ಋತದ ಕಲ್ಪನೆ ವೇದದಲ್ಲಿರುವ ಮುಖ್ಯವಾದ ತತ್ತ್ವ. ಇಡಿಯ ಸೃಷ್ಟಿಯೇ ಒಂದು ಗೊತ್ತಾದ ವ್ಯವಸ್ಥೆಯ ಭಾಗವಾಗಿದೆ ಎನ್ನುವುದು ಈ ಕಲ್ಪನೆಯ ಸಾರ. ಇದನ್ನು Cosmic order - ಎಂದು ಕರೆಯಬಹುದು. ಎಲ್ಲೆಲ್ಲೂ ಇರುವುದು, ನಡೆಯುವುದು ಋತ ಎಂಬ ವಿಶ್ವನಿಯಮ ಎನ್ನುವುದನ್ನು ಸಾಕ್ಷಾತ್ಕರಿಸಿಕೊಂಡವರು ಋಷಿಗಳು. ಸೃಷ್ಟಿಯ ಆಧಾರ ಮತ್ತು ಗುರಿ – ಎರಡೂ ಆನಂದಮಯವೇ ಆಗಿರುವುದರಿಂದ ಈ ಜಗತ್ತು ಕೂಡ ಆನಂದಮಯವೇ ಹೌದು – ಎಂಬ ನಿಲುವಿನಿಂದ ಜೀವನವನ್ನು ನಡೆಸಬೇಕೆನ್ನುವುದು ಋಷಿಪರಂಪರೆಯ ಸಂದೇಶ. ಆದರೆ ವಿಶ್ವನಿಯಮ ‘ದುಃಖ’ದಾಯಕವೂ ಆಗಿದೆ – ಎನ್ನುವುದನ್ನೂ ಋಷಿಗಳು ಕಂಡುಕೊಂಡಿದ್ದರು.
ಈ ವಿಷಯವಾಗಿ ಜಿ. ಎನ್. ಚಕ್ರವರ್ತಿಯವರ ವಿವರಣೆ ಸಂಗ್ರಹಯೋಗ್ಯವಾಗಿದೆ: ‘ಋತರೂಪವಾದ ವಿಶ್ವನಿಯ ಎಷ್ಟು ಆನಂದದಾಯಕವೊ ಅಷ್ಟೆ ದುಃಖದಯಕವೂ ಆಗಿದೆ. ಆದ್ದರಿಂದ ಪಾರ್ಥಿವ ವ್ಯವಹಾರದಲ್ಲಿ ಸೌಂದರ್ಯಪ್ರಕಾಶನ ಸುಲಭಸಾಧ್ಯವಲ್ಲವೆಂಬುದೂ ಋಷಿಗಳಿಗೆ ತಿಳಿಯದ ವಿಷಯವಲ್ಲ. ‘ಅಸ್ಯ ವಾಮಸ್ಯ ಪಲಿತಸ್ಯ ಹೇತುಃ’ (ಇವನೆ ಸೃಷ್ಟಿಕರ್ತ, ಜಗತ್ಪಾಲಕ, ಮತ್ತು ಲಯಕಾರಕ) – ಇತ್ಯಾದಿ ಮಂತ್ರಗಳು ವೈದಿಕ ಋಷಿಗಳ ಸತ್ಯಜ್ಞಾನದ ಸ್ವರೂಪವನ್ನು ತಿಳಿಸುತ್ತದೆ. ಋಷಿಗಳು ವಿಶ್ವದಲ್ಲಿ ಕಾವ್ಯಾತ್ಮಕವೂ ಗಾನಾತ್ಮಕವೂ ಆದ ಸೌಂದರ್ಯವನ್ನು ಸಾಕ್ಷಾತ್ಕರಿಸಿ ಅದರ ಫಲವಾದ ಆನಂದವನ್ನು ಪ್ರಕಾಶಪಡಿಸುವುದರ ಜೊತೆಯಲ್ಲಿಯೆ ನಿತ್ಯದಲ್ಲಿ ಅನಿತ್ಯವನ್ನೂ, ಅಮರ್ತ್ಯದ ನಡುವೆ ಮರಣವನ್ನೂ, ಪುಷ್ಟಿಯ ನಡುವೆ ಕ್ಷಯವನ್ನೂ, ಸೌಂದರ್ಯದ ನಡುವೆ ವಿಕಾರವನ್ನೂ ಕಂಡರು. ಆದರೆ ಈ ಮರಣವಿಕಾರಗಳು ಮಾನವನಿಗೆ ಸಂಕುಚಿತ ದೃಷ್ಟಿಯಿದ್ದರೆ ಮಾತ್ರ ದುಃಖಕಾರಕವೆಂದೂ ಜೊತೆಯಲ್ಲೆ ಅರಿತರು. ಆದ್ದರಿಂದ, ಕ್ಷಯಮರಣಾದಿ ದರ್ಶನಗಳಿಂದ ಕುಗ್ಗದೆ ಅವನ್ನೂ ವಿಶ್ವಸತ್ಯದ ಅಂಶಗಳೆಂದು ವರ್ಣಿಸಿ ಅವೆಲ್ಲವನ್ನೂ ವ್ಯಾಪಿಸಿಯೂ, ಅವೆಲ್ಲವನ್ನೂ ಮೀರಿಯೂ ಇರುವ ವಿಶ್ವಸೌಂದರ್ಯದ ಅನುಭವವೆ ವ್ಯಕ್ತಿಯ ಗುರಿಯೆಂದು ಸಾರಿದ್ದಾರೆ.
ಉದಾಹರಣೆಗೆ, ಲೋಕಕ್ಷಯಕಾರಿಣಿಯಾದ ಉಷೋದೇವಿಯ ಕ್ರೌರ್ಯವನ್ನು ದಯಾರಹಿತಳಾಗಿ ಪ್ರಾಣಿಗಳ ಕತ್ತನ್ನು ಮುರಿಯುವ ಬೇಡನ ಹೆಂಡತಿಗೆ ಹೋಲಿಸಿ, ಅದೇ ಕಾಲದಲ್ಲಿ ಅವಳ ಲೋಕಕ್ಕೆಲ್ಲ ಪುಷ್ಟಿದಾಯಕವೂ ಚೈತನ್ಯದಾಯಕವೂ ಆದ ದಿವ್ಯಶಕ್ತಿಯ ಸ್ವರೂಪಸೌಂದರ್ಯಗಳನ್ನು ಪ್ರಶಂಸಿಸಿದ್ದಾರೆ. ಅವರು ಅಸತ್ಯಕ್ಕಿಂತ ಸತ್ಯದಲ್ಲಿ ಅಧಿಕವಾದ ಶ್ರದ್ಧೆಯನ್ನಿಟ್ಟರು. ಮೃತ್ಯುವಿನ ಮೂಲಕ ಅಮೃತತತ್ತ್ವವನ್ನಪೇಕ್ಷಿಸಿದರು. ಕತ್ತಲಿಂದಾಚೆ ಜ್ಯೋತಿಯ ಸಾಕ್ಷಾತ್ಕಾರಕ್ಕೆ ಆಶಿಸಿದರು. ಅಸತ್ಯವನ್ನೂ ಕತ್ತಲನ್ನೂ ಮತ್ತು ಮೃತ್ಯುವನ್ನೂ ಗೆದ್ದರು.
ವಿಶ್ವಪ್ರಕಾಶವೂ ಶಾಶ್ವತವೂ ಆದ ದಿವ್ಯಜ್ಯೋತಿಯ ಸೌಂದರ್ಯಸಾಕ್ಷಾತ್ಕಾರದ ಅನುಭವವನ್ನು ಪಡೆದರು. ಸೌಂದರ್ಯದ್ಯೋತಕವಾದ ಈ ಸತ್ಯದಲ್ಲಿ ಹೋರಾಟಕ್ಕಿಂತ ಅಧಿಕವಾಗಿ ಶಾಂತಿಯನ್ನೂ, ದ್ವೇಷಕ್ಕಿಂತ ಅಧಿಕವಾದ ಪ್ರೇಮವನ್ನೂ ಕಂಡರು. ಋಷಿಗಳ ದರ್ಶನಕ್ಕೆ ಲಯಬದ್ಧವಾದ ವ್ಯವಹಾರವುಳ್ಳ ಜಗತ್ತೆಲ್ಲ ಕಾವ್ಯಾತ್ಮಕವಾಗಿ ಕಂಡಿತು. ಸೃಷ್ಟಿಕರ್ತನಾದ ಈಶ್ವರನೆ ಕವಿ. ಸರಷ್ಟವಾದ ಜಗತ್ತೆಲ್ಲ ಕಾವ್ಯಾತ್ಮಕ, ಗಾನಾತ್ಮಕ ಎಂದು ವಿಶ್ವಸೌಂದರ್ಯವನ್ನನುಭವಿಸಿ ಈ ಸೌಂದರ್ಯತತ್ತ್ವವನ್ನು ತಮ್ಮ ದಿವ್ಯವಾಣಿಯಿಂದ ಪ್ರಶಂಸಿಸಿದ್ದಾರೆ.’
(ಆಧಾರ: ಋಕ್ಷಂಹಿತಾಸಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.