ADVERTISEMENT

ಸಾರನಾಥ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 19:48 IST
Last Updated 28 ಸೆಪ್ಟೆಂಬರ್ 2018, 19:48 IST

ಬುದ್ಧಭಗವಂತನ ಬಗ್ಗೆ ಮಾತನಾಡುವಾಗ ಕೆಲವು ಸ್ಥಳಗಳ ಉಲ್ಲೇಖ ಕೂಡ ಪದೇ ಪದೇ ಬರುತ್ತದೆ. ಅವುಗಳಲ್ಲಿ ಒಂದು ‘ಸಾರನಾಥ’. ಇದರ ಬಗ್ಗೆ ಜಿ. ಪಿ. ರಾಜರತ್ನಂ ಅವರ ಬರೆದಿರುವ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು:

‘ಭಾರತದ ಪ್ರಾಚೀನ ಧರ್ಮಕ್ಷೇತ್ರಗಳಲ್ಲಿ ಸಾರನಾಥದ ಸ್ಥಾನ ಕೆಲವು ವೈಶಿಷ್ಟ್ಯಗಳಿಂದ ಕೂಡಿದ್ದು. ಭಾರತದಲ್ಲಿ ಮಾತ್ರವಲ್ಲದೆ, ಬುದ್ಧನಲ್ಲಿ ಶ್ರದ್ಧೆಯುಳ್ಳವರು ಯಾವ ಯಾವ ದೇಶಗಳಲ್ಲಿ ಇದ್ದಾರೆಯೋ ಅಲ್ಲೆಲ್ಲ ಮಾನ್ಯತೆಯನ್ನು ಪಡೆದಿರತಕ್ಕದ್ದು.

‘ಈ ಹಿರಿಮೆಗೆ ಕಾರಣವೇನೆಂದರೆ – ಭಗವಂತನಾದ ಬುದ್ಧನು ತನ್ನ ಧರ್ಮಚಕ್ರಪ್ರವರ್ತನವನ್ನು ಆರಂಭಮಾಡಿದ್ದು ಈ ಕ್ಷೇತ್ರದಲ್ಲಿಯೇ. ಲೋಕದಲ್ಲಿ ದುಃಖ ಇದೆ; ಈ ದುಃಖಕ್ಕೆ ಕಾರಣ ಇದೆ; ಈ ಕಾರಣವನ್ನು ಹೋಗಲಾಡಿಸಿದರೆ ಅದರ ಕಾರ್ಯವಾದ ದುಃಖವನ್ನು ಹೋಗಲಾಡಿಸಬಹುದು; ಈ ಕಾರಣಗಳನ್ನು ಹೋಗಲಾಡಿಸುವುದಕ್ಕೆ ಇದು ದಾರಿ ಎಂದು ಬುದ್ಧನು ಮೊದಲು ಘೋಷಣೆ ಮಾಡಿದ್ದು ಈ ಸಾರನಾಥದಲ್ಲಿಯೇ.

ADVERTISEMENT

ಈಗ ಸಾರನಾಥವೆಂದು ಸುಪ್ರಸಿದ್ಧವಾಗಿರುವ ಕ್ಷೇತ್ರಕ್ಕೆ ಪೂರ್ವಕಾಲದಲ್ಲಿ ‘ಋಷಿಪತನ’ ಎಂದು ಹೆಸರಿತ್ತು. ಈ ಸ್ಥಳದಲ್ಲಿ ಐನೂರು ಜನ ಋಷಿಗಳು ತಮ್ಮ ಕಳೇಬರಗಳನ್ನು ಕಳೆದುಕೊಂಡು ಮುಕ್ತಿಯನ್ನು ಪಡೆದರಾದ ಕಾರಣ ಇದಕ್ಕೆ ಈ ಹೆಸರು ಬಂದಿತೆಂದು ಕೆಲವರು ಹೇಳುತ್ತಾರೆ. ಹಿಮಾಲಯದಿಂದ ದಕ್ಷಿಣದ ಕಡೆಗೆ ಆಕಾಶಮಾರ್ಗದಲ್ಲಿ ಹಾರಿಬರುತ್ತಿದ್ದ ಋಷಿಗಳು ಇಲ್ಲಿ ಇಳಿದು, ಇಲ್ಲಿಂದ ಪುನಃ ಹಾರಿ ಹೋಗುತ್ತಿದ್ದರಾದ್ದರಿಂದ ಇದಕ್ಕೆ ಈ ಹೆಸರು ಬಂದಿತೆಂದು ಇನ್ನು ಕೆಲವರು ಹೇಳುತ್ತಾರೆ. ಕಾರಣ ಏನಾದರೂ ಇರಲಿ, ಋಷಿಪತನವು ಮುಕ್ತಿಕ್ಷೇತ್ರವೆಂದು ಬುದ್ಧನಿಗಿಂತಲೂ ಹಿಂದೆಯೇ ಪ್ರಖ್ಯಾತವಾಗಿತ್ತು.

ಋಷಿಪತನದ ಬಳಿಯಲ್ಲಿ ಒಂದು ಕಾಡು. ಅಲ್ಲಿ ಜಿಂಕೆಗಳು ನಿರ್ಭೀತಿಯಿಂದ ಇದ್ದುವು. ಅದರಿಂದ ಆ ಜಿಂಕೆಗಳ ಕಾಡನ್ನು ‘ಮೃಗದಾವ’ ಎಂದು ಕರೆಯುತ್ತಿದ್ದರು. ಗೌತಮಬುದ್ಧನ ಕಾಲದಿಂದ ಈ ಮೃಗದಾವಕ್ಕೆ ಪ್ರಾಮುಖ್ಯ ಬಂತು. ಶಾಂತವಾದ ಈ ಸ್ಥಳದಲ್ಲಿ ಬುದ್ಧನು ಬಂದು ತಂಗುತ್ತಿದ್ದನು.

ಬೌದ್ಧಧರ್ಮದ ಚರಿತ್ರೆಯಲ್ಲಿ ಸಾರನಾಥದ ಸ್ಥಾನ ಧರ್ಮಕ್ಕೂ ಮೋಕ್ಷಕ್ಕೂ ನಿಕಟವಾದ ಸಂಬಂಧವನ್ನು ಸಂಪಾದಿಸಿಕೊಂಡಿದೆ.

‘ಸಾರನಾಥ’ ಎಂಬುದು ‘ಸಾರಂಗನಾಥ’ ಎಂಬ ಪದದ ಸಂಕ್ಷಿಪ್ತರೂಪವೆನ್ನುತ್ತಾರೆ. ‘ಸಾರಂಗನಾಥ’ ಎಂದರೆ ‘ಜಿಂಕೆಗಳ ಒಡೆಯ’ ಎಂದು ಅರ್ಥ.

(ಆಧಾರ: ‘ವಿಚಾರತರಂಗ’)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.