ADVERTISEMENT

ಚಾತುರ್ಮಾಸ್ಯವ್ರತ

ಪಶ್ಚಿಮದ ಅರಿವು /ಹಾರಿತಾನಂದ
Published 27 ಜುಲೈ 2018, 19:30 IST
Last Updated 27 ಜುಲೈ 2018, 19:30 IST

ಆಷಾಢಮಾಸದ ಹುಣ್ಣಿಮೆ ಹತ್ತಿರವಾದಂತೆಲ್ಲ ‘ಚಾತುರ್ಮಾಸ್ಯವ್ರತ’ ಎಂಬ ಪದವನ್ನು ಕೇಳುತ್ತಿರುತ್ತೇವೆ. ಈ ಪದದ ಅರ್ಥ ‘ನಾಲ್ಕು ತಿಂಗಳ ವ್ರತ’. ಪ್ರತಿ ವರ್ಷವೂ ಈ ವ್ರತ ನಿಯತವಾಗಿ ಬರುವುದರಿಂದ ಇದನ್ನು ‘ಚಾತುರ್ಮಾಸ್ಯವ್ರತ’ ಎಂದು ಕರೆಯಲಾಗಿದೆ.

ಸಾಮಾನ್ಯವಾಗಿ ಈ ವ್ರತವನ್ನು ಸನ್ಯಾಸಿಗಳು ಆಚರಿಸುವ ವ್ರತ ಎಂಬ ಎಣಿಕೆಯೂ ಉಂಟು. ಆದರೆ ಈ ವ್ರತವನ್ನು ಗೃಹಸ್ಥರೂ ಆಚರಿಸಬಹುದಾಗಿರುವಂಥದ್ದು. ಹೀಗಿದ್ದರೂ ಪ್ರಧಾನವಾಗಿ ಸನ್ಯಾಸಿಗಳಿಗೆ ಈ ವ್ರತವನ್ನು ಕಡ್ಡಾಯವಾಗಿ ಹೇಳಲಾಗಿದೆ. ಇದನ್ನು ಆಷಾಢಮಾಸದ ಶುಕ್ಲಪಕ್ಷದ ಏಕಾದಶಿಯಂದು ಅಥವಾ ದ್ವಾದಶಿಯಂದು ಅಥವಾ ಪೂರ್ಣಿಮೆಯಂದು ಆರಂಭಿಸುವ ಕ್ರಮವುಂಟು.

ಸನ್ಯಾಸಿಗಳು ಎಂದರೆ ಲೌಕಿಕವಾದ ಎಲ್ಲ ವಿಷಯಗಳನ್ನೂ ಬಿಟ್ಟವರು. ಅವರು ಒಂದೆಡೆ ಹೆಚ್ಚು ಕಾಲ ಇರಬಾರದು ಎಂಬ ನಿಯಮವೂ ಹಿಂದಿನ ಕಾಲದಲ್ಲಿ ಇದ್ದಿತು. ಒಂದರ್ಥದಲ್ಲಿ ಸನ್ಯಾಸಿಗಳೂ ಮುನಿಗಳೂ ಭಿಕ್ಷುಗಳೂ ಸದಾ ಸಂಚಾರದಲ್ಲಿಯೇ ಇರಬೇಕಾಗುತ್ತಿದ್ದಿತು. ಆದರೆ ಮಳೆಗಾಲದಲ್ಲಿ ಹೀಗೆ ಸಂಚರಿಸುವುದು ಕಷ್ಟವಷ್ಟೆ.

ADVERTISEMENT

ಮಾತ್ರವಲ್ಲ, ಸದಾ ಸಂಚಾರದಲ್ಲಿಯೇ ಇದ್ದಾಗ ಶಾಸ್ತ್ರದ ಮನನಕ್ಕೂ ಆತ್ಮಸಾಧನೆಗೂ ಅವಕಾಶ ಸಿಗುವುದು ಕೂಡ ಕಷ್ಟವೇ. ಆದುದರಿಂದ ಮಳೆಗಾಲದ ಸಮಯದಲ್ಲಿ ಸನ್ಯಾಸಿಗಳು ಒಂದೆಡೆ ನೆಲೆಸಲಿ ಎಂಬ ಕಾರಣದಿಂದ ಈ ಸಮಯವನ್ನು ವ್ರತಾಚರಣೆಯನ್ನಾಗಿಯೇ ರೂಪಿಸಿದರು ಎನ್ನುವುದು ಚಾತುರ್ಮಾಸ್ಯವ್ರತದ ಹಿನ್ನೆಲೆಯಲ್ಲಿರುವ ಒಂದು ಅಂಶ.

ಈ ವ್ರತಕ್ಕೆ ಇನ್ನೊಂದು ಆಯಾಮವೂ ಉಂಟು. ಈ ಸಮಯದಲ್ಲಿ ಮಹಾವಿಷ್ಣುವು ಯೋಗನಿದ್ರೆಯಲ್ಲಿರುತ್ತಾನೆ. ಹೀಗಾಗಿ ಅವನ ಧ್ಯಾನದಲ್ಲಿ ಸನ್ಯಾಸಿಗಳು ಒಂದೆಡೆ ಇರಬೇಕು. ಹೀಗೆಂದು ಭಗವಂತನ ನಿದ್ರೆಯನ್ನು ನಮ್ಮ ನಿದ್ರೆಯೊಂದಿಗೆ ಹೋಲಿಸಲಾಗಿದೆ ಎಂದಲ್ಲ. ‘ನಿದ್ರಾಮುದ್ರಾಂ ನಿಖಿಲ ಜಗತೀರಕ್ಷಣೇ ಜಾಗರೂಕಾಂ’ – ಜಗತ್ತನ್ನು ರಕ್ಷಿಸಲು ಎಚ್ಚರವಾಗಿರುವ ನಿದ್ರೆ – ಎಂದೇ ಇದನ್ನು ವರ್ಣಿಸಲಾಗಿದೆ.

ಸನ್ಯಾಸಿಗಳು ಚಾತುರ್ಮಾಸ್ಯದ ಮೊದಲ ದಿನ ವ್ಯಾಸಮಹರ್ಷಿಯನ್ನು ಪೂಜಿಸಿ ವ್ರತಕ್ಕೆ ತೊಡಗುತ್ತಾರೆ. ವ್ಯಾಸಮಹರ್ಷಿ ವೇದಗಳನ್ನು ವಿಂಗಡಿಸಿದವನು; ವೇದಗಳ ಸಾರವನ್ನು ಸೂತ್ರರೂಪದಲ್ಲಿ ನೀಡಿದವನು. ಎಂದರೆ ‘ಜ್ಞಾನ’ಕ್ಕೆ ಸಮಾನಪದವೇ ವ್ಯಾಸ. ಸನ್ಯಾಸಿಗಳು ಜ್ಞಾನಮಾರ್ಗದಲ್ಲಿರುವವರು.

ಹೀಗಾಗಿ ಅವರು ವ್ಯಾಸಪೂಜೆಯನ್ನು ನೆರವೇರಿಸಿ ವ್ರತದ ದೀಕ್ಷೆಯನ್ನು ಕೈಗೊಳ್ಳುತ್ತಾರೆ. ಆಷಾಢಮಾಸದ ಹುಣ್ಣಿಮೆಗೆ ಇನ್ನೊಂದು ಮಹತ್ವವೂ ಉಂಟು. ಸಿದ್ಧಾರ್ಥನು ಜ್ಞಾನೋದಯವನ್ನು ಪಡೆದು ‘ಬುದ್ಧ’ನಾದದ್ದು ವೈಶಾಖದ ಹುಣ್ಣಿಮೆ. ಅವನು ಪಡೆದ ಬೋಧಿಯನ್ನು, ಎಂದರೆ ಅರಿವನ್ನು ಮೊದಲಿಗೆ ಉಪದೇಶಿಸಿದ ದಿನವೇ ಆಷಾಢಮಾಸದ ಹುಣ್ಣಿಮೆ. ಹೀಗೆ ಅವನು ಉಪದೇಶಿಸಿದ್ದನ್ನೇ ‘ಧರ್ಮಚಕ್ರಪ್ರವರ್ತನ’ ಎಂದಿರುವುದು.

ಗೃಹಸ್ಥರು ಆಚರಿಸುವ ಚಾತುರ್ಮಾಸ್ಯವ್ರತದಲ್ಲಿ ಒಂದೊಂದು ತಿಂಗಳು ಕೆಲವೊಂದು ಆಹಾರಪದಾರ್ಥಗಳನ್ನು ಸೇವಿಸದೆ ತ್ಯಜಿಸುವುದುಂಟು. ಹೀಗೆ ಮಾಡುವುದರಲ್ಲಿ ಆರೋಗ್ಯದ ಕಾರಣವನ್ನೂ ಕಂಡುಕೊಂಡಿದ್ದಾರೆ; ಜೊತೆಗೆ ಇದು ಮಾನಸಿಕ–ದೈಹಿಕ ಸಂಯಮಕ್ಕೂ ಅಭ್ಯಾಸದಂತಿದೆ. ಶ್ರಾವಣಮಾಸದಲ್ಲಿ ಕೆಲವು ತರಕಾರಿಗಳನ್ನೂ, ಭಾದ್ರಪದಮಾಸದಲ್ಲಿ ಮೊಸರನ್ನೂ, ಆಶ್ವಯುಜಮಾಸದಲ್ಲಿ ಹಾಲನ್ನೂ, ಕಾರ್ತಿಕಮಾಸದಲ್ಲಿ ಕೆಲವು ಧಾನ್ಯಗಳನ್ನೂ ಉಪಯೋಗಿಸಬಾರದು ಎಂಬ ನಿಯಮವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.