ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಮೋಹಮನದ ಮದನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 18 ಮೇ 2022, 19:45 IST
Last Updated 18 ಮೇ 2022, 19:45 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ   

ಬ್ರಹ್ಮನ ಮನಸ್ಸಿನಿಂದ ಅತಿಲೋಕ ಸುಂದರಿಯಾದ ಸಂಧ್ಯೆ ಜನಿಸಿದಳು. ಸಂಧ್ಯೆಯ ಅಪ್ರತಿಮ ಸೌಂದರ್ಯಕ್ಕೆ ಆಕರ್ಷಿತರಾದ ಬ್ರಹ್ಮ ಮತ್ತವನ ಮಾನಸ ಪುತ್ರರು ಆಕೆಯನ್ನು ಮದುವೆಯಾಗಬೇಕೆಂದು ಯೋಚಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಬ್ರಹ್ಮನ ಮನಸ್ಸಿನಿಂದ ಸುಂದರನಾದ ಪುರುಷ ಜನಿಸಿದ. ಅವನಿಗೆ ಉನ್ನತವಾದ ಭುಜ, ಸುಂದರವಾದ ನಾಸಿಕ, ತುಂಬಿಕೊಂಡಂಥ ದುಂಡನೆಯದಾದ ತೊಡೆ, ಸಿಂಹದಂಥ ಸೊಂಟ, ಗಟ್ಟಿಯಾದ ಮೊಳಕಾಲು, ವಕ್ರವಾದ ಕಪ್ಪನೆಯ ತಲೆಗೂದಲು, ಹುಣ್ಣಿಮೆಯ ಚಂದ್ರನಂತಿರುವ ಮುಖ, ಹಲಗೆಯಂತೆ ವಿಶಾಲವೂ ದೃಢವೂ ಆದ ಎದೆ, ಆ ಎದೆಯಲ್ಲಿ ಸುಂದರವಾದ ರೋಮರಾಜಿಗಳು ಇದ್ದವು. ಒಟ್ಟಾರೆ, ಆತ ಉತ್ತಮ ಅಂಗಸೌಷ್ಠವದಿಂದ ಬಹು ಸುಂದರ ಪುರುಷನಾಗಿ ಪ್ರಕಾಶಿಸುತ್ತಿದ್ದ.

ಅವನಿಗೆ ಐರಾವತದಂತೆ ಉನ್ನತವೂ ಶುಭ್ರವೂ ಆದ ಆಕಾರವಿತ್ತು. ನೀಲವರ್ಣದ ಸುಂದರವಾದ ಬಟ್ಟೆಯನ್ನುಟ್ಟಿದ್ದ. ಕೆಂಪಾದ ಅಂಗೈ, ಆಕರ್ಷಕ ಕಣ್ಣುಗಳು, ಮನೋಹರವಾದ ಮುಖ, ದೃಢವಾದ ಅಂಗಾಲು ಮತ್ತು ಅದಕ್ಕೆ ಸ್ಫುಟವಾದ ಉಗುರುಗಳು ಇದ್ದವು. ಚಿಕ್ಕದಾದ ನಡು, ಸುಂದರವಾದ ದಂತಪಂಕ್ತಿಗಳು, ಕೊಬ್ಬಿದ ಸಲಗಂತೆ ಉನ್ನತವಾದ ಶರೀರ, ಅರಳಿದ ಕಮಲಗಳಂತಿರುವ ಕಣ್ಣುಗಳು, ಸಂಪಿಗೆಯಂತಿರುವ ನಾಸಿಕಗಳು ಅವನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದವು. ಸುವಾಸನೆಯಾದ ಕೇಸರಪುಷ್ಪವನ್ನು ಧರಿಸಿ, ಅದರ ಸುವಾಸನೆಯನ್ನು ಸುತ್ತಲೂ ಹರಡುತ್ತಿದ್ದ. ಶಂಖದಂತಿರುವ ಕಂಠ ಮತ್ತು ಎತ್ತರವಾದ ಶರೀರ ಹೊಂದಿದ್ದ. ವೇಗವಾಗಿ ಕಾರ್ಯಾಚರಿಸುವ ಹೂವಿನ ಐದು ಬಾಣಗಳನ್ನೂ ಮತ್ತು ಧನುಸ್ಸನ್ನೂ ಹಿಡಿದಿದ್ದ.

ಅತ್ತಿತ್ತ ದೃಷ್ಟಿಗಳನ್ನು ಚಲಿಸುತ್ತ ಕಣ್ಣುಗಳೆರಡನ್ನು ಸುಂದರವಾಗಿ ತಿರುಗಿಸುತ್ತಲಿದ್ದ. ಅವನ ಶ್ವಾಸವೂ ಸುವಾಸನೆಯಾಗಿತ್ತು. ಒಟ್ಟಾರೆ, ಶೃಂಗಾರರಸಮಯನಾಗಿದ್ದ ಆ ಪುರುಷನನ್ನು ನೋಡಿ ದಕ್ಷನೇ ಮೊದಲಾದ ನನ್ನ ಪುತ್ರರು ತುಂಬಾ ಆಶ್ಚರ್ಯಗೊಂಡು ಪರಮ ಕುತೂಹಲವುಳ್ಳವರಾದರು. ಆಗ ಮನ್ಮಥಾವಸ್ಥೆಯಿಂದ ಕೂಡಿರುವ ಆ ದಕ್ಷಾದಿಗಳ ಮನಸ್ಸು ವಿಕಾರವನ್ನು ಹೊಂದಿ, ತುಂಬಾ ಚಂಚಲವಾಯಿತು. ಆ ಪುರುಷನು ಜಗತ್ಕರ್ತನೂ ಜಗತ್ಪತಿಯೂ ಆದ ನನ್ನನ್ನು ನೋಡಿ ನಮಸ್ಕಾರಮಾಡಿದ. ನಂತರ ವಿನಯದಿಂದ ಕತ್ತನ್ನು ಬಗ್ಗಿಸಿ ನಿಂತು ಹೇಳಿದ, ‘ಓ ಬ್ರಹ್ಮನೇ! ನಾನು ಯಾವ ಕಾರ್ಯವನ್ನು ಮಾಡಬೇಕೋ ಅದರಲ್ಲಿ ನನ್ನನ್ನು ನಿಯಮಿಸು. ನಿನ್ನ ಮಾನಸಪುತ್ರನಾದ ನನಗೆ ಯೋಗ್ಯವಾದ ಹೆಸರನ್ನಿಡು. ಯೋಗ್ಯವಾದ ವಾಸಸ್ಥಾನ ಮತ್ತು ಪತ್ನಿಯನ್ನು ಕಲ್ಪಿಸು’ ಎಂದ.

ADVERTISEMENT

ಆ ಸುಂದರ ಪುರುಷನ ಮಾತುಗಳನ್ನು ಕೇಳಿ ಬ್ರಹ್ಮನಾದ ನನಗೆ ತುಂಬಾ ಆಶ್ಚರ್ಯ ಮತ್ತು ಮನಸ್ಸಿಗೆ ಪುಳಕವಾಯಿತು. ಸ್ವಲ್ಪ ಹೊತ್ತು ಏನನ್ನೂ ಹೇಳದೆ ಸುಮ್ಮನಿದ್ದು, ಮನಸ್ಸನ್ನು ಸ್ಥಿರವಾಗಿ ಮಾಡಿಕೊಂಡೆ. ನಂತರ ಆ ಪುರುಷನನ್ನು ಕುರಿತು ಹೀಗೆ ಹೇಳಿದೆ. ‘ಎಲೈ ಪುರುಷನೇ! ನಿನ್ನ ಈ ಸುಂದರ ಸ್ವರೂಪದಿಂದ ಮತ್ತು ನೀನು ಹಿಡಿದಿರುವ ಐದು ಪುಷ್ಪಬಾಣಗಳಿಂದ ಸ್ತ್ರೀ-ಪುರುಷರನ್ನು ಮೋಹಗೊಳಿಸುತ್ತಾ ಇರು. ಅನಾದಿಯಾದ ಈ ಸೃಷ್ಟಿಯನ್ನು ಬೆಳೆಸುವವನಾಗು. ಸ್ಥಾವರ-ಜಂಗಮಾತ್ಮಕವಾಗಿರುವ ಈ ಜಗತ್ತಲ್ಲಿರುವ ದೇವತೆಗಳೇ ಮೊದಲಾದ ಜೀವರೆಲ್ಲರೂ ನಿನ್ನ ಅಧೀನರಾಗಿರುವರು.

‘ನಾನೂ, ವಾಸುದೇವ, ರುದ್ರ ನಿನ್ನ ಅಧೀನರಾಗಿರುವೆವು. ತ್ರಿಮೂರ್ತಿಗಳಲ್ಲದೆ, ಸಾಮಾನ್ಯ ಪ್ರಾಣಿಗಳೂ ನಿನ್ನ ಮೋಹಪಾಶದಲ್ಲಿರುವರು. ಅದೃಶ್ಯವಾದ ರೂಪದಿಂದ ಪ್ರಾಣಿಗಳ ಹೃದಯವನ್ನು ಪ್ರವೇಶಿಸಿ ಕಾಮಸುಖಕ್ಕೆ ಪ್ರೇರೇಪಿಸು; ಅನಾದಿಯಾದ ಈ ಸೃಷ್ಟಿಯನ್ನು ವೃದ್ಧಿಗೊಳಿಸು. ಜನಗಳ ಮನಸ್ಸೇ ನಿನ್ನ ಪುಷ್ಪಬಾಣಗಳಿಗೆ ಸುಖವಾದ ಗುರಿಯಾಗಲಿ. ಎಲ್ಲಾ ಪ್ರಾಣಿಗಳಿಗೂ ನಿತ್ಯವೂ ಕಾಮಸುಖವನ್ನುಂಟುಮಾಡುತ್ತಿರು. ನಿನ್ನ ಕಾಮಬಾಣದಿಂದ ಸೃಷ್ಟಿಯನ್ನು ನಡೆಸುತ್ತಿರು. ಇದೇ ನೀನು ಮಾಡಬೇಕಾದ ಕರ್ತವ್ಯ. ನಿನ್ನ ನಿಜವಾದ ಹೆಸರನ್ನು ನನ್ನ ಮಾನಸಪುತ್ರರಾದ ದಕ್ಷಾದಿಗಳು ಹೇಳುವರು’ ಎಂದು ಹೇಳಿದ ಬ್ರಹ್ಮ ತನ್ನ ಆಸನವಾದ ಕಮಲದಲ್ಲಿ ಸ್ವಲ್ಪಹೊತ್ತು ಸುಮ್ಮನೆ ಕುಳಿತ. ನಂತರ ಆ ಸುಂದರ ಪುರುಷನಿಗೆ ಹೆಸರು ಸೂಚಿಸುವಂತೆ ತನ್ನ ಮಾನಸಪುತ್ರರಾದ ದಕ್ಷನೇ ಮೊದಲಾದವರತ್ತ ನೋಡಿದ ಎಂಬಲ್ಲಿಗೆ ಸತೀಖಂಡದ ಎರಡನೇ ಅಧ್ಯಾಯ ಮುಗಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.