ಬೆಂಗಳೂರು: ಗೊಂಬೆಯಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸುತ್ತಿದ್ದ ಆರೋಪದಡಿ ಹುಸೇನ್ ಚೌಧರಿ ಎಂಬುವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
‘ಅಸ್ಸಾಂನ ಹುಸೇನ್, ತಮ್ಮ ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದರು. ಅವರಿಂದ ₹ 20 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಡಿಸೆಂಬರ್ 3ರ ಸಂಜೆ ಆರೋಪಿ, ಹಳೆ ಮದ್ರಾಸ್ ರಸ್ತೆಯ ಎಂ.ವಿ.ಗಾರ್ಡನ್ ಮೂಲಕ ಕಾರಿನಲ್ಲಿ ಹೊರಟಿದ್ದರು. ಆರೋಪಿ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು, ರಸ್ತೆಯಲ್ಲಿ ಕಾರು ತಡೆದು ತಪಾಸಣೆ ನಡೆಸಿದ್ದರು. ಅದೇ ವೇಳೆ ಆರೋಪಿ, ತಮ್ಮ ಕಾರಿನಲ್ಲಿದ್ದ ಗೊಂಬೆಯನ್ನು ಮುಚ್ಚಿಡಲು ಯತ್ನಿಸಿದ್ದರು.’
‘ಮತ್ತಷ್ಟು ಅನುಮಾನಗೊಂಡ ಪೊಲೀಸರು, ಗೊಂಬೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಅದೇ ಗೊಂಬೆಯೊಳಗೆ 165 ಗ್ರಾಂ ತೂಕದ 2,200 ಎಂಡಿಎ ಮಾತ್ರೆಗಳು ಹಾಗೂ 71 ಗ್ರಾಂ ಹೆರಾಯಿನ್ ಪತ್ತೆ ಆದವು’ ಎಂದೂ ಮೂಲಗಳು ಹೇಳಿವೆ.
‘ಅಸ್ಸಾಂನಿಂದ ಡ್ರಗ್ಸ್ ತರುತ್ತಿದ್ದ ಆರೋಪಿ, ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಕೆಲ ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಳು ಆರೋಪಿಯ ಕಾಯಂ ಗ್ರಾಹಕರಾಗಿದ್ದಾರೆ. ಪೊಲೀಸರಿಗೆ ಸುಳಿವು ಸಿಗಬಾರದೆಂದು ಆರೋಪಿ, ಗೊಂಬೆಯಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸುತ್ತಿದ್ದರು’ ಎಂದೂ ತಿಳಿಸಿವೆ.
‘ಡ್ರಗ್ಸ್ ಸಾಗಣೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.