ಬಾಗಲಕೋಟೆ: ’ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಮೊದಲು ತನ್ನ ಬೊಕ್ಕಸದಿಂದ ಹಣ ಕೊಟ್ಟು ನೆರವಾಗಲಿ. ನಂತರ ಕೇಂದ್ರದಿಂದ ಬರುವ ಅನುದಾನವನ್ನು ಅವರ ಲೆಕ್ಕಕ್ಕೆ ಜಮಾ ಮಾಡಿಕೊಳ್ಳಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.
ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿ ಬುಧವಾರ ತಾಲ್ಲೂಕಿನ ಸಂಗಾಪುರ, ಭಗವತಿ, ರಾಂಪುರದದಲ್ಲಿ ಒಣಗಿದ ಬೆಳೆಗಳ ವೀಕ್ಷಣೆ ಮಾಡಿ ರೈತರಿಂದ ಹಾನಿ ಪ್ರಮಾಣದ ಮಾಹಿತಿ ಪಡೆದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ₹1743 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ ಸಲ್ಲಿಸಲಾಗಿದೆ. ಈ ಹಣ ಬಿಡುಗಡೆಗೆ ಕಾಯದೇ ಸರ್ಕಾರ ಮೊದಲು ರೈತರ ನೆರವಿಗೆ ಬರಲಿ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅದೇ ರೀತಿ ಮಾಡಿದ್ದೆವು’ ಎಂದರು.
ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅವರ ಬೆಂಬಲಿಗರು ಪತ್ರಿಕೆಗಳಿಗೆ ಪುಟಗಟ್ಟಲೇ ಜಾಹೀರಾತು ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಾಸ್ತವವಾಗಿ ಒಂದು ರೂಪಾಯಿ ಮನ್ನಾ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಾಲ ಮನ್ನಾ ಮಾಡಿಸಲು ಬೆಳಗಾವಿ ಅಧಿವೇಶನದಲ್ಲಿ ನಮ್ಮ (ಬಿಜೆಪಿ) ಶಕ್ತಿ ಪ್ರದರ್ಶನ ಮಾಡಲಿದ್ದೇವೆ ಎಂದು ಹೇಳಿಕೆ ನೀಡಿದ್ದೇವೆ. ಆದರೆ ಸಿದ್ದರಾಮಯ್ಯ ಅದನ್ನು ತಪ್ಪಾಗಿ ಅರ್ಥೈಸಿ ನಾವೂ ರೈತರನ್ನು ಸೇರಿಸುತ್ತೇವೆ ಎನ್ನುತ್ತಾರೆ. ತಲೆಯಲ್ಲಿ ಸೆಗಣಿ ತುಂಬಿಕೊಂಡವರು ಈ ರೀತಿ ಹೇಳಿಕೆ ನೀಡುತ್ತಾರೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಅದರ ಮೇಲೆ ಹಿಡಿತ ಹೊಂದಿರುವ ಅವರು, ಮುಖ್ಯಮಂತ್ರಿಗೆ ಸಲಹೆ ನೀಡಿ ಸಾಲ ಮನ್ನಾ ಮಾಡಿಸಲಿ ಎಂದು ಆಗ್ರಹಿಸಿದರು.
‘ಬೆಳೆ ವಿಮೆ ನೀಡುವಲ್ಲಿ ಆಗಿರುವ ತಪ್ಪುಗಳಿಗೆ ರಾಜ್ಯ ಸರ್ಕಾರ ಅರ್ಜಿ ತುಂಬಿಸಿಕೊಳ್ಳುವಲ್ಲಿ ಮಾಡುತ್ತಿರುವ ಗೊಂದಲಗಳೇ ಕಾರಣ’ ಎಂದು ಆರೋಪಿಸಿದ ಈಶ್ವರಪ್ಪ, ‘ಈ ಬಾರಿಯ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಕಿ ಕೆಲಸಗಳ ಅನುಷ್ಠಾನದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಚರ್ಚೆಯಲ್ಲಿ ಅದೂ ಕೂಡ ಮುಖ್ಯ ವಿಷಯವಾಗಿರಲಿದೆ’ (ಅಜೆಂಡಾ) ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ರಾಜಶೇಖರ ಶೀಲವಂತರ, ನಾರಾಯಣಸಾ ಭಾಂಡಗೆ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜು ಮುದೇನೂರ, ಸುರೇಶ ಕೊಣ್ಣೂರ, ಗುರು ಅನಗವಾಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.