ADVERTISEMENT

ಅಂಚೆ ಪೇದೆ ಮಗಳು ರಾಜ್ಯಕ್ಕೆ 5ನೇ ರ್‍್ಯಾಂಕ್

ಡಾ.ಟಿ.ಪಿ ಗಿರಡ್ಡಿ
Published 13 ಮೇ 2014, 7:46 IST
Last Updated 13 ಮೇ 2014, 7:46 IST

ಜಮಖಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂ­ಕಿನ ಹಿಪ್ಪರಗಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಶಿವಲಿಂಗಪ್ಪ ಜಮಖಂಡಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ 5ನೇ ರ್‍್ಯಾಂಕ್‌ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ.

ಗಣಿತ–100, ಸಮಾಜ ವಿಜ್ಞಾನ–99, ಕನ್ನಡ–124, ಇಂಗ್ಲಿಷ್‌–99, ಹಿಂದಿ–99 ಹಾಗೂ ವಿಜ್ಞಾನ–92 ಸೇರಿ ಒಟ್ಟು 625ಕ್ಕೆ 613 ಅಂಕ ಗಳಿಸಿ ಶೇ 98.08 ಅಂಕಗಳೊಂದಿಗೆ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ.

ಹಿಪ್ಪರಗಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ರ್‍್ಯಾಂಕ್‌ ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ತಾಲ್ಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರದಿಂದ ಪರೀಕ್ಷೆ ಬರೆದಿದ್ದ ಅವರು ಹುನ್ನೂರ ಕೇಂದ್ರಕ್ಕೂ ಸಹ ಪ್ರಥಮ ಸ್ಥಾನ ಗಿಟ್ಟಿಸಿದ್ದಾರೆ.
ಈ ಸಾಧನೆಯಯಿಂದ ಲಕ್ಷ್ಮಿ ಗ್ರಾಮೀಣ ಭಾಗದ ಅಪ್ಪಟ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

6ನೇ ತರಗತಿಯಿಂದ 10ನೇ ತರಗತಿ ವರೆಗೆ ಹಿಪ್ಪರಗಿ ಮೊರಾರ್ಜಿ ವಸತಿ ಶಾಲೆಯಲ್ಲಿ ಓದಿದ್ದಾರೆ. ಅಂದಿನ ಪಾಠ ಅಂದೇ ಓದಿ ಮುಗಿಸುವ ಲಕ್ಷ್ಮಿ ಅತ್ಯಂತ ಸೌಮ್ಯ ಸ್ವಭಾವದವಳಾಗಿದ್ದಾರೆ. ಅನಾರೋಗ್ಯದ ದಿನಗಳಲ್ಲೂ ಸಹ ತಮ್ಮ ಹುಟ್ಟೂರಿಗೆ ತೆರಳದೆ ವೈದ್ಯಕೀಯ ಉಪಚಾರ ಪಡೆದು ಶಾಲೆಯ ವಸತಿ ನಿಲಯದಲ್ಲಿ ಉಳಿದುಕೊಂಡು ಗುಣಮುಖರಾ­ಗುತ್ತಿದ್ದರು ಎಂದು ಪ್ರಾಚಾರ್ಯ ಜೆ.ಬೆಸ್ತರ್‌ ಹೆಮ್ಮೆಯಿಂದ ಹೇಳುತ್ತಾರೆ.

ಮೂಲತಃ ತಾಲ್ಲೂಕಿನ ಕಂಕಣವಾಡಿ ಗ್ರಾಮದ ನಿವಾಸಿಯಾದ ಲಕ್ಷ್ಮಿ ಮುಂದೆ ವೈದ್ಯಳಾಗಬೇಕೆಂಬ ಕನಸು ಕಾಣುತ್ತಿದ್ದಾರೆ. ಅವರ ತಂದೆ ಶಿವಲಿಂಗಪ್ಪ ಜಮಖಂಡಿ ತಮ್ಮ ಹುಟ್ಟೂರಿನಲ್ಲಿಯೇ ಗ್ರಾಮೀಣ ಅಂಚೆ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸುಜಾತಾ ಮನೆಗೆಲಸ ಮಾಡುತ್ತಾರೆ. ತಂದೆ–ತಾಯಿಯ ಆರ್ಥಿಕ ಪರಿಸ್ಥಿತಿ ಮಗಳಿಗೆ ವೈದ್ಯಕೀಯ ಶಿಕ್ಷಣ ನೀಡುವಷ್ಟು ಸಬಲವಾಗಿಲ್ಲವಾದರೂ ಏನನ್ನಾದರೂ ಮಾಡಿ ಮಗಳ ಕನಸನ್ನು ನನಸು ಮಾಡುವ ಉತ್ಸಾಹದಲ್ಲಿದ್ದಾರೆ.

ಕಲಿಸಿದ ಎಲ್ಲಾ ಶಿಕ್ಷಕರು ಅದರಲ್ಲೂ ವಿಶೇಷವಾಗಿ ಪ್ರಾಚಾರ್ಯ ಜೆ. ಬೆಸ್ತರ್‌ ತನ್ನ ಓದಿಗೆ ನೀಡಿದ ಪ್ರೋತ್ಸಾಹಕ್ಕೆ ಲಕ್ಷ್ಮಿ ಕೃತಜ್ಞತೆ ಸಲ್ಲಿಸುತ್ತಾರೆ. ತಂದೆ–ತಾಯಿ ನೀಡಿದ ಬೆಂಬಲ ಕೂಡ ಸಾಧನೆಗೆ ಸಹಾಯ­ಕವಾಗಿದೆ ಎಂದು ಅಭಿಮಾನದಿಂದ ಲಕ್ಷ್ಮಿ ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.