ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಗೆ ಪಾತಿವ್ರತ್ಯ ಬೋಧನೆ

ಭಾಗ 285

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 25 ನವೆಂಬರ್ 2022, 19:30 IST
Last Updated 25 ನವೆಂಬರ್ 2022, 19:30 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಹಿಮವಂತ ಪಾರ್ವತಿಯನ್ನು ಈಶ್ವರನೊಡನೆ ಕಳುಹಿಸಿಕೊಡುವಾಗ ಬಹಳ ದುಃಖಗೊಂಡ. ಮೇನಾದೇವಿ ಮಗಳು ಪಾರ್ವತಿಗೆ ಅನೇಕ ವಿಧವಾದ ಆಭರಣಗಳನ್ನು ತೊಡಿಸಿ ಅಲಂಕರಿಸಿದಳು. ಅಮೂಲ್ಯವಾದ ಪೀತಾಂಬರಗಳನ್ನು ಉಡಿಸಿದಳು. ವಯೋವೃದ್ಧೆಯೊಬ್ಬಳಿಂದ ಪಾರ್ವತಿಗೆ ಪಾತಿವ್ರತ್ಯಧರ್ಮದ ಉಪದೇಶ ಏರ್ಪಡಿಸಿದಳು. ‘ಎಲೈ ಗಿರಿಜೆ, ನಾನು ಹೇಳುವ ಮಾತನ್ನು ಆದರದಿಂದ ಕೇಳು. ಇದು ಧರ್ಮವರ್ಧನವಾದುದು. ಐಹಿಕಾಮುಷ್ಮಿಕ ಫಲಗಳನ್ನು ಒದಗಿಸಿ, ಸುಖವನ್ನುಂಟು ಮಾಡುವಂಥದು. ಲೋಕದಲ್ಲಿ ಪತಿವ್ರತಾಸ್ತ್ರೀಯೇ ಎಲ್ಲರಿಗಿಂತಲೂ ಪೂಜ್ಯಳಾದವಳು. ಪತಿವ್ರತೆಯ ದರ್ಶನ ಮಾತ್ರದಿಂದಲೇ ಪಾಪಗಳೆಲ್ಲವೂ ನಾಶವಾಗುವುವು. ಯಾವ ಸ್ತ್ರೀಯು ಪತಿಯಲ್ಲಿ ಪ್ರೇಮವಿಟ್ಟು ಅವನೇ ಪರಶಿವನೆಂದು ಸೇವಿಸುವಳೋ, ಅವಳು ಪತಿಯೊಡನೆ ಈ ಲೋಕದಲ್ಲಿ ಸಮಸ್ತ ಸುಖವನ್ನು ಅನುಭವಿಸಿ ಕೊನೆಗೆ ಪರಲೋಕದಲ್ಲಿಯೂ ಪತಿಯೊಡನೆ ಸುಖಿಸುವಳು.

‘ಪತಿವ್ರತೆ ಎಂದರೆ ಸಾವಿತ್ರಿ. ಸಾವಿತ್ರಿಯಂತೆ ಪಾತಿವ್ರತ್ಯಕ್ಕೆ ಹೆಸರಾದವರು ಲೋಪಮುದ್ರಾ, ಅರುಂಧತೀ, ಶಾಂಡಿಲ್ಯಾ, ಶತರೂಪಾ, ಅನಸೂಯಾ, ಲಕ್ಷ್ಮೀ, ಸರಸ್ವತಿ, ಸ್ವಧಾ, ಸಂಜ್ಞಾ, ಸುಮತಿ, ಶ್ರದ್ಧಾ, ಮೇನಾ, ಸ್ವಾಹಾ ಮತ್ತಿತರ ಅನೇಕ ಸಾಧ್ವಿಯರು ಇದ್ದಾರೆ. ಪತಿವ್ರತಾಸ್ತ್ರೀಯರು ತಮ್ಮ ಪಾತಿವ್ರತ್ಯ ಧರ್ಮದಿಂದ ಲೋಕಪೂಜ್ಯರಾಗಿರುವರು. ಬ್ರಹ್ಮ, ವಿಷ್ಣು, ಶಿವ ಇವರುಗಳಿಂದಲೂ ಋಷಿಶ್ರೇಷ್ಠರುಗಳಿಂದಲೂ ಪತಿವ್ರತೆಯರು ಪೂಜಿಸಲ್ಪಡುತ್ತಿರುವರು.

ಆದುದರಿಂದ ನೀನು ಯಾವಾಗಲೂ ನಿನ್ನ ಪತಿ ಶಂಕರನ ಸೇವೆಯನ್ನು ನಿಷ್ಠೆಯಿಂದ ಮಾಡು. ಪತಿವ್ರತೆಯಾದವಳು ಆಚರಿಸಬೇಕಾದ ಕೆಲಸವೇನೆಂದರೆ ಪತಿ ಊಟಮಾಡಿದ ಮೇಲೆ ಊಟಮಾಡಬೇಕು. ಪತಿ ನಿಂತಿದ್ದರೆ ತಾನೂ ನಿಂತಿರಬೇಕು. ಅವನು ಮಲಗಿದರೆ ತಾನು ಮಲಗಬೇಕು. ಅವನು ಏಳುವುದಕ್ಕಿಂತ ಮುಂಚೆ ತಾನು ಏಳಬೇಕು. ಪತಿಯ ವಿಷಯದಲ್ಲಿ ಯಾವ ವಿಧವಾದ ವಂಚನೆಯನ್ನೂ ಮಾಡದೆ ಯಾವಾಗಲೂ ಅವನಿಗೆ ಹಿತವಾಗಿಯೇ ನಡೆದುಕೊಳ್ಳಬೇಕು.

ADVERTISEMENT

‘ತಾನು ಅಲಂಕರಿಸಿಕೊಂಡೇ ಪತಿಯ ಎದುರಿಗೆ ಓಡಾಡಬೇಕು. ಆದರೆ ಪತಿಯು ಪರಸ್ಥಳಕ್ಕೆ ಹೋಗಿರುವಾಗ ಎಂದಿಗೂ ಅಲಂಕರಿಸಿಕೊಳ್ಳಬಾರದು. ಯಾವಾಗಲೂ ಪತಿವ್ರತೆಯು ಪತಿಯ ಹೆಸರನ್ನು ಹಿಡಿದು ಕೂಗಬಾರದು. ಪತಿಯು ಒಂದು ವೇಳೆ ಕೋಪದಿಂದ ಎಳೆದರೂ ಕೂಗಿಕೊಳ್ಳಬಾರದು. ಯಾವಾಗಲೂ ಶಾಂತಭಾವದಿಂದ ಪತಿಯ ಇಷ್ಟಗಳನ್ನು ಈಡೇರಿಸಬೇಕು.

‘ಪತಿಯು ಕರೆದರೆ ಎಂತಹ ಕೆಲಸವಿದ್ದರೂ ಬಿಟ್ಟು ಅವನ ಬಳಿಗೆ ಧಾವಿಸಬೇಕು. ಪತಿಗೆ ನಮಸ್ಕರಿಸಿ, ‘ಓ ಸ್ವಾಮಿಯೇ, ನನ್ನನ್ನೇಕೆ ಕೂಗಿದಿರಿ. ಅದನ್ನು ತಿಳಿಸಿ ನನ್ನನ್ನು ಅನುಗ್ರಹಿಸಬೇಕು’ ಎಂದು ನಮ್ರಳಾಗಿ ಕೇಳಿಕೊಳ್ಳಬೇಕು. ಅವನು ಯಾವ ಕೆಲಸವನ್ನು ಹೇಳಿದರೂ ನಿರ್ಮಲಚಿತ್ತಳಾಗಿ ಸಂತೋಷದಿಂದ ಮಾಡಬೇಕು.

‘ಹೊರಬಾಗಿಲಲ್ಲಿ ಹೆಚ್ಚು ಹೊತ್ತು ನಿಂತಿರಬಾರದು. ಮತ್ತೊಬ್ಬರ ಮನೆಗೆ ಹೋಗಬಾರದು. ದೇವರ ಪೂಜೆಗೆ ಯೋಗ್ಯವಾದ ಉಪಕರಣಗಳನ್ನು ಪತಿಯಿಂದ ಹೇಳಿಸಿಕೊಳ್ಳದೇ ಸಿದ್ಧಪಡಿಸಬೇಕು. ಪತಿಗೆ ಯಾವ ಯಾವ ಕಾಲದಲ್ಲಿ ಏನೇನು ಬೇಕಾಗಿರುವುದೋ ಅದನ್ನು ನಡೆಸಿಕೊಡಬೇಕು. ಪತಿಯ ಅಪ್ಪಣೆಯನ್ನು ಪಡೆಯದೆ ತೀರ್ಥಯಾತ್ರೆಗೆ ಹೋಗಬಾರದು. ಜನಗಳ ಗುಂಪಿನಿಂದ ದೂರ ಇರಬೇಕು. ಯಾವುದಾದರೂ ಉತ್ಸವ ಸಮಾರಂಭವನ್ನು ನೋಡಲು ಒಬ್ಬಳೇ ಯಾವಾಗಲೂ ಹೋಗಬಾರದು. ತೀರ್ಥೋದಕವನ್ನು ಕುಡಿಯಬೇಕೆಂಬ ಇಷ್ಟವಿದ್ದರೆ ಪತಿಯ ಪಾದೋದಕವನ್ನು ಕುಡಿಯಬೇಕು. ಏಕೆಂದರೆ ಪತಿಯ ಪಾದದಲ್ಲಿ ಎಲ್ಲಾ ತೀರ್ಥಗಳೂ ಕ್ಷೇತ್ರಗಳೂ ನೆಲಸಿರುವವು.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.