ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮಾತು ಕೇಳದ ಮೇನಾದೇವಿ

ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 3 ನವೆಂಬರ್ 2022, 19:45 IST
Last Updated 3 ನವೆಂಬರ್ 2022, 19:45 IST
   

ಮೇನಾದೇವಿ ಪ್ರಲಾಪಿಸುತ್ತಾ ನೆಲಕ್ಕೆ ಬಿದ್ದಾಗ ಅಲ್ಲಿದ್ದ ಪರಿಜನರು ಹಾಹಾಕಾರ ಮಾಡಿದರು. ಬ್ರಹ್ಮ ಅವಳನ್ನು ಎಬ್ಬಿಸಿ ಕೂರಿಸಿದ. ನಾರದ ಮೇನಾದೇವಿಗೆ ಸಾಂತ್ವನದ ಮಾತಾಡಿದ.‘ಮೇನಾದೇವಿ, ನೀನು ಶಿವನ ನಿಜವಾದ ಸುಂದರರೂಪವನ್ನು ನೋಡಿಲ್ಲ. ಆ ಶಿವ ತನ್ನ ಲೀಲೆಯಿಂದ ಕುರೂಪವನ್ನು ಧರಿಸಿ ನಿನ್ನ ಮೂರ್ಖನನ್ನಾಗಿಸಿದ್ದಾನೆ. ನೀನು ನೋಡಿದ್ದು ಶಿವನ ನಿಜವಾದ ರೂಪವಲ್ಲ. ಶಾಂತಳಾಗು. ಶಿವನಿಗೆ ಗಿರಿಜೆಯನ್ನು ಸಂತೋಷದಿಂದ ಮದುವೆ ಮಾಡಿ ಕೊಡು’ ಎಂದಾಗ ಮೇನಾದೇವಿ ಮತ್ತಷ್ಟು ಕೋಪಗೊಂಡಳು.

‘ಎಲೈ ದುಷ್ಟ, ನೀನಿಲ್ಲಿಂದ ಮಾತನಾಡದೆ ಹೊರಡು. ನೀನು ಮಹಾನೀಚ’ ಎಂದಳು ರೋಷದಿಂದ. ದೇವತೆಗಳೆಲ್ಲರೂ ಒಬ್ಬೊಬ್ಬರಾಗಿ ಮೇನಾದೇವಿಯನ್ನು ಸಮಾಧಾನಮಾಡಿದರು. ‘ಮೇನಾದೇವಿ, ನಮ್ಮ ಮಾತನ್ನು ಸಾವಧಾನವಾಗಿ ಕೇಳು. ಶಿವನೇ ಸಾಕ್ಷಾತ್ ಪರಮೇಶ್ವರ. ಅವನನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ನಿನ್ನ ಮಗಳ ಕಠೋರ ತಪಸ್ಸನ್ನು ಮೆಚ್ಚಿ ಶಿವನು ದಯೆಯಿಂದ ಅವಳ ಕೋರಿಕೆ ಮೇರೆಗೆ ವಿವಾಹವಾಗುತ್ತಿದ್ದಾನೆ. ಪರಮಶಿವ ಅಳಿಯನಾಗುತ್ತಿರುವುದು ನಿನ್ನ ಸುಕೃತದ ಫಲ’ ಎನ್ನುತ್ತಾರೆ.

ದೇವತೆಗಳ ಮಾತಿಗೆ ಮಣಿಯದ ಮೇನಾದೇವಿ ತುಂಬಾ ವಿಲಾಪಿಸಿದಳು. ಶಿವನಿಗೆ ಮಗಳನ್ನು ನಾನು ಖಂಡಿತ ಕೊಡುವುದಿಲ್ಲ ಎಂದು ಹಠ ಹಿಡಿದಳು. ಸಪ್ತರ್ಷಿಗಳು ಬಂದು ‘ಮೇನಾದೇವಿ, ವಿವಾಹಕಾರ್ಯವನ್ನು ನೆರವೇರಿಸಲು ನಾವು ಬಂದಿರುವೆವು. ಈಗ ನಾವು ನಿನ್ನ ವಿರೋಧವನ್ನು ಮನ್ನಿಸಲಾರೆವು. ನಿನಗೀಗ ಆದ ಶಂಕರದರ್ಶನವು ಮಹಾ ಲಾಭ ತಂದಿದೆ. ಹೀಗಾಗಿ ಶಂಕರ ನಿನ್ನ ದಾನಕ್ಕೆ ಪಾತ್ರನಾಗಿ ತಾನಾಗಿಯೇ ಬಂದಿದ್ದಾನೆ’ ಎಂದರು. ಋಷಿಗಳ ಮಾತನ್ನು ತಿರಸ್ಕರಿಸಿದ ಅಜ್ಞಾನಿಯಾದ ಮೇನಾದೇವಿ ರೋಷದಿಂದ, ‘ಗಿರಿಜೆಯನ್ನು ಕೊಂದುಹಾಕುವೆನೇ ಹೊರತು, ಅವಳನ್ನು ಶಂಕರನಿಗೆ ಕೊಡುವುದಿಲ್ಲ’ ಎಂದಳು. ಹಿಮವಂತ ಶಿವನ ತತ್ವವನ್ನ ಮೇನಾದೇವಿಗೆ ಮನದಟ್ಟಾಗುವಂತೆ ಬೋಧಿಸಿದ.

ADVERTISEMENT

‘ಪ್ರಿಯೆ, ಪೂಜ್ಯರನ್ನೆಲ್ಲಾ ನಿಂದಿಸಿರುವೆಯಲ್ಲಾ? ಇದು ಸರಿಯೇ? ಶಂಕರನ ವಿಕಾರರೂಪವನ್ನು ನೋಡಿ ಅವನ ನಿಜರೂಪವನ್ನು ತಿಳಿಯದವಳಾಗಿರುವೆ. ಅವನು ವಿರಾಟಪುರುಷ. ಪೂಜ್ಯರಿಗಿಂತಲೂ ಮಹಾಪೂಜ್ಯನು’ ಎಂದು ತಿಳಿವಳಿಕೆ ಹೇಳಿದ.

ಇದನ್ನು ಒಪ್ಪದ ಮೇನಾದೇವಿ, ‘ನಾಥ, ಪಾರ್ವತಿಯ ಕತ್ತನ್ನು ಹಿಸುಕಿ ಕೊಂದುಹಾಕು. ಅಥವಾ ಇವಳನ್ನು ಸಮುದ್ರದಲ್ಲಿ ಮುಳುಗಿಸು. ನಾನು ಅಡ್ಡಿಪಡಿಸುವುದಿಲ್ಲ. ಆದರೆ ಮಗಳನ್ನು ಕುರೂಪಿಯಾದ ರುದ್ರನಿಗೆ ಕೊಟ್ಟರೆ ನಾನು ಖಂಡಿತವಾಗಿ ಪ್ರಾಣ ಬಿಡುವೆ’ ಎಂದಳು. ಪಾರ್ವತಿ ತಾಯಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದಳು. ‘ಮಾತೆ, ನಿನಗೆ ಅಮಂಗಳವಾದ ದುರ್ಬುದ್ಧಿ ಏಕೆ ಬಂದಿತು? ಶಿವ ಪರಮಶ್ರೇಷ್ಠನೆಂದು ತಿಳಿದೇ ನಾನು ಕಠಿಣ ತಪಸ್ಸು ಮಾಡಿ ವರಿಸುತ್ತಿದ್ದೇನೆ. ಶಿವ ದೇವಶ್ರೇಷ್ಠನಾಗಿರುವುದರಿಂದಲೇ ದೇವತೆಗಳೆಲ್ಲರೂ ಸೇವಕರಾಗಿ ಉತ್ಸವದೊಡನೆ ಬಂದಿದ್ದಾರೆ. ನನ್ನನ್ನು ಶಿವನಿಗೆ ಧಾರೆಯೆರೆದುಕೊಟ್ಟು ನಿನ್ನ ಗೃಹಸ್ಥಾಶ್ರಮವನ್ನೂ ಸಾರ್ಥಕಮಾಡಿಕೊ’ ಎಂದಳು ಸ್ಪಷ್ಟವಾಗಿ.

ಗಿರಿಜೆಯ ಮಾತನ್ನು ಕೇಳಿ ಮೇನಾದೇವಿ ತುಂಬಾ ಕೋಪಗೊಂಡು ಅವಳನ್ನು ಹೊಡೆಯತೊಡಗಿದಳು. ಆಗ ನಾರದ ಮತ್ತು ಸಪ್ತರ್ಷಿಗಳು ಪಾರ್ವತಿಯನ್ನು ಮೇನಾದೇವಿಯಿಂದ ಬಿಡಿಸಿ ದೂರ ಕರೆದುಕೊಂಡು ಹೋದರು. ಮೇನಾದೇವಿ ಮತ್ತೆ ಪಾರ್ವತಿ ಮತ್ತು ಋಷಿಗಳನ್ನು ನಿಂದಿಸುತ್ತಾ ಗೋಳಾಡತೊಡಗಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.