ಬಾಗಲಕೋಟೆ: ಮೀರತ್‌ನ ಭಾರತೀಯ ಸೇನೆಯ ಆರ್.ವಿ.ಸಿ ಕೇಂದ್ರದಲ್ಲಿ (Remount and vaternary corps) 18 ತಿಂಗಳ ತರಬೇತಿ ಪೂರ್ಣಗೊಳಿಸಿರುವ ಮುಧೋಳ ತಳಿಯ ಆರು ನಾಯಿಗಳು ವರ್ಷಾಂತ್ಯಕ್ಕೆ ಜಮ್ಮು ಕಾಶ್ಮೀರದಲ್ಲಿ ಪರಿಚಯಾತ್ಮಕ ಸೇವೆಗೆ (induction programme) ಸೇರ್ಪಡೆಗೊಳ್ಳಲಿವೆ.
‘ಇದರಿಂದ ಭಾರತೀಯ ಸೇನಾ ಸೇವೆಗೆ ಬಳಕೆಯಾದ ಮೊದಲ ದೇಸಿ ತಳಿ ನಾಯಿ ಎಂಬ ಹೆಗ್ಗಳಿಕೆಗೆ ಮುಧೋಳ ತಳಿ ಪಾತ್ರವಾಗಲಿದೆ’ ಎಂದು ಕೇಂದ್ರ ಸರ್ಕಾರದ ಪಶುಪಾಲನಾ ಆಯುಕ್ತ ಡಾ.ಸುರೇಶ ಹೊನ್ನಪ್ಪಗೌಳ ‘ಪ್ರಜಾವಾಣಿ’ಯೊಂದಿಗೆ ಗುರುವಾರ ಸಂಭ್ರಮ ಹಂಚಿಕೊಂಡರು.
‘ಆರ್‌ವಿಸಿ ಕೇಂದ್ರದ ಅಧಿಕಾರಿಗಳು ಈ ವಿಚಾರ ಖಚಿತಪಡಿಸಿದ್ದಾರೆ. ಮುಧೋಳ ತಳಿಯ ಇನ್ನೂ ಎಂಟು ನಾಯಿ ಮರಿಗಳನ್ನು ಕೇಳಿದ್ದಾರೆ’ ಎಂದು ಡಾ.ಸುರೇಶ ತಿಳಿಸಿದರು.
‘ಇಲ್ಲಿಯವರೆಗೂ ಸೇನೆಯಲ್ಲಿ ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್ ಮತ್ತು ಗ್ರೇಟ್ ಸ್ವಿಸ್ ಮೌಂಟೇನ್ ಸೇರಿದಂತೆ ವಿದೇಶಿ ತಳಿಯ ನಾಯಿಗಳ ಪಾರುಪತ್ಯವಿತ್ತು. ಇನ್ನು ಮುಂದೆ ಮುಧೋಳ ತಳಿಯೂ ಕಾಣಿಸಿಕೊಳ್ಳಲಿದೆ’ ಎಂದು ಅವರು ಹೇಳಿದರು.
ಮುಧೋಳ ತವರು: ತೀಕ್ಷ್ಣ ನೋಟ, ಪಾದಗಳ ಚುರುಕಿನ ಚಲನೆ ಹಾಗೂ ಬೇಟೆಗೆ ಪ್ರಸಿದ್ಧಿಯಾದ ಈ ತಳಿಯನ್ನು ಮುಧೋಳದ ಘೋರ್ಪಡೆ ಸಂಸ್ಥಾನಿಕರು ರಕ್ಷಿಸಿಕೊಂಡು ಬಂದಿದ್ದರು. ಬೀದರ್‌ನ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಕೂಡ ಮುಧೋಳ ತಾಲ್ಲೂಕು ತಿಮ್ಮಾಪುರದಲ್ಲಿ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಆರಂಭಿಸಿ ತಳಿ ಸಂವರ್ಧನೆಯಲ್ಲಿ ತೊಡಗಿದೆ.
ತಿಮ್ಮಾಪುರ ಕೇಂದ್ರದಿಂದ 2016ರ ಫೆಬ್ರುವರಿಯಲ್ಲಿನ ಮುಧೋಳ ತಳಿಯ ಆರು ನಾಯಿ ಮರಿಗಳನ್ನು ಭಾರತೀಯ ಸೇನೆಗೆ ಆಯ್ಕೆ ಮಾಡಿಕೊಂಡು ಅವುಗಳಿಗೆ ತರಬೇತಿ ನೀಡಲಾಗಿತ್ತು.
ಇದೇ ತಿಂಗಳ ಅಂತ್ಯಕ್ಕೆ ಆರ್‌ವಿಸಿ ಕೇಂದ್ರದ ಬ್ರಿಗೇಡಿಯರ್ ಬಾಪೂಗೌಡ ಪರಸನಹಳ್ಳಿ, ತಿಮ್ಮಾಪುರ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮತ್ತೆ ಎಂಟು ಮರಿಗಳನ್ನು ಕೊಂಡೊಯ್ಯುವ ವಿಚಾರದಲ್ಲಿ ಆಗ ಅಧಿಕೃತ ಪ್ರಸ್ತಾವ ಸಲ್ಲಿಸಬಹುದು ಎಂದು ಕೇಂದ್ರದ ಮುಖ್ಯಸ್ಥ ಡಾ.ಮಹೇಶ್ ಪತ್ರಿಕೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.