ADVERTISEMENT

ವೇದವ್ಯಾಸರ ಶಿವಪುರಾಣಸಾರ | ಪಾರ್ಥಿವ ಪ್ರತಿಮೆಯ ಪೂಜಾಕ್ರಮ

ಭಾಗ-45

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 14 ಫೆಬ್ರುವರಿ 2022, 20:15 IST
Last Updated 14 ಫೆಬ್ರುವರಿ 2022, 20:15 IST
   

ಪಾರ್ಥಿವಪ್ರತಿಮೆಯವಿವರವನ್ನು ಈಗ ಸೂತಮುನಿಯು ತಿಳಿಸುತ್ತಾನೆ. ಮಣ್ಣು ಮುಂತಾದ ವಸ್ತುಗಳಿಂದ ನಿರ್ಮಿತವಾದಪಾರ್ಥಿವವಿಗ್ರಹವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಲಭಿಸಿ, ತಕ್ಷಣ ದುಃಖ ನಾಶವಾಗುತ್ತದೆ. ಅಪಮೃತ್ಯು ಕಾಲಮೃತ್ಯುಗಳೂ ನಾಶವಾಗುತ್ತವೆ. ಪತ್ನಿ, ಪುತ್ರ, ಧನ, ಧಾನ್ಯಗಳನ್ನು ಶೀಘ್ರ ಅಭಿವೃದ್ಧಿಗೊಳಿಸುತ್ತದೆ. ಅನ್ನಾದಿ ಆಹಾರವಸ್ತುಗಳು, ವಸ್ತ್ರ ಮುಂತಾದ ಭೋಗವಸ್ತುಗಳೂ ಸಿದ್ಧಿಸುವುದು ಅಂತ ವಿವರಿಸುತ್ತಾನೆ.

ವಿಗ್ರಹಪೂಜೆಯಲ್ಲಿ ಸ್ತ್ರೀ-ಪುರುಷರಿಬ್ಬರಿಗೂ ಅಧಿಕಾರವಿದೆ. ವಿಗ್ರಹಕ್ಕಾಗಿ ನದಿ, ಸರೋವರ, ಕಲ್ಯಾಣಿನೀರಿನ ಮಧ್ಯದಲ್ಲಿರುವ ತಿಳಿಮಣ್ಣನ್ನು ಚೆನ್ನಾಗಿ ಶೋಧಿಸಿ ಹದಮಾಡಿ ಗಂಧದ ಪುಡಿಯಿಂದ ಸುವಾಸನೆಗೊಳಿಸಿ, ಹಾಲನ್ನು ಸೇರಿಸಿ ಕೈಯಿಂದಲೇ ವಿಗ್ರಹವನ್ನು ಮಾಡಬೇಕು. ವಿಗ್ರಹಕ್ಕೆ ಪ್ರತಿಯೊಂದು ಅಂಗಗಳನ್ನೂ ಮಾಡಿ ಆಯಾಯ ಆಯುಧಗಳೊಡನೆ ಪದ್ಮಾಸನದಲ್ಲಿ ಕುಳಿತಿರುವಂತೆ ನಿರ್ಮಿಸಿ, ಅದನ್ನು ಶ್ರದ್ಧೆಯಿಂದ ಪೂಜಿಸಬೇಕು. ವಿನಾಯಕ, ಸೂರ್ಯ, ವಿಷ್ಣು, ಜಗನ್ಮಾತೆಯಾದ ಪಾರ್ವತಿ, ಶಿವನ ವಿಗ್ರಹ ಮತ್ತು ಶಿವಲಿಂಗವನ್ನೂ ನಿರ್ಮಿಸಿ, ಹದಿನಾರು ಉಪಚಾರಗಳಿಂದ ಸದಾ ಪೂಜಿಸಬೇಕು.

ಹೂವಿನಿಂದ ಪ್ರೋಕ್ಷಣವನ್ನು ಮಾಡಿದ ನಂತರ, ಮಂತ್ರಪೂರ್ವಕವಾಗಿ ವಿಗ್ರಹಕ್ಕೆ ಅಭಿಷೇಕವನ್ನು ಮಾಡಬೇಕು. ಶಾಲ್ಯನ್ನದಿಂದ ನೈವೇದ್ಯ ಮಾಡಬೇಕು. ಮನೆಯಲ್ಲಿ ದೇವರ ಮುಂದೆ ಒಂದು ಕುಡವದಷ್ಟು ನೈವೇದ್ಯ, ದೇವಾಲಯದಲ್ಲಿ ಒಂದು ಪ್ರಸ್ಥ ನೈವೇದ್ಯ ಮಾಡಬೇಕು. ದೇವನಿರ್ಮಿತವಾದ ವಿಗ್ರಹಕ್ಕೆ ಮೂರು ಪ್ರಸ್ಥದಷ್ಟು ನಿವೇದನ ಮಾಡಬೇಕು. ಉದ್ಭವಿಸಿದ ಸ್ಥಳದಲ್ಲಿ ಐದು ಪ್ರಸ್ಥ ನೈವೇದ್ಯವನ್ನು ಮಾಡಬೇಕು. ಹೀಗೆ ಮಾಡಿದರೆ ಪೂರ್ಣಫಲವು ಲಭಿಸುವುದು.

ADVERTISEMENT

ಹನ್ನೆರಡು ಅಂಗುಲ ಅಗಲವಾಗಿಯೂ, ಹದಿನೈದು ಅಂಗುಲ ಎತ್ತರವಾಗಿಯೂ ಒಂದಂಗುಲ ದಪ್ಪವಾಗಿಯೂ ಇರುವಂತಹ ಲೋಹ ಮತ್ತು ಮರಗಳಿಂದ ಮಾಡಿದ ಪಾತ್ರಕ್ಕೆ ‘ಶಿವ’ ಎಂದು ಹೆಸರು. ಆ ಶಿವದ ಎಂಟನೆಯ ಒಂದು ಭಾಗಕ್ಕೆ ‘ಪ್ರಸ್ಥ’ ಎಂದು ಹೆಸರು. ಆ ಪ್ರಸ್ಥದ ನಾಲ್ಕನೆಯ ಒಂದು ಭಾಗಕ್ಕೆ ‘ಕುಡವ’ ಎಂದು ಹೆಸರು. ಮನುಷ್ಯನಿರ್ಮಿತ ದೇವವಿಗ್ರಹಕ್ಕೆ ಹತ್ತು ಪ್ರಸ್ಥ, ಋಷಿನಿರ್ಮಿತ ದೇವವಿಗ್ರಹಕ್ಕೆ ನೂರು ಪ್ರಸ್ಥ, ಉದ್ಭವವಿಗ್ರಹಕ್ಕೆ ಸಹಸ್ರ ಪ್ರಸ್ಥದ ಪ್ರಮಾಣಗಳಷ್ಟು ನಿವೇದಿಸಿ ಅರ್ಚಿಸಬೇಕು. ಇದಕ್ಕೆ ಮಹಾಪೂಜೆ ಎಂದು ಹೆಸರು.

ಅಭಿಷೇಕದಿಂದ ಆತ್ಮಶುದ್ಧಿಯೂ, ಗಂಧವನ್ನರ್ಪಿಸಿದರೆ ಪುಣ್ಯವೂ, ನೈವೇದ್ಯದಿಂದ ಆಯುಷ್ಯ ಮತ್ತು ತೃಪ್ತಿಯೂ, ಧೂಪದಿಂದ ಧನವೂ, ದೀಪದಿಂದ ಜ್ಞಾನವೂ, ತಾಂಬೂಲದಿಂದ ಭೋಗವೂ ಲಭಿಸುವುದು. ಆದುದರಿಂದ ಸ್ನಾನ ಮೊದಲಾದ ಆರು ಉಪಚಾರಗಳನ್ನು ಮಾಡಬೇಕು. ನಮಸ್ಕಾರ ಮತ್ತು ಜಪಗಳು ಸಕಲ ಇಷ್ಟಾರ್ಥಗಳನ್ನು ಕೊಡುವುದು. ಭೋಗ ಮತ್ತು ಮುಕ್ತಿಗಳನ್ನ ಅಪೇಕ್ಷಿಸುವವರು, ಪೂಜೆಯ ಕೊನೆಯಲ್ಲಿ ಜಪಗಳನ್ನು ಮಾಡಬೇಕು. ಮೊದಲು ಮನಸ್ಸಿನಲ್ಲಿ ದೇವತೆಗಳನ್ನು ಪೂಜಿಸಿ, ಆಯಾಯ ಕರ್ಮಗಳನ್ನು ಮಾಡಬೇಕು. ದೇವತೆಗಳ ಪೂಜೆಯಿಂದ ಆ ದೇವತೆಲೋಕಗಳಲ್ಲಿ ಬೇಕಾದಂತಹ ಭೋಗ್ಯವಸ್ತುಗಳೂ ಲಭಿಸುವುದು.

ವಿಘ್ನೇಶ್ವರನ ಪೂಜೆಯಿಂದ ಭೂಲೋಕದಲ್ಲಿ ಸಕಲ ಇಷ್ಟಾರ್ಥಗಳು ಲಭಿಸುವುದು. ಶ್ರಾವಣ, ಭಾದ್ರಪದ, ಧನುರ್ಮಾಸ, ಶುಕ್ರವಾರ, ಶುಕ್ಲಚತುರ್ಥೀ ಮತ್ತು ಶತಭಿಷನಕ್ಷತ್ರಗಳಲ್ಲಿ ಗಣೇಶನನ್ನು ವಿಧಿವತ್ತಾಗಿ ಪೂಜಿಸಬೇಕು. ಅಗ್ನಿ ಮತ್ತಿತರ ದೇವತೆಗಳನ್ನು ಶ್ರದ್ಧೆಯಿಂದ ಪೂಜಿಸಿದರೆ ಪುತ್ರ ಸಮೃದ್ಧಿ, ಇಷ್ಟಸಿದ್ಧಿ, ಸಕಲಪಾಪ ನಿವಾರಣೆಯಾಗುವುದು. ಶಿವನೇ ಮೊದಲಾದ ದೇವತೆಗಳ ವಾರಗಳಲ್ಲಿ ಆಯಾಯ ದೇವತೆಗಳನ್ನು ಪೂಜಿಸುವುದರಿಂದ ಆತ್ಮಶುದ್ಧಿಯಾಗುವುದು. ಆ ವಾರಗಳು ತಿಥಿ, ನಕ್ಷತ್ರ ಮತ್ತು ಯೋಗಗಳಿಗೆ ಆಧಾರವಾಗಿರುತ್ತದೆ. ಸಕಲ ಇಷ್ಟಾರ್ಥ ಮಾಡುವ ಮತ್ತು ವೃದ್ಧಿಕ್ಷಯಗಳಿಲ್ಲದುದರಿಂದ ಆ ವಾರಗಳು ಪೂರ್ಣ ಬ್ರಹ್ಮಸ್ವರೂಪವಾಗಿರುತ್ತೆ. ಸೂರ್ಯೋದಯದಿಂದ ಮುಂದಿನ ದಿನದ ಸೂರ್ಯೋದಯದ ಮಧ್ಯಕಾಲಕ್ಕೆ ವಾರವೆಂದು ಹೆಸರು. ರಾತ್ರಿ ವ್ಯಾಪಿಯಾದ ತಿಥಿಯ ಪೂರ್ವಭಾಗವು ಪಿತೃ(ಕರ್ಮ)ಗಳಿಗೆ ಪ್ರಶಸ್ತವಾದುದು. ಹಗಲು ವ್ಯಾಪಿಯಾದ ತಿಥಿಯ ಕೊನೆಯ ಭಾಗವು ದೇವ(ಧರ್ಮ)ರಿಗೆ ಪ್ರಶಸ್ತವಾದುದು. ಮಧ್ಯಾಹ್ನದಲ್ಲಿ ಮಾಡುವಂತಹ ದೇವಕಾರ್ಯಕ್ಕೆ ಉದಯಕಾಲವನ್ನು ವ್ಯಾಪಿಸಿರುವ ತಿಥಿಯು ಗ್ರಾಹ್ಯವಾದುದು. ತಿಥಿಯಂತೆ ಶುಭವಾದ ನಕ್ಷತ್ರ ಮುಂತಾದವುಗಳೂ ದೇವಕಾರ್ಯಕ್ಕೆ ಗ್ರಾಹ್ಯಗಳು. ವಾರ ಮುಂತಾದವುಗಳನ್ನು ಚೆನ್ನಾಗಿ ಪರೀಕ್ಷಿಸಿ, ಪೂಜೆ–ಜಪಾದಿಗಳನ್ನೂ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.