ADVERTISEMENT

ವೇದ ಅಪೌರುಷೇಯ

ಪಶ್ಚಿಮದ ಅರಿವು /ಹಾರಿತಾನಂದ
Published 14 ಸೆಪ್ಟೆಂಬರ್ 2018, 19:11 IST
Last Updated 14 ಸೆಪ್ಟೆಂಬರ್ 2018, 19:11 IST

ವೇದವು ಅಪೌರುಷೇಯ – ಎನ್ನುವುದು ಪರಂಪರೆಯ ನಂಬಿಕೆ. ಇಷ್ಟಕ್ಕೂ ‘ಅಪೌರುಷೇಯ’ ಎಂದರೆ ಏನು? ‘ಪುರುಷಕೃತವಲ್ಲದ್ದು’ ಎಂದು ಅರ್ಥ; ಮನುಷ್ಯನಿಂದ ಆದದ್ದು ಅಲ್ಲ. ಇದರ ಅರ್ಥ, ಡಿವಿಜಿ ಅವರ ಮಾತುಗಳಲ್ಲಿಯೇ ಹೇಳುವುದಾರೆ, ‘ವೇದವು ಪುರುಷಮುಖದಿಂದ ಬಂದದ್ದೇ. ಆದರೆ ಅದರ ಮೂಲಪ್ರೇರಣೆ ಅಥವಾ ಮೂಲಚೋದನೆ ಪುರುಷಬುದ್ಧಿಯಿಂದ ಆದದ್ದಲ್ಲ.’ ವೇದ ಎಂದರೆ ‘ಜ್ಞಾನ’. ಆ ಜ್ಞಾನವು ಮನುಷ್ಯ ಮಾಡಿದ್ದಲ್ಲ ಎನ್ನುವುದು ಇಲ್ಲಿ ನಿಲುವು. ಡಿವಿಜಿ ಅವರ ಮಾತುಗಳನ್ನೇ ಇಲ್ಲಿ ಉಲ್ಲೇಖಿಸಬಹುದು:

‘ಜ್ಞಾನವೆಂಬುದು ಸ್ವತಸ್ಸಿದ್ಧವಸ್ತು. ಅದು ಜೀವನದ ಒಳಗಡೆ ಇದ್ದುಕೊಂಡು ಸಹಜವಾಗಿ ಕೆಲಸಮಾಡತಕ್ಕ ಶಕ್ತಿಯೇ ಹೊರತು ಹೊರಗಡೆಯಿಂದ ಇತರರು ನಮ್ಮ ಜೀವನದ ಒಳಗಡೆಗೆ ತಳ್ಳಿ ತುಂಬಿದ್ದಲ್ಲ. ಜ್ಞಾನವು ದೀಪದ ಬತ್ತಿಯೊಳಗಣ ಎಣ್ಣೆಯಂತೆ; ಗುರು, ಶಾಸ್ತ್ರ ಮೊದಲಾದವು ಹೊರಗಣ ಬೆಂಕಿಯ ಕಡ್ಡಿಯಂತೆ. ಬತ್ತಿಯಲ್ಲಿ ಜಿಡ್ಡಿಲ್ಲದಿದ್ದಾಗ ಬೆಂಕಿಯ ಕಡ್ಡಿಯಿಂದ ದೀಪ ಹೊತ್ತದು. ಮೊದಲು ಬೇಕಾದದ್ದು ಅಂತಸ್ಸಾಮಗ್ರಿ. ಆಮೇಲಿನದು ಬಾಹ್ಯೋಪಕರಣ. ಜ್ಞಾನಕ್ಕೆ ಮೊದಲು ಬೇಕಾದದ್ದು ನೈಜವಾದ ಅಂತಶ್ಚೈತನ್ಯ. ಚೈತನ್ಯವು ಹೊರಗಿನಿಂದ ಬರುವುದಾಗದೆ ಸ್ವಯಂಭೂತವೇ ಆಗಿರುವ ಕಾರಣದಿಂದ ಅದು ಅಪೌರುಷೇಯ.

ನಮ್ಮ ಪ್ರಪಂಚದಲ್ಲಿಯ ಎಲ್ಲಾ ಮಹಾವಿಭೂತಿಗಳೂ ಒಂದರ್ಥದಲ್ಲಿ ಅಪೌರುಷೇಯಗಳೇ. ಒಳ್ಳೆಯ ಕಾವ್ಯ, ಒಳ್ಳೆಯ ಸಂಗೀತ, ಒಳ್ಳೆಯ ಚಿತ್ರ – ಈ ಕಲಾಕೃತಿಗಳು ಮನುಷ್ಯನ ತಿಣುಕಾಟದಿಂದ ಸಿದ್ಧವಾಗತಕ್ಕವಲ್ಲ. ಹಾಗೆ ಸಿದ್ಧವಾಗುವ ಹಾಗಿದ್ದರೆ ನಮ್ಮಲ್ಲಿ ನೂರುಮಂದಿ ವಾಲ್ಮೀಕಿಗಳೂ ನೂರುಮಂದಿ ಷೇಕ್‌ಸ್ಪಿಯರುಗಳೂ ಇದ್ದಿರಬೇಕಾಗಿತ್ತು. ಒಂದು ಕಲಾಕೃತಿಯಿಂದ ನಮ್ಮ ಅಂತರಂಗದಲ್ಲಿ ರಸಾವಿರ್ಭಾವವಾಗಬೇಕಾದರೆ ಆ ಕೃತಿಯಲ್ಲಿ ಒಂದು ವಿಶೇಷ ಶಕ್ತಿ ಇರಬೇಕು.

ADVERTISEMENT

ಆ ಶಕ್ತಿಯನ್ನು ತನ್ನ ಕೃತಿಯೊಳಗೆ ತರುವುದು ಹೇಗೆ? ತುಂಬುವುದು ಹೇಗೆ? – ಎಂಬ ರಹಸ್ಯವನ್ನು ಕಲೆಗಾರನಿಗೆ ಯಾವ ಗುರುವೂ ಕಲಿಸಲಾರ, ಯಾವ ಗ್ರಂಥವೂ ತಿಳಿಸಲಾರದು... ಇನ್ನು ಋಷಿಗಳಿಗಾದ ದಿವ್ಯದರ್ಶನವನ್ನು ಅವರು ತಮ್ಮ ಸ್ವಂತ ಬುದ್ಧಿಸಾಹಸದ ಫಲವೆಂದು ಹೇಳಿಕೊಳ್ಳಬಹುದೆ?... ಆ ದಿವ್ಯದರ್ಶನವನ್ನು ಅವರು ಆಶ್ಚರ್ಯಾನಂದದ ಮಾತುಗಳಲ್ಲಿ ವರ್ಣಿಸಿದರು. ಹೀಗೆ ಅವರ ಕೈಕೆಲಸವೇನೂ ಇಲ್ಲದೆ ತಾನಾಗಿ ಅವರಿಗೆ ದೊರೆತದ್ದು ತತ್ತ್ವಜ್ಞಾನ. ಹೀಗೆ ಅದು ಅಪೌರುಷೇಯ.’

(ಆಧಾರ: ಡಿವಿಜಿಯವರ ‘ವೇದ–ವೇದಾಂತ’)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.