ಕೊರೊನಾ ವೈರಸ್‌ನ ಉಪಟಳದಿಂದ ಇಡಿಯ ಪ್ರಪಂಚವೇ ನಲಗುತ್ತಿದೆ; ಲಕ್ಷಾಂತರ ಜನರು ಇದರಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ; ಅಸಂಖ್ಯಾತರು ಪ್ರಾಣವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಹೀಗಿದ್ದರೂ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಾಳೆ ಸಿಕ್ಕರೂ ಒಂದೇ ಕ್ಷಣದಲ್ಲಿ ಪರಿಸ್ಥಿತಿ ಎಲ್ಲವೂ ಸರಿಹೋಗುತ್ತದೆ – ಎನ್ನುವಂತಿಲ್ಲ. ಹೀಗಿದ್ದರೂ ನಮ್ಮ ಪ್ರತಿ ಕ್ಷಣದ ನಡೆವಳಿಕೆಯಲ್ಲೂ ಈ ಸಮಸ್ಯೆಗೆ ಪರಿಹಾರ ಇದೆ ಎನ್ನುವುದೂ ಸುಳ್ಳಲ್ಲ. ಸಾಮಾಜಿಕ ಅಂತರವನ್ನು ಪಾಲಿಸುತ್ತ, ಈ ವೈರಸ್ ಹರಡುವುದನ್ನು ತಡೆಗಟ್ಟುವುದೇ ಸದ್ಯದ ದೊಡ್ಡ ಪರಿಹಾರ. ಇದಕ್ಕೆ ನಮ್ಮ ಒಂದೊಂದು ಹೆಜ್ಜೆ ಉಪಕ್ರಮವೂ ತುಂಬ ಮಹತ್ವಪೂರ್ಣವಾದುದು. ಇಲ್ಲೊಂದು ಸುಭಾಷಿತ ನೆನಪಾಗುತ್ತದೆ:
ಯೋಜನಾನಾಂ ಸಹಸ್ರಂ ತು
ಶನೈರ್ಗಚ್ಛೇತ್ ಪಿಪೀಲಿಕಾ |
ಅಗಚ್ಛನ್ ವೈನತೇಯೋsಪಿ
ಪದಮೇಕಂ ನ ಗಚ್ಛತಿ ||
ಇದರ ಅನುವಾದವನ್ನು ಪಾ. ವೆಂ. ಆಚಾರ್ಯ ಅವರು ಹೀಗೆ ಮಾಡಿದ್ದಾರೆ:
ಸಾವಿರ ಗಾವುದ ಸಾಗಲು ಬಹುದು
ಇರುವೆಯಾದರೂ ನಡೆದೂ ನಡೆದೂ,
ಕೂತಲ್ಲಿದ್ದರೆ ಗರುಡನು ಕೂಡ
ಒಂದಗಲ ಮುನ್ನಡೆಯನು ಮಾಡ.
ಈ ಪದ್ಯ ನಮ್ಮ ಈಗಿನ ಸಂದರ್ಭಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತದೆ.
ಈಗ ಜಗತ್ತಿಗೆ ಎದುರಾಗಿರುವ ಸಮಸ್ಯೆ ತುಂಬ ತುಂಬ ದೊಡ್ಡದು; ಆದರೆ ಪರಿಹಾರ ಮಾತ್ರ ಇಲ್ಲ. ನಮ್ಮ ಮುಂದೆ ಇರುವ ಪರಿಹಾರದ ಮಾರ್ಗವೂ ತುಂಬ ಕಠಿಣ. ಸೋಂಕು ಹರಡಂತೆ ಎಚ್ಚರವಾಗಿರುವುದೇ ಸದ್ಯಕ್ಕಿರುವ ಪರಿಹಾರದ ಮಾರ್ಗ. ಲಾಕ್‌ಡೌನ್: ಇದನ್ನು ಸಾಧಿಸಿರುವುದಕ್ಕೆ ಸರ್ಕಾರ ಘೋಷಿಸಿರುವ ಮಂತ್ರ. ಈ ‘ಗೃಹದಿಗ್ಬಂಧನ’ದಲ್ಲಿ ಜೀವನ ಸಾಗಿಸುವುದು ಸುಲಭವಲ್ಲ. ಬಡವರಿಗೂ ಕಷ್ಟ, ಶ್ರೀಮಂತರಿಗೂ ಕಷ್ಟ. ಒಬ್ಬೊಬ್ಬರಿಗೂ ಒಂದೊಂದು ವಿಧದ ಕಷ್ಟ. ಆದರೆ ವಿಧಿಯಿಲ್ಲ; ನಾವು ಪರಸ್ಪರ ಅಂತರವನ್ನು ಪಾಲಿಸಬೇಕು; ಲಾಕ್‌ಡೌನ್‌ನ ನಿಯಮಗಳನ್ನು ಪಾಲಿಸಬೇಕು. ಇದೇ ನಮ್ಮ ಮುಂದಿರುವ ಪರಿಹಾರದ ಸೂತ್ರ. ಕೋವಿಡ್–19 ಎಂಬುದು ಮಹಾಮಾರಿ. ಈ ರೋಗಸಾಗರದ ವಿಸ್ತೀರ್ಣ ಸಾವಿರ ಸಾವಿರ ಮೈಲುಗಳಷ್ಟು. ಇದನ್ನು ದಾಟುವುದು ಸುಲಭವಲ್ಲ. ನಾವು ಒಬೊಬ್ಬರೂ ಕ್ರಮಿಸುವ ಒಂದೊಂದು ಹೆಜ್ಜೆಯೂ ಈ ಮಹಾಸಾಗರವನ್ನು ದಾಟಲು ನೆರವಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಬೇಕು.
ಸುಭಾಷಿತ ಇಲ್ಲೊಂದು ಸೊಗಸಾದ ಉದಾಹರಣೆಯ ಮೂಲಕ ನಮಗೆ ಪಾಠವನ್ನು ಹೇಳುತ್ತಿದೆ.
ಗರುಡನಿಗೆ ಹಾರುವ ಶಕ್ತಿ ಅಪಾರ; ಅವನು ದೇವಲೋಕಕ್ಕೆ ಹಾರಿ ಹೋಗಿ ಅಮೃತವನ್ನೇ ತಂದವನು. ಆದರೆ ಇರುವೆಗೆ ಅಂಥ ಶಕ್ತಿ ಇರದು; ಅದು ಒಂದೊಂದೇ ಕಣದಷ್ಟು ದೂರ ಮಾತ್ರವೇ ನಡೆಯಬಲ್ಲದು. ಹೀಗಿದ್ದರೂ ‘ನನಗೆ ಸಾವಿರಾರು ಮೈಲುಗಳ ದೂರವನ್ನು ಹಾರುವ ಶಕ್ತಿ ಇದೆ’ ಎಂದು ಗರುಡ ಏನಾದರೂ ಸುಮ್ಮನೇ ಕುಳಿತರೆ ಅವನಿಗೆ ಒಂದು ಅಡಿಯಷ್ಟು ಕೂಡ ಕ್ರಮಿಸಲು ಆಗದು. ಅದೇ ಇರುವೆಯೊಂದು ಸತತವಾಗಿ ಕಣಕಣದಷ್ಟು ನಡೆದರೂ ಹಲವು ದಿನಗಳಲ್ಲಿ ಅದು ಎಷ್ಟೋ ಮೈಲುಗಳನ್ನು ಕ್ರಮಿಸಲಾದೀತು.
ಕೊರೊನಾ ವೈರಸ್ಸನ್ನು ನಿಗ್ರಹಿಸುವುದು ಸುಲಭವಲ್ಲ, ದಿಟವೇ. ಅದರ ಮುಂದೆ ನಾವೆಲ್ಲರೂ ಇರುವೆಗಳಂತೆ. ಹೀಗಿದ್ದರೂ ನಾವು ಒಬ್ಬೊಬ್ಬರೂ ಎಚ್ಚರದಿಂದ ನಡೆದುಕೊಂಡರೆ ಈ ಕೊರೊನಾ ವಿರುದ್ಧದ ಸಮರದಲ್ಲಿ ನಮಗೆ ಜಯ ಸಿಕ್ಕೇ ಸಿಗುತ್ತದೆ. ಪ್ರತಿ ಕ್ಷಣವೂ ನಾವು ವಿವೇಕದಿಂದ ನಡೆದುಕೊಳ್ಳಬೇಕು; ಸೋಂಕು ಹರಡಲು ನಾವು ಕಾರಣರಾಗದಂತೆ ಎಚ್ಚರವಾಗಿ ನಡೆದುಕೊಳ್ಳಬೇಕು. ಪರಸ್ಪರ ಅಂತರವನ್ನು ಕಾಪಾಡಿಕೊಳ್ಳಬೇಕು. ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು. ಈ ಮಹಾಸಮರದಲ್ಲಿ ನಾವೆಲ್ಲರೂ ಸೈನಿಕರು ಎನ್ನುವುದನ್ನು ಮರೆಯಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.