ADVERTISEMENT

ವೇದವ್ಯಾಸರ ಶಿವಪುರಾಣಸಾರ: ಗೌರೀ ಕಲ್ಯಾಣಕ್ಕೆ ಒಪ್ಪಿದ ಹಿಮವಂತ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 23:30 IST
Last Updated 18 ಅಕ್ಟೋಬರ್ 2022, 23:30 IST
   

ವಸಿಷ್ಠ ಹೇಳಿದ ಮಾತನ್ನು ಹಿಮವಂತ ತನ್ನ ಪತ್ನಿ ಮತ್ತು ಪರಿವಾರದೊಡನೆ ಚರ್ಚಿಸುತ್ತಾನೆ. ಸುಮೇರು ಮೊದಲಾದ ಪರ್ವತಗಳು ತಮ್ಮಲ್ಲಿಯೇ ವಿಮರ್ಶೆಮಾಡಿ ಹೇಳಿದವು, ‘ಎಲೈ ಹಿಮವಂತನೆ, ಇಲ್ಲಿ ವಿಮರ್ಶೆಯೇ ಬೇಕಾಗಿಲ್ಲ. ವಸಿಷ್ಠನು ಹೇಳಿದಂತೆಯೇ ಮಾಡಬೇಕು. ಪಾರ್ವತಿಯು ದೇವಕಾರ್ಯಕ್ಕಾಗಿಯೇ ನಿಮ್ಮಲ್ಲಿ ಜನಿಸಿರುವಳು. ಗಿರಿಜೆಯು ಶಿವನಿಗಾಗಿಯೇ ಅವತರಿಸಿರುವಳು. ಅವನೇ ಪತಿಯಾಗಬೇಕೆಂದು ಅನನ್ಯಭಕ್ತಿಯಿಂದ ಆರಾಧಿಸಿರುವಳು. ಶಿವನೂ ಅದರಂತೆ ವರವನ್ನು ಕೊಟ್ಟಿರುವನು. ಅಂದಮೇಲೆ ಶಿವನಿಗೇ ಪಾರ್ವತಿಯನ್ನು ಕೊಡಬೇಕು’ ಎಂದರು.

ಈ ಮಾತುಗಳನ್ನು ಕೇಳಿ ಹಿಮವಂತ ಸಂತುಷ್ಟನಾದ. ಗಿರಿಜೆ ಹರ್ಷಗೊಂಡಳು. ಇದರ ಮಧ್ಯೆ ವಸಿಷ್ಠನ ಪತ್ನಿ ಅರುಂಧತಿ ಸಹ ಯುಕ್ತಿಯುಕ್ತವಾದ ಮಾತುಗಳನ್ನೂ ಹೇಳಿ ಮೇನಾದೇವಿಯನ್ನೂ ಮನವೊಲಿಸಿದಳು. ಮೇನಾದೇವಿಯೂ ಶಿವಪಾರ್ವತಿಯ ವಿವಾಹಕ್ಕೆ ಸಮ್ಮತಿಸಿದಳು. ನಂತರ ಸಂತೋಷದಿಂದ ಸಪ್ತಮುನಿಗಳಿಗೂ ಮತ್ತು ಅರುಂಧತಿಗೂ ಔತಣ ಮಾಡಿಸಿದಳು. ಹಿಮವಂತ, ’ಓ ಸಪ್ತಮುನಿಗಳೇ, ನನ್ನ ಮಾತನ್ನು ಕೇಳಿರಿ. ಈಗ ನನ್ನ ಭ್ರಾಂತಿಯೆಲ್ಲವೂ ಹೋಯಿತು. ಶಿವಪಾರ್ವತಿಯರ ಪೂರ್ವಚರಿತೆಯು ನಿಮ್ಮಿಂದ ತಿಳಿಯಿತು. ನನ್ನ ಶರೀರ, ನನ್ನ ಹೆಂಡತಿ ಮೇನಾದೇವಿ, ಮಕ್ಕಳಾದ ಪಾರ್ವತಿ, ಋದ್ಧಿ, ಸಿದ್ಧಿ ಎಲ್ಲ ಪರಮೇಶ್ವರನ ಅನುಗ್ರಹದಿಂದಲೇ ಬಂದಿದ್ದಾರೆ. ಹಿಂದೆಯೇ ಪಾರ್ವತಿಯನ್ನು ಪರಮೇಶ್ವರನಿಗೇ ದಾನಮಾಡಬೇಕೆಂದು ಸಂಕಲ್ಪ ಮಾಡಿದ್ದೆ. ಆದರೆ, ವಿಪ್ರನೊಬ್ಬನ ಮಾತು ಕೇಳಿ ಗೊಂದಲಕ್ಕೊಳಗಾಗಿದ್ದೆ’ ಎಂದು ಪಾರ್ವತಿಯನ್ನು ಋಷಿಗಳ ಸಮೀಪಕ್ಕೆ ಕರೆತಂದ.

ಆಗ ಋಷಿಗಳು ಹೇಳಿದರು ‘ಎಲೈ ಹಿಮವಂತನೆ, ಶಂಕರನು ಭಿಕ್ಷೆಯನ್ನು ಬೇಡುವವನು. ನೀನು ಭಿಕ್ಷೆ ಕೊಡುವವನು. ಪಾರ್ವತಿಯೇ ಭಿಕ್ಷೆಯು. ಇದಕ್ಕಿಂತಲೂ ಉತ್ತಮವಾದುದು ಮತ್ತೊಂದಿಲ್ಲ. ನಿನ್ನ ಶಿಖರಗಳಂತೆ ನೀನೂ ಉನ್ನತಸ್ಥಾನವನ್ನು ಪಡೆಯುವೆ. ಪರ್ವತಗಳಲ್ಲೆಲ್ಲಾ ನೀನು ಶ್ರೇಷ್ಠನಾಗುವೆ’ ಎಂದ ಮುನಿಗಳು, ಪಾರ್ವತಿಗೆ ಆಶೀರ್ವಾದ ಮಾಡುತ್ತಾ, ‘ಶಿವನಿಗೆ ಸದಾ ಸುಖವನ್ನುಂಟುಮಾಡುವವಳಾಗು’ ಎಂದರು. ನಂತರ ಹಿಮವಂತನಿಗೆ ಫಲಪುಷ್ಪಗಳನ್ನು ಕೊಟ್ಟು, ವಿವಾಹ ನಿಶ್ಚಯ ಮಾಡಿದರು.

ADVERTISEMENT

ಅರುಂಧತಿಯು ಮೇನಾದೇವಿಗೆ ಶಿವನ ಗುಣಗಳನ್ನು ಹೇಳಿ, ಅವನ ವಿಷಯದಲ್ಲಿ ಅವಳಿಗೆ ಪೂಜ್ಯಬುದ್ಧಿ ಉಂಟಾಗುವಂತೆ ಮಾಡಿದಳು. ವಧು ಪಾರ್ವತಿ ಕೆನ್ನೆಗೆ ಅರಶಿನ ಕುಂಕುಮ ಹಚ್ಚಿ, ಲೋಕಾಚಾರದಂತೆ ಮಂಗಳಕಾರ್ಯಗಳನ್ನು ಮಾಡಿದಳು. ಬಳಿಕ ವಸಿಷ್ಠ ಮೊದಲಾದ ಮುನಿಗಳು ನಾಲ್ಕನೆಯ ದಿವಸದಲ್ಲಿ ಶುಭಲಗ್ನವೊಂದನ್ನು ನಿರ್ಣಯಿಸಿ ಶಿವನಿಗೆ ಮದುವೆ ಮುಹೂರ್ತ ತಿಳಿಸಿದರಲ್ಲದೆ, ‘ಹಿಮವಂತನ ಮನೆಗೆ ಹೋಗಿ ವಿಧಿವತ್ತಾಗಿ ಪಾರ್ವತಿಯನ್ನು ಮದುವೆಯಾಗು’ ಎಂದರು.

ಮುನಿಗಳ ಮಾತನ್ನು ಕೇಳಿ ಪರಮೇಶ್ವರ ‘ಮಹಾನುಭಾವರೇ, ವಿವಾಹವನ್ನು ನಾನು ನೋಡಿಯೂ ಇಲ್ಲ. ಕೇಳಿಯೂ ಇಲ್ಲ. ಆದಕಾರಣ ನೀವು ಅದರ ವಿಧಿಯನ್ನು ಶಾಸ್ತ್ರಾನುಸಾರವಾಗಿ ಹೇಳಬೇಕು’ ಎಂದ. ಶಿವನ ಮಾತನ್ನು ಕೇಳಿ ಮುನಿಗಳು ನಕ್ಕು, ‘ಮಹಾದೇವ, ಹರಿಯನ್ನು ಅವನ ಪರಿವಾರದೊಡನೆ ಕರೆಸು. ಬ್ರಹ್ಮನನ್ನು ಅವನ ಪುತ್ರರೊಡನೆ ಕರೆಸು. ಇಂದ್ರ, ಋಷಿಗಳು, ಯಕ್ಷರು, ಗಂಧರ್ವರು, ಕಿನ್ನರರು, ವಿದ್ಯಾಧರರು, ಸಿದ್ಧರು, ಅಪ್ಸರೆಯರೆಲ್ಲರನ್ನೂ ಕರೆಸು. ಅವರೆಲ್ಲರೂ ನಿನ್ನ ವಿವಾಹಕಾರ್ಯವನ್ನು ಸಾಂಗವಾಗಿ ನೆರವೇರಿಸುವರು’ ಎಂದು ಹೇಳಿದರು.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೇ ಸಂಹಿತೆಯ ಮೂರನೇ ಖಂಡದ ಪಾರ್ವತೀಖಂಡದಲ್ಲಿ ಮೂವತ್ತಾರನೆಯ ಅಧ್ಯಾಯ ಮುಗಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.