ADVERTISEMENT

ಕೆರೆ ತುಂಬಿಸಿ; ನೀರಾವರಿ ಕಲ್ಪಿಸಿ

ಬರ ಅಧ್ಯಯನ ವೇಳೆ ಯಡಿಯೂರಪ್ಪಗೆ ಮುಷ್ಠಿಗೇರಿ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 15:20 IST
Last Updated 7 ಜೂನ್ 2019, 15:20 IST
ಬಾದಾಮಿಯಲ್ಲಿ ಶುಕ್ರವಾರ ಬಿ.ಎಸ್.ಯಡಿಯೂರಪ್ಪ ಅಧಿಕರಿಗಳ ಸಭೆ ನಡೆಸಿದರು
ಬಾದಾಮಿಯಲ್ಲಿ ಶುಕ್ರವಾರ ಬಿ.ಎಸ್.ಯಡಿಯೂರಪ್ಪ ಅಧಿಕರಿಗಳ ಸಭೆ ನಡೆಸಿದರು   

ಬಾಗಲಕೋಟೆ: ನಮ್ಮ ಸಹಕಾರದಿಂದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ₹6 ಲಕ್ಷ ಉಳಿದಿದೆ. ಅದನ್ನು ವಾಪಸ್ ಪಡೆಯದೇ ಕೆರೆ ಏರಿಗೆ ಪಿಚ್ಚಿಂಗ್ ಮಾಡಲು ಬಳಕೆ ಮಾಡುವಂತೆ ಸರ್ಕಾರಕ್ಕೆ ಹೇಳಿ, ಮಲಪ್ರಭಾ ಇಲ್ಲವೇ ಕೃಷ್ಣಾ ನದಿಯಿಂದ ನೀರು ತಂದು ನಮ್ಮೂರ ಕೆರೆ ತುಂಬಿಸಿ..

ಇದು ಬಾದಾಮಿ ತಾಲ್ಲೂಕು ಮುಷ್ಠಿಗೇರಿಗೆ ಬರ ಅಧ್ಯಯನಕ್ಕೆಂದು ಬಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಗ್ರಾಮದ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಮಾಡಿದ ಮನವಿ.

ಕೆರೆ ಸಂಜೀವಿನಿ ಯೋಜನೆಯಡಿ ಸರ್ಕಾರ ಗ್ರಾಮದ ಕೆರೆ ಅಭಿವೃದ್ಧಿಗೆ ₹18 ಲಕ್ಷ ಮಂಜೂರು ಮಾಡಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ 15 ಎಕರೆ ವಿಸ್ತೀರ್ಣದ ಕೆರೆಯ ಹೂಳು ತೆಗೆಯುವ ಕಾರ್ಯದಲ್ಲಿ ನಾವೂ ಕೈ ಜೋಡಿಸಿದ್ದೇವೆ. ಈ ಕೆಲಸಕ್ಕೆ ₹12 ಲಕ್ಷ ಖರ್ಚಾಗಿದೆ. ಉಳಿದ ಹಣವನ್ನು ವಾಪಸ್ ಮರಳಿಸುವಂತೆ ಹೇಳಿದ್ದಾರೆ. ಅದು ಸರಿಯಲ್ಲ. ಹೂಳು ಕೊಂಡೊಯ್ದ ರೈತರಿಂದ ಸಂಗ್ರಹಿಸಿದ ₹5 ಲಕ್ಷ ಕೂಡ ಸಂಘದ ಬಳಿ ಇದೆ. ಎಲ್ಲಾ ಹಣವನ್ನು ಸೇರಿಸಿ ಕೆರೆಯ ಸುತ್ತಲೂ ಪಿಚ್ಚಿಂಗ್ ಮಾಡಿಸಿ ನೀರು ನಿಲ್ಲುವಂತೆ ಮಾಡಲು ಸರ್ಕಾರಕ್ಕೆ ಹೇಳಿ ಎಂದುಕೆರೆ ಬಳಕೆದಾರರ ಸಂಘದವರು ಯಡಿಯೂರಪ್ಪ ಅವರಿಗೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವೆ’ ಎಂದರು.

ADVERTISEMENT

ಕೆರೆ ತುಂಬಿಸಿ; ‘ಕೆರೆ ನೀರು ಬಿಟ್ಟರೆ ನಮ್ಮೂರಿಗೆ ಯಾವುದೇ ನೀರಿನ ಮೂಲ ಇಲ್ಲ. ಸರಿಯಾಗಿ ಮಳೆಗಾಲ ಆಗದೇ ಅಂತರ್ಜಲ ಬರಿದಾಗಿ ಕೊಳವೆ ಬಾವಿಗಳು ಬತ್ತುತ್ತಿವೆ. ನಮಗೆ ಶಾಶ್ವತವಾಗಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಮಲಪ್ರಭಾ ಇಲ್ಲವೇ ಕೃಷ್ಣಾ ನದಿಯಿಂದ ನಮ್ಮೂರ ಕೆರೆಗೆ ನೀರು ಹರಿಸಿ’ ಎಂದು ಮುಷ್ಠಿಗೇರಿ ಗ್ರಾಮಸ್ಥರು ಮನವಿ ಮಾಡಿದರು.

ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸ್ಥಳದಲ್ಲಿದ್ದ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಶಾಸಕ ಮುರುಗೇಶ ನಿರಾಣಿ ಭರವಸೆ ನೀಡಿದರು.

ಮುಷ್ಠಿಗೇರಿಗೆ ಬರುವ ದಾರಿಯಲ್ಲಿ ಹಳಗೇರಿಯ ರಾಮಚಂದ್ರಗೌಡ ಪಾಟೀಲ ಅವರ ನೀರಿಲ್ಲದೇ ಒಣಗಿ ಹೋಗಿರುವ ಬಾಳೆ ತೋಟವನ್ನು ಯಡಿಯೂರಪ್ಪ ವೀಕ್ಷಿಸಿದರು.

ಎಷ್ಟು ಮೇವು ಬೇಕು?:‘ಬಾದಾಮಿ ತಾಲ್ಲೂಕಿನಲ್ಲಿ ಮೂರು ಕಡೆ ಮೇವಿನ ಬ್ಯಾಂಕ್ ತೆರೆದಿದ್ದು, 18 ಟನ್ ಮೇವು ದಾಸ್ತಾನು ಇದೆ. ಇಲ್ಲಿಯವರೆಗೆ ಎಂಟು ಕ್ವಿಂಟಲ್‌ನಷ್ಟು ಮೇವು ಮಾರಾಟವಾಗಿದೆ’ ಎಂದು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತಹಶೀಲ್ದಾರ್ ಸುಹಾಸ್ ಇಂಗಳೆ ಮಾಹಿತಿ ನೀಡಿದರು.

ಬಾದಾಮಿ ತಾಲ್ಲೂಕಿನಲ್ಲಿ ಒಟ್ಟು 86,460 ದನಗಳು ಇರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಗೋವಿಂದ ಕಾರಜೋಳ, ಅದರಲ್ಲಿ ಅರ್ಧದಷ್ಟು ದನಗಳಿಗೆ ಮೇವಿನ ಕೊರತೆ ಇದೆ. ಅಂದರೆ 45 ಸಾವಿರ ದನಗಳಿಗೆ ದಿನಕ್ಕೆ 5 ಕೆ.ಜಿ ಮೇವಿನ ಬೇಡಿಕೆ ಇದೆ. ಹಾಗಿದ್ದ ಮೇಲೆ ಎಷ್ಟು ಮೇವು ಸಂಗ್ರಹಿಸಿ ಇಡಬೇಕಿತ್ತು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕಿನಲ್ಲಿರುವ ಮೇವಿನ ಸಂಗ್ರಹದ ಬಗ್ಗೆ ಪಿಡಿಒಗಳ ಮೂಲಕ ರೈತರಿಗೆ ಸರಿಯಾಗಿ ಮಾಹಿತಿ ನೀಡಿ. ಆಗ ಕೊರತೆಯಷ್ಟು ಮೇವು ಪೂರೈಕೆಯಾಗುತ್ತದೆ. ದನಗಳ ಮಾರಾಟವೂ ತಪ್ಪಲಿದೆ’ ಎಂದು ಶಾಸಕ ಮುರುಗೇಶ ನಿರಾಣಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಉಪಯೋಗ ಎಲ್ಲ ರೈತರಿಗೂ ಸಿಗುವಂತೆ ಕ್ರಮ ವಹಿಸಿ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಉಪವಿಭಾಗಾಧಿಕಾರಿ ಎಚ್‌.ಜಯಾ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಭೀಮಪ್ಪ ಲಾಳಿ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ನಾರಾಯಣ ಸಾ ಭಾಂಡಗೆ, ಲಕ್ಷ್ಮಣ ಸವದಿ, ಮುಖಂಡ ಮಹಾಂತೇಶ ಮಮದಾಪುರ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಉದ್ನೂರ, ಅಶೋಕ ಕಟ್ಟೀಮನಿ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.