ಹೊಸ ವರ್ಷಕ್ಕೆ ಸಂಬಂಧಿಸಿದಂತೆ ನಿರ್ಣಯಗಳು ಅಂತ ಏನೂ ಇರುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಕೆಲಸಗಳನ್ನು ಮುಂದುವರಿಸಲಿದ್ದೇನೆ.
ದೇಶ ಗಂಭೀರ ಪರಿಸ್ಥಿತಿಗೆ ಬಂದು ನಿಂತಿದೆ. ಸೌಹಾರ್ದ ಕಾಪಾಡಬೇಕಾದ ಸ್ಥಿತಿ ಎದುರಾಗಿದೆ. ನಾನು ಒಬ್ಬ ವ್ಯಕ್ತಿಯಾಗಿ, ಜನಪ್ರತಿನಿಧಿಯಾಗಿ ಭಾವೈಕ್ಯ ಕಾಯುವ ಕೆಲಸ ಮಾಡುವೆ. ಪರಿಸರದ ವಿಚಾರವಾಗಿಯೂ ಕೆಲಸ ಮಾಡುವೆ. ದೇಶ ಎದುರಿಸುತ್ತಿರುವ ಸಮಸ್ಯೆಗಳು ಹಲವಿವೆ. ನಿರುದ್ಯೋಗ ಹೆಚ್ಚಿದೆ. ಅರ್ಥವ್ಯವಸ್ಥೆ ಹಿಂದಕ್ಕೆ ಹೋಗಿದೆ. ಯುವಕರು ಒಗ್ಗಟ್ಟಿನಿಂದ ಏನಾದರೂ ಮಾಡಬೇಕಾದ ಸಂದರ್ಭ ಬಂದಿದೆ.
ದೇಶದಲ್ಲಿ ಏಕೆ ಇಷ್ಟು ಪ್ರತಿಭಟನೆಗಳು ಆಗುತ್ತಿವೆ ಎಂಬುದನ್ನು ಜನಪ್ರತಿನಿಧಿಗಳು ಗಮನಿಸಬೇಕು. ಪ್ರತಿ ವ್ಯಕ್ತಿಯೂ ಜನರ ಕೂಗನ್ನು ಕೇಳಿಸಿಕೊಳ್ಳಬೇಕು. ಸಮಸ್ಯೆ ಏನಿದೆ ಎಂಬುದನ್ನು ಜನಪ್ರತಿನಿಧಿಗಳು ಗುರುತಿಸಬೇಕು. ದೇಶದ ಆದ್ಯತೆಯ ಕೆಲಸಗಳನ್ನು ಮಾಡುವ ಬದಲು ಬೇರೆ ಏನೋ ಮಾಡಲು ಹೊರಟಿರುವುದು ಜನರಿಗೆ ಬೇಸರ ತರಿಸಿದೆ. ಹಾಗಾಗಿ ಜನ ಬೀದಿಗೆ ಇಳಿದಿದ್ದಾರೆ. ನಾನು ಜನಪ್ರತಿನಿಧಿಯಾಗಿ, ಕಾಂಗ್ರೆಸ್ಸಿಗಳಾಗಿ ಜನರ ಜೊತೆ ಇರುತ್ತೇನೆ. ಇದು ಕೂಡ ನನ್ನ ಹೊಸ ವರ್ಷ ನಿರ್ಣಯ.
ಅರ್ಥವ್ಯವಸ್ಥೆಯಲ್ಲಿ ಹಿನ್ನಡೆ, ನಿರುದ್ಯೋಗದ ಹೆಚ್ಚಳ, ರಾಜ್ಯದ ನೆರೆ ಸಂತ್ರಸ್ತರ ಪುನರ್ವಸತಿ... ಇವುಗಳ ಬಗ್ಗೆ ನಾವು ಸ್ಪಂದಿಸಬೇಕು.
ದೇಶದ ಪರಿಸ್ಥಿತಿ ಬಗ್ಗೆ ಬೇರೆ ದೇಶದವರು ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶವನ್ನು ಯಾವುದೇ ಜಾತಿ–ಧರ್ಮದ ಆಧಾರದಲ್ಲಿ ಕಟ್ಟಿದ್ದಲ್ಲ. ಎಲ್ಲ ಜಾತಿ, ಧರ್ಮಗಳ ಜನರಿಗೆ ಸೇರಿದ್ದು ಇದು. ಆದರೆ, ಈಗ ನಾವು ಕವಲುದಾರಿಯಲ್ಲಿ ಬಂದು ನಿಂತಿದ್ದೇವೆ. ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ದೇಶದ ಭವಿಷ್ಯದ ಬಗ್ಗೆ ಆಲೋಚಿಸಬೇಕು.
ಮಹಿಳಾ ಸಬಲೀಕರಣ ವಿಚಾರವಾಗಿಯೂ ನಾನು ಕೆಲಸ ಮಾಡುತ್ತ ಇದ್ದೇನೆ. ಆ ಕೆಲಸಗಳು ಹೊಸ ವರ್ಷದಲ್ಲಿ ಕೂಡ ಮುಂದುವರಿಯಲಿವೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡಲು ಇಚ್ಛಿಸಿರುವೆ.
- ಸೌಮ್ಯಾ ರೆಡ್ಡಿ, ಕಾಂಗ್ರೆಸ್ ಶಾಸಕಿ
ನಿರೂಪಣೆ: ವಿಜಯ್ ಜೋಷಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.