ಶಿವಮೊಗ್ಗ: ‘ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದೆ. ಸೆ.27ರಂದು ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಘೋಷಿಸಲಾಗುವುದು’ ಎಂದು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭದ್ರಾವತಿ ಸಮೀಪದ ಗೋಣಿಬೀಡಿನಲ್ಲಿ ಮಂಗಳವಾರ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಅವರ ಪುತ್ಥಳಿ ಅನಾವರಣಗೊಳಿ ಅವರು ಮಾತನಾಡಿದರು.
‘27ರಂದು ಬೆಂಗಳೂರಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 140 ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳು ಭಾಗವಹಿಸುವರು. ಅಲ್ಲಿ ಎಲ್ಲಾ ವಿಚಾರ ಚರ್ಚೆ ಮಾಡುತ್ತೇವೆ’ ಎಂದು ವಿವರ ನೀಡಿದರು.
ದೇವಾಲಯ ಧ್ವಂಸ ಪ್ರಕರಣದಲ್ಲಿ ತನ್ನ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ದೇವಾಲಯದ ರಕ್ಷಣಾ ಕಾಯ್ದೆ ತರಲು ಹೊರಟಿದೆ. ಒಂದೆಡೆ ಹಿಂದುತ್ವದ ಹೆಸರು ಹೇಳುತ್ತಾ, ಮತ್ತೊಂದೆಡೆ ದೇವಸ್ಥಾನ ಒಡೆಯುತ್ತದೆ. ಮಸೂದೆ ಮಂಡಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಕುಟುಕಿದರು.
ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು. ಈಗಾಗಲೇ ಭದ್ರಾವತಿ ಕ್ಷೇತ್ರದ ಜನರು ನಿರ್ಧಾರ ಮಾಡಿದ್ದಾರೆ. ಜನರ ಭಾವನೆಗಳಿಗೆ ಪಕ್ಷ ಮನ್ನಣೆ ನೀಡುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ‘ದೇವೇಗೌಡರು ರಾಜಕಾರಣದಲ್ಲಿ ಹಲವು ನಾಯಕರನ್ನು ಬೆಳೆಸಿದ್ದಾರೆ. ಇಂದಿನ ಇಳಿವಯಸ್ಸಿನಲ್ಲಿ ಅವರಿಗೆ ನೋವಾಗದಂತೆ ನಡೆಯುವುದು ಎಲ್ಲರ ಕರ್ತವ್ಯ. ಡಿಸೆಂಬರ್ ನಂತರ ಅವರ ಗರಡಿಯಲ್ಲಿ ಬೆಳೆದ ಎಲ್ಲ ಮುಖಂಡರನ್ನೂ ಒಗ್ಗೂಡಿಸಲಾಗುವುದು. ಮುಂದಿನ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಕನ್ನಡಿಗರ ಸ್ವಾಭಿಮಾನಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.