ತುಮಕೂರು: ‘ಅಟಲ್ ಟಿಂಕರಿಂಗ್ ಪ್ರಯೋಗಾಲಯ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿ ಜ್ಞಾನವಿಕಾಸಕ್ಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ವಿಜ್ಞಾನಿ ಎನ್.ಕೆ.ಎಸ್.ರಾಜನ್ ಹೇಳಿದರು.
ಶನಿವಾರ ನಗರದ ಆರ್ಯನ್ ಪ್ರೌಢ ಶಾಲೆಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ ಪ್ರಾಯೋಜಿತ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.
‘ಜ್ಞಾನ, ಬುದ್ಧಿವಂತಿಕೆ ಮತ್ತು ತರ್ಕ ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ, ಸಾಧನೆಗೆ ಅವಶ್ಯಕವಾದವು. ಅವುಗಳನ್ನು ಈ ಪ್ರಯೋಗಾಲಯ ಮಕ್ಕಳಿಗೆ ಕಲ್ಪಿಸುತ್ತದೆ ಎಂದರು.
ಹೆಚ್ಚು ಹೆಚ್ಚು ಜ್ಞಾನ ಸಂಪಾದನೆಯಾದರೆ ಚಿಂತನ ಸಾಮರ್ಥ್ಯವೂ ಹೆಚ್ಷುತ್ತದೆ. ಕೇಂದ್ರ ಸರ್ಕಾರದ ನೆರವಿನ ಈ ಯೋಜನೆ ಪ್ರಯೋಜನವನ್ನು ಶಾಲೆಯ ಮಕ್ಕಳು ಪಡೆಯಲಿ. ಅಗತ್ಯವಿದ್ದಾಗ ಸೂಕ್ತ ಮಾರ್ಗದರ್ಶನ ಮಾಡುವುದಾಗಿ ಹೇಳಿದರು.
ಮುಖ್ಯ ಅತಿಥಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ‘ಒಬ್ಬ ವಿಜ್ಞಾನಿಯಿಂದ ಪ್ರಯೋಗಾಲಯ ಉದ್ಘಾಟನೆ ಮಾಡಿಸಿರುವುದು ಸೂಕ್ತ ಕಾರ್ಯ. ಶಿಕ್ಷಣ ಕ್ಷೇತ್ರದಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಜಗತ್ತು ತಾಂತ್ರಿಕ ನೆರವಿನಿಂದ ಈಗ ಚಿಕ್ಕದಾಗಿ ಪರಿಣಮಿಸಿದೆ. ನಮ್ಮ ದೇಶದ ಮಕ್ಕಳು ಜಗತ್ತಿನ ಬೇರೆ ದೇಶದ ಮಕ್ಕಳಿಗೆ ಯಾವುದೇ ಕ್ಷೇತ್ರಗಳಲ್ಲಿ ಕಡಿಮೆ ಇಲ್ಲ ಎಂದರು.
ಇಂತಹ ಪ್ರತಿಭೆಗಳ ಮತ್ತಷ್ಟು ಸೃಷ್ಟಿಸಲು ಇಂತಹ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ಗಳ ಅವಶ್ಯಕತೆ ಇದೆ. ಇದರಿಂದ ಮಕ್ಕಳ ಚಿಂತನ ಕ್ರಮವೂ ಸ್ಮಾರ್ಟ್ ಅಗಲಿದೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ ಮಾತನಾಡಿ, ‘ರಚನಾತ್ಮಕ ಚಿಂತನೆಗೆ ಪೂರಕವಾದ ಪ್ರಯೋಗಾಲಯವಾಗಿದೆ. ಮಕ್ಕಳ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಅವರ ಭಿನ್ನ, ವಿಭಿನ್ನ ಚಿಕಿತ್ಸಕ ಪ್ರವೃತ್ತಿ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
’ನೊಬೆಲ್ ಪ್ರಶಸ್ತಿ ಪಡೆದವರು ನಮ್ಮ ದೇಶದವರು ಕಡಿಮೆ. ನವೀನ ರೀತಿಯ ಸಂಶೋಧನೆಗಳು ನಮ್ಮ ದೇಶದಲ್ಲಿ ಕಡಿಮೆಯಾಗಿವೆ ಎಂದು ಇನ್ಫೋಸಿಸ್ ಸಂಸ್ಥೆಯ ಡಾ. ನಾರಾಯಣಮೂರ್ತಿ ಅವರು ಈಚೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮೂಲವಿಜ್ಞಾನಕ್ಕೆ ಉತ್ತೇಜನ ನೀಡಬೇಕು’ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಧ್ಯಕ್ಷತೆವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಮಂಜುನಾಥ್, ಸಂಸ್ಥೆಯ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ಆರ್.ಎನ್.ಸತ್ಯನಾರಾಯಣ, ಪಾಲಿಕೆ ಸದಸ್ಯ ಸಿ.ಎನ್.ರಮೇಶ್ ವೇದಿಕೆಯಲ್ಲಿದ್ದರು. ಶಾಲೆ ಮುಖ್ಯ ಶಿಕ್ಷಕ ಎಚ್.ಎಸ್.ರಾಘವೇಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.