ಬಾಗಲಕೋಟೆ: 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಮೊದಲುಗೊಂಡು 1996ರವರೆಗೆ 44 ವರ್ಷಗಳ ಸುದೀರ್ಘ ಅವಧಿಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಈ ಅಬೇಧ್ಯ ಕೋಟೆಯನ್ನು ಮೊದಲು ಬಾರಿಗೆ ಕೆಡವಿದ ಶ್ರೇಯಸ್ಸು ಮಾತ್ರ ಮಾಜಿ ಶಾಸಕ ಹುಲ್ಲಪ್ಪ ಮೇಟಿ ಅವರಿಗೆ ಸಲ್ಲುತ್ತದೆ.
ಅದಕ್ಕೂ ಮುನ್ನ 1991ರ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆಯಂತಹ ಮುತ್ಸದ್ಧಿ ರಾಜಕಾರಣಿಯೇ ಕಾಂಗ್ರೆಸ್ ಕೋಟೆಯ ಕೈವಶ ಮಾಡಿಕೊಳ್ಳಲು ಪ್ರಯತ್ನಿಸಿ ಕೈಚೆಲ್ಲಿದ್ದರು. ಚಿಕ್ಕಪಡಸಲಗಿ ಬ್ಯಾರೇಜ್ ಹೀರೋ ಸಿದ್ದು ನ್ಯಾಮಗೌಡ ಎದುರು ಸೋಲು ಕಂಡಿದ್ದರು.
ಆದರೆ 1996ರ ಚುನಾವಣೆ ಸಂದರ್ಭದಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಜನತಾದಳದ ಶಾಸಕರಾಗಿದ್ದ ಎಚ್.ವೈ.ಮೇಟಿ ಅರಣ್ಯ ಖಾತೆ ಸಚಿವರೂ ಆಗಿದ್ದರು. ಆದರೆದೇವೇಗೌಡರ ಅಣತಿಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ವಿರುದ್ಧ 21,332 ಮತಗಳ ಅಂತರದಿಂದ ಜಯಿಸಿ ಮೊದಲ ಬಾರಿಗೆ ದೆಹಲಿಯತ್ತ ಮುಖ ಮಾಡಿದ್ದರು.
ವಿಶೇಷವೆಂದರೆ ಆ ಚುನಾವಣೆಯಲ್ಲಿ ಮೇಟಿ ವಿಜಯಯಾತ್ರೆಯ ರಥವನ್ನು ಸ್ವತಃ ರಾಮಕೃಷ್ಣ ಹೆಗಡೆ ಮುನ್ನಡೆಸಿ ಐದು ವರ್ಷಗಳ ಹಿಂದಿನ ಸೋಲಿಗೆ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದ್ದರು. ಮೇಟಿ ಪರವಾಗಿ ರಾಮಕೃಷ್ಣ ಹೆಗಡೆ ಮನೆ ಮನೆ ಸುತ್ತಿದ್ದರೆ, ದೇವೇಗೌಡ, ಎಸ್.ಆರ್.ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಬೆನ್ನಿಗೆ ನಿಂತು ಪ್ರಚಾರದ ಹೊಣೆ ಹೊತ್ತಿದ್ದರು.ಬದಲಾದ ರಾಜಕಾರಣದಲ್ಲಿ ಹುಲ್ಲಪ್ಪ ಮೇಟಿ ಅವರೀಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳು. ಈ ಬಾರಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುತ್ತಿರುವುದು ಮತ್ತೊಂದು ವಿಶೇಷ.
ದೇವೇಗೌಡರ ಲೆಕ್ಕಾಚಾರ: ‘ನನಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ ಎಂಬ ದೇವೇಗೌಡರ ಲೆಕ್ಕಾಚಾರ ಅನಿವಾರ್ಯವಾಗಿ ಕಣಕ್ಕಿಳಿಯುವಂತೆ ಮಾಡಿತು. ಹೆಗಡೆ ಅವರಂತೂ ಮನೆ ಮನೆಗೆ ಹೋಗಿ ನನ್ನ ಪರ ಮತ ಕೇಳಿದ್ದರು’ ಎಂದು ಎಚ್.ವೈ.ಮೇಟಿ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಗೌಡರ ಎಣಿಕೆ ಸುಳ್ಳಾಗಲಿಲ್ಲ. ಗೆದ್ದು ಬಿಟ್ಟೆ. ಮುಂದಿನದ್ದು ಸಂಕಷ್ಟದ ಸ್ಥಿತಿ ಎನ್ನುತ್ತಾರೆ.
‘ಹಿಂದಿ ಭಾಷೆ ತಿಳಿಯುತ್ತಿರಲಿಲ್ಲ. ದೆಹಲಿಗೆ ಹೋಗುವ ಮುನ್ನ ಮಾಡಿದ ಮೊದಲ ಕೆಲಸವೆಂದರೆ ಗೈಡ್ ಕೊಂಡುಕೊಂಡದ್ದು. 30 ದಿನಗಳಲ್ಲಿ ಹಿಂದಿ ಕಲಿಯಿರಿ ಪುಸ್ತಕದಲ್ಲಿ ಕನ್ನಡ–ಹಿಂದಿ ಭಾಷೆಯ ಅರ್ಥ ಓದಿ ತಿಳಿದುಕೊಂಡೆ. ಅಲ್ಪಸ್ವಲ್ಪ ತಿಳಿಯಹತ್ತಿತು. ಕೆಲವು ಸ್ನೇಹಿತರು ನೆರವಿಗೆ ನಿಂತರು. ದೆಹಲಿಯ ಕರ್ನಾಟಕ ಭವನದಲ್ಲಿ ಊಟ, ಅಲ್ಲಿಯೇ ವಾಸ್ತವ್ಯ. ಆದರೆ ಊಟ ರುಚಿಸುತ್ತಿರಲಿಲ್ಲ. ಹಾಗಾಗಿ ಪಾರ್ಲಿಮೆಂಟ್‌ಗೆ ಹೋಗುವಾಗಲೆಲ್ಲಾ ರೊಟ್ಟಿ–ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದೆ ಎಂದು ಮೇಟಿ ಹೇಳುತ್ತಾರೆ.
ಆಗ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಬಹುಮತದ ಕೊರತೆಯಿಂದ ಕೇವಲ ಒಂದೂವರೆ ವರ್ಷದಲ್ಲಿ ಅಧಿಕಾರ ಕಳೆದುಕೊಂಡು ಮತ್ತೊಂದು ಲೋಕಸಭಾ ಚುನಾವಣೆಗೆ ರಾಷ್ಟ್ರ ಸಜ್ಜಾಯಿತು. ಹಾಗಾಗಿ 1998ರಲ್ಲಿ ನಡೆದ ಚುನಾವಣೆಯಲ್ಲಿ ಮೇಟಿ ಸ್ಪರ್ಧಿಸಲಿಲ್ಲ. ಆ ಚುನಾವಣೆಯಲ್ಲಿ ಲೋಕಸತ್ತಾ ಅಭ್ಯರ್ಥಿಯಾಗಿ ಅಜಯಕುಮಾರ ಸರನಾಯಕ ಸ್ಪರ್ಧಿಸಿ ಗೆಲುವು ಸಾಧಿಸಿದರು. ಮೇಟಿ ರಾಜ್ಯ ರಾಜಕಾರಣಕ್ಕೆ ಮರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.