ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ದೀರ್ಘಕಾಲೀನ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ದೊರೆಯುತ್ತದೆ. ರೇಶ್ಮೆ ಉದ್ದಿಮೆದಾರರಿಗೆ ವ್ಯಾಪಾರಕ್ಕೆ ಹೊಸ ಅವಕಾಶಗಳು ದೊರೆಯುತ್ತವೆ. ನಿಮ್ಮ ಮಕ್ಕಳಿಗೆ ಹಿತವಚನವನ್ನು ಹೇಳುವ ಮೊದಲು ಅದಕ್ಕೆ ಬೆಲೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿರಿ. ರಾಜಕೀಯ ಚಟುವಟಿಕೆಗಳು ಹೆಚ್ಚಾಗುತ್ತದೆ. ಸೂಕ್ತ ಸ್ಥಾನಮಾನ ಪಡೆಯಲು ಮೇಲಾಟ ನಡೆಸುವಿರಿ. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಸಾಕಷ್ಟು ಸೌಲಭ್ಯಗಳು ಸಿಗುತ್ತವೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಏಳಿಗೆ ಇದೆ. ಅನಿರೀಕ್ಷಿತ ಖರ್ಚು ಬರಬಹುದು.
ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕುಟುಂಬದಲ್ಲಿ ನಿಮ್ಮ ನಿಲುವುಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕಾಗಬಹುದು. ಆಟಿಕೆ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಲು ಹೆಚ್ಚು ಹಣ ಖರ್ಚು ಮಾಡುವಿರಿ. ಸರ್ಕಾರಿ ಸಾಲ ಸಿಗುವುದು ನಿಧಾನವಾಗಬಹುದು. ಕೆಲವು ಸ್ತ್ರೀಯರಿಗೆ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯುತ್ತದೆ. ಧರ್ಮ ಕಾರ್ಯಗಳನ್ನು ಮಾಡುವ ಬಗ್ಗೆ ಆಲೋಚನೆ ಮಾಡುವಿರಿ. ಅಜೀರ್ಣ ಕಾಡಬಹುದು. ಸಂಗಾತಿಯೊಡನೆ ಅನುಬಂಧ ಹೆಚ್ಚಾಗುವುದು. ಹಿರಿಯರಿಂದ ಹಣದ ಉಡುಗೊರೆ ದೊರೆಯಬಹುದು. ವೃತ್ತಿಯಲ್ಲಿ ವೇತನ ಹೆಚ್ಚಳದ ಲಕ್ಷಣ ಗೋಚರಿಸುತ್ತಿದೆ. ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳಿಗೆ ಹೆಚ್ಚಿನ ಆದಾಯವಿರುತ್ತದೆ.
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಬಟ್ಟೆ ವ್ಯಾಪಾರಿಗಳಿಗೆ ಹೊಸ ಮಳಿಗೆಗಳನ್ನು ತೆರೆಯುವ ಯೋಗವಿದೆ. ವಿದೇಶಿ ಹಣ ವ್ಯವಹಾರ ಮಾಡುವವರಿಗೆ ಹೆಚ್ಚಿನ ವ್ಯವಹಾರ ಒದಗುತ್ತದೆ. ಒಟ್ಟು ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಸ್ಥಾನ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ಶರೀರದಲ್ಲಿ ಪಿತ್ತೋಷ್ಣ ಹೆಚ್ಚಾಗಬಹುದು. ಸಂಗಾತಿಗೆ ಉತ್ತಮ ಕೆಲಸ ದೊರೆಯುವ ಸಾಧ್ಯತೆಗಳಿವೆ. ರಾಜಕೀಯದವರೊಡನೆ ಸೇರಿ ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಅಧ್ಯಾಪಕರಿಗೆ ಹೆಚ್ಚಿನ ಸ್ಥಾನಮಾನ, ಗೌರವ ದೊರೆಯುತ್ತದೆ. ವಿದೇಶಗಳಿಗೆ ಸಾಂಪ್ರದಾಯಿಕ ಅಡಿಗೆ ವಸ್ತುಗಳನ್ನು ರಫ್ತು ಮಾಡುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಕೃಷಿ ಕೆಲಸಗಳಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ಕಾಲುಗಳಿಗೆ ಗಾಯವಾಗಬಹುದು, ಎಚ್ಚರವಹಿಸಿರಿ.
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ವೃತ್ತಿಯಲ್ಲಿ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುತ್ತದೆ. ತಂದೆಯಿಂದ ಪಾರಂಪರಿಕ ವಿದ್ಯೆಗಳ ಬಗ್ಗೆ ತಿಳಿವಳಿಕೆ ಸಿಗುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿದ್ದರೂ ಖರ್ಚು ಹೆಚ್ಚಿಗೆ ಇರುತ್ತದೆ. ಆಸ್ತಿ ವಿಚಾರದಲ್ಲಿ ಹೆಚ್ಚಿನ ಬೆಳವಣಿಗೆಗಳು ಆಗುತ್ತವೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಸಂಗಾತಿಯು ಹೆಚ್ಚು ಕೋಪಿಸಿಕೊಂಡರೂ ನಂತರ ಸರಿಯಾಗುವರು. ಒಡವೆ ವಸ್ತುಗಳ ಬಗ್ಗೆ ಹೆಚ್ಚು ಎಚ್ಚರವಹಿಸಿರಿ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿ ಇರುತ್ತದೆ. ಒಡಹುಟ್ಟಿದವರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ.
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಆತ್ಮಗೌರವ ಹೆಚ್ಚಾಗಿರುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕಿರುತ್ತದೆ. ನಿಮ್ಮ ಧನ ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬಂಧುಗಳಲ್ಲಿ ವೈಮನಸ್ಸು ಮೂಡಬಹುದು. ವೃತ್ತಿಯಲ್ಲಿ ಅಂತಹ ತೊಂದರೆಗಳಿರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಮೂತ್ರ ಸಂಬಂಧಿ ಕಾಯಿಲೆ ಇರುವವರು ಚಿಕಿತ್ಸೆಗೆ ಹೋಗಬೇಕಾಗಬಹುದು. ನಿಮ್ಮ ಸಂಗಾತಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಅಧ್ಯಾಪಕರು ಬೋಧಿಸುವ ಮೊದಲು ಸರಿಯಾದ ತಯಾರಿ ಮಾಡಿಕೊಳ್ಳುವುದು ಬಹಳ ಉತ್ತಮ. ವಿದೇಶಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಕ್ರೀಡಾಪಟುಗಳಿಗೆ ಉದ್ಯೋಗ ದೊರೆಯುವ ಲಕ್ಷಣಗಳಿವೆ.
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಕುಟುಂಬದಲ್ಲಿ ಹಣಕಾಸಿನ ವ್ಯತ್ಯಾಸಗಳು ಹೆಚ್ಚಾಗಬಹುದು. ಬಾಯಿಹುಣ್ಣು ಅಥವಾ ಕೆಮ್ಮಿನ ತೊಂದರೆ ಎದುರಾಗಬಹುದು. ತಂದೆಯಿಂದ ಧನಸಹಾಯ ದೊರೆಯಬಹುದು. ಸಂಗಾತಿಗೆ ಪಿತ್ರಾರ್ಜಿತ ಆಸ್ತಿ ಅಥವಾ ವಸ್ತುಗಳು ದೊರೆಯಬಹುದು. ವಿದ್ಯಾರ್ಥಿಗಳಿಗೆ ಮಂದಗತಿಯ ಪ್ರಗತಿ ಇರುತ್ತದೆ. ಮೂಳೆ ನೋವು ಕೆಲವರಿಗೆ ಬಾಧಿಸಬಹುದು. ಸಂಗಾತಿಯ ಸಂಪಾದನೆಯಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ವಿದೇಶಗಳಿಗೆ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಕಾನೂನಿನ ತೊಡಕು ಬರಬಹುದು. ದೈಹಿಕ ಕ್ಷಮತೆಯ ಪಾಠ ಹೇಳುವವರಿಗೆ ಬೇಡಿಕೆ ಬರುತ್ತದೆ. ಕಾರ್ಮಿಕರ ಜೀವನಮಟ್ಟದಲ್ಲಿ ಸುಧಾರಣೆಯನ್ನು ಕಾಣಬಹುದು. ಕುರುಕು ತಿಂಡಿಯನ್ನು ಮಾಡಿ ಮಾರಾಟ ಮಾಡುವವರ ವ್ಯಾಪಾರ ಹೆಚ್ಚಾಗಿ ಲಾಭವೂ ಬರುತ್ತದೆ.
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಬಂಧುಗಳಲ್ಲಿ ಹಿರಿಯರು ನಿಮ್ಮ ಬಗ್ಗೆ ಅಸಹನೆಯನ್ನು ತೋರುವರು. ಇಷ್ಟಪಟ್ಟ ನಿವೇಶನದ ಬೆಲೆ ಹೆಚ್ಚಾಗಬಹುದು. ಮಕ್ಕಳಿಗೆ ಏಳಿಗೆ ಹಿತಕರವಾಗಿರುವುದಿಲ್ಲ. ಪಿತ್ತ ವಿಕಾರಗಳು ಸ್ವಲ್ಪ ಬಾಧಿಸಬಹುದು. ಕೆಲಸ ಕಾರ್ಯಗಳಿಗೆಂದು ಕೊಟ್ಟ ಹಣ ವಾಪಸ್ಸು ಬರುವುದಿಲ್ಲ. ವಿದೇಶದಲ್ಲಿ ನೆಲೆಸಿರುವ ಅವಿವಾಹಿತರಿಗೆ ವಿವಾಹದ ಯೋಗವಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಯತ್ನಪಡುವಿರಿ. ವೃತ್ತಿಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಒಟ್ಟು ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಹೆಚ್ಚಿನ ಲಾಭವಿರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ.
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಕೆಲಸ ಕಾರ್ಯಗಳಲ್ಲಿ ಚುರುಕುತನ ಕಾಣಬಹುದು. ಭಾಷಣಕಾರರಿಗೆ ಉತ್ತಮ ವೇದಿಕೆ ದೊರಕುತ್ತದೆ. ಸ್ತ್ರೀಯರು ತಮ್ಮ ಬಂಧುಗಳ ದ್ವೇಷವನ್ನು ಚಾಣಾಕ್ಷತನದಿಂದ ನಿವಾರಿಸಿಕೊಳ್ಳುವರು. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಒದಗುವ ಕಾಲ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಗಳನ್ನು ಕೇಳುವಿರಿ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ಕೆಲವರಿಗೆ ಸಂಬಂಧಗಳಲ್ಲಿ ಸಂಗಾತಿ ದೊರೆಯುವರು. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಮುನ್ನಡೆಯನ್ನು ಕಾಣಬಹುದು. ಸರ್ಕಾರಿ ಸಂಸ್ಥೆಗಳ ಜೊತೆಗೆ ವ್ಯವಹಾರ ಮಾಡುವವರಿಗೆ ಆದಾಯ ವೃದ್ಧಿಸುತ್ತದೆ. ತಾಯಿಯ ಕಡೆಯವರಿಗೆ ಸ್ವಲ್ಪ ಧನಸಹಾಯ ಮಾಡುವಿರಿ. ಧನ ಆದಾಯವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ನಿಮ್ಮ ನಡವಳಿಕೆ ಸಂಪೂರ್ಣ ವ್ಯವಹಾರಿಕವಾಗಿರುತ್ತದೆ. ಹಣದ ಒಳಹರಿವಿನಲ್ಲಿ ಏರಿಕೆಯನ್ನು ಕಾಣಬಹುದು. ಸೂಕ್ಷ್ಮವಾಗಿ ಮಾತಾಡಿ ನಿಮ್ಮ ಶತ್ರುಗಳನ್ನು ಗೆಲ್ಲುವಿರಿ. ಆಸ್ತಿ ವಿಚಾರಗಳಲ್ಲಿ ಶುಭ ಸಮಾಚಾರ ಕೇಳಿ ಬರಲಿದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ಹೆಣ್ಣು ಮಕ್ಕಳ ಅಭಿವೃದ್ಧಿಯು ಸ್ವಲ್ಪ ನಿಧಾನಗತಿಯಲ್ಲಿ ಇರುತ್ತದೆ. ಕೈಕಾಲುಗಳಿಗೆ ಗಾಯವಾಗುವ ಸಂದರ್ಭವಿದೆ, ಎಚ್ಚರವಹಿಸಿರಿ. ಸಂಗಾತಿಯಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆ ಪಾಲುದಾರಿಕೆ ವ್ಯವಹಾರ ಮಾಡುವವರು ಅಭಿವೃದ್ಧಿಯನ್ನು ಕಾಣುವರು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉನ್ನತಿಯನ್ನು ಕಾಣುವಿರಿ. ತಂದೆಯಿಂದ ವ್ಯವಹಾರದ ಒಳಸುಳಿಗಳನ್ನು ಅರಿಯುವಿರಿ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಸ್ಥಾನಮಾನ ಹೆಚ್ಚಾಗಬಹುದು.
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಶ್ರಮಪಟ್ಟು ಕೆಲಸ ಮಾಡಿ ಉತ್ತಮ ಹೆಸರನ್ನು ಪಡೆಯುವಿರಿ. ಹಣದ ಹರಿವು ಸಾಮಾನ್ಯವಾಗಿರುತ್ತದೆ. ಒಡಹುಟ್ಟಿದವರ ಸಹಾಯ ನಿಮಗೆ ಒದಗಿ ಬರುತ್ತದೆ. ಉತ್ತಮ ಗುಣಗಳಿಂದ ಜನರನ್ನು ಗೆಲ್ಲುವಿರಿ. ಆಸ್ತಿ ವಿಚಾರದಲ್ಲಿ ಸದ್ಯಕ್ಕೆ ಮುಂದುವರಿಯುವುದು ಬೇಡ. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಉತ್ತಮ ಮುನ್ನಡೆ ಇದೆ. ರಕ್ತ ಸಂಬಂಧಿ ಕಾಯಿಲೆಗಳಿರುವವರು ಎಚ್ಚರಿಕೆ ತೆಗೆದುಕೊಳ್ಳಿ. ಕೆಲಸ ಮಾಡುವ ಸ್ಥಳಗಳಲ್ಲಿ ಪ್ರೀತಿ ಪ್ರೇಮ ಉಂಟಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಅನಿರೀಕ್ಷಿತ ಪ್ರಗತಿಯನ್ನು ಕಾಣಬಹುದು. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಸ್ಥಾನ ದೊರೆಯುತ್ತದೆ. ಧಾರ್ಮಿಕ ವಿದ್ಯೆಯನ್ನು ಕಲಿಯುವ ಆಸಕ್ತಿ ಹೆಚ್ಚುತ್ತದೆ. ಭೂಮಿಯನ್ನು ಅಭಿವೃದ್ಧಿಪಡಿಸುವವರಿಗೆ ಹೆಚ್ಚು ಕೆಲಸದ ಜೊತೆಗೆ ಧನ ಸಂಪಾದನೆ ಆಗುತ್ತದೆ.
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ದೃಢ ನಿರ್ಧಾರಗಳನ್ನು ಕೈಗೊಳ್ಳುವುದು ಬಹಳ ಉತ್ತಮ. ಹಣದ ಹರಿವು ಅಗತ್ಯವನ್ನು ಪೂರೈಸುತ್ತದೆ. ಸಂಗೀತಗಾರರಿಗೆ ಬೇಡಿಕೆ ಬರುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ಒಡಹುಟ್ಟಿದವರಿಂದ ಉತ್ತಮ ಸಹಕಾರ ಇರುವುದಿಲ್ಲ. ಆಸ್ತಿ ವಿಷಯದಲ್ಲಿ ಮುನ್ನಡೆಯನ್ನು ಕಾಣುವಿರಿ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ತೆರಿಗೆ ತಜ್ಞರಿಗೆ ಮತ್ತು ಗಣಿತಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಶೀತಬಾಧೆ ಇರುವವರು ಚಿಕಿತ್ಸೆ ಪಡೆದುಕೊಳ್ಳಿರಿ. ಸಂಗಾತಿ ಕಡೆಯಿಂದ ಧನಸಹಾಯ ಮತ್ತು ರಾಜಕೀಯ ಸಹಾಯಗಳು ಒದಗುತ್ತವೆ. ಸ್ವಂತ ವ್ಯಾಪಾರ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಲಾಭ ಬರುತ್ತದೆ. ವೃತ್ತಿಯಲ್ಲಿ ಹುಂಬತನ ಬೇಡ. ಇದು ನಿಮಗೆ ನಷ್ಟ ತರಬಹುದು. ಧಾರ್ಮಿಕ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಬೇಡಿಕೆ ಬರಬಹುದು.
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಅತಿಯಾದ ಆತ್ಮಾಭಿಮಾನ ನಿಮಗಿರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಉತ್ತಮ ಆಸ್ತಿಯೊಂದನ್ನು ಈಗ ಖರೀದಿ ಮಾಡುವ ಯೋಗವಿದೆ. ಮಕ್ಕಳಿಗಾಗಿ ಧನ ವ್ಯಯ ಆಗಬಹುದು. ಮೂತ್ರ ಸಂಬಂಧಿ ಕಾಯಿಲೆ ಇರುವವರು ಚಿಕಿತ್ಸೆ ತೆಗೆದುಕೊಳ್ಳುವುದು ಬಹಳ ಉತ್ತಮ. ಹಿರಿಯರ ವಶೀಲಿಯಿಂದ ಕೆಲಸ ಸಿಗುವ ಸಾಧ್ಯತೆಗಳಿವೆ. ಅನಿರೀಕ್ಷಿತ ಖರ್ಚು ಎದುರಾಗುವ ಸಾಧ್ಯತೆಗಳಿವೆ. ಪಿತ್ರಾರ್ಜಿತ ಆಸ್ತಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ವೃತ್ತಿಯಲ್ಲಿ ಗೌರವ ದೊರೆಯುತ್ತದೆ. ಅದಿರು ತೆಗೆಯುವ ಉದ್ಯಮವನ್ನು ನಡೆಸುತ್ತಿರುವವರಿಗೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗುತ್ತದೆ. ಹೂ ಮತ್ತು ಹಣ್ಣಿನ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.