ADVERTISEMENT

ವೇದವ್ಯಾಸರ ಶಿವಪುರಾಣಸಾರ: ಧರ್ಮಪುರುಷನಿಗೆ ಶಾಪ ಕೊಟ್ಟ ಪದ್ಮಾ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 22:15 IST
Last Updated 16 ಅಕ್ಟೋಬರ್ 2022, 22:15 IST
   

ತುಂಬಾ ಮುದುಕನಾದ ಪಿಪ್ಪಲಾದ ಮುನಿಯು ಅನರಣ್ಯ ರಾಜನ ಪುತ್ರಿ ಪದ್ಮೆಯೊಡನೆ ತನ್ನ ಆಶ್ರಮಕ್ಕೆ ತೆರಳಿದ. ಅಲ್ಲಿ ಅವನು ಸಂತೋಷದಿಂದ ಹೆಂಡತಿಯೊಡನೆ ವಾಸವಾಗಿದ್ದ. ಪದ್ಮಾದೇವಿಯು ಮನೋವಾಕ್ಕಾಯಗಳೆಂಬ ತ್ರಿಕರಣಗಳಿಂದ ಪತಿಯಾದ ಪಿಪ್ಪಲಾದನನ್ನು, ಲಕ್ಷ್ಮಿಯು ನಾರಾಯಣನನ್ನು ಸೇವಿಸುವಂತೆ ಭಕ್ತಿಯಿಂದ ಸೇವೆ ಮಾಡುತ್ತಿದ್ದಳು.

ಹೀಗಿರುವಾಗ ಒಂದು ದಿನ ಪದ್ಮಾದೇವಿ ಗಂಗಾನದಿಗೆ ಸ್ನಾನ ಮಾಡಲು ಹೋಗಿದ್ದಳು. ಆಗ ಧರ್ಮಪುರುಷ ತನ್ನ ಮಾಯೆಯಿಂದ ರಾಜವೇಷವನ್ನು ಧರಿಸಿ ದಾರಿಯಲ್ಲಿ ಅವಳಿಗೆ ಕಾಣಿಸಿಕೊಂಡ. ಸುಂದರವಾದ ರತ್ನರಥವನ್ನೇರಿ ಬಂದಿದ್ದ ಧರ್ಮಪುರುಷ, ಆಕರ್ಷಕ ಆಭರಣಗಳನ್ನು ತೊಟ್ಟು ಮನ್ಮಥನಂತೆ ಕಂಗೊಳಿಸುತ್ತಿದ್ದ. ಸುಂದರಿಯಾದ ಪದ್ಮಾದೇವಿಯನ್ನು ನೋಡಿ, ‘ಎಲೈ ಸುಂದರಿ, ನೀನು ಸಾಕ್ಷಾತ್ ಲಕ್ಷ್ಮಿಯಂತಿರುವೆ. ತುಂಬಿದ ಯೌವನವುಳ್ಳವಳಾಗಿರುವೆ. ಇಂತಹ ನೀನು ತರುಣನಾದ ರಾಜನಿಗೆ ಯೋಗ್ಯಳಾಗಿರುವೆ. ನಿನ್ನ ಪತಿಯಾದ ಪಿಪ್ಪಲಾದ ಮುದುಕ. ಸಾಯುವುದಕ್ಕೆ ಸಿದ್ಧನಾಗಿರುವ ಮುದುಕನನ್ನು ಬಿಟ್ಟು, ನನ್ನನ್ನು ನೋಡು. ನಾನು ರಾಜೇಂದ್ರನು, ರತಿಶೂರನು, ಕಾಮಸಕ್ತಿಯುಳ್ಳವನು. ನೀನು ಮುದುಕಪತಿಯನ್ನು ಬಿಟ್ಟು ನನ್ನ ವಿವಾಹವಾಗಿ ನಿನ್ನ ಜನ್ಮ ಸಾರ್ಥಕ ಮಾಡಿಕೊ’ ಎಂದ.

ಹೀಗೆ ಹೇಳಿದ ಧರ್ಮಪುರುಷನು ರಥದಿಂದಿಳಿದು ಅವಳ ಬಳಿ ಬಂದು ಕೈಹಿಡಿಯಲು ಉದ್ಯುಕ್ತನಾದ. ಆಗ ಪತಿವ್ರತೆಯಾದ ಪದ್ಮಾ ಕೋಪದಿಂದ ಅವನನ್ನು ತಡೆದು, ‘ನೀಚನೇ, ದೂರ ಹೋಗು. ನೀನು ಮಹಾಪಾಪಿ. ನನ್ನನ್ನು ಕಾಮದೃಷ್ಟಿಯಿಂದ ನೋಡಿದರೆ ನಾಶವಾಗುತ್ತೀಯೆ. ನನ್ನ ಪತಿಯಾದ ಪಿಪ್ಪಲಾದ ತಪಸ್ಸಿನಿಂದ ಪವಿತ್ರನಾದವನು. ಅವನನ್ನು ಬಿಟ್ಟು ನಿನ್ನನ್ನು ಏಕೆ ಸೇರುವೆ? ನೀನು ಸದಾ ಕಾಮುಕನಾಗಿ ಸ್ತ್ರೀಲಂಪಟನಾಗಿರುವೆ. ಕಾಮುಕರನ್ನು ಮುಟ್ಟುವುದಿರಲಿ, ನೋಡಿದರೂ ಪಾಪ ಬರುತ್ತದೆ. ಸ್ತ್ರೀಯರ ಮೋಹಕ್ಕೆ ಬಿದ್ದವನಿಗೆ ಜ್ಞಾನ, ತಪಸ್ಸು, ಜಪ, ಹೋಮ, ಪೂಜೆಗಳಿಂದ ಯಾವ ಫಲವೂ ಲಭಿಸದು. ವಿದ್ಯೆ ದಾನಗಳಿಂದಲೂ ಪ್ರಯೋಜನವಾಗದು. ನಿನಗೆ ನಾನು ತಾಯಿಯ ಸಮಾನಳು. ಇಂಥವಳಲ್ಲಿ ಕಾಮಾಸಕ್ತಿಯಿಂದ ಏನೇನೋ ಹೇಳುತ್ತಿರುವೆ. ಆದಕಾರಣ ನಿನಗೆ ಕೆಲವು ಕಾಲದಲ್ಲಿಯೇ ನಿನಗೆ ಕ್ಷಯವು ಬರುವುದು’ ಎಂದು ಶಾಪಕೊಟ್ಟಳು.

ADVERTISEMENT

ಪತಿವ್ರತೆಯಾದ ಪದ್ಮಾದೇವಿ ಶಾಪವನ್ನು ಕೇಳಿ ಧರ್ಮಪುರುಷ ರಾಜರೂಪವನ್ನು ಬಿಟ್ಟು ತನ್ನ ನಿಜವಾದ ರೂಪವನ್ನು ಧರಿಸಿ ಭಯದಿಂದ ನಡುಗುತ್ತಾ, ‘ಓ ಮಾತೆ, ನಾನು ಜ್ಞಾನಿಗಳಿಗೂ ಗುರುವಾದ ಧರ್ಮಪುರುಷ. ನಾನು ಪರಸ್ತ್ರೀಯನ್ನು ತಾಯಿಯಂತೆ ತಿಳಿಯುವವನು. ನಿನ್ನ ಅಂತರಂಗವನ್ನು ಪರೀಕ್ಷೆಮಾಡಲು ದೈವ ಪ್ರೇರಣೆಯಿಂದ ಹೀಗೆ ಮಾಡಿದೆ. ಇದಕ್ಕೆ ನೀನು ಯೋಗ್ಯವಾದ ಶಿಕ್ಷೆಯನ್ನೇ ವಿಧಿಸಿರುವೆ.

ಎಲ್ಲರಿಗೂ ಸುಖ ಮತ್ತು ದುಃಖಗಳನ್ನು ಅವರವರ ಕರ್ಮಕ್ಕನುಸಾರವಾಗಿ ಕೊಡಲು ಆ ಈಶ್ವರನೇ ಸಮರ್ಥ. ಹಾಲನ್ನು ಬೆಳ್ಳಗಾಗಿಯೂ, ನೀರನ್ನು ತಣ್ಣಗಾಗಿಯೂ, ಅಗ್ನಿಯನ್ನು ಸುಡುವಂತೆ ಮಾಡಿದ ಸೃಷ್ಟಿಕರ್ತನ ಮುಂದೆ ನನ್ನ ಪರೀಕ್ಷಕ ದೃಷ್ಟಿ ಅರ್ಥಹೀನ. ಮಹಾತಪವನ್ನಾಚರಿಸಿ ಮೊದಲು ಪ್ರಕೃತಿಯನ್ನು ನಿರ್ಮಿಸಿ, ಬಳಿಕ ಮಹತತ್ವ ಅಹಂಕಾರ ಮುಂತಾದುವುಗಳನ್ನು ಸೃಜಿಸಿದವನು ಮಹಾಶಿವ. ಬ್ರಹ್ಮ ವಿಷ್ಣು ರುದ್ರ ಮೊದಲಾದವರನ್ನೂ ಸೃಷ್ಟಿಸಿ ಪ್ರಪಂಚಪಾಲನೆ ಮಾಡಿದ ವಿಶ್ವನಾಥನಿರುವಾಗ, ಮಹಾಪತಿವ್ರತೆಯಾದ ನಿನ್ನ ಪರೀಕ್ಷಿಸಲು ನಾನು ತೀರಾ ಸಣ್ಣವನು. ಜಗನ್ನಾಟಕ ಸೂತ್ರಧಾರನಾದ ಜಗನ್ನಾಥನಷ್ಟೇ ಪರೀಕ್ಷಕನಾಗಲು ಸಾಧ್ಯ’ ಎಂದು ನಮಸ್ಕರಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.