ADVERTISEMENT

PV Web Exclusive| ಅನಾಥ ಪ್ರಾಣಿಗಳ ರಕ್ಷಕ

ಸಾವಿರಾರು ಪ್ರಾಣಿಗಳಿಗೆ ಜೀವದಾನಿಯಾದ ರಾಜೇಂದ್ರ ಸಿರ್ಸಿಕರ್‌

ಕೃಷ್ಣಿ ಶಿರೂರ
Published 20 ಅಕ್ಟೋಬರ್ 2020, 5:32 IST
Last Updated 20 ಅಕ್ಟೋಬರ್ 2020, 5:32 IST
ಕತ್ತೆಗಳ ಆರೈಕೆಯಲ್ಲಿ ರಾಜೇಂದ್ರ ಸಿರ್ಸಿಕರ್‌
ಕತ್ತೆಗಳ ಆರೈಕೆಯಲ್ಲಿ ರಾಜೇಂದ್ರ ಸಿರ್ಸಿಕರ್‌   

20 ವರ್ಷಗಳ ಹಿಂದಕ್ಕೊಮ್ಮೆ ಹೋಗಿ ಬರೋಣ....

ಶಿರಸಿಯ ಬೀದಿಯೊಂದರ ಕಸದ ತೊಟ್ಟಿಯಲ್ಲಿ ಮುಟ್ಟಲೂ ಹೇಸಿಗೆಯಾಗುವ ಸ್ಥಿತಿಯಲ್ಲಿ ನಾಯಿಮರಿಯೊಂದು ಕೊನೆ ಉಸಿರು ಹಿಡಿದು ಅನಾಥವಾಗಿ ಮಲಗಿತ್ತು. ಅಸಲಿಗೆ ಅದು ಡಾಬರ್‌ಮನ್‌ ತಳಿಯ ನಾಯಿಮರಿಯಾಗಿತ್ತು. ಅದು ನರಳುವ ಕ್ಷೀಣ ದನಿ ಅದೇ ಹಾದಿಯಲ್ಲಿ ಹಾದು ಹೋಗುತ್ತಿದ್ದ ರಾಜೇಂದ್ರ ಸಿರ್ಸಿಕರ್‌ ಅವರ ಕಿವಿಗೆ ಕೇಳಿಸಿತು. ಆ ನರಳಾಟದ ದನಿ ಅರಸಿ ಬಂದ ರಾಜೇಂದ್ರನಿಗೆ ಕಸದ ತೊಟ್ಟಿಯಲ್ಲಿ ಕೂದಲನ್ನೆಲ್ಲ ಕಳೆದುಕೊಂಡು, ಸುಕ್ಕುಗಟ್ಟಿ, ಅಸಹ್ಯ ಎನಿಸುವಂಥ ಚರ್ಮದೊಂದಿಗೆ ತೀರಾ ದಯನೀಯ ಸ್ಥಿತಿಯಲ್ಲಿ ಬಿದ್ದಿದ್ದ ನಾಯಿಮರಿ ಕಾಣಿಸಿತು. ಅದನ್ನು ಎತ್ತಿಕೊಂಡ ರಾಜೇಂದ್ರ ಮನೆಗೆ ತಂದರು. ಅದಕ್ಕೆ ಸ್ನಾನ ಮಾಡಿಸಿ, ಔಷಧೋಪಚಾರ ಮಾಡಿ, ಸಿರಿಂಜಿನ ಮೂಲಕ ಹಾಲು ಕುಡಿಸಿದರು. ಒಂದೆರಡು ದಿನಗಳಲ್ಲಿ ನಾಯಿ ಮರಿ ಚೇತರಿಸಿಕೊಂಡು ಓಡಾಡಲು ಆರಂಭಿಸಿತು. ಒಂದೇ ವಾರದಲ್ಲಿ ಕೂದಲು ಮೂಡಿತು. ತಿಂಗಳು ಕಳೆಯುತ್ತಲೇ ದಷ್ಟಪುಷ್ಟವಾಗಿ ಬೆಳೆಯಿತು. ರಾಜೇಂದ್ರ ಅದಕ್ಕೆ ಜಾಕ್‌ ಅಂಥ ನಾಮಕರಣವನ್ನೂ ಮಾಡಿದರು. ಮುಂದೆ ಆ ನಾಯಿ ಮನೆ–ಮಂದಿಯಲ್ಲದೆ, ಮನೆಗೆ ಬಂದು ಹೋಗುವವರಿಗೂ ಮುದ್ದಿನ ಜಾಕ್‌ ಆಗಿ ಬೆಳೆಯಿತು. ಅತ್ತ ಜಾಕ್‌ ಲವಲವಿಕೆಯಿಂದ ಬೆಳೆಯುತ್ತಿದ್ದರೆ ಇತ್ತ ಅನಾಥ ಪ್ರಾಣಿಗಳ ರಕ್ಷಣೆಯೇ ರಾಜೇಂದ್ರ ಅವರಿಗೆ ಹವ್ಯಾಸವಾಯಿತು.

ಈಗ ವಾಸ್ತವಕ್ಕೆ ಬರೋಣ. ಅದೇ ರಾಜೇಂದ್ರ ಸಿರ್ಸಿಕರ್‌ ಈಗ ಅನಾಥ ಪ್ರಾಣಿಗಳ ರಕ್ಷಕನಾಗಿ ಗುರುತಿಸಿಕೊಂಡಿದ್ದಾರೆ. ಅಪಘಾತಕ್ಕೀಡಾಗಿಯೋ, ರೋಗಕ್ಕೆ ತುತ್ತಾಗಿಯೋ ಮಾಲೀಕರಿಂದ ಪರಿತ್ಯಕ್ತಗೊಂಡು ರಸ್ತೆ ಬದಿ, ಕಸದ ತೊಟ್ಟಿಯಲ್ಲಿ ಅನಾಥವಾಗಿ ಬೀಳುವ ಅದೆಷ್ಟೋ ಪ್ರಾಣಿಗಳಿಗೆ ಸ್ವಂತ ಖರ್ಚು, ನಿಸ್ವಾರ್ಥದಿಂದ ಔಷಧೋಪಚಾರ ಮಾಡಿ, ಆರೈಕೆ ಮಾಡಿ ಜೀವದಾನಿಯಾಗಿದ್ದಾರೆ. ಆರಂಭದಲ್ಲಿ ಹವ್ಯಾಸವಾಗಿಸಿದ್ದ ಅನಾಥ ಪ್ರಾಣಿಗಳ ಆರೈಕೆ, ಈಗ ಅವರಿಗೆ ಫುಲ್‌ಟೈಮ್‌ ಪ್ರವೃತ್ತಿಯಾಗಿದೆ.

ADVERTISEMENT

ಸೂರಜ್‌ ಸಿರ್ಸಿಕರ್‌ ಅಧ್ಯಕ್ಷರಾಗಿರುವ ಶ್ರೀ ಪದ್ಮಸೇವಾ ಟ್ರಸ್ಟ್‌ ಆಶ್ರಯದಲ್ಲಿ ಅಮೇಜಿಂಗ್‌ ಪೆಟ್‌ ಪ್ಲಾನೆಟ್‌ ಎಂಬ ಹೆಸರಿನ ಅನಾಥ ಪ್ರಾಣಿಗಳ ಪುನರ್ವಸತಿ ಕೇಂದ್ರ ಆರಂಭಿಸಿ, ಈವರೆಗೆ ಅಂದಾಜು 1,600 ಆಕಳುಗಳು, ಸುಮಾರು 1,000 ನಾಯಿಗಳು, 40 ರಷ್ಟು ಬೆಕ್ಕುಗಳು ಹಾಗೂ ಕಾಗೆ, ಗುಬ್ಬಿ, ಗೂಬೆ, ಹದ್ದು ಮುಂತಾದ ಪಕ್ಷಿಗಳನ್ನು ರಕ್ಷಣೆ ಮಾಡಿದ್ದಾರೆ.

ಪ್ರಸ್ತುತ ಅನಾಥ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಒಂದು ಆಕಳು, ನಾಲ್ಕು ಕತ್ತೆಗಳು, ನಾಲ್ಕು ಕುದುರೆಗಳು, ನಾಲ್ಕು ಕುರಿಗಳು, 10 ನಾಯಿಗಳು, 2 ಬೆಕ್ಕುಗಳು, ಕೋಳಿ, ಪಕ್ಷಿಗಳು ಆರೈಕೆ ಪಡೆದುಕೊಳ್ಳುತ್ತಿವೆ. ಶಿರಸಿ ಮಾತ್ರವಲ್ಲದೆ ಶಿವಮೊಗ್ಗ, ಕುಮಟಾ, ಹೊಸಪೇಟೆ, ಬೆಂಗಳೂರು, ಹರಿಹರದಿಂದಲೂ ಅನಾಥ ಪ್ರಾಣಿಗಳನ್ನು ಔಷಧೋಪಚಾರಕ್ಕಾಗಿ ಸೇರಿಸಲಾಗಿದ್ದು, ಅವೆಲ್ಲ ಆರೈಕೆ ಪಡೆದಿವೆ.

ಮಕ್ಕಳು ಶೈಕ್ಷಣಿಕ ಉದ್ಯಾನ ಎಂದು ಸ್ಥಾಪಿಸಿದ್ದು, ಸಾಕು ಪ್ರಾಣಿ–ಪಕ್ಷಿಗಳ ಬಗ್ಗೆ ಮಕ್ಕಳಿಗೆ ಜ್ಞಾನ, ತಿಳಿವಳಿಕೆ ನೀಡಲಾಗುತ್ತಿದೆ. ಅದಕ್ಕೆ ₹50 ಶುಲ್ಕ ನಿಗದಿಪಡಿಸಿದ್ದು, ಅದರಿಂದ ಬಂದ ಹಣವನ್ನು ಅನಾಥ ಪ್ರಾಣಿಗಳ ಆರೈಕೆ, ಆಹಾರಕ್ಕೆ ವಿನಿಯೋಗಿಸಲಾಗುತ್ತಿದೆ. ಸಾಕಷ್ಟು ದಾನಿಗಳು ಆಹಾರ ರೂಪದಲ್ಲಿ, ಕೆಲವರು ಹಣದ ರೂಪದಲ್ಲಿ ದೇಣಿಗೆ ನೀಡಿ, ರಾಜೇಂದ್ರ ಅವರ ನಿಸ್ವಾರ್ಥ ಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಉದ್ಯಾನವನ್ನು ವೀಕ್ಷಿಸಿದ ಶಾಲೆಯ ಇಕೊ ಕ್ಲಬ್‌ನಡಿ ಹಾಟ್‌ಸ್ಪಾಟ್‌ ಮಾಡಲಾಗುವುದು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ದಿವಾಕರ ಶೆಟ್ಟಿ ಅವರು ಭರವಸೆ ನೀಡಿದ್ದಾರೆ.

‘ಮಕ್ಕಳಿಗೆ ಪ್ರಾಣಿ, ಪಕ್ಷಿಗಳ ಕುರಿತ ಜ್ಞಾನವನ್ನು ನೇರವಾಗಿ ಪಡೆಯಲು ಮಕ್ಕಳ ಶೈಕ್ಷಣಿಕ ಉದ್ಯಾನ ಉತ್ತಮ ಕೇಂದ್ರವೆನಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳ ಇಕೊ ಕ್ಲಬ್‌ಗಳ ಮೂಲಕ ಅನುಷ್ಠಾನ ಮಾಡಲಾಗುವುದು’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದೇಶಿಯ ಸಾಕು ಪ್ರಾಣಿಗಳಲ್ಲದೆ, ವಿದೇಶಿ ಸಾಕು ಪ್ರಾಣಿಗಳಾದ ಚೈನಾ ಕುರಿಗಳು, ಆಫ್ರಿಕನ್‌ ಬಾಲ್‌ ಪೈಥಾನ್‌, ಹೊರ ದೇಶದ ಮೂರು ತಳಿಯ ನವಿಲುಗಳು, ವಿವಿಧ ಜಾತಿಯ ಕೋಳಿಗಳು, ಆಫ್ರಿಕನ್‌ ಗ್ರೇ ಗಿಳಿ, ದಕ್ಷಿಣ ಅಮೆರಿಕದ ಗಿಳಿಗಳು, ಆಸ್ಟ್ರೇಲಿಯಾದ ಗಿಳಿಗಳು, ವಿವಿಧ ತಳಿಯ ಮೊಲಗಳು, ಯುರೋಪಿಯನ್‌ ಫ್ಯಾರೆಟ್‌ (ಮುಂಗುಸಿ), ದಕ್ಷಿಣ ಅಮೆರಿಕದ ಇಗ್ವಾನಾ ಪ್ರಾಣಿಗಳು ಅಮೇಜಿಂಗ್‌ ಪೆಟ್‌ ಪ್ಲಾನೆಟ್‌ನಲ್ಲಿ ನೋಡುಗರನ್ನು ರಂಜಿಸಲಿವೆ. ಈ ಎಲ್ಲ ಪ್ರಾಣಿಗಳೂ ಯಾರಿಗೂ ಹಾನಿಯನ್ನುಂಟು ಮಾಡದ ಪ್ರಾಣಿಗಳು ಎಂದು ರಾಜೇಂದ್ರ ಹೇಳಿದರು.

ಅನಾಥ ಪ್ರಾಣಿಗಳ ಆರೈಕೆ, ಆಹಾರಕ್ಕೆ ಈಗ ದಾನಿಗಳು ನೀಡುವ ದೇಣಿಗೆ ಸಾಲುತ್ತಿರದ ಕಾರಣ ಯಾರಾದರೂ ದಾನಿಗಳು ಆಹಾರದ ರೂಪದಲ್ಲಿ ಅಥವಾ ಹಣದ ರೂಪದಲ್ಲಿ ಸಹಾಯ ನೀಡಬಹುದು ಎಂದು ರಾಜೇಂದ್ರ ಸಿರ್ಸಿಕರ್‌ ಮನವಿ ಮಾಡಿದ್ದಾರೆ.

ಅಮೇಜಿಂಗ್‌ ಪೆಟ್‌ ಪ್ಲಾನೆಟ್‌ ಎಲ್ಲಿದೆ?

ಶಿರಸಿ–ಬನವಾಸಿ ರಸ್ತೆಯಲ್ಲಿ ಶಿರಸಿ ಮಾರಿಕಾಂಬಾ ದೇವಸ್ಥಾನದಿಂದ 2 ಕಿ.ಮೀ. ದೂರದ ಶ್ರೀನಗರದಲ್ಲಿ ಅಮೇಜಿಂಗ್‌ ಪೆಟ್‌ ಪ್ಲಾನೆಟ್‌ ಇದೆ. ಸಂಪರ್ಕಕ್ಕೆ ರಾಜೇಂದ್ರ ಸಿರ್ಸಿಕರ್‌ (9945797334).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.