ಬಾಗಲಕೋಟೆ: ನಿದ್ದೆಯಿಂದ ಏಳಣ್ಣ ಸಿದ್ರಾಮಣ್ಣ,ಮಹಾದಾಯಿ ತಿರುಗಿಸಣ್ಣ,ಕಾವೇರಿ ಕಾಪಾಡಣ್ಣ,ಕೃಷ್ಣಾ ಬಳಸಿಕೊಳ್ಳಣ್ಣ, ಮಹಾದಾಯಿ ಬಗ್ಗೆ ಮಾತಾಡಣ್ಣ ಮೋದಿಯಣ್ಣ ,ಜಾತಿ,ಮತ ಬೇಡಣ್ಣ ಪಕ್ಷ ನೋಡಬೇಡಣ್ಣ ಭ್ರಷ್ಟಾಚಾರ ಓಡಿಸೋಣ...ಬನ್ನಿ ಅಣ್ಣ ಹೋರಾಟಕ್ಕೆ ಕೈ ಜೋಡಿಸಣ್ಣ...
ಹೆಲ್ಮೆಟ್ ಮಾದರಿಯಲ್ಲಿ ತಲೆಗೆ ಗಡಿಗೆಯನ್ನು ಹಾಕಿಕೊಂಡು ಅದರ ಮೇಲೆ ಕಾವೇರಿ ಹಾಗೂ ಮಹಾದಾಯಿ ಎಂದು ಬಿಳಿ ಬಣ್ಣದಿಂದ ಬರೆದುಕೊಂಡು ಕೊರಳಿನಲ್ಲಿ ಖಾಲಿ ಪ್ಲಾಸ್ಟಿಕ್ ಡಬ್ಬಿಗಳನ್ನು ಹಾಕಿಕೊಂಡು ಬಾಗಲಕೋಟೆಯಿಂದ ಮೈಸೂರಿನವರೆಗೆ ಕಾವೇರಿ ಮತ್ತು ಮಹಾದಾಯಿ ಹೋರಾಟದ ಕುರಿತು ಜಾಗೃತಿ ಮೂಡಿಸಲು ಬಾಗಲಕೋಟೆಯ ಮುಗಳೊಳ್ಳಿ ಗ್ರಾಮದ ದಸ್ತಾವೇಜು ಬರಹಗಾರ ಭೀಮಣ್ಣ ಭಜಣ್ಣವರ ಬೈಕ್ ಮೇಲೆ ಶುಕ್ರವಾರ ಸವಾರಿ ಆರಂಭಿಸಿದರು.
ಕಾವೇರಿ ನೀರು ಉಳಿಸಿಕೊಳ್ಳುವಂತೆ ಕನ್ನಡ ಪರ ಸಂಘಟನೆಗಳು ನಡೆಸಿದ ಹೋರಾಟದಲ್ಲಿ ಭಾಗವಹಿಸಿದ ನಂತರ ಪ್ರಯಾಣ ಬೆಳೆಸಿದರು.ರಸ್ತೆಯಲ್ಲಿ ಸಾಗುತ್ತಿರುವಾಗ ಮೇಲಿನಂತೆ ಹಾಡುತ್ತಾ ಹೋಗುತ್ತಿರುವುದು ಕಂಡುಬಂದಿತು.
ರಸ್ತೆಯ ಮಧ್ಯೆ ಸಾಗುತ್ತಿದ್ದಾಗ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಭೀಮಣ್ಣ ಭಜಣ್ಣವರ ಮೂರು ದಿನಗಳ ಕಾಲ ಬೈಕ್ ಮೇಲೆ ಸವಾರಿ ನಡೆಸಿ ಮೈಸೂರು ತಲುಪಲಿದ್ದೇನೆ. ಬೆಳಗಾವಿ,ಚಿಕ್ಕೋಡಿ,ಯಮನೂರು ಸೇರಿದಂತೆ ಇನ್ನಿತರ ಕಡೆ ನಡೆಯುತ್ತಿರುವ ಮಹಾದಾಯಿ ಹೋರಾಟಗಾರರನ್ನು ಬೆಂಬಲಿಸಲು ಭೇಟಿ ನೀಡುವೆ.ಬಳಿಕ ಹಾವೇರಿ ಮಾರ್ಗವಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಜಾಗೃತಿ ಮೂಡಿಸಲು ಮೈಸೂರಿನವರೆಗೆ ಸಂಚಾರ ಮಾಡಲಿದ್ದೇನೆ ಎಂದರು.
ಮಹಾದಾಯಿ ಮತ್ತು ಕಾವೇರಿ ಬಗ್ಗೆ ಜಾಗೃತಿ ಮೂಡಿಸಲು ಬೈಕ್ ಸವಾರಿ ನಡೆಸುತ್ತಿದ್ದೇನೆ.ಸರ್ಕಾರಕ್ಕೆ ಎಷ್ಟು ಮನವಿ ಕೊಟ್ಟರೂ ಅದು ಕಸದ ಬುಟ್ಟಿಗೆ ಸೇರಲಿದೆ.ಪರಿಹಾರ ಮಾತ್ರ ಕನಸಿನ ಮಾತು ಎಂದು ಹೇಳಿದರು.
ಸ್ವಂತ ಖರ್ಚಿನಲ್ಲೇ ಮೂರು ದಿನಗಳ ಕಾಲ ಬೈಕ್ ಮೇಲೆ ತೆರಳುತ್ತಿದ್ದೇನೆ.ಯಾರಿಂದಲೂ ದುಡ್ಡು ಪಡೆದುಕೊಂಡಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.