ ಮಾಡಿದರು.

ದೇವಿಯರ ಮಾತನ್ನು ಕೇಳಿ ಕರುಣಾಸಾಗರನಾದ ಪರಶಿವ ಪ್ರಸನ್ನನಾದ. ತಕ್ಷಣವೇ ಕೃಪಾಕಟಾಕ್ಷ ಬೀರಿದ. ಅವನ ಅಮೃತಕಟಾಕ್ಷಗಳಿಂದ ಮನ್ಮಥ ಬೂದಿಯಿಂದ ಈಚೆಗೆ ಎದ್ದು ಬಂದ. ಅವನ ಆಕಾರವೂ ಅಲಂಕಾರವೂ ಹಿಂದಿನಂತೆಯೇ ಇತ್ತು. ಹಿಂದಿನಂತೆಯೇ ಸುಂದರಮೂರ್ತಿಯಾಗಿದ್ದ. ಮನ್ಮಥನ ಆ ಸುಂದರರೂಪ ಹಿಂದಿನಂತೆಯೇ ಇದ್ದವು.

ಧನುರ್ಬಾಣಧಾರಿಯಾಗಿಯೇ ಮತ್ತೆ ಬದುಕಿ ಬಂದ ತನ್ನ ಪತಿಯಾದ ಮನ್ಮಥನನ್ನು ನೋಡಿ ರತಿ ಆನಂದದಿಂದ ಕುಣಿದಾಡಿದಳು. ಅನಂತರ ಮಹೇಶ್ವರನಿಗೆ ನಮಸ್ಕರಿಸಿದ ರತಿದೇವಿ ಅಂಜಲಿಬದ್ಧಳಾಗಿ ಶಿವನ ಸ್ತೋತ್ರಮಾಡಿದಳು. ಪತಿಯನ್ನು ಬದುಕಿಸಿದ್ದಕ್ಕಾಗಿ ಕೃತಾರ್ಥಳಾದೆ ಎಂದು ಮತ್ತೆ ಮತ್ತೆ ಶಿವನಿಗೆ ನಮಸ್ಕಾರ ಮಾಡಿದಳು.

ರತಿಯೊಂದಿಗೆ ಮನ್ಮಥ ಸಹ ಶಿವನನ್ನು ಕೃತಜ್ಞತೆಯಿಂದ ಸ್ತುತಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.