ADVERTISEMENT

ಇವರು ಕನ್ನಡದ ‘ಮಮತೆ’

ಮಂಜುಶ್ರೀ ಎಂ.ಕಡಕೋಳ
Published 28 ಜೂನ್ 2024, 21:26 IST
Last Updated 28 ಜೂನ್ 2024, 21:26 IST
ತರಗತಿಯಲ್ಲಿ ಕನ್ನಡ ಬೋಧಿಸುತ್ತಿರುವ ಮಮತಾ
ತರಗತಿಯಲ್ಲಿ ಕನ್ನಡ ಬೋಧಿಸುತ್ತಿರುವ ಮಮತಾ   

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಉತ್ತರ ಭಾರತದ ಆ ಯುವಕ, ತುರ್ತಾಗಿ ದೆಹಲಿಗೆ ತೆರಳಬೇಕಿತ್ತು. ಕಚೇರಿ ಕೆಲಸ ಬೇಗ ಮುಗಿಸಿ, ಜಯನಗರದ ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು. ಕನ್ನಡ ಬಾರದ ಆತ ಬಸ್‌ ನಿಲ್ದಾಣದಲ್ಲಿ ಪಕ್ಕದಾತನಿಗೆ ‘ಈ ಬಸ್ ಜಯನಗರಕ್ಕೆ ಹೋಗುತ್ತಾ?’ ಎಂದು ಇಂಗ್ಲಿಷ್‌ನಲ್ಲಿ ಕೇಳಿದ್ದ. ‘ವಿಜಯನಗರ’ ಎಂದು ಕೇಳಿಸಿಕೊಂಡಿದ್ದ ಪಕ್ಕದಾತ ‘ಎಸ್’ ಅಂದಿದ್ದ. ಬಸ್ ಹತ್ತಿ ಅರ್ಧ ದಾರಿಗೆ ಬಂದಾಗಲೇ ಆ ಯುವಕನಿಗೆ ತಾನು ಬೇರೆ ಬಸ್ ಹತ್ತಿದ್ದು ತಿಳಿದದ್ದು. ಅಲ್ಲಿಂದ ವಾಪಸ್ ಬರುವಷ್ಟರಲ್ಲಿ ವಿಮಾನ ಹೊರಟುಹೋಗಿತ್ತು.

ಕನ್ನಡ ಬಾರದೇ ಫಜೀತಿಗೀಡಾಗಿದ್ದ ಹೊರರಾಜ್ಯದ ಆ ಯುವಕ ಕೆಲವೇ ದಿನಗಳಲ್ಲಿ ‘ಕನ್ನಡ ಸ್ಪೋಕನ್‌’ ತರಗತಿಗೆ ಸೇರಿದ. ಈಗ ಅದೇ ಯುವಕ ಆಟೊ, ಬಸ್‌ಗಳಲ್ಲಿ ಹಾಗೂ ನಿತ್ಯ ಜೀವನದಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪರಿಣತಿ ಸಾಧಿಸಿದ್ದಾನೆ.

ಕನ್ನಡ ಕಲಿಯಬೇಕೆಂಬ ಉತ್ಕಟ ಭಾವ ಹೊಂದಿದ್ದ ಆ ಯುವಕನಿಗೆ ತರಬೇತಿ ನೀಡಿದ್ದು ನಗರದ ನಿವಾಸಿ ಮಮತಾ ಅಶೋಕ್. ಸಾಮಾನ್ಯ ಗೃಹಿಣಿಯಾಗಿದ್ದ ಅವರೀಗ ‘ಕನ್ನಡ ಟೀಚರ್’ ಎಂದೇ ಖ್ಯಾತಿ ಪಡೆದಿದ್ದಾರೆ. 2002ರಿಂದ ಆರಂಭವಾದ ಅವರ ಕನ್ನಡ ಕಲಿಸುವಿಕೆಯ ಕಾಯಕ ಇಂದಿಗೂ ನಿಂತಿಲ್ಲ. ಇದುವರೆಗೆ 18 ಸಾವಿರಕ್ಕೂ ಹೆಚ್ಚಿನ ಮಂದಿಗೆ ಕನ್ನಡ ಕಲಿಸಿದ ಹೆಮ್ಮೆ ಅವರದ್ದು.

ADVERTISEMENT

ವಿವಾಹವಾಗಿ ಚಿಕ್ಕಮಗಳೂರಿನಿಂದ ಸಿಲಿಕಾನ್ ಸಿಟಿಗೆ ಕಾಲಿಟ್ಟಾಗ ಮಮತಾ ಅವರ ಶುದ್ಧ ಕನ್ನಡ ಕೇಳಿ ಕಣ್ಣರಳಿಸಿದವರೇ ಹೆಚ್ಚು. ಕನ್ನಡದ ಕೆಲ ಪದಗಳನ್ನು ಬಳಸಿ ಮಾತನಾಡುವಾಗ ಏನೋ ತಪ್ಪು ಮಾತನಾಡಿದವರಂತೆ ಅವರನ್ನು ಜನರು ವಿಚಿತ್ರವಾಗಿ ನೋಡಿದ್ದೂ ಇದೆ. ಆದರೆ, ಮಮತಾ ಅವರ ಕನ್ನಡ ಭಾಷೆ ಕೇಳಿ ಪಕ್ಕದ ಮನೆಯವರೊಬ್ಬರು ಹೊರರಾಜ್ಯದಿಂದ ಬಂದಿದ್ದ ತಮ್ಮ ಮಕ್ಕಳಿಗೆ ಕನ್ನಡ ಕಲಿಸುವಿರಾ ಎಂದಾಗ, ಮಮತಾ ಅವರಿಗೂ ಅಚ್ಚರಿಯಾಗಿತ್ತಂತೆ. ಮುಂದೆ ಈ ಅಚ್ಚರಿಯೇ ಕನ್ನಡ ಕಲಿಸುವಿಕೆಯ ಕಾಯಕಕ್ಕೆ ಮುನ್ನುಡಿ ಬರೆಯಿತು. ಇದು 2002ರಲ್ಲಿ ಎಂ.ಎಸ್. ರಾಮಯ್ಯ ಎಂಜಿನಿಯರ್‌ ಕಾಲೇಜಿನಲ್ಲಿ ಕನ್ನಡ ಭಾಷಾ ಬೋಧಕಿಯಾಗಲು ಮಮತಾ ಅವರಿಗೆ ನೆರವಾಯಿತು.

ಬಹಳಷ್ಟು ಮಂದಿ ‘ಸ್ಪೋಕನ್ ಇಂಗ್ಲಿಷ್’ ತರಗತಿಗೆ ಸೇರುತ್ತಾರೆ. ಆದರೆ, ನಿಮಗೆ ಅಚ್ಚರಿ ಅನಿಸಬಹುದು ಬೆಂಗಳೂರಿನಲ್ಲಿ ಕನಿಷ್ಠ 60 ಕಡೆ ‘ಸ್ಪೋಕನ್ ಕನ್ನಡ’ ತರಗತಿಗಳು ನಡೆಯುತ್ತಿವೆ ಎನ್ನುತ್ತಾರೆ ಮಮತಾ. ‘ಕನ್ನಡ್ ಗೊತ್ತಿಲ್ಲ’ ಎನ್ನುವ ರಾಜಧಾನಿಯ ಬ್ಯಾಂಕ್, ಐಟಿ– ಬಿಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದಂತೆ ಸಾವಿರಾರು ಮಂದಿಗೆ ಕನ್ನಡ ಕಲಿಸಿದ ಹೆಗ್ಗಳಿಕೆ ಅವರದ್ದು.

ಬೆಂಗಳೂರು ‘ಕಾಸ್ಮೊಪಾಲಿಟನ್ ಸಿಟಿ’, ಇಲ್ಲಿ ಯಾವ ಭಾಷೆಯೂ ನಡೆಯುತ್ತದೆ ಎಂದು ಪರಿಭಾವಿಸುವವರೇ ಹೆಚ್ಚು. ಕನ್ನಡ ಬಾರದವರು ಕಚೇರಿಗಳಲ್ಲಿ ಇಂಗ್ಲಿಷ್‌ನಲ್ಲೇ ಮಾತನಾಡಬಹುದು. ಆದರೆ, ನಿತ್ಯ ಜೀವನದಲ್ಲಿ ಕನ್ನಡ ಬಳಕೆ ಅನಿವಾರ್ಯ. ರಾಜಧಾನಿಯಲ್ಲಿ ಕನ್ನಡ ಬಾರದಿದ್ದರೂ ಜೀವನ ನಡೆಸುತ್ತೇನೆ ಅನ್ನುವವರ ಸಂಖ್ಯೆ ಶೇ 20ರಷ್ಟು ಮಾತ್ರ. ಆದರೆ, ಶೇ 80ರಷ್ಟು ಮಂದಿ ಕನ್ನಡ ಬಾರದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥವರಿಗೆ ಕನ್ನಡ ಕಲಿಸುವ ಕಾಯಕ ನನ್ನದು ಎನ್ನುವ ಮಮತಾ, ಪದವಿ, ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇವಲ 21 ದಿನಗಳಲ್ಲಿ ಕನ್ನಡ ಕಲಿಸಿದ್ದೂ ಉಂಟು.

ಹೊರರಾಜ್ಯದವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಹಾಗಾಗಿ, ಅವರಲ್ಲಿ ಅಸುರಕ್ಷತೆಯ ಭಾವ ಕಾಡುತ್ತಿರುತ್ತದೆ. ತಾವು ಇಲ್ಲಿನವರಲ್ಲ. ಇಲ್ಲಿನ ಭಾಷೆ ಗೊತ್ತಿಲ್ಲ ಎನ್ನುವುದು ಅವರ ಮನಸಿನಲ್ಲಿರುತ್ತದೆ. ಮುಖ್ಯವಾಗಿ ಆಟೊ, ಬಸ್‌ಗಳಲ್ಲಿ ಓಡಾಡುವಾಗ, ತರಕಾರಿ ಖರೀದಿ ಮಾಡುವಾಗ ಅವರಿಗೆ ಕನ್ನಡ ಬಳಕೆ ಅನಿವಾರ್ಯವಾಗಿರುತ್ತದೆ. ಹಾಗಾಗಿ, ಅಂಥವರು ಕನ್ನಡ ಕಲಿಯಲು ಆಸಕ್ತಿ ತೋರುತ್ತಾರೆ ಎನ್ನುತ್ತಾರೆ ಮಮತಾ.

ಮಮತಾ ಅವರ ಕನ್ನಡ ಕಾಯಕ ಮೆಚ್ಚಿ, ಗೂಗಲ್‌ನ ದಕ್ಷಿಣ ಭಾರತ ಸಿಇಒ ಅವರಿಂದ ‘ಸಿಟಿಜನ್ ಇಂಟಿಗ್ರೇಷನ್‌ ಟೀಚರ್ಸ್‌’, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನೇಕ ಯೋಜನೆಗಳು ಸೇರಿದಂತೆ ಕನ್ನಡ ಜಾಗೃತಿ ಸಮಿತಿಯ ಸಕ್ರಿಯ ಸದಸ್ಯೆಯಾಗಿಯೂ ಮಮತಾ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡೇತರರಿಗೆ ನಮ್ಮ ಭಾಷೆ ಕಲಿಸುವ ಹೆಮ್ಮೆಯ ಕೆಲಸ ಮತ್ತೊಂದಿಲ್ಲ ಎನ್ನುವ ಮಮತಾ  ಇಂದಿಗೂ ಕನ್ನಡ ಕಲಿಸುವಿಕೆಯ ಕಾಯಕ ಮುಂದುವರಿಸಿದ್ದಾರೆ.

ಕೆಂಪೇಗೌಡ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಟಿ.ಎಸ್. ನಾಗಾಭರಣ ಅವರಿಂದ ಮೆಚ್ಚುಗೆಯ ಕ್ಷಣ
ಮಮತಾ ಅಶೋಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.