ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಮಾನಸಪುತ್ರಿ ಸಂಧ್ಯೆ ಜನನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 17 ಮೇ 2022, 19:45 IST
Last Updated 17 ಮೇ 2022, 19:45 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ   

ಬ್ರಹ್ಮ ಹೇಳಿದ ರುದ್ರ-ದಾಕ್ಷಾಯಿಣಿಯರ ಸಂಕ್ಷಿಪ್ತ ಕಥೆಯಿಂದ ತೃಪ್ತನಾಗದ ನಾರದ ವಿಸ್ತಾರವಾಗಿ ಹೇಳುವಂತೆ ಕೋರುತ್ತಾನೆ.

‘ಮಹಾಮಹಿಮನಾದ ಬ್ರಹ್ಮನೇ! ಶುಭಕರವಾದ ಶಿವಕಥೆಯನ್ನು ನಿನ್ನ ಮುಖಕಮಲದಿಂದ ಕೇಳಿದಷ್ಟೂ ನನಗೆ ತೃಪ್ತಿ ಆಗುತ್ತಿಲ್ಲ. ಆದುದ ರಿಂದ ಸತೀದೇವಿಯ ಚರಿತ್ರೆಯಿಂದೊಡಗೂಡಿರುವ ಶಿವ–ಪಾರ್ವತಿಯರ ಕಥೆಯನ್ನು ಇನ್ನೂ ವಿಸ್ತಾರವಾಗಿ ಹೇಳು. ಸತೀದೇವಿಯು ದಕ್ಷಪತ್ನಿಯಲ್ಲಿ ಹೇಗೆ ಜನಿಸಿದಳು? ಸತೀದೇವಿಯನ್ನು ಶಿವ ಮದುವೆ ಮಾಡಿಕೊಳ್ಳಲು ಹೇಗೆ ಮನಸ್ಸು ಮಾಡಿದ? ದಕ್ಷನ ಮೇಲಿನ ಕೋಪದಿಂದ ಸತೀದೇವಿಯು ಅಗ್ನಿಗಾಹುತಿಯಾಗಿ ಪರಬ್ರಹ್ಮನಾದ ಶಿವನಲ್ಲಿ ಲಯವನ್ನು ಹೊಂದಿದ ನಂತರ ಮತ್ತೆ ಹೇಗೆ ಹಿಮವಂತನ ಪುತ್ರಿಯಾಗಿ ಜನಿಸಿದಳು? ವಿರಾಗಿ ಶಿವನನ್ನು ವರಿಸಲು ಪಾರ್ವತಿಯು ಹೇಗೆ ಕಠಿಣವಾಗಿ ತಪಸ್ಸನ್ನು ಆಚರಿಸಿದಳು? ಅವಳ ಮದುವೆ ಶಿವನೊಂದಿಗೆ ಹೇಗೆ ಆಯಿತು? ಮನ್ಮಥವೈರಿಯಾದ ಶಿವನು ಪಾರ್ವತಿಯ ಅರ್ಧಾಂಗಿಯಾದ ಬಗೆ ಹೇಗೆ? ಹೇಳು’ ಎಂದು ಪ್ರಾರ್ಥಿಸುತ್ತಾನೆ.

ಆಗ ಬ್ರಹ್ಮ ‘ಎಲೈ ನಾರದಮುನಿ! ಶಿವಪಾರ್ವತಿಯರ ಮಹಾಕಥೆ ಯನ್ನು ಹೇಳುವೆನು ಕೇಳು. ಈ ಕಥೆಯು ಶುಭವಾದುದು, ದಿವ್ಯವಾ ದುದು, ರಹಸ್ಯವಾದುದು. ಬಹಳ ಹಿಂದೆ ವಿಷ್ಣುವಿನ ಕೋರಿಕೆ ಮೇರೆಗೆ ಶಿವ ತನ್ನ ಕಥೆಯನ್ನು ಹೇಳಿದ್ದ. ಅದನ್ನು ವಿಷ್ಣು ನನಗೆ ಹೇಳಿದ್ದ. ಅದನ್ನ ಈಗ ನಿನಗೆ ಹೇಳುವೆನು. ಅದು ತುಂಬಾ ಪುರಾತನವಾದ ಮತ್ತು ಸಕಲ ಇಷ್ಟಾರ್ಥಗಳನ್ನುಂಟು ಮಾಡುವ ಶಿವಮಹಾಪುರಾಣ’ ಎಂದು ಸತಿದೇವಿಯ ಕಥೆಯನ್ನು ವಿಸ್ತಾರವಾಗಿ ಹೇಳತೊಡಗುತ್ತಾನೆ.

ADVERTISEMENT

ಹಿಂದೆ ಎಂದರೆ ಸೃಷ್ಟಿಗೆ ಪೂರ್ವದಲ್ಲಿ ಶಿವನು ನಿರ್ಗುಣವೂ ನಿರಾಕಾರವೂ ಆದ ಪರಬ್ರಹ್ಮಸ್ವರೂಪದಿಂದ ಎಲ್ಲೆಲ್ಲಿಯೂ ವ್ಯಾಪಿಸಿದ್ದ. ಆ ಬ್ರಹ್ಮ ಸ್ವರೂಪಕ್ಕೆ ಗುಣಸಂಬಂಧವಾಗಲಿ, ಆಕಾರಾದಿಗಳಾಗಲಿ, ಶಕ್ತಿಗಳಾಗಲಿ ಯಾವುದೂ ಇರಲಿಲ್ಲ. ಪ್ರಕೃತಿ ಪುರುಷಾದಿ ಭೇದಭಾವಗಳೂ ಇರಲಿಲ್ಲ. ಆತ ಪರಬ್ರಹ್ಮ ಎಂಬ ಹೆಸರಿನಿಂದ ಸಚ್ಚಿದಾನಂದ ಸ್ವರೂಪನಾಗಿ ಪ್ರಕಾಶಿಸುತ್ತಿದ್ದ. ಇಂಥ ಶಿವನು ಸೃಷ್ಟಿ ಕಾಲದಲ್ಲಿ ಯಾವ ವಿಕಾರವಿಲ್ಲದವನಾದರೂ ತನ್ನ ಮಾಯೆಯಿಂದ ಸಗುಣನೂ ದಿವ್ಯವಾದ ಆಕಾರವುಳ್ಳವನೂ ಸರ್ವೋತ್ಕೃಷ್ಟನೂ ಆದಂತಹ ಈಶ್ವರನಾದನು.

ಆ ಈಶ್ವರನ ಶರೀರದ ಎಡಭಾಗದಿಂದ ವಿಷ್ಣು ಜನಿಸಿದರೆ, ಬಲಭಾಗದಿಂದ ಬ್ರಹ್ಮನಾದ ನಾನು ಜನಿಸಿದೆ. ನಾನು ಜಗತ್ತಿನ ಸೃಷ್ಟಿಕರ್ತನಾದರೆ, ವಿಷ್ಣು ಪಾಲನಾಕರ್ತನಾದ. ರುದ್ರ ಪ್ರಳಯಕರ್ತನಾದ. ಹೀಗೆ ಶಿವನೇ ತನ್ನ ಸ್ವರೂಪವನ್ನು ಬ್ರಹ್ಮ-ವಿಷ್ಣು-ರುದ್ರರೆಂಬ ಮೂರು ರೂಪಗಳಾಗಿ ಪರಿವರ್ತಿಸಿದ. ಲೋಕಪಿತಾಮಹನೆನಿಸಿದ ನಾನು ಸದಾಶಿವನನ್ನು ಆರಾಧಿಸಿ, ಅವನ ಅನುಗ್ರಹದಿಂದ ದೇವತೆಗಳು, ರಾಕ್ಷಸರು, ಮನುಷ್ಯರು ಮೊದಲಾದ ಪ್ರಜೆಗಳನ್ನು ಸೃಜಿಸಿದೆ. ದಕ್ಷ ಮತ್ತಿತರ ಪ್ರಜಾಪತಿಗಳನ್ನು, ದೇವತೆಗಳನ್ನೂ ಸೃಷ್ಟಿಸಿ ಅದರಿಂದ ನಾನೇ ಸರ್ವಶ್ರೇಷ್ಠನೆಂದು ಗರ್ವಿಷ್ಠನಾದೆ.

‘ಮರೀಚಿ, ಅತ್ರಿ, ಪುಲಹ, ಪುಲಸ್ತ್ಯ, ಅಂಗಿರಸ್ಸು, ಕ್ರತುಮುನಿ, ವಸಿಷ್ಠ, ನಾರದ, ದಕ್ಷ, ಭೃಗು ಎಂಬ ಒಂಬತ್ತು ಪ್ರಜಾಪತಿಗಳನ್ನು ಸೃಷ್ಟಿಸಿದೆ. ಇವರೆಲ್ಲ ನನ್ನ ಮಾನಸಪುತ್ರರು. ಆ ಸಮಯದಲ್ಲಿಯೇ ನನ್ನ ಮನಸ್ಸಿನಿಂದ ಸುಂದರವಾದ ರೂಪವುಳ್ಳ ಓರ್ವ ಉತ್ತಮ ಸ್ತ್ರೀ ಜನಿಸಿದಳು. ಮುಂದೆ ಆ ಸ್ತ್ರೀ ಸಂಧ್ಯೆ ಎಂದು ಪ್ರಸಿದ್ಧಳಾದಳು. ಅವಳಿಗೆ ‘ಸಾಯಂ ಸಂಧ್ಯಾ’ ಮತ್ತು ‘ಜಯಂತಿಕಾ’ ಎಂಬ ಹೆಸರುಗಳೂ ಇವೆ. ಆ ರಮಣಿಯು ಮುನಿಗಳ ಮನಸ್ಸನ್ನೂ ಅಪಹರಿಸುವಂತಹ ಸುಂದರಿಯಾಗಿದ್ದಳು. ಅಂತಹ ಸುಂದರಿ ಮೂರು ಲೋಕಗಳಲ್ಲಿಯೂ ಇರಲಿಲ್ಲ. ಹಿಂದೆಯೂ ಹುಟ್ಟಿರಲಿಲ್ಲ, ಮುಂದೆಂದೂ ಜನಿಸಲಾರಳು ಎಂಬಂಥ ಸುಂದರಿಯಾದ ಆ ಸಂಧ್ಯೆಯನ್ನು ನೋಡಿ ನಾನೂ ಮತ್ತು ನನ್ನ ಪುತ್ರರಾದ ದಕ್ಷ, ಮರೀಚಿ ಮೊದಲಾದವರು ಕಾಮಪರವಶರಾದೆವು. ಆಕೆಯನ್ನು ವರಿಸಬೇಕೆಂದು ಮನಸ್ಸಿನಲ್ಲಿ ಆಸೆಪಡತೊಡಗಿದೆವು.

ಹೀಗೆ ನಾನು ಮತ್ತು ನನ್ನ ಪುತ್ರರು ಸುಂದರಿಯಾದ ಸಂಧ್ಯೆಯನ್ನು ಮದುವೆಯಾಗಲು ಯೋಚಿಸುತ್ತಿರುವಾಗ ನನ್ನ ಮನಸ್ಸಿನಿಂದ ತುಂಬಾ ಸುಂದರನೂ ಆಶ್ಚರ್ಯಕರವಾದಂತಹ ಪುರುಷನೋರ್ವ ಜನಿಸಿದ. ಆ ಪುರುಷನು ಸುವರ್ಣದಂತೆ ಬೆಳಗುವ ಶರೀರಕಾಂತಿಯಿಂದ ನೋಡುಗರ ಮನಸ್ಸು ಸೆಳೆಯುವಂತೆ ಇದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.