ADVERTISEMENT

ವೇದವ್ಯಾಸರ ಶಿವಪುರಾಣಸಾರ ಭಾಗ-51: ಶಿವದರ್ಶನದಿಂದ ಆತ್ಮಾರಾಮತೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 21 ಫೆಬ್ರುವರಿ 2022, 19:30 IST
Last Updated 21 ಫೆಬ್ರುವರಿ 2022, 19:30 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ    

ವೃಷಭರೂಪವಾಗಿರುವ ಧರ್ಮವು ಬ್ರಹ್ಮಚರ್ಯದ ಸ್ವರೂಪವನ್ನು ಧರಿಸಿ ಸತ್ಯ ಮೊದಲಾದ ನಾಲ್ಕು ಪಾದಗಳನ್ನು ಧರಿಸಿ ಶಿವಲೋಕದ ಮೇಲ್ಭಾಗದಲ್ಲಿದೆ. ಧರ್ಮರೂಪವಾದ ವೃಷಭಕ್ಕೆ ಕ್ಷಮೆಯೇ ಶೃಂಗ, ಶಾಂತಿಯೇ ಕಿವಿಗಳು, ವೇದಧ್ವನಿಯೇ ಶಬ್ದ, ಆಸ್ತಿಕತೆಯೇ ಚಕ್ಷುಸ್ಸು, ನಿಃಶ್ವಾಸವೇ ಅಚಲವಾದ ಮನಸ್ಸು. ವೃಷಭರೂಪವಾದ ಧರ್ಮಗಳನ್ನು ಕಾಲಾತೀತೇಶ್ವರನು ನಿರ್ವಹಿಸುವನು ಎಂದು ಸೂತಮುನಿ ಶಿವಮಹಿಮೆಯ ವಿವರ ನೀಡುತ್ತಾನೆ.

ಬ್ರಹ್ಮ, ವಿಷ್ಣು ಮತ್ತು ಶಿವರ ಆಯುಸ್ಸಿಗೆ ದಿನವೆಂದು ಹೆಸರು. ಅವರ ದಿನಕ್ಕೆ ಹಗಲಾಗಲೀ ರಾತ್ರಿಯಾಗಲೀ ಜನ್ಮಮರಣಗಳಾಗಲೀ ಇಲ್ಲ. ಕಾಲಾತೀತಲೋಕದ ಮೇಲೆ ಬ್ರಹ್ಮನಿರುವ ಸತ್ಯಲೋಕವಿದೆ. ಅಲ್ಲಿ ಗಂಧ ಮುಂತಾದ ಸೂಕ್ಷ್ಮಭೂತಗಳಿಂದ ನಿರ್ಮಿಸಿದ ಹದಿನಾಲ್ಕು ಬ್ರಹ್ಮಲೋಕಗಳಿವೆ. ಇದರ ಮೇಲೆ ವಿಷ್ಣುವಿನ ಹದಿನಾಲ್ಕು ಲೋಕಗಳಿವೆ. ವಿಷ್ಣುವಿನ ಹದಿನಾಲ್ಕು ಲೋಕಗಳ ಮೇಲೆ ಇಪ್ಪತ್ತೆಂಟು ರುದ್ರನ ಲೋಕಗಳಿವೆ. ಅದಕ್ಕೂ ಮೇಲೆ ಐವತ್ತಾರು ಕಾರಣೇಶ್ವರ ಲೋಕಗಳಿವೆ. ಅದಕ್ಕೆ ಮೇಲೆ ಶಿವನಿಗೆ ಪ್ರಿಯವಾದ ಬ್ರಹ್ಮಚರ್ಯ ಎಂಬ ಲೋಕವಿದೆ.

ಬ್ರಹ್ಮಚರ್ಯಲೋಕದಲ್ಲಿ ಐದು ಪ್ರಾಕಾರಗಳಿಂದ ಕೂಡಿದ ಜ್ಞಾನಕೈಲಾಸ ವಿದೆ. ಇಲ್ಲಿ ಐದು ಮಂಡಲಸಹಿತವಾಗಿ ಐದು ಬ್ರಹ್ಮರಿರುವಂತಹ ಲಿಂಗವು ಆದಿಶಕ್ತಿಯೊಡನೆ ಇದೆ. ಜ್ಞಾನಕೈಲಾಸವೇ ಪರಮಾತ್ಮನಾದ ಶಿವನ ಮಂಗಳಕರವಾದ ಆಲಯ. ಅಲ್ಲಿ ಪರಮೇಶ್ವರನು ಪರಾಶಕ್ತಿಯೊಡನೆ ಇರುತ್ತಾನೆ. ಪರಮೇಶ್ವರನು ಸೃಷ್ಟಿ, ಸ್ಥಿತಿ, ಸಂಹಾರ, ನಿಗ್ರಹ, ಅನುಗ್ರಹೀ ಎಂಬ ಐದು ಕೃತ್ಯಗಳನ್ನು ಮಾಡುತ್ತಾನೆ. ಆತ ಸತ್ಯವೂ ಜ್ಞಾನಸ್ವರೂಪವೂ ಆದ, ಆನಂದಸ್ವರೂಪವಾದಂತಹ ಶರೀರವುಳ್ಳವನಾಗಿದ್ದಾನೆ. ಸದಾ ಧ್ಯಾನ ನಿರತನಾಗಿ, ಸಮಾಧಿಸ್ಥಿತಿಯಲ್ಲಿ ಕುಳಿತು ಆತ್ಮಾರಾಮನಾಗಿ ವಿಹರಿಸುತ್ತಾ
ಪ್ರಕಾಶಿಸುತ್ತಿರುತ್ತಾನೆ.

ADVERTISEMENT

ಕರ್ಮ, ಧ್ಯಾನ ಮತ್ತಿತರ ಕ್ರಮಗಳಿಂದ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳ ಬಹುದು. ಶಿವಜ್ಞಾನವನ್ನು ಪಡೆದರೆ ಶಿವದರ್ಶನ ಲಭಿಸುತ್ತದೆ. ಶಿವನನ್ನು ದರ್ಶನಮಾಡಿದವರು ಮುಕ್ತಿಯನ್ನೇ ಹೊಂದುವರು. ಕರ್ಮ, ತಪಸ್ಸು, ಜಪ, ಜ್ಞಾನ, ಧ್ಯಾನ ಮುಂತಾದ ಧರ್ಮನಿರತನಾಗಿ ಶಿವನ ದರ್ಶನ ಪಡೆದರೆ ಆತ್ಮಾರಾಮತೆಯೇ ಲಭಿಸುವುದು. ಪರಬ್ರಹ್ಮಸ್ವರೂಪನಾದ ಶಿವನೇ ಆತ್ಮಸ್ವರೂಪನಾದುದರಿಂದ ಶಿವನ ದರ್ಶನ (ಜ್ಞಾನ) ಪಡೆದರೆ, ತನ್ನ ಸ್ವರೂಪವನ್ನೇ ತಿಳಿದಂತಾಗಿ, ‘ಅಹಂ ಬ್ರಹ್ಮಾಸ್ಮಿ’ ಅಂತ ‘ನಾನೇ ಬ್ರಹ್ಮಸ್ವರೂಪ’ ಎಂದು ತಿಳಿದು ಆತ್ಮಾರಾಮನಾಗುವನು. ತನ್ನ ಆತ್ಮಸ್ವರೂಪವನ್ನು ತಿಳಿದು, ತನ್ನಲ್ಲಿಯೇ ಆನಂದಸ್ವರೂಪವಾಗಿ ವಿಹರಿಸುವುದೇ ಮುಕ್ತಿ. ಆತ್ಮಸ್ವರೂಪದ ಹೊರತು ಬೇರೆ ಇನ್ನೊಂದು ವಿಹರಿಸುವಂತಹ ಆನಂದದಾಯಕವಾದ ವಸ್ತು ಪ್ರಪಂಚದಲ್ಲಿಲ್ಲ.

ರವಿಯು ಹೇಗೆ ತನ್ನ ಕಿರಣಗಳಿಂದ ಅಶುದ್ಧಿಯನ್ನು ಹೋಗಲಾಡಿಸುವನೋ ಅದರಂತೆಯೇ, ಶಿವನೂ ತನ್ನ ಭಕ್ತರ ಅಜ್ಞಾನವನ್ನು ಕೃಪಾದೃಷ್ಟಿಯಿಂದ ಹೋಗಲಾಡಿಸುವನು. ಅಜ್ಞಾನ ತೊಲಗಿದ ಮೇಲೆ ಭಕ್ತರಿಗೆ ಶಿವನಸ್ವರೂಪ ತಿಳಿಯುತ್ತದೆ. ಶಿವಸ್ವರೂಪಜ್ಞಾನದಿಂದ ಸ್ವಸ್ವರೂಪವು ತಿಳಿಯುತ್ತದೆ. ಮುಂದೆ ಆತ್ಮಾರಾಮ, ಅಂದರೆ ಜೀವನ್ಮುಕ್ತನಾಗುವನು. ಆತ್ಮಾರಾಮತೆಯು ಸಿದ್ಧಿಸಿದರೆ ಕೃತಕೃತ್ಯನಾಗಿ ಶಿವಲೋಕಕ್ಕೆ ಮೂಲವಾದ ಕಾಲಚಕ್ರ ಪಡೆಯುವನು.

ಕಾಲಚಕ್ರದಲ್ಲಿ ಬ್ರಹ್ಮಚಕ್ರ, ವಿಷ್ಣುಚಕ್ರ, ರುದ್ರಚಕ್ರ, ಈಶ್ವರಚಕ್ರ, ಶಿವಚಕ್ರ ಎಂಬ ಐದು ಚಕ್ರಗಳಿವೆ. ದೃಷ್ಟಿ ಮತ್ತು ಮೋಹಗಳು ಬ್ರಹ್ಮಚಕ್ರ. ಭೋಗ ಮತ್ತು ಮೋಹಗಳು ವಿಷ್ಣುಚಕ್ರ. ಕೋಪ ಮತ್ತು ಮೋಹಗಳು ರುದ್ರಚಕ್ರ. ಜಗತ್ತಿನ ಭ್ರಮೆ (ಭೂಮಿ ತಿರುಗುವಿಕೆ) ಈಶ್ವರಚಕ್ರ. ಜ್ಞಾನ ಮತ್ತು ಮೋಹಗಳು ಶಿವಚಕ್ರ. ಶಿವಲೋಕದ ಐದನೆಯ ಪ್ರಕಾರದ ಹೊರಪ್ರದೇಶದಲ್ಲಿ ರಾಜಸ್ವದ ಮಂಡಪವಿದೆ. ಅಲ್ಲಿ ನಂದಿಕೇಶ್ವರನಿರುತ್ತಾನೆ.

ಆ ಐದು ಪ್ರಾಕಾರಗಳಲ್ಲಿ ಐದು ಮಂಡಪಗಳಿರುವೆ. ಅವುಗಳಲ್ಲಿ ಮೊದಲನೆಯ ಮಂಡಪದಲ್ಲಿ ಧ್ಯಾನನಿರತ ಸದ್ಯೋಜಾತ ಮತ್ತು ಅಮೃತ ಕೊಡುವ ಬಲಿನಾಥ ನೆಲೆಸಿದ್ದಾರೆ. ಎರಡನೆ ಮಂಡಪವು ನರ್ತನರಂಗವಾದರೆ, ಮೂರನೆಯ ಮಂಡಪದಲ್ಲಿ ಸೋಮಸ್ಕಂದೇಶ್ವರ ಮತ್ತು ನಾಲ್ಕನೆಯ ಮಂಡಪದಲ್ಲಿ ಚಂದ್ರಶೇಖರಮೂರ್ತಿ ಇದ್ದಾರೆ. ಮೊದಲನೆಯ ಮಂಡಪದಲ್ಲಿ ಆದಿಮಾಯೆ ಇದ್ದರೆ, ಇದರ ಮುಂದಿನ ಗರ್ಭಗುಡಿಯಲ್ಲಿ ಮಹಾಲಿಂಗವಿದೆ. ಈ ಗರ್ಭಗುಡಿಯ ಪ್ರಾಕಾರದ ಹೊರಪ್ರದೇಶದಲ್ಲಿ ನಂದಿಕೇಶ್ವರ ಕುಳಿತು ಶಿವಪಂಚಾಕ್ಷರೀಮಂತ್ರವನ್ನು ಜಪಿಸುತ್ತಿರುತ್ತಾನೆ ಎಂದು ಸೂತಮುನಿ ಹೇಳುತ್ತಾನೆ. ಶಿವನ ಅನುಗ್ರಹವಿದ್ದರೆ ಶಿವಲೋಕದ ವೈಭವವನ್ನು ಸಾಕ್ಷಾತ್ತಾಗಿ ನೋಡಬಹುದೆಂದು ಸ್ಪಷ್ಟಪಡಿಸುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.