ADVERTISEMENT

‘ಸಚಿವರಿಗೆ ₹5 ಲಕ್ಷ ಮಾಮೂಲು’: ಅಧಿಕಾರಿ ಹೇಳಿಕೆ ಆಡಿಯೊ ವೈರಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇನ್‌ಸ್ಪೆಕ್ಟರ್ ಸೇರಿ ನಾಲ್ವರ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 1:27 IST
Last Updated 22 ಜೂನ್ 2021, 1:27 IST

ಕೊಪ್ಪಳ: ‘ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ₹5 ಲಕ್ಷ ನೀಡಬೇಕು’ ಎಂದು ಮಹಿಳಾ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ಏತನ್ಮಧ್ಯೆ ಮೂವರು ಇನ್‌ಸ್ಪೆಕ್ಟರ್‌ ಸೇರಿ ನಾಲ್ವರನ್ನು ಅಮಾನತುಗೊಳಿಸಿ ಅಬಕಾರಿ ಇಲಾಖೆಯ ಹೊಸಪೇಟೆ ವಲಯದ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಗಂಗಾವತಿ ವಲಯದ ಅಬಕಾರಿ ಇನ್‌ಸ್ಪೆಕ್ಟರ್‌ಗಳಾದ ಅಜಯ್, ಸ್ವತಂತ್ರಕುಮಾರ, ಶಿವಯ್ಯ ಮತ್ತು ಸಬ್‌ ಇನ್‌ಸ್ಪೆಕ್ಟರ್ ವಿಜಯಕುಮಾರ ರಡ್ಡಿ ಅಮಾನತುಗೊಂಡವರು.

ಏನಿದು ಪ್ರಕರಣ?: ‘ಅಬಕಾರಿ ಖಾತೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಜಿಲ್ಲೆಯ ಅಬಕಾರಿ ಇಲಾಖೆ ಕಾರ್ಯವನ್ನು ಶ್ಲಾಘಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಇಲಾಖೆಯ ಆಂತರಿಕ ಸಭೆಯಲ್ಲಿ ಸಚಿವರಿಗೆ ₹5 ಲಕ್ಷ ನೀಡುವಂತೆ ಸೂಚಿಸಲಾಗಿದೆ. ನಮ್ಮ ಮೇಲೆ ಒತ್ತಡ ಇರುವುದರಿಂದ ಹಣ ತಲುಪಿಸಬೇಕು' ಎಂದು ಮಹಿಳಾ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಗಳಿಗೆ ಹೇಳುವ ಆಡಿಯೊ ವೈರಲ್‌ ಆಗಿದೆ.

ADVERTISEMENT

‘ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸಿ.ಸೆಲೀನಾ ಅವರು ಇನ್‌ಸ್ಪೆಕ್ಟರ್ ಅಜಯ್ ಎಂಬುವರ ಜೊತೆ ಒಂದು ತಿಂಗಳ ಹಿಂದೆ ಮಾತನಾಡಿದ್ದರು ಎನ್ನಲಾದ ಆಡಿಯೊ ಇದಾಗಿದೆ. ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದು ಕರ್ತವ್ಯ ಲೋಪದ ಆರೋಪದ ಮೇಲೆ ನಾಲ್ವರನ್ನು ಅಮಾನತು ಮಾಡಲಾಗಿದೆ’ ಎಂಬುದು ಮೂಲಗಳ ಮಾಹಿತಿ.

‘ಅಮಾನತುಗೊಂಡ ಇನ್‌ಸ್ಪೆಕ್ಟರ್‌ ಆಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದು ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ’ ಎನ್ನುವುದು ಮೂಲಗಳ ಹೇಳಿಕೆ.

‘ಕಂದಾಯ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ಅಬಕಾರಿ ಜಂಟಿ ಆಯುಕ್ತರು ನಾಲ್ವರ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಆಡಿಯೊ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದುಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತೆಸಿ.ಸೆಲೀನಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.