ಮಂಗಳೂರು: ಲೇಖಕ ಗುರುರಾಜ ಮಾರ್ಪಳ್ಳಿ ಅವರ ‘ಅವ್ವ ನನ್ನವ್ವ ಕಾದಂಬರಿ'ಯನ್ನು ಚಿಂತಕ ವಿವೇಕಾನಂದ ಎಚ್.ಕೆ.ಅವರು ಸ್ವರೂಪ ಅಧ್ಯಯನ ಕೇಂದ್ರದ ವತಿಯಿಂದ ಇಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು.
ಕೃತಿ ಪರಿಚಯ ಮಾಡಿದ ವಿಮರ್ಶಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ‘ತತ್ವಜ್ಞಾನದಿಂದಲೇ ಆರಂಭವಾಗುವ ಈ ಕಾದಂಬರಿ, ‘ಮಣ್ಣು ಮಾತ್ರ ಸತ್ಯ ಉಳಿದುದೆಲ್ಲವೂ ಮಿಥ್ಯ’ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಸಮಾಜದ ಸ್ಥಿತ್ಯಂತರಗಳನ್ನು ಮನೋಜ್ಞವಾಗಿ ಚಿತ್ರಿಸಿದೆ’ ಎಂದರು.
ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ‘ನಮ್ಮ ಅಮ್ಮನಂತೆ ನಿಸರ್ಗವೂ ನಮ್ಮ ತಾಯಿ. ಆಕೆಯನ್ನು ರಕ್ಷಿಸುವುದೂ ನಮ್ಮ ಕರ್ತವ್ಯ’ ಎಂದರು.
ಲೇಖಕ ಗುರುರಾಜ ಮಾರ್ಪಳ್ಳಿ, ‘ತಾಯಿಯೊಬ್ಬಳು ತನ್ನ ಮಗು ಸತ್ತಾಗಲೂ ಕಣ್ಣೀರಿಡದ ನೈಜ ಘಟನೆಯೊಂದನ್ನು ಆಧ್ಯಾತ್ಮಿಕ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಒಮ್ಮೆ ಉಲ್ಲೇಖಿಸಿದ್ದರು. ಇದೇ ಈ ಕೃತಿಗೆ ಪ್ರೇರಣೆ. ನನ್ನ ತಾಯಿಯ ಜೀವನದಲ್ಲಿ ನಡೆದ ಘಟನೆ ಎರಡು ಸತ್ಯ ಘಟನೆಗಳನ್ನು ಕಾದಂಬರಿಯಲ್ಲಿ ಪ್ರಸ್ತಾಪಿಸಿದ್ದೇನೆ’ ಎಂದರು.
‘ಈ ಕೃತಿಯನ್ನು ರಚಿಸಿದ ಬಳಿಕ ಕಾದಂಬರಿಕಾರ ಆಗಬೇಕು ಎಂಬ ಹಂಬಲ ನನ್ನಲ್ಲೂ ಹುಟ್ಟಿದೆ. ಜನ ಸಾಮಾನ್ಯರ ಜೀವನವನ್ನೇ ಮೂಲವಾಗಿಟ್ಟು ಕಾದಂಬರಿ ಬರೆಯುತ್ತೇನೆ’ ಎಂದರು.
ಸ್ವರೂಪ ರಾಷ್ಟ್ರೀಯ ಅಭಿವೃದ್ಧಿ ಶಿಕ್ಷಣ ಯೋಜನೆ ನಿರ್ದೇಶಕ ಗೋಪಾಡ್ಕರ್ ಸ್ವರೂಪ ಮತ್ತು ಸುಮಾಡ್ಕರ್ ಸ್ವರೂಪ ಇದ್ದರು.
ಮುದ್ರಾಡಿಯ‘ನಮ ತುಳುವೆರ್’ ಕಲಾ ಸಂಘಟನೆ ಕಲಾವಿದರು ಗುರುರಾಜ ಮಾರ್ಪಳ್ಳಿ ನಿರ್ದೇಶನದ `ಅವ್ವ ನನ್ನವ್ವ' ನಾಟಕವನ್ನು ಪ್ರಸ್ತುತಿಪಡಿಸಿದರು. ಈ ನಾಟಕ ಕೃತಿಯ ನೂರನೇ ರಂಗಪ್ರಯೋಗವಿದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.