ADVERTISEMENT

ದೇವಲೋಕದ ಶಿಲ್ಪಿ ವಿಶ್ವಕರ್ಮ

ಭಾನುಶ್ರೀ
Published 13 ಸೆಪ್ಟೆಂಬರ್ 2019, 19:30 IST
Last Updated 13 ಸೆಪ್ಟೆಂಬರ್ 2019, 19:30 IST
Vishwakarmaji.png
Vishwakarmaji.png   

ದೇವತೆಗಳ ಶಿಲ್ಪಿಯೇ ವಿಶ್ವಕರ್ಮ. ಇಡಿಯ ಸೃಷ್ಟಿಯ ಎಲ್ಲ ವಸ್ತುಗಳು ಅವನಿಂದಲೇ ನಿರ್ಮಿತವಾಗಿವೆ ಎನ್ನುವುದು ಪುರಾಣಗಳಲ್ಲಿ ಬರುವ ಒಕ್ಕಣೆ.

ವಿಶ್ವಕರ್ಮನ ತಂದೆ ಪ್ರಭಾಸ (ಅಷ್ಟವಸುಗಳಲ್ಲಿ ಒಬ್ಬ); ತಾಯಿ ಯೋಗಸಿದ್ಧಿ. ವಿಶ್ವಕರ್ಮ ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ. ಗುರುದಕ್ಷಿಣೆಯನ್ನು ಸಲ್ಲಿಸುವ ಸಮಯ. ಆಗ ಅವನ ಗುರುಗಳೂ ಗುರುಪತ್ನಿಯೂ ಕೆಲವೊಂದು ಅಪೂರ್ವ ವಸ್ತುಗಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆ. ‘ಎಂದೆಂದಿಗೂ ಹಳೆಯದಾಗದ ಮನೆ, ಹೊಲಿಗೆಯೇ ಇಲ್ಲದ ದಿರಿಸು, ಭೂಮಿ–ಆಕಾಶಗಳಲ್ಲೂ ಸಮಾನವಾಗಿರುವ ಎಂದಿಗೂ ಹರಿದುಹೋಗದ ಪಾದುಕೆಗಳು, ಎಂದೆಂದಿಗೂ ಮುರಿಯದ ಒನಕೆ, ತೊಳೆಯದಿದ್ದರೂ ಸದಾ ಹೊಳೆಯುತ್ತಲೇ ಇರುವ ಪಾತ್ರೆಗಳು’ ಹೀಗೆ ಇನ್ನೂ ಹಲವು ಅಪೂರ್ವ ವಸ್ತುಗಳು ಬೇಕೆಂದು ಅವನ ಗುರುಪರಿವಾರದವರು ಕೇಳುತ್ತಾರೆ.

‘ಆಗಲಿ’ ಎಂದು ವಿಶ್ವಕರ್ಮ ಒಪ್ಪಿಕೊಳ್ಳುತ್ತಾನೆ. ಆದರೆ ಅವನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಆಗ ಮುದಿತಾಪಸಿಯೊಬ್ಬ ಕಾಣಿಸಿಕೊಂಡು, ಶಿವನನ್ನು ಕುರಿತು ತಪಸ್ಸು ಮಾಡುವುದಂತೆ ಅವನಿಗೆ ಸೂಚಿಸುತ್ತಾನೆ. ಶಿವ ಅವನ ತಪಸ್ಸಿಗೆ ಮೆಚ್ಚಿ, ಪ್ರತ್ಯಕ್ಷನಾಗುತ್ತಾನೆ. ಅವನು ಕೇಳಿದ ವಸ್ತುಗಳನ್ನು ಮಾತ್ರವಲ್ಲದೆ, ಇನ್ನೂ ಹಲವು ವರಗಳನ್ನು ಅವನಿಗೆ ದಯಪಾಲಿಸುತ್ತಾನೆ. ಶಿಲ್ಪ, ಚಿತ್ರಕಲೆಗಳ ಪ್ರಾವೀಣ್ಯವನ್ನೂ ನೀಡುತ್ತಾನೆ. ಸಂಗೀತ–ನೃತ್ಯ ಮುಂತಾದ ಸಮಸ್ತ ಕಲೆಗಳಲ್ಲೂ ಅವನನ್ನು ಪ್ರವೀಣನನ್ನಾಗಿಸುತ್ತಾನೆ. ಹೀಗೆ ಎಲ್ಲ ಬಗೆಯ ವಿದ್ಯೆಗಳ ಸಿದ್ಧಿಯೂ ಅವನಿಗೆ ಒದಗುತ್ತದೆ.

ADVERTISEMENT

ಇದು ಪುರಾಣಗಳಲ್ಲಿ ಬರುವ ಕಥೆ. ಇದರ ಧ್ವನಿ: ವಿಶ್ವನಿರ್ಮಾಣದ ಕಾರ್ಯದಲ್ಲಿ ಪ್ರಜಾಪತಿಗೆ ಜೊತೆಯಾದ ದೇವತೆ ಇವನು; ಸೃಷ್ಟಿಯೇ ಒಂದು ಶಿಲ್ಪಕಾರ್ಯ. ಹೀಗಾಗಿ ವಿಶ್ವಕರ್ಮನನ್ನು ಮಹಾಶಿಲ್ಪಿಯಾಗಿ ಕಾಣಿಸಲಾಗಿದೆ. ದೇವತೆಗಳಿಗೆ ಬೇಕಾದ ಎಲ್ಲ ಬಗೆಯ ಆಯುಧ, ವಾಹನಗಳನ್ನೂ ಮಾಡಿಕೊಡುವವನು ಇವನೇ. ಸೂರ್ಯಮಂಡಲವನ್ನೇ ಬಳಸಿಕೊಂಡು ಮಹಾವಿಷ್ಣುವಿಗೆ ಸುದರ್ಶನಚಕ್ರವನ್ನು ನಿರ್ಮಿಸಿಕೊಟ್ಟು, ರಾಕ್ಷಸಸಂಹಾರಕ್ಕೆ ಸಹಕರಿಸಿದವನೂ ಇವನೇ.

ವೇದಗಳಲ್ಲಿಯೇ ವಿಶ್ವಕರ್ಮನ ಪ್ರಶಂಸೆಯನ್ನು ಕಾಣಬಹುದು. ಅಲ್ಲಿ ಬರುವ ಮಂತ್ರವೊಂದು ಹೀಗಿದೆ:

ವಿಶ್ವತಶ್ವಕ್ಷುರತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್‌ ‌‌|

ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನದ್ದೇವ ಏಕಃ ||

ಇದರ ತಾತ್ಪರ್ಯ: ‘ಎಲ್ಲೆಲ್ಲೂ ಹರಡಿಕೊಂಡಿರುವ ಕಣ್ಣುಗಳನ್ನು ಉಳ್ಳವನೂ, ಎಲ್ಲ ದಿಕ್ಕುಗಳಲ್ಲೂ ಮುಖಗಳನ್ನು ಹೊಂದಿರುವವನೂ, ಎಲ್ಲ ಕಡೆಗೂ ಬಾಹುಗಳನ್ನೂ ಪಾದಗಳನ್ನೂ ಚಾಚಿರುವವನೂ, ಆದ ಈಶ್ವರನು ತನ್ನ ಬಾಹುಗಳಿಂದ ದ್ಯುಲೋಕವನ್ನು ಪ್ರೇರಿಸುತ್ತಾನೆ. ಪಾದಗಳಿಂದ ಭೂಮಿಗೆ ಚೈತನ್ಯವನ್ನು ಉಂಟುಮಾಡುತ್ತಾನೆ. ದ್ಯಾವಾಪೃಥಿವಿಗಳ ಸೃಷ್ಟಿಕರ್ತನಾದ ವಿಶ್ವಕರ್ಮನು ಅದ್ವಿತೀಯನಾಗಿ ಪ್ರಕಾಶಿಸುತ್ತಾನೆ.’ ಒಟ್ಟು ಸೃಷ್ಟಿಯ ಹಿಂದಿರುವ ದೇವತಾತತ್ತ್ವವೇ ವಿಶ್ವಕರ್ಮ; ಎಲ್ಲ ಕಲೆ ಮತ್ತು ವಿದ್ಯೆಗಳಿಗೂ ಅವನೇ ಅಧಿದೇವತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.