ವರ್ಷ ಬದಲಾಗುವುದು ಎಂದರೆ ಕ್ಯಾಲೆಂಡರ್ ಬದಲಾಗುವುದಷ್ಟೇ ಅಲ್ಲ.ಕಳೆದ ವರ್ಷ ಏನೆಲ್ಲಾ ಮಾಡಬೇಕು ಅಂದುಕೊಂಡಿದ್ದೆವು? ಅದರಲ್ಲಿ ಎಷ್ಟೆಲ್ಲಾ ಬಾಕಿಯಾಯ್ತು ಎಂಬ ಲೆಕ್ಕಾಚಾರದ ದಿನವೂ ಹೌದು. ಈ ವರ್ಷದ ಮೊದಲ ದಿನ ಇಡೀ ವರ್ಷ ಹೇಗಿದ್ದೀತು ಎಂಬ ಕುತೂಹಲ ಸಹಜ. ನಿಮ್ಮ ಕುತೂಹಲ ತಣಿಸಲೆಂದೇ2020ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಎಲ್ಲ ರಾಶಿಗಳ ಫಲಾಫಲಗಳ ಇಣುಕುನೋಟ ಇಲ್ಲಿದೆ. ಯಾರೆಲ್ಲ ಕಾರು, ಮನೆ ಖರೀದಿಸಬಹುದು?ಯಾರಿಗೆಲ್ಲ ಈ ವರ್ಷ ಕಾಂಚಾಣದ ಮಳೆ ಸುರಿಯಬಹುದು?ಪ್ರೀತಿ–ಪ್ರೇಮ–ಪ್ರಣಯದಲ್ಲಿ ಯಾರಿಗೆಲ್ಲ ಯಶಸ್ಸು ದೊರೆಯಲಿದೆ?ವರ್ಷ ಭವಿಷ್ಯ ಓದಿ, ಕುತೂಹಲ ತಣಿಸಿಕೊಳ್ಳಿ. ಇದು ನಿಮ್ಮ ಜನ್ಮದಿನಾಂಕವನ್ನು ಆಧರಿಸಿದೆ.
ಮೇಷ(ಜನ್ಮದಿನಾಂಕ– ಮಾರ್ಚ್ 22ರಿಂದ ಏಪ್ರಿಲ್ 20):ಈ ವರ್ಷವು ನಿಮಗೆ ಖುಷಿ ತರಲಿದೆ. ನಿಮ್ಮ ಉತ್ಸಾಹ ಮತ್ತು ಪ್ರಯತ್ನಗಳಿಗೆ ತಕ್ಕ ಫಲ ಸಿಗಬಹುದು. ಅದರಿಂದಾಗಿ ಓಡಾಟ ಮತ್ತು ಲಾಭಗಳು ಹೆಚ್ಚಾಗಬಹುದು. ವರ್ಷದಲ್ಲಿ ದಿನಗಳು ಮುಂದುವರಿದಂತೆ ನಿಮ್ಮ ಕೆಲಸಗಳನ್ನು ಜನರು ಗುರುತಿಸುತ್ತಾರೆ. ಸಾರ್ವಜನಿಕ ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ಸೋಮಾರಿತನ ಕೈಬಿಟ್ಟರೆ ನೀವು ಕನಸು ಕಂಡಿರುವುದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಬಹುದು. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಮಾತಾಡಬೇಕು ಎಂದು ಎರಡುಪಟ್ಟು ಹೆಚ್ಚು ಕಷ್ಟಪಡ್ತೀರಿ. ಓದಿದ ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತೀರಿ. ಆರೋಗ್ಯ ಮತ್ತು ಉತ್ಸಾಹವೂ ಈ ವರ್ಷ ಚೆನ್ನಾಗಿರುತ್ತೆ. ಹಳೇ ಸಾಲಗಳು ಚುಕ್ತಾ ಆಗಬಹುದು. ಇಷ್ಟಪಟ್ಟವರನ್ನು ಸಂಗಾತಿಯಾಗಿಸಿಕೊಳ್ಳಬೇಕೆಂಬ ಬಹುದಿನಗಳ ನಿಮ್ಮ ಕನಸು ಈ ವರ್ಷ ಕೈಗೂಡಲಿದೆ. ಮಗುವಿನ ನಗುವೂ ನಿಮ್ಮ ಕೌಟುಂಬಿಕ ಜೀವನದ ಸುಖ ಹೆಚ್ಚಿಸುವ ಸಾಧ್ಯತೆಗಳಿವೆ.
ವೃಷಭ(ಜನ್ಮದಿನಾಂಕ– ಏಪ್ರಿಲ್ 21ರಿಂದ ಮೇ 21): ಇದು ನಿಮ್ಮ ಬದುಕು ಮುನ್ನಡೆ ಕಾಣುವ ಕಾಲ. ಕಳೆದ ಕೆಲ ವರ್ಷಗಳಿಂದ ನಿರಾಸೆಗಳು ನಿಮ್ಮ ಭಾವನೆಗಳನ್ನು ಮತ್ತು ಆರ್ಥಿಕ ಸ್ಥಿತಿಯನ್ನು ಘಾಸಿಗೊಳಿಸಿವೆ. ಈ ವರ್ಷ ದಿನಕಳೆದಂತೆ ನಿಮ್ಮ ಬದುಕು ಸುಧಾರಿಸುತ್ತಿರುವುದು ಅನುಭವಕ್ಕೆ ಬರಲಿದೆ. ಬಹುಕಾಲದಿಂದ ಬಾಕಿಯಿರುವ ಆಸ್ತಿ ವಿವಾದಗಳು ಪರಿಹಾರವಾಗುತ್ತವೆಯಾದರೂ, ಅಂತಿಮ ನಿರ್ಣಯಗಳು ಎಲ್ಲ ಸಂದರ್ಭಗಳಲ್ಲಿಯೂ ನಿಮ್ಮ ನಿರೀಕ್ಷೆಯಂತೆ ಇರುವುದಿಲ್ಲ. ಸಮಾಜಸೇವೆಯನ್ನು ಇನ್ನಷ್ಟು ಶ್ರದ್ಧೆಯಿಂದ ಮಾಡಬೇಕು ಎಂದು ಬಯಸುತ್ತೀರಿ. ಸಾಕುಪ್ರಾಣಿಯೊಂದರ ಕಡೆಗೆ ನಿಮ್ಮ ಒಲವು ಮತ್ತು ಭಾವನಾತ್ಮಕ ಅವಲಂಬನೆ ಹೆಚ್ಚಾಗಬಹುದು. ನಿಮ್ಮ ಅತ್ತೆ–ಮಾವ–ಸೊಸೆ–ಅಳಿಯನ ಜೊತೆಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ಇಲ್ಲದಿದ್ದರೆ ವೃಥಾ ಜಗಳಗಳಿಗೆ ಕಾರಣವಾಗಬಹುದು. ವರ್ಷಾಂತ್ಯದ ಹೊತ್ತಿಗೆ ನಿಮ್ಮ ಘನತೆ ಮತ್ತು ಔದಾರ್ಯ ಹೆಚ್ಚಾಗಲಿದೆ. ಈ ಹಿಂದೆ ನಿಮ್ಮನ್ನು ಬಾಧಿಸಿದ್ದ, ಹಳಸಿದ್ದ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಪ್ರಯತ್ನ ಪಡುವಿರಿ. ಗುರಿ ನಿರ್ಧಾರದ ವಿಚಾರದಲ್ಲಿ ನಿಮ್ಮ ಸಂಗಾತಿಯೊಂದಿಗೆ ಭಿನ್ನಮತ ತಲೆದೋರಬಹುದು. ಆರೋಗ್ಯ ಕ್ಷೇತ್ರ, ರಿಯಲ್ ಎಸ್ಟೇಟ್ ಮತ್ತು ವಿಮಾ ಕ್ಷೇತ್ರಗಳಲ್ಲಿರುವವರು ಹೆಚ್ಚು ಎಚ್ಚರಿಕೆಯಿಂದ ವ್ಯವಹರಿಸಬೇಕು. ಹಣಕಾಸುನಿರ್ವಹಣೆ ವಿಚಾರದಲ್ಲಿ ಕಾಳಜಿ ಅಗತ್ಯ.
ಮಿಥುನ(ಜನ್ಮದಿನಾಂಕ– ಮೇ 22ರಿಂದ ಜೂನ್ 21): ಜೀವಮಾನವಿಡೀ ನೆನಪಿಟ್ಟುಕೊಳ್ಳುವಂಥ ಬೆಳವಣಿಗೆಗಳು ಈ ವರ್ಷ ನಡೆಯಲಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಯಶಸ್ಸು ಗಳಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಬದುಕಿನ ಹಾದಿಯನ್ನು ಒಳಿತಿನತ್ತ ತಿರುಗಿಸಿಕೊಳ್ಳುವ ಅವಕಾಶಗಳು ಹಲವು ಬಾರಿ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಅಂಥ ಅವಕಾಶಗಳನ್ನು ದಕ್ಕಿಸಿಕೊಳ್ಳಲು ನೀವು ಎಷ್ಟು ಪರಿಶ್ರಮ ಹಾಕುತ್ತೀರಿ ಎನ್ನುವುದರ ಮೇಲೆ ಫಲಾಫಲಗಳು ನಿರ್ಣಯವಾಗುತ್ತವೆ. ನಿಮ್ಮ ಹಲವು ಹಳೆಯ ಹವ್ಯಾಸಗಳನ್ನು ನೀವು ಬಿಡಬೇಕಾಗಬಹುದು. ನಿಮ್ಮ ಸುತ್ತಲೂ ಇರುವವರ ಬಗ್ಗೆ ಹೆಚ್ಚು ನಿಗಾ ಇಡಿ. ಒರಟುತನದಿಂದ ಅನಾಹುತಗಳೇ ಹೆಚ್ಚು. ಉದ್ಯೋಗದಲ್ಲಿ ಬಡ್ತಿ ಸಿಗುವ, ಪೂರ್ವಿಕರ ಸಂಪತ್ತು ನಿಮ್ಮದಾಗುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ವ್ಯವಹಾರಗಳನ್ನು ವಿದೇಶಗಳಿಗೆ ವಿಸ್ತರಿಸುವ ಅವಕಾಶಗಳು ಸಿಗುತ್ತವೆ. ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೆ ಲಾಭ ಹೆಚ್ಚಾಗಲಿದೆ. ನೀವು ತುಸುವೇ ಪ್ರಯತ್ನಪಟ್ಟರೂ ಆಪ್ತರೊಡನೆ ಇರುವ ಸಣ್ಣಪುಟ್ಟ ವೈಮನಸ್ಯಗಳು ದೂರವಾಗಲಿದೆ. ಸಂತಾನಪ್ರಾಪ್ತಿಯ ಸಾಧ್ಯತೆ ಇದೆ. ನಿಮ್ಮ ಆರೋಗ್ಯವೂ ಸುಧಾರಿಸಲಿದೆ.
ಕಟಕ(ಜನ್ಮದಿನಾಂಕ– ಜೂನ್22 ರಿಂದಜುಲೈ23):2020ನೇ ವರ್ಷ ನಿಮಗೆ ಮಿಶ್ರಫಲ ನೀಡುತ್ತದೆ. ವರ್ಷಾರಂಭದಲ್ಲಿ ವೃತ್ತಿ ಜೀವನ ಉತ್ತಮವಾಗಲಿದೆ. ಹೊಸ ಕೌಶಲ ಮತ್ತು ಜ್ಞಾನಕ್ಕಾಗಿ ನೀವು ಪ್ರಾಮಾಣಿಕವಾಗಿ ದುಡಿಯಲಿದ್ದೀರಿ. ನಿಮ್ಮ ಕಿರಿಯರಿಗೆ ಅಥವಾ ಸಹೋದ್ಯೋಗಿಗಳಿಗೆ ಅವರ ಗುರಿ ತಲುಪಲು ನೆರವು ನೀಡಲಿದ್ದೀರಿ. ಈ ರಾಶಿಯಲ್ಲಿ ಜನಿಸಿದ ಕೆಲವರಿಗೆ ಬೇರೆ ವಿಭಾಗಕ್ಕೆ ಅಥವಾ ಬೇರೆ ಪ್ರದೇಶಕ್ಕೆ ವರ್ಗ ಸಾಧ್ಯತೆ ಇದೆ. ನೀವು ಸೂಕ್ಷ್ಮ ಮನಸ್ಸಿನವರಾಗಿರುವ ಕಾರಣ ವದಂತಿಗಳು ನಿಮ್ಮನ್ನು ದೃತಿಗೆಡಿಸಬಹುದು.ಹೆಚ್ಚಿನ ನಿರೀಕ್ಷೆಗಳಿಲ್ಲದೆ ಕಠಿಣ ಪ್ರಯತ್ನ ಪಡಬೇಕಾಗಿ ಬರುವುದು. ಸರಿಯಾದ ಸಮಯದಲ್ಲಿ ಮೆಚ್ಚುಗೆ ಮತ್ತು ಅಂಗೀಕಾರಗಳು ಲಭಿಸಲಿವೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಿ. ಆತಂಕ, ಅಜೀರ್ಣ, ಎದೆಯುರಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯ ತಲೆದೋರಬಹುದು. ನಿಮ್ಮ ಆಪ್ತ ವಯಲದಲ್ಲಿ ವೈಯಕ್ತಿಕ ಸಂಬಂಧಗಳನ್ನು ನಿಭಾಯಿಸವು ಹೆಚ್ಚಿನ ತಾಳ್ಮೆ ಬೇಕಾಗುತ್ತದೆ. ಸಂಘರ್ಷಗಳನ್ನು ಹೋಗಲಾಡಿಸಲು ಮುಕ್ತವಾಗಿ ಸಂವಹನ ನಡೆಸಿ.
ಸಿಂಹ (ಜನ್ಮದಿನಾಂಕ–ಜುಲೈ 24 ರಿಂದ ಆಗಸ್ಟ್ 21):ಈ ವರ್ಷ ಪ್ರತಿಫಲಗಳು ದೊರೆಯಲಿವೆ. ನೀವು ನಿರೀಕ್ಷಿಸುತ್ತಿದ್ದ ಕಾರ್ಯ ನೆರವೇರುವ ಸಾಧ್ಯತೆ ಇದೆ. ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದ್ದು, ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳಲಿದೆ. ಸಾರ್ವಜನಿಕ ವೇದಿಕೆಗಳಿಂದಲೂ ಸ್ಥಾನಮಾನ, ಮೆಚ್ಚುಗೆ ಲಭಿಸಲಿದೆ.ಈ ಹಿಂದೆ ನೀವು ಕೈಗೊಂಡ ನಿರ್ಧಾರಗಳು ಈಗ ಫಲ ನೀಡಲಿವೆ, ನಿಮ್ಮ ಹಿರಿಯರಿಂದ ಮೆಚ್ಚುಗೆ ಮತ್ತು ಗೌರವ ಪ್ರಾಪ್ತಿಯಾಗಲಿದೆ. ನೀವು ಶ್ರದ್ಧೆ, ಉತ್ಸಾಹ ಮತ್ತು ಅನುಭವಗಳನ್ನು ಹೊಂದಿದ್ದೀರಿ, ಕೆಲವರು ಹೊಸ ಮನೆ/ ಆಸ್ತಿ ಹೊಂದಲಿದ್ದೀರಿ. ಹೂಡಿಕೆದಾರರು ಅಥವಾ ಸಾಲ ಪಡೆಯಲು ಬಯಸಿದವರೆ ಅದು ಲಭ್ಯವಾಗಲಿದೆ. ಈ ವರ್ಷ ನಿಮ್ಮ ಆಸೆಗಳು ನೆರವೇರಲಿವೆ. ಆರೋಗ್ಯ ಚೆನ್ನಾಗಿರಲಿದೆ ಆದರೆ ವಿಶ್ರಾಂತಿ ಮತ್ತು ನಿದ್ದೆಯ ಅಭಾವದಿಂದ ಸಮಸ್ಯೆಗಳು ತಲೆದೋರಬಹುದು
ಕನ್ಯಾ (ಜನ್ಮದಿನಾಂಕ– ಆಗಸ್ಟ್ 22 ರಿಂದ ಸೆಪ್ಟೆಂಬರ್ 21):ಈ ವರ್ಷ ಮಿಶ್ರಫಲ ದೊರೆಯಲಿದೆ. ವೃತ್ತಿ ಜೀವನದಲ್ಲಿ ಬೇಡಿಕೆ ಇದ್ದು, ಮೇಲಧಿಕಾರಿಗಳಿಂದ ನೀವು ಒತ್ತಡ ಅನುಭವಿಸಲಿದ್ದೀರಿ. ಅಧಿಕಾರಯುತ ವ್ಯಕ್ತಿಗಳ ಜತೆ ನೀವು ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ನೀವು ವಹಿಸಿಕೊಳ್ಳುವ ಜಬ್ದಾರಿಗಳ ಕಾರಣದಿಂದಾಗಿ ಬದಲಾವಣೆಗಳನ್ನು ಮಾಡಲು ಸಾಧ್ಯವಾಗದಂತಹ ಸಂದರ್ಭಗಳು ಇರಬಹುದು. ಯಾವುದೇ ರೀತಿಯ ವಾಗ್ವಾದ ಅಥವಾ ತಿಕ್ಕಾಟದಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ನಿಭಾಯಿಸಲು ನೀವು ನೀವು ಸಾಲವನ್ನು ಪಡೆಯಬೇಕಾಗಿಬರಬಹುದು ಅಥವಾ ಹೆಚ್ಚು ಮಿತವ್ಯಯದಿಂದ ಬದುಕಲು ಅಗತ್ಯವಿರುವ ಹಠಾತ್ ಸಂದರ್ಭಗಳೂ ಎದುರಾಗಬಹುದು. ಈ ರಾಶಿಯವರು ಸಾಮಾನ್ಯವಾಗಿ ವಿವೇಕ ಹೊಂದಿದವರಾಗಿದ್ದಾರೆ. ಆದರೆ ಈ ರೀತಿಯ ನಿಯಂತ್ರಣ ಕಂಡುಕೊಳ್ಳಲು ಸಾಕಷ್ಟು ತೊಂದರೆಯಾಗಬಹುದು.ಕೆಟ್ಟ ಆಸ್ತಿ ವ್ಯವಹಾರಗಳಲ್ಲಿ ಸಿಲುಕಿಕೊಳ್ಳಬೇಡಿ. ಮನೆಯ ಖರೀದಿ ಅಥವಾ ನಿರ್ಮಾಣವನ್ನು ಪರಿಗಣಿಸುವಾಗ ನಿಮಗೆ ಅನುಕೂಲಕರವಾದ ಬಜೆಟ್ ಅನ್ನು ಮೀರಿ ಹೋಗಬೇಡಿ. ಅತಿಯಾದ ಕೆಲಸದ ಒತ್ತಡ, ಆಯಾಸ ಮತ್ತು ಕೆಲವೊಮ್ಮೆ ಮಧ್ಯಂತರಗಳಿಗಾಗಿ ಮನೆಯಿಂದ ದೂರವಿರುವುದು ವ್ಯತ್ಯಾಸಗಳನ್ನು ಉಂಟುಮಾಡಬಹುದು. ಹೃದಯದ ಆರೋಗ್ಯ, ಮಧುಮೇಹ ಅಥವಾ ಜೀರ್ಣಕಾರಿ ಸಮಸ್ಯೆಗಳಿಗೆ ಸಂಬಂಧಿಸಿದ ವ್ಯಕ್ತಿಗಳು ವಿಶೇಷವಾಗಿ ಜಾಗರೂಕರಾಗಿರಬೇಕು.
ತುಲಾ(ಜನ್ಮದಿನಾಂಕ– ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 23): ಈ ರಾಶಿಯವರಿಗೆ ಈ ವರ್ಷ ಮಿಶ್ರ ಫಲಿತಾಂಶ ಉಂಟಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಅಥವಾ ಉದ್ಯೋಗ ಅರಸಿ ಬೇರೊಂದು ಪ್ರದೇಶಕ್ಕೆ ಹೋಗುವ ಸಾಧ್ಯತೆ ಇದೆ. ಕಲಾವಿದರು, ಬರಹಗಾರರು, ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ತೊಡಗಿಕೊಂಡವರಿಗೆ ಯಶಸ್ಸು ಲಭಿಸಲಿದೆ. ಈ ವರ್ಷ ಸಾಕಷ್ಟು ಪ್ರಯಾಣವನ್ನು ಕೈಗೊಳ್ಳುವಿರಿ. ನೀವು ಮಾಡಿದ ಕೆಲಸಗಳಿಗೆ ತಕ್ಷಣ ಮನ್ನಣೆ ಸಿಗದಿದ್ದರೂ ನಿಮ್ಮ ಪಾಲಿನ ಕೆಲಸವನ್ನು ಶ್ರದ್ಧೆಯಿಂದ ಮುಂದುವರಿಸಿ. ಕೆಲಸ ಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಯೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಹಿಂಸೆಯ ಮನಸ್ಸಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸ ಬಿಡಬೇಕು ಎನ್ನುವ ಯೋಚನೆಗಳು ಬರಲಿವೆ. ಆದರೆ, ಅವಸರದಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದು ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಸೂಕ್ತ. ಮಂಡಿ ನೋವು, ಬೆನ್ನು ನೋವು, ವಾತ ಅಥವಾ ಅಜೀರ್ಣ ಸಮಸ್ಯೆ ಇರುವವರು ಸ್ವಲ್ಪ ಜಾಗರೂಕತೆ ವಹಿಸಿ.
ವೃಶ್ಚಿಕ(ಜನ್ಮದಿನಾಂಕ –ಅಕ್ಟೋಬರ್ 24 ರಿಂದ ನವೆಂಬರ್ 21): ಈ ವರ್ಷ ನಿಮಗೆ ಅತ್ಯಂತ ಲಾಭದಾಯಕವಾಗಿರಲಿದೆ. ನಿಮ್ಮ ಪ್ರಮುಖ ಬಯಕೆಯೊಂದು ಈ ವರ್ಷ ಈಡೇರುವ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಗಳಿಗೆ ಹೊಗಳಿಕೆ ಮತ್ತು ಮನ್ನಣೆ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ವಿದೇಶ ಪ್ರಯಾಣದ ಯೋಗವಿದ್ದು, ಉತ್ತಮ ನೆನಪುಗಳನ್ನು ಕಲೆಹಾಕುವಿರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಸಾಲವನ್ನು ಚುಕ್ತಮಾಡಿ ನಿಟ್ಟುಸಿರನ್ನು ಬಿಡುವಿರಿ. ವರ್ಷದ ದ್ವಿತೀಯಾರ್ಧದಲ್ಲಿ ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕವಾದ ವಾತಾವರಣ ಸಿಗಲಿದೆ. ಆರೋಗ್ಯ ಸ್ಥಿತಿ ಉತ್ಯಮಗೊಳ್ಳಲಿದ್ದು, ಮಾನಸಿಕ ನೆಮ್ಮದಿ ನಿಮ್ಮದಾಗಿರಲಿದೆ. ಒಂಟಿಯಾಗಿದ್ದರೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶಿಸಬಹುದು. ಅವರೊಂದಿಗೆ ನೀವು ದೀರ್ಘಕಾಲದವರೆಗೆ ಸಂಬಂಧವನ್ನು ಹೊಂದಿರುವಿರಿ. ದಾಂಪತ್ಯದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳು ದೂರವಾಗಿದೆ ವೈವಾಹಿಕ ಜೀವನ ಉತ್ತಮಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ವರ್ಷವಾಗಿರಲಿದೆ. ನಿಮ್ಮ ಆಹಾರ ಪದ್ಧತಿಯಿಂದ ಉದರ ಸಂಬಂಧಿ ಸಮಸ್ಯೆ, ಕರುಳಿನ ಸೋಂಕುಗಳು ಉಂಟಾಗಬಹುದು.
ಧನಸ್ಸು (ಜನ್ಮದಿನಾಂಕ – ನವೆಂಬರ್ 22 ರಿಂದ ಡಿಸೆಂಬರ್ 21): ಈ ವರ್ಷ ನಿಮಗೆ ಸಾಕಷ್ಟು ಸವಾಲುಗಳು ಎದುರಾಗಲಿವೆ ಮತ್ತು ವರ್ಷ ಕಳೆದಂತೆ ಅವುಗಳಿಗೆ ಪರಿಹಾರವೂ ದೊರಕಲಿದೆ. ಉದ್ಯೋಗದ ವಿಚಾರದಲ್ಲಿ ಆತ್ಮವಿಶ್ವಾಸ ಕುಗ್ಗುವ ಸಾಧ್ಯತೆ ಇದ್ದು, ದೊಡ್ಡ ಪೆಟ್ಟು ನೀಡಲಿದೆ. ಹಣಕಾಸಿಗೆ ಸಂಬಂಧಿಸಿದ ಕೆಲವು ವಿಚಾರವನ್ನು ನಿಭಾಯಿಸಲು ಕಷ್ಟವಾಗಲಿದೆ. ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮನ್ನು ನೀವು ನಿರೂಪಿಸಿಕೊಳ್ಳಲು ಹೆಚ್ಚು ಶ್ರಮ ಹಾಕಬೇಕೆನ್ನುವ ವಿಚಾರ ನಿಮ್ಮಲ್ಲಿ ಕೋಪ ಮತ್ತು ಅಸಹಾನೆಯನ್ನು ಉಂಟು ಮಾಡಲಿದೆ. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಕೌಶಲ್ಯದಿಂದ ಸಾಕಷ್ಟು ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುವಿರಿ. ಸಹೋದ್ಯೋಗಿಗಳ ಮತ್ತು ಹಿರಿಯ ಅಧಿಕಾರಿಗಳ ಬೆಂಬಲ ನಿಮ್ಮ ಪರವಾಗಿ ಇರಲಿದೆ.ನೀವು ಎಷ್ಟು ಹೆಚ್ಚಾಗಿ ಪರಿಶ್ರಮ ಮಾಡುವಿರೋ ಅಷ್ಟೇ ಹೆಚ್ಚಿನ ಲಾಭ ಪಡೆಯುತ್ತೀರಿ. ಪೊಲೀಸ್ ವೃತ್ತಿಯಲ್ಲಿರುವವರು ಹೆಚ್ಚು ಜಾಗರೂಕರಾಗಿರಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಹಣಕಾಸಿ ವಿಚಾರದಲ್ಲಿ ದಂಪತಿಗಳ ನಡುವೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಒತ್ತಡದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಮಕರ (ಜನ್ಮದಿನಾಂಕ–ಡಿಸೆಂಬರ್ 22ರಿಂದ ಜನವರಿ 20): ಈ ರಾಶಿಯಲ್ಲಿ ಜನಿಸಿದವರು ಮಹಾತ್ವಕಾಂಕ್ಷೆಯವರಾಗಿದ್ದು ಅಸಾದರಣ ಕೆಲಸಗಳಲ್ಲಿ ತೊಡಗಿ ಉತ್ತಮ ಫಲಗಳನ್ನು ಅನುಭವಿಸುತ್ತಾರೆ. ಈ ವರ್ಷದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದ್ದು ಸ್ವಲ್ಪ ಎಚ್ಚರಿಕೆವಹಿಸಿದರೆ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಬೇರೆ ಕಡೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಇದರಿಂದ ಸ್ವಲ್ಪ ಆತಂಕ ಎದುರಾಗಬಹುದು. ಬೇರೆಯವರ ಜೊತೆ ವಿವಾದಾತ್ಮಕ ವಿಷಯಗಳ ಕುರಿತು ಚರ್ಚೆ ಮಾಡುವುದು ಬೇಡ, ಇದರಿಂದ ಜಗಳ, ಮನಸ್ತಾಪ ಉಂಟಾಗಬಹುದು. ಚರ್ಚೆಯ ಸಂದರ್ಭಗಳಲ್ಲಿ ಮೌನವಾಗಿದ್ದರೆ ಒಳಿತು. ಸಂಪಾದನೆಯಿಂದ ಹಣ ಬಂದರೂ ಅದು ಕೈಯಲ್ಲಿ ಉಳಿಯುವುದಿಲ್ಲ, ಬಂದಂತೆ ಖರ್ಚಾಗುವುದು. ಹಣ ಸಹಾಯ ಮಾಡುತ್ತೇವೆ ಎಂದು ಬರುವ ಸ್ನೇಹಿತರು ಹಣ ನೀಡದೇ ಸತಾಯಿಸುತ್ತಾರೆ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕುಟುಂಬದಲ್ಲಿ ಹೆಂಡತಿ, ಮಕ್ಕಳ ಜೊತೆ ಕಲಹವಿರುತ್ತದೆ. ವ್ಯಾಪಾರ ಮಾಡುವವರು ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಬೇಕು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಈ ವರ್ಷ ಮಿಶ್ರಫಲಗಳನ್ನು ಅನುಭವಿಸಲಿದ್ದೀರಿ.
ಕುಂಭ (ಜನ್ಮದಿನಾಂಕ–ಜನವರಿ 21ರಿಂದ ಫೆಬ್ರುವರಿ 19): ಈ ವರ್ಷದಲ್ಲಿ ಕುಂಭ ರಾಶಿಯವರು ಉತ್ತಮ ಫಲಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ವಿಜ್ಞಾನ, ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇರುವ ವೃತ್ತಿಪರರು ಅಭಿವೃದ್ಧಿಕಾಣುವರು. ಸಂಪ್ರದಾಯವಾದಿಗಳ ಜೊತೆ ಇರುವಾಗ ಎಚ್ಚರವಹಿಸುವುದು ಅವಶ್ಯಕ. ವಿದೇಶಕ್ಕೆ ತೆರಳುವ ಯೋಗವಿದ್ದು ಅಲ್ಲಿ ದೀರ್ಘಾಕಾಲ ಉಳಿಯುವ ಸಾಧ್ಯತೆಗಳಿವೆ. ನಿಮ್ಮ ಹೂಡಿಕೆಯ ಹಣದಿಂದ ಹೆಚ್ಚು ಲಾಭಂಶ ಬರಲಿದೆ. ಅಹಂಕಾರದಿಂದ ಏನನ್ನು ಸಾಧಿಸಲಾಗದು ಎಂಬುದನ್ನು ನೆನಪಿಟ್ಟುಕೊಂಡರೆ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಉನ್ನತ ಹುದ್ದೆಗಳಲ್ಲಿ ಇರುವವರ ಮುಂದೆ ಅಹಂ ತೋರಿಸುವುದು ಬೇಡ, ಅದು ನಿಮ್ಮ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು. ಮನೆ ಕಟ್ಟುವ ಹಾಗೂ ವಾಹನ ಖರೀದಿ ಮಾಡುವ ನಿಮ್ಮ ಕನಸು ಈ ವರ್ಷ ನನಸಾಗಲಿದೆ. ನಿಮ್ಮ ಕುಟುಂಬದಲ್ಲಿ ಧಾರ್ಮಿಕ ಮತ್ತು ವೈವಾಹಿಕ ಕಾರ್ಯಕ್ರಮಗಳು ನಡೆಯಲಿವೆ. ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ದೀರ್ಘಕಾಲದಿಂದ ಮಕ್ಕಳಾಗದವರು, ಸಂತಾನ ಬಾಗ್ಯದ ಶುಭವಾರ್ತೆಯನ್ನು ಕೇಳುವರು. 2020ನೇ ವರ್ಷ ಕುಂಭ ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ.
ಮೀನಾ (ಜನ್ಮದಿನಾಂಕ–ಫೆಬ್ರುವರಿ 20ರಿಂದ ಮಾರ್ಚ್ 21): ವೃತ್ತಿಪರ ಕೆಲಸಗಳಲ್ಲಿ ತೊಡಗಬೇಕು ಎನ್ನುವವರಿಗೆ ಮಿಶ್ರಫಲಗಳು ದೊರೆಯಲಿವೆ. ವೃತ್ತಿಪರ ಸೇವೆಗೆ ಸೇರಬೇಕು ಎಂದು ನಿರ್ಧಾರ ಮಾಡುವ ಮುನ್ನ ಯೋಚಿಸುವುದು ಉತ್ತಮ. ಭಾವನಾತ್ಮಕವಾಗಿ ಹಲವು ಗುರಿಗಳನ್ನು ಹೊಂದುವುದು ಬೇಡ. ಒಂದೇ ಗುರಿಯಲ್ಲಿ ಮುಂದುವರೆದರೆ ಯಶಸ್ವಿಯಾಗುವುದರ ಜೊತೆಗೆ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಕೆಲವು ಸಂದರ್ಭಗಳಲ್ಲಿ ಒತ್ತಡ ಎದುರಾದರೂ ಸುಲಭಾವಾಗಿ ನಿಭಾಸುವಲ್ಲಿ ಯಶಸ್ವಿಯಾಗುವಿರಿ. ಈ ಜಾಣ್ಮೆಯ ನಡೆಯಿಂದ ಮುಂದಿನ ದಿನಗಳಲ್ಲಿ ಉತ್ತಮ ಫಲಗಳನ್ನು ಅನುಭವಿಸುವಿರಿ. ಗುಡಿ ಕೈಗಾರಿಕೆ, ವ್ಯಾಪಾರ ಮಾಡುವವರಿಗೆ ಉತ್ತಮ ಧನಲಾಭವಿದೆ. ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯ ವ್ಯಕ್ತಿಗಳನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುವಿರಿ. ಗಾಳಿ ಮಾತುಗಳಿಗೆ ಕಿವಿ ಕೊಡದೇ ಸತ್ಯಾಸತ್ಯತೆ ಪರೀಕ್ಷಿಸಿ ಮುಂದುವರೆಯಿರಿ. ಸೆಪ್ಟೆಂಬರ್ ತಿಂಗಳನಂತರ ಕೃಷಿ ಭೂಮಿ, ನಿವೇಶನ ಖರೀದಿ ಮಾಡುವುದು ಸೂಕ್ತ. ಈ ವರ್ಷ ಹೆಚ್ಚು ಧನಾಗಮನವಿಲ್ಲದಿದ್ದರೂ ಮಾನಸಿಕ ನೆಮ್ಮದಿ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.